×
Ad

ವಾಲ್ಮೀಕಿ, ಮುಡಾ ಪ್ರಕರಣ ನಿಭಾಯಿಸುವಲ್ಲಿ ಸರಕಾರ ವಿಫಲ : ಕೆ.ಸಿ. ವೇಣುಗೋಪಾಲ್ ಅಸಮಾಧಾನ

Update: 2024-08-04 20:22 IST

 ಕೆ.ಸಿ. ವೇಣುಗೋಪಾಲ್ | PC : PTI 

ಬೆಂಗಳೂರು : ವಾಲ್ಮೀಕಿ, ಮುಡಾ ಪ್ರಕರಣಗಳಲ್ಲಿ ಸರ್ಕಾರದ ಮತ್ತು ಮುಖ್ಯಮಂತ್ರಿಗಳ ಲೋಪ ಇಲ್ಲ. ಹೀಗಿದ್ದೂ ರಾಜ್ಯದ ಜನರಿಗೆ ಪ್ರಕರಣವನ್ನು ಸರಿಯಾಗಿ ಅರ್ಥ ಮಾಡಿಸುವಲ್ಲಿ ಸೋತಿದ್ದೀರಿ. ಪ್ರಕರಣವನ್ನು ನಿಭಾಯಿಸುವಲ್ಲಿ ವಿಫಲರಾಗಿದ್ದೀರಿ ಎಂದು ಸಚಿವರನ್ನು ಎಐಸಿಸಿ ಪ್ರಧಾನ ಕಾರ್ಯದರ್ಶಿ ಕೆ ಸಿ ವೇಣುಗೋಪಾಲ್ ತರಾಟೆಗೆ ತೆಗೆದುಕೊಂಡಿದ್ದಾರೆ ಎಂದು ತಿಳಿದುಬಂದಿದೆ.

ಸಿಎಂ ನಿವಾಸ ಕಾವೇರಿಯಲ್ಲಿ ರವಿವಾರ ಸಚಿವರ ಜೊತೆ ನಡೆಸಿದ ಸಭೆಯಲ್ಲಿ ಕೆ ಸಿ ವೇಣುಗೋಪಾಲ್ ಅವರು ವಾಲ್ಮೀಕಿ, ಮುಡಾ ಪ್ರಕರಣವನ್ನು ನಿಭಾಯಿಸಿದ ರೀತಿಗೆ ಅಸಮಾಧಾನಗೊಂಡಿದ್ದರು ಎನ್ನಲಾಗಿದೆ. ಸುಪ್ರೀಂಕೋರ್ಟ್ ನಿವೃತ್ತ ಮುಖ್ಯ ನ್ಯಾಯಮೂರ್ತಿಗಳಿಂದ ಮತ್ತು ಸುಪ್ರೀಂಕೋರ್ಟ್ ಹಿರಿಯ ವಕೀಲರಿಂದ ಪ್ರಕರಣಕ್ಕೆ ದಾಖಲೆಗಳ ಪರಿಶೀಲನೆ ನಡೆಸಿದ್ದೇವೆ. ಎರಡೂ ಪ್ರಕರಣದಲ್ಲಿ ಸರ್ಕಾರದ ಪಾತ್ರ ಇಲ್ಲ ಎನ್ನುವುದು ಸ್ಪಷ್ಟವಾಗಿದೆ. ಹೀಗಿದ್ದೂ ಪ್ರಕರಣವನ್ನು ನಿಭಾಯಿಸುವಲ್ಲಿ ಸರಕಾರ ವಿಫಲಾಗಿದೆ ಎಂದು ಅವರು ಅಸಮಾಧಾನ ವ್ಯಕ್ತಪಡಿಸಿದ್ದಾರೆ ಎಂದು ತಿಳಿದು ಬಂದಿದೆ.

