×
Ad

ತೆರೆದ ಬಸ್‌ನಲ್ಲಿ ಆರ್‌ಸಿಬಿ ಪರೇಡ್ ಇಲ್ಲ, ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ ಸಂಭ್ರಮಾಚರಣೆ : ಜಿ.ಪರಮೇಶ್ವರ್‌

Update: 2025-06-04 14:59 IST

PC : x/@RCBTweets

ಬೆಂಗಳೂರು : 18 ವರ್ಷಗಳ ನಂತರ ಐಪಿಎಲ್ ಚಾಂಪಿಯನ್‌ ಆಗಿರುವ ಆರ್‌ಸಿಬಿ ತಂಡಕ್ಕೆ ನನ್ನ ಅಭಿನಂದನೆಗಳು. ವಿಶೇಷವಾಗಿ ವಿರಾಟ್ ಕೊಹ್ಲಿ ಅವರು ದೇಶಕ್ಕೆ ಮಾತ್ರವಲ್ಲದೇ, ಇಡೀ ವಿಶ್ವಕ್ಕೆ ಮಾದರಿ‌ ಕ್ರೀಡಾಪಟುವಾಗಿ ಹೊರ ಹೊಮ್ಮಿರುವುದು ಸಂತೋಷದಾಯಕ ಎಂದು ಗೃಹ ಸಚಿವ ಡಾ.ಜಿ.ಪರಮೇಶ್ವರ್‌ ಅವರು ಹೇಳಿದರು.

ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಆರ್‌ಸಿಬಿ ತಂಡ ಗೆದ್ದಂತಹ ಸಂದರ್ಭದಲ್ಲಿ ವಿರಾಟ್ ಕೊಹ್ಲಿ ಅವರು ಆಡಿದ ಮಾತುಗಳು ನಿಜಕ್ಕೂ ಹೆಮ್ಮೆ ಎನಿಸುತ್ತದೆ. 18 ವರ್ಷಗಳಿಂದ ಸತತ ಆರ್‌ಸಿಬಿ ತಂಡಕ್ಕೆ ನಿಷ್ಠೆಯಾಗಿ ಆಡಿರುವುದು ಎಲ್ಲ‌ ಕ್ರೀಡಾಪಟುಗಳಿಗೆ ಉತ್ತಮ ಸಂದೇಶ ಕೊಡುತ್ತದೆ‌. ಬೆಂಗಳೂರಿನ ಬಗ್ಗೆ ಭಾವನಾತ್ಮಕ ನಂಟಿನ ಬಗ್ಗೆ ಅವರು ಹೇಳಿರುವುದು ಸಂತೋಷ ತಂದಿದೆ‌ ಎಂದರು.

ವಿಧಾನಸೌಧದಲ್ಲಿ ಆರ್‌ಸಿಬಿ ತಂಡಕ್ಕೆ ಅಭಿನಂದನಾ ಕಾರ್ಯಕ್ರಮ :

ಇಂದು ಸಂಜೆ 4 ಗಂಟೆಗೆ ವಿಧಾನಸೌಧದ ಬೃಹತ್ ಮೆಟ್ಟಿಲುಗಳ ಮೇಲೆ ಆರ್‌ಸಿಬಿ ತಂಡಕ್ಕೆ ಸರಕಾರದ ಪರವಾಗಿ ಅಭಿನಂದನೆಗಳನ್ನು ಸಲ್ಲಿಸಲಾಗುವುದು.

ಎಲ್ಲ ಆಟಗಾರರು ಬಸ್‌ನಲ್ಲಿ ಬರುತ್ತಾರೆ. ಕಾರ್ಯಕ್ರಮ ಮುಗಿದ ಬಳಿಕ ಬಸ್‌ನಲ್ಲೇ ವಾಪಸ್ ಚಿನ್ನಸ್ವಾಮಿ ಸ್ಟೇಡಿಯಂಗೆ ಹೋಗುತ್ತಾರೆ.  ಮುಖ್ಯಮಂತ್ರಿ ಸಿದ್ದರಾಮಯ್ಯ, ಉಪ‌ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರು ಆರ್‌ಸಿಬಿ ತಂಡಕ್ಕೆ ಅಭಿನಂದನೆ ಸಲ್ಲಿಸಲಿದ್ದಾರೆ. ಆರ್‌ಸಿಬಿ ತಂಡದ ಪರವಾಗಿ ಇಬ್ಬರು ಮಾತನಾಡಲಿದ್ದಾರೆ. ಇದನ್ನು ಹೊರತುಪಡಿಸಿ ಬೇರೆ ಕಾರ್ಯಕ್ರಮಗಳಿಲ್ಲ ಎಂದು ಹೇಳಿದರು.

