ಫೆ.3ರವರೆಗೆ ರಾಜ್ಯ ವಿಧಾನ ಮಂಡಲದ ಅಧಿವೇಶನ ವಿಸ್ತರಣೆ?
ಬೆಂಗಳೂರು: ರಾಜ್ಯ ವಿಧಾನ ಮಂಡಲದ ಅಧಿವೇಶನ ಫೆ.3ರವರೆಗೆ ವಿಸ್ತರಿಸಲು ಮುಖ್ಯಮಂತ್ರಿ ಸಿದ್ದರಾಮಯ್ಯ ಒಲವು ವ್ಯಕ್ತಪಡಿಸಿದ್ದಾರೆ.
ಬುಧವಾರ ನಗರದ ಖಾಸಗಿ ಹೊಟೇಲ್‌ನಲ್ಲಿ ನಡೆದ ಕಾಂಗ್ರೆಸ್ ಶಾಸಕಾಂಗ ಪಕ್ಷದ ಸಭೆಯಲ್ಲಿ ಕೇಂದ್ರ ಸರಕಾರ ಮನರೇಗಾ ಕಾಯ್ದೆ ಬದಲಾಗಿ ಜಾರಿಗೆ ತಂದಿರುವ ವಿಬಿ: ಜಿ ರಾಮ್ ಜಿ ಕಾಯ್ದೆಯ ಕುರಿತು ವಿವರಣೆ ನೀಡಿದ ಸಿದ್ದರಾಮಯ್ಯ, ಈ ಕಾಯ್ದೆ ಕುರಿತು ಸಮಗ್ರ ಚರ್ಚೆ ನಡೆಸಲು ಅಧಿವೇಶನವನ್ನು ಎರಡು ದಿನ ವಿಸ್ತರಣೆ ಮಾಡಲು ಒಲವು ವ್ಯಕ್ತಪಡಿಸಿದ್ದಾರೆ ಎನ್ನಲಾಗಿದೆ.
ಶಾಸಕರು ಈ ಕಾಯ್ದೆ ಕುರಿತಾದ ಚರ್ಚೆಯಲ್ಲಿ ಕಡ್ಡಾಯವಾಗಿ ಭಾಗವಹಿಸಬೇಕು. ನರೇಗಾ ವಿಷಯಕ್ಕಾಗಿಯೇ ವಿಶೇಷ ಅಧಿವೇಶನ ಕರೆಯಲಾಗಿದೆ. ಆದರೆ ನರೇಗಾ ಚರ್ಚೆಗೆ ಅವಕಾಶ ಸಿಕ್ಕಿಲ್ಲ. ಹೀಗಾಗಿ ಸೋಮವಾರ ಮಂಗಳವಾರ ನರೇಗಾ ಚರ್ಚೆಗಾಗಿಯೇ ಅಧಿವೇಶನ ವಿಸ್ತರಿಸೋಣ. ಸದನ ಕಾರ್ಯಕಲಾಪ ಸಲಹಾ ಸಮಿತಿ ಸಭೆಯಲ್ಲಿ ಇದರ ಬಗ್ಗೆ ಚರ್ಚಿಸಿ ನಿರ್ಧರಿಸುತ್ತೇವೆ ಎಂದು ಮುಖ್ಯಮಂತ್ರಿ ಹೇಳಿದ್ದಾರೆ ಎಂದು ತಿಳಿದು ಬಂದಿದೆ.
ಅಧಿವೇಶನ ವಿಸ್ತರಣೆಯಾದರೆ ಕಡ್ಡಾಯವಾಗಿ ಭಾಗಿಯಾಗಬೇಕು ಎಂದು ಶಾಸಕರಿಗೆ ಸಿದ್ದರಾಮಯ್ಯ ಸೂಚನೆ ನೀಡಿದ್ದಾರೆ ಎಂದು ಹೇಳಲಾಗಿದೆ.