ರಾಜಧಾನಿಯ ಟ್ರಾಫಿಕ್ ಸಮಸ್ಯೆ ಕುರಿತು ವರದಿ ಸರಕಾರಕ್ಕೆ ಸಲ್ಲಿಸಲು ಸೂಚನೆ: ಜಿ.ಪರಮೇಶ್ವರ್
ಜಿ.ಪರಮೇಶ್ವರ್
ಬೆಂಗಳೂರು : ಬೆಂಗಳೂರಿನ ಟ್ರಾಫಿಕ್ ಸಮಸ್ಯೆ ಕುರಿತಂತೆ ವರದಿ ಸಲ್ಲಿಸುವಂತೆ ನಗರ ಪೊಲೀಸ್ ಆಯುಕ್ತರಿಗೆ ಸೂಚಿಸಿದ್ದೇನೆ. ಮುಖ್ಯಮಂತ್ರಿ, ಉಪಮುಖ್ಯಮಂತ್ರಿ ಮತ್ತು ಸಾರಿಗೆ ಸಚಿವರೊಂದಿಗೆ ಸಭೆ ಕರೆದು ಚರ್ಚಿಸಿ ಟ್ರಾಫಿಕ್ ಸಮಸ್ಯೆಗೆ ಶಾಶ್ವತ ಪರಿಹಾರ ಕಂಡುಕೊಳ್ಳಲು ಕ್ರಮ ಕೈಗೊಳ್ಳಲಾಗುವುದು ಎಂದು ಗೃಹ ಸಚಿವ ಡಾ.ಜಿ.ಪರಮೇಶ್ವರ್ ತಿಳಿಸಿದ್ದಾರೆ.
ಮಂಗಳವಾರ ನಗರ ಪೊಲೀಸ್ ಆಯುಕ್ತರ ಕಚೇರಿಯಲ್ಲಿ ಪ್ರಗತಿ ಪರಿಶೀಲನಾ ಸಭೆ ನಡೆಸಿದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನಗರದಲ್ಲಿ ಮಳೆ ಬಂದಾಗ ತೀವ್ರ ಸಮಸ್ಯೆಯಾಗುತ್ತಿದೆ. ಪ್ರಮುಖವಾಗಿ 19 ಕಡೆ ಹೆಚ್ಚು ಒತ್ತಡವಿದೆ. 8 ಕಡೆ ಹೆಚ್ಚಿನ ಟ್ರಾಫಿಕ್ ಸಮಸ್ಯೆಯಾಗುತ್ತಿದೆ. ಇದಕ್ಕೆ ಶಾಶ್ವತ ಪರಿಹಾರ ಕಂಡುಕೊಳ್ಳಬೇಕಿದೆ ಎಂದರು.
ಟೋಯಿಂಗ್ ವ್ಯವಸ್ಥೆಯನ್ನು ಮತ್ತೆ ಆರಂಭಿಸಲಾಗುವುದು :
ಪೊಲೀಸ್ ಇಲಾಖೆ ಮತ್ತು ಬಿಬಿಎಂಪಿ ಒಟ್ಟಾಗಿ ಕೆಲಸ ಮಾಡಿದರೆ ಸಮಸ್ಯೆ ಬಗೆಹರಿಯುತ್ತದೆ. ವಾಹನಗಳನ್ನು ಎಲ್ಲೆಂದರಲ್ಲಿ ಪಾಕಿರ್ಕಿಂಗ್ ಮಾಡಲಾಗುತ್ತಿದೆ. ಇದರಿಂದ ವಾಹನ ಸಂಚಾರಕ್ಕೆ ಸಮಸ್ಯೆಯಾಗುತ್ತಿದೆ. ಇದಕ್ಕೆ ಕಡಿವಾಣ ಹಾಕಬೇಕಿದೆ ಎಂದು ಡಾ.ಜಿ.ಪರಮೇಶ್ವರ್ ಹೇಳಿದರು.
ಟೋಯಿಂಗ್ ವ್ಯವಸ್ಥೆಯನ್ನು ಮತ್ತೆ ಆರಂಭಿಸಲಾಗುವುದು. ಟೋಯಿಂಗ್ ಮಾಡಲು ಇಲಾಖೆಯ ಸಿಬ್ಬಂದಿ ಮತ್ತು ವಾಹನಗಳನ್ನೇ ಬಳಸಿಕೊಳ್ಳಲಾಗುವುದು. ಟ್ರಾಫಿಕ್ ಸಮಸ್ಯೆಯ ಪರಿಹಾರಕ್ಕೆ ಬಿಬಿಎಂಪಿಯವರೊಂದಿಗೆ ಜೊತೆಗೂಡಿ ಅನೇಕ ಕ್ರಮಗಳನ್ನು ತೆಗೆದುಕೊಳ್ಳುತ್ತೇವೆ ಎಂದು ಡಾ.ಜಿ.ಪರಮೇಶ್ವರ್ ತಿಳಿಸಿದರು.
