×
Ad

ಕರ್ನಾಟಕಕ್ಕೆ ವಿತ್ತ ಸಚಿವೆ ನಿರ್ಮಲಾ‌ ಸೀತಾರಾಮನ್ ಕೊಡುಗೆ ಏನು? : ಜಿ.ಪರಮೇಶ್ವರ್‌

Update: 2025-02-03 16:31 IST

ಡಾ.ಜಿ.ಪರಮೇಶ್ವರ್‌

ಬೆಂಗಳೂರು : ರಾಜ್ಯ ಸರ್ಕಾರದ ಬಳಿ ಹಣವಿಲ್ಲ‌ ಎಂದು ದೂಷಿಸಿರುವ ಕೇಂದ್ರದ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರು ಕರ್ನಾಟಕಕ್ಕೆ ಏನು ಕೊಡುಗೆ ಕೊಟ್ಟಿದ್ದಾರೆ ಎಂಬುದನ್ನು ಹೇಳಲಿ ಎಂದು ಗೃಹ ಸಚಿವ ಡಾ.ಜಿ.ಪರಮೇಶ್ವರ್‌ ಅವರು ಪ್ರಶ್ನಿಸಿದರು.

ಇಂದು ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನಿರ್ಮಲಾ‌ ಸೀತಾರಾಮನ್ ಅವರು ದೇಶದ ಹಣಕಾಸು ಸಚಿವರು. ಅವರ ಬಗ್ಗೆ ನಮಗೆಲ್ಲ ಗೌರವ ಇರಬೇಕು. ಕರ್ನಾಟಕದಿಂದ ರಾಜ್ಯಸಭಾ ಸದಸ್ಯರಾಗಿ ಹೋಗಿ ಕರ್ನಾಟಕದ ಹಿತವನ್ನು ಕಾಪಾಡುವುದಕ್ಕೆ ಸಂಪೂರ್ಣವಾಗಿ ವಿಫಲರಾಗಿದ್ದಾರೆ. ಈ ಬಾರಿಯಷ್ಟೇ ಅಲ್ಲ. ಕಳೆದ ಬಾರಿಯು ಸಹ ನಮ್ಮ ರಾಜ್ಯಕ್ಕೆ ಏನು ಕೊಡುಗೆ ಕೊಟ್ಟಿದ್ದಾರೆ. ಸಚಿವೆ ನಿರ್ಮಲಾ‌ ಸೀತಾರಾಮನ್ ಅವರು ರಾಜ್ಯಕ್ಕೆ ಕೊಡುಗೆ ಕೊಟ್ಟಿದ್ದಾರೆ ಎಂದು ಹೇಳಿಕೊಳ್ಳುವಂತಹ ಒಂದೇಒಂದು ಯೋಜನೆಯನ್ನು ನೀಡಿಲ್ಲ. ಆ ರೀತಿ ಕೆಲಸ‌ ಮಾಡಿದ್ದರೆ, ನಾನು ಸಹ ಅವರನ್ನು ಅಭಿನಂದಿಸುತ್ತೇನೆ ಎಂದರು.

ಸುಮ್ಮನೆ ಕರ್ನಾಟಕದಲ್ಲಿ ಹೀಗಿದೆ, ಹಾಗೀದೆ ಅಂದರೆ ಒಪ್ಪುವುದಿಲ್ಲ. ಭದ್ರಾ ಮೇಲ್ದಂಡೆ ಯೋಜನೆಗೆ 5000 ಕೋಟಿ ರೂ. ಕೊಡುತ್ತೇವೆ. ರಾಷ್ಟ್ರೀಯ ಯೋಜನೆ ಎಂದು ಘೋಷಿಸುವುದಾಗಿ ಬಜೆಟ್‌ನಲ್ಲಿ ಓದಿ, ಅನುದಾನ ನೀಡದಿರುವುದಕ್ಕೆ ಏನು ಉತ್ತರ ಕೊಡುತ್ತಾರೆ ಎಂದು ಪ್ರಶ್ನಿಸಿದರು.

ನಾವು ರಾಜ್ಯದ ಬಡ ಜನರ ಹಿತದೃಷ್ಟಿಯಿಂದ ಐದು ಗ್ಯಾರಂಟಿ ಯೋಜನೆಗಳನ್ನು ಅನುಷ್ಟಾನಗೊಳಿಸಿದ್ದೇವೆ. ಬೇರೆ ಕಾರಣಗಳಿಗಾಗಿ ಗ್ಯಾರಂಟಿ ಯೋಜನೆಗಳನ್ನು ತಂದಿಲ್ಲ. ಹಳ್ಳಿಗಾಡಿನಲ್ಲಿ ಮಹಿಳೆಯರು 2000 ರೂ. ತೆಗೆದುಕೊಂಡು ಒಳ್ಳೆಯದಕ್ಕೆ ಬಳಸುತ್ತಿದ್ದಾರೆ. ಒಬ್ಬ ಮಹಿಳೆಯು ತನ್ನ ಮಗಳಿಗೆ ಹೊಸ ಕಂಪ್ಯೂಟರ್ ಖರೀದಿಸಿ ಕೊಟ್ಟಿದ್ದಾಳೆ. ಇಂತಹ ಅನೇಕ ಉದಾಹರಣೆಗಳನ್ನು ಕಾಣಬಹುದು. ಕರ್ನಾಟಕ ಸರ್ಕಾರದಲ್ಲಿ ಹಣವಿಲ್ಲ, ದಿವಾಳಿಯಾಗಿದೆ ಎಂದು ಹೇಳುವುದು ಸರಿಯಲ್ಲ ಎಂದರು.