ಭದ್ರತಾ ದೃಷ್ಟಿಯಿಂದ ಆಟಗಾರರು ತೆರೆದ ವಾಹನದಲ್ಲಿ ಸ್ಟೇಡಿಯಂಗೆ ಹೋಗುತ್ತಿಲ್ಲ. ಕೆಎಸ್‌ಸಿಎ ವತಿಯಿಂದ ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ ಕಾರ್ಯಕ್ರಮ ಮಾಡಿಕೊಳ್ಳಲಿದ್ದಾರೆ. ಅಗತ್ಯ ಪೊಲೀಸ್ ಭದ್ರತೆ, ಟ್ರಾಫಿಕ್ ಸಮಸ್ಯೆಯಾಗದಂತೆ ವ್ಯವಸ್ಥೆ ಮಾಡಿಕೊಳ್ಳಲಾಗಿದೆ ಎಂದು ತಿಳಿಸಿದರು.

ಸಾಮಾನ್ಯ ಜನರಿಗೆ ತೊಂದರೆಯಾಗುವುದಕ್ಕೆ ಬಿಡುವುದಿಲ್ಲ:

ದಕ್ಷಿಣ‌ ಕನ್ನಡ‌ ಜಿಲ್ಲೆಯಲ್ಲಿ ಯಾರು ಆತಂಕ‌ ಪಡಬೇಕಿಲ್ಲ‌ ಎಂದು ಸಾರ್ವಜನಿಕರಲ್ಲಿ ಮನವಿ ಮಾಡಿಕೊಳ್ಳುತ್ತೇನೆ‌. ಯಾರು ಕಾನೂನು ಮತ್ತು ಜನ ಸಮುದಾಯಕ್ಕೆ ವಿರುದ್ಧವಾಗಿ ಕೆಲಸ‌ ಮಾಡುತ್ತಾರೆ, ಅವರಿಗೆ ಆತಂಕವಿರಬಹುದು. ಅದನ್ನು ಬಿಟ್ಟರೆ ಸಾಮಾನ್ಯ ಜನರಿಗೆ ತೊಂದರೆಯಾಗುವುದಕ್ಕೆ ಬಿಡುವುದಿಲ್ಲ ಎಂದು ಸ್ಪಷ್ಟಪಡಿಸಿದರು.

ಕರಾವಳಿ ಭಾಗದಲ್ಲಿ ಇನ್ನು ಕೂಡ‌‌ ಕೋಮು ಪ್ರಚೋದನೆ ಮಾಡುವ ಕೆಲಸದಲ್ಲಿ ತೊಡಗಿದ್ದಾರೆ ಎಂಬ ಮಾಹಿತಿ ಪೊಲೀಸರಿಗೆ ಇರಬಹುದು. ಒಂದು ವೇಳೆ ಗಲಭೆ ಹಬ್ಬಿಸುವವರು ಇದ್ದರೆ ಪೊಲೀಸರು ಪರಿಶೀಲನೆ ಮಾಡುತ್ತಾರೆ. ಯಾರಿಗೂ ತೊಂದರೆ ಆಗದಂತೆ ನೋಡಿಕೊಳ್ಳುತ್ತೇವೆ ಎಂದು ಈ‌ ಮೂಲಕ ಭರವಸೆ ನೀಡುತ್ತೇನೆ ಎಂದರು.

ನಾವು ಯಾರನ್ನೂ ಟಾರ್ಗೆಟ್ ಮಾಡುವುದಿಲ್ಲ. ನೀವು ಸಾರ್ವಜನಿಕವಾಗಿ ಕಾನೂನಿನ ಚೌಕಟ್ಟಿನಲ್ಲಿ ನಡೆದುಕೊಳ್ಳುವುದಾದರೆ ಭಯ ಏಕೆ? ಯಾರು ಕಾನೂನು ಬಿಟ್ಟು ಕೆಲಸ ಮಾಡುತ್ತಾರೆ. ಅಂತವರಿಗೆ ಭಯ ಆಗಬೇಕು. ಈಗಾಗಲೇ ತೀರ್ಮಾನ ಮಾಡಿದಂತೆ ಕೋಮು ಹಿಂಸಾ ನಿಗ್ರಹ ಕಾರ್ಯಪಡೆಯನ್ನು ಇನ್ನೊಂದು ವಾರದೊಳಗೆ ಮಾಡುತ್ತೇವೆ. ರಾಜ್ಯದಲ್ಲಿ ಶಾಂತಿಯನ್ನು ಕಾಪಾಡುವ ಜವಾಬ್ದಾರಿ ಸರಕಾರಕ್ಕೆ ಇದೆ. ಅದಕ್ಕೆ ಅನೇಕ ಕ್ರಮಗಳನ್ನು ತೆಗೆದುಕೊಳ್ಳಬೇಕಾಗುತ್ತದೆ. ನಾನಾಗಲಿ ಅಥವಾ‌ ಮುಖ್ಯಮಂತ್ರಿಯವರಾಗಲಿ ಪೊಲೀಸ್ ಅಧಿಕಾರಿಗಳಿಗೆ ದಿನನಿತ್ಯ ಗಂಟೆಗೊಮ್ಮೆ ಸೂಚನೆಗಳನ್ನು ಕೊಡುವುದಿಲ್ಲ. ಏನಾದರೂ ಘಟನೆಗಳು ನಡೆದಾಗ ಅಧಿಕಾರಿಗಳನ್ನು ನಾವು ಕೇಳುತ್ತೇವೆ ಎಂದು ಹೇಳಿದರು.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News