ಇದೇ ಸಂದರ್ಭದಲ್ಲಿ ರಾಜ್ಯ ಪೊಲೀಸ್ ಮಹಾನಿರ್ದೇಶಕ ಡಾ.ಎಂ.ಎ.ಸಲೀಂ, ನಗರ ಪೊಲೀಸ್ ಆಯುಕ್ತ ಬಿ.ದಯಾನಂದ್, ಹೆಚ್ಚುವರಿ ಪೊಲೀಸ್ ಆಯುಕ್ತರಾದ ರಮೇಶ್ ಬಾನೋತ್, ವಿಕಾಶ್‍ಕುಮಾರ್ ವಿಕಾಶ್, ಸಂಚಾರ ವಿಭಾಗದ ಜಂಟಿ ಪೊಲೀಸ್ ಆಯುಕ್ತ ಎಂ.ಎನ್.ಅನುಚೇತ್, ಸಿಸಿಬಿ ವಿಭಾಗದ ಜಂಟಿ ಆಯುಕ್ತ ಚಂದ್ರಗುಪ್ತ ಹಾಗೂ ಎಲ್ಲ ವಿಭಾಗದ ಡಿಸಿಪಿಗಳು ಇದ್ದರು.
ಡ್ರಗ್ಸ್ ಮಟ್ಟ ಹಾಕಲು ನಿರ್ಲಕ್ಷ್ಯಿಸಿದರೆ ಪೊಲೀಸರೇ ಹೊಣೆ: ನಗರದಲ್ಲಿ ನೆಲೆಸಿರುವ ವಿದೇಶಿಗರ ಕುರಿತು ಮಾಹಿತಿ ಸಂಗ್ರಹಿಸುವಂತೆ ಸೂಚಿಸಿದ್ದೇನೆ. ಅಕ್ರಮ ವಲಸಿಗರ ಮಾಹಿತಿಯೂ ಗೊತ್ತಾಗುತ್ತದೆ. ಡ್ರಗ್ಸ್ ದಂಧೆಯನ್ನು ಹತೋಟಿಗೆ ತಂದಿದ್ದೇವೆ. ನಗರದಲ್ಲಿ ಡ್ರಗ್ಸ್ ಸಿಗುತ್ತಿದೆ ಎಂಬ ಮಾತುಗಳು ಸಾರ್ವಜನಿಕರಿಂದ ಬರುತ್ತಿವೆ. ಡ್ರಗ್ಸ್ ಚಟುವಟಿಕೆಗಳನ್ನು ಮಟ್ಟ ಹಾಕಲು ಮತ್ತಷ್ಟು ಕಟ್ಟುನಿಟ್ಟಿನ ಕ್ರಮ ಕೈಗೊಳ್ಳುವಂತೆ ಸೂಚಿಸಲಾಗಿದೆ. ಇದನ್ನು ನಿರ್ಲಕ್ಷ್ಯಿಸುವ ಪೊಲೀಸ್ ಅಧಿಕಾರಿಗಳನ್ನೆ ಹೊಣೆಯನ್ನಾಗಿ ಮಾಡಲಾಗುವುದು ಎಂದು ಡಾ.ಜಿ.ಪರಮೇಶ್ವರ್ ಹೇಳಿದರು.
ನಿರ್ಭಯಾ ಯೋಜನೆಯಡಿ 9000 ಕ್ಯಾಮೆರಾ ಅಳವಡಿಕೆ: ಮಹಿಳೆಯರು ಮತ್ತು ಮಕ್ಕಳಾ ಸುರಕ್ಷತೆಗೆ ಸೂಕ್ತ ಕ್ರಮ ತೆಗದುಕೊಂಡಿದ್ದೇವೆ. ನಿರ್ಭಯಾ ಯೋಜನೆಯಡಿ 9 ಸಾವಿರ ಕ್ಯಾಮೆರಾಗಳನ್ನು ಅಳವಡಿಸಿದ್ದೇವೆ. ಸೇಫ್ಟಿ ಐಲ್ಯಾಂಡ್ಸ್ ಸ್ಥಾಪಿಸಲಾಗಿದೆ. ಬೆಂಗಳೂರು ಸೇಫ್ ಸಿಟಿ ಎಂದು ಸೇಫ್ ಸಿಟಿ ವರದಿ ಬಂದಿದೆ ಎಂದು ಡಾ.ಜಿ.ಪರಮೇಶ್ವರ್ ತಿಳಿಸಿದರು.