ನೀತಿ ಆಯೋಗ ಬಿಡುಗಡೆ ಮಾಡಿರುವ ಅಂಕಿ-ಅಂಶದಲ್ಲಿ ಕರ್ನಾಟಕ 10ನೇ ಸ್ಥಾನಕ್ಕೆ ಇಳಿದಿರುವ ಕುರಿತು ಪ್ರತಿಕ್ರಿಯಿಸಿ, ನೀತಿ ಆಯೋಗದವರು ವರ್ಷಕ್ಕೆ ಒಂದೊಂದು ರೀತಿಯಲ್ಲಿ ಅಳತೆ ಗೋಲು ಇಟ್ಟುಕೊಳ್ಳುತ್ತಾರೆ. ಯಾವ ಉದ್ದೇಶದಿಂದ, ಯಾವ ಪ್ಯಾರಮೀಟರ್‌ನಿಂದ ಆ ರೀತಿ ಹೇಳಿದ್ದಾರೆ ಎಂಬುದು ಗೊತ್ತಿಲ್ಲ ಎಂದು ಹೇಳಿದರು.

ಪಿಎಸ್ಐ ಅಕ್ರಮದ ತನಿಖೆಗೆ ಸಬಂಧಿಸಿದಂತೆ ಎಸ್ಐಟಿಯವರು ಅಶ್ವತ್ಥ್ ನಾರಾಯಣ ಅವರನ್ನು ಯಾವ ವಿಚಾರಕ್ಕೆ ವಿಚಾರಣೆಗೆ ಕರೆದಿದ್ದಾರೆ ಎಂಬುದರ ಬಗ್ಗೆ ಗೊತ್ತಿಲ್ಲ. ತನಿಖೆ ಇನ್ನು ಮುಗಿದಿಲ್ಲ. ಎಸ್ಐಟಿಯವರಿಗೆ ತನಿಖೆ ವೇಳೆ ಏನೆಲ್ಲ‌ ಮಾಹಿತಿ ಸಿಗುತ್ತದೆಯೋ, ಅದನ್ನು ಆಧರಿಸಿ ಸಂಬಂಧಿಸಿದವರನ್ನು ವಿಚಾರಣೆಗೆ ಕರೆಯುತ್ತಾರೆ ಎಂದರು.

ಬೇರೆ ಪಕ್ಷದ ಶಾಸಕರಿಗೆ ಡಿ.ಕೆ.ಶಿವಕುಮಾರ್ ಅವರು ಬಹಿರಂಗವಾಗಿ ಆಹ್ವಾನ ನೀಡಿರುವ ಕುರಿತು ಮಾಧ್ಯಮದವರು ಕೇಳಿದ ಪ್ರಶ್ನೆಗೆ ಪ್ರತಿಕ್ರಿಯಿಸಿದ ಅವರು, ಕಾಂಗ್ರೆಸ್ ಪಕ್ಷದಲ್ಲಿ ಅಧ್ಯಕ್ಷರು ಹೇಳಿದ ಮೇಲೆ ಅದಕ್ಕೆ ಅರ್ಥ ಇರುತ್ತದೆ. ನಮ್ಮ ಪಕ್ಷದ ತತ್ವ, ಸಿದ್ಧಾಂತಗಳನ್ನು ಒಪ್ಪಿ ಬರುವವರನ್ನು ಸೇರಿಸಿಕೊಳ್ಳಲು ಯಾರ ವಿರೋಧವೂ ಇಲ್ಲ. ಯಾರನ್ನು ಪಕ್ಷಕ್ಕೆ ಸೇರಿಸಿಕೊಳ್ಳಬೇಕು, ಯಾರನ್ನು ಸೇರಿಸಿಕೊಳ್ಳಬಾರದು ಎಂಬುದು ಅಧ್ಯಕ್ಷರಿಗೆ ಬಿಟ್ಟಿರುವ ವಿಚಾರ. ಇದಕ್ಕಾಗಿ ಅಧ್ಯಕ್ಷರನ್ನು ನೇಮಿಸಿರುತ್ತಾರೆ‌ ಎಂದು ಉತ್ತರಿಸಿದರು‌.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News