ಸಭೆಯ ಬಳಿಕ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಅವರು, ಸಿಎಂ ಸಿದ್ದರಾಮಯ್ಯಗೆ ಶೋಕಾಸ್ ನೋಟಿಸ್ ನೀಡಲು ರಾಜಭವನವನ್ನು ದುರ್ಬಳಕೆ ಮಾಡಿಕೊಳ್ಳಲಾಗಿದೆ. ಈ ಷಡ್ಯಂತ್ರದ ವಿರುದ್ಧ ಹೋರಾಡಲು ಕಾಂಗ್ರೆಸ್ ತೀರ್ಮಾನಿಸಿದೆ ಎಂದು ಹೇಳಿದರು.

ಸಿಎಂ ಪ್ರಾಮಾಣಿಕತೆ ಬಗ್ಗೆ ಎಲ್ಲರಿಗೂ ತಿಳಿದಿದೆ. ಅವರೇನೂ ಹೊಸಬರಲ್ಲ. ಸಿದ್ದರಾಮಯ್ಯ ಚಾರಿತ್ರ್ಯದ ಬಗ್ಗೆ ಎಲ್ಲರಿಗೂ ಅರಿವಿದೆ. ಕಾಂಗ್ರೆಸ್‌ ಸರ್ಕಾರವನ್ನು ಅಸ್ಥಿರಗೊಳಿಸಲು ಈ ಪ್ರಯತ್ನ ನಡೆಯುತ್ತಿದೆ ಎಂದು ಅವರು ಕಿಡಿಕಾರಿದ್ದಾರೆ.

ಭ್ರಷ್ಟಾಚಾರದ ಬಗ್ಗೆ ಬಿಜೆಪಿ ನಾಯಕರು ಮಾತಾಡುವುದು ಹಾಸ್ಯಾಸ್ಪದ. ಬಿಜೆಪಿ ರಾಜ್ಯಾಧ್ಯಕ್ಷ ಬಿ ವೈ ವಿಜಯೇಂದ್ರ ವಿರುದ್ಧ ಪ್ರಕರಣಗಳಿವೆ. ಪ್ರಜ್ವಲ್ ರೇವಣ್ಣ ವಿರುದ್ಧ ಎಷ್ಟು ಪ್ರಕರಣಗಳಿಲ್ಲ? ಅದೆಲ್ಲವನ್ನು ಮುಚ್ಚಿಹಾಕಲು ಸಿಎಂ ವಿರುದ್ಧ ಮಾತಾಡುತ್ತಿದ್ದಾರೆ. ಅದಕ್ಕೆಲ್ಲ ನಾವು ಭಯ ಪಡುತ್ತಿಲ್ಲ. ಎಲ್ಲವನ್ನೂ ಎದುರಿಸಲು ಸನ್ನದ್ಧರಾಗಿದ್ದೇವೆ. ರಾಜ್ಯದ ಜನತೆಗೆ ಎಲ್ಲವನ್ನೂ ತಿಳಿಸಿ ಎಂದು ಸಚಿವರಿಗೆ ಸೂಚಿಸಿದ್ದೇವೆ ಎಂದು ಪ್ರತಿಕ್ರಿಯೆ ನೀಡಿದರು.

ಸಭೆಯಲ್ಲಿ ಸಿಎಂ ಸಿದ್ದರಾಮಯ್ಯ, ಡಿಸಿಎಂ ಡಿ ಕೆ ಶಿವಕುಮಾರ್, ಕರ್ನಾಟಕ ಕಾಂಗ್ರೆಸ್‌ ಉಸ್ತುವಾರಿ ರಣದೀಪ್ ಸಿಂಗ್ ಸುರ್ಜೆವಾಲಾ, ಸಚಿವರಾದ ಎಂಬಿ ಪಾಟೀಲ್, ಕೆಎನ್ ರಾಜಣ್ಣ, ಎಸ್ಎಸ್ ಮಲ್ಲಿಕಾರ್ಜುನ್, ಶರಣಪ್ರಕಾಶ್ ಪಾಟೀಲ್, ಸತೀಶ್ ಜಾರಕಿಹೊಳಿ, ರಾಮಲಿಂಗಾ ರೆಡ್ಡಿ, ಭೈರತಿ ಸುರೇಶ್, ಚೆಲುವರಾಯಸ್ವಾಮಿ, ಹೆಚ್ ಕೆ ಪಾಟೀಲ್ ಭಾಗವಹಿಸಿದ್ದರು.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News