ಗ್ರೇಟರ್ ಬೆಂಗಳೂರು ಪ್ರಾಧಿಕಾರ | ಕಸ ಗುಡಿಸಲು 613 ಕೋಟಿ ರೂ.ವೆಚ್ಚದಲ್ಲಿ ಬಾಡಿಗೆ ಯಂತ್ರ : ಸಂಪುಟ ಅನುಮೋದನೆ
ಬೆಂಗಳೂರು : ಗ್ರೇಟರ್ ಬೆಂಗಳೂರು ಪ್ರಾಧಿಕಾರದ ವ್ಯಾಪ್ತಿಯ ಐದು ನಗರ ಪಾಲಿಕೆಗಳ ಮುಖ್ಯ ಮತ್ತು ಉಪಮುಖ್ಯ ರಸ್ತೆಗಳ ಸ್ವಚ್ಛತೆಗಾಗಿ ಯಾಂತ್ರಿಕ ಕಸಗುಡಿಸುವಿಕೆ ಯಂತ್ರಗಳನ್ನು ಬಾಡಿಗೆ ಆಧಾರದಲ್ಲಿ 84 ತಿಂಗಳ (7 ವರ್ಷ)ಅವಧಿಗೆ ಪಡೆಯಲು ಉದ್ದೇಶಿಸಿರುವ ಯೋಜನೆಯ 613.25 (ಜಿಎಸ್‍ಟಿ ಒಳಗೊಂಡಂತೆ) ಕೋಟಿ ರೂ.ಗಳ ಅಂದಾಜು ಮೊತ್ತಕ್ಕೆ ಸಚಿವ ಸಂಪುಟ ಆಡಳಿತಾತ್ಮಕ ಅನುಮೋದನೆ ನೀಡಿದೆ ಎಂದು ಕಾನೂನು ಮತ್ತು ಸಂಸದೀಯ ವ್ಯವಹಾರಗಳ ಸಚಿವ ಎಚ್.ಕೆ.ಪಾಟೀಲ್ ತಿಳಿಸಿದರು.
ಗುರುವಾರ ವಿಧಾನಸೌಧದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅಧ್ಯಕ್ಷತೆಯಲ್ಲಿ ನಡೆದ ಸಚಿವ ಸಂಪುಟ ಸಭೆಯ ಬಳಿಕ ಸುದ್ದಿಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಅವರು, ಹವಾಮಾನದಲ್ಲಿನ ಗಣನೀಯ ಬದಲಾವಣೆಗಳು ಮತ್ತು ಬೆಂಗಳೂರು ನಗರದ ಅಗತ್ಯತೆಗಳನ್ನು ಆಧರಿಸಿ ಮುಂದಿನ 7 ವರ್ಷಗಳ ದೃಷ್ಟಿಯಿಂದ ಗ್ರೇಟರ್ ಬೆಂಗಳೂರು ಪ್ರಾಧಿಕಾರವು ಈ ಪ್ರಸ್ತಾವನೆಯನ್ನು ಸಿದ್ದಪಡಿಸಿತ್ತು ಎಂದು ಹೇಳಿದರು.
ಈ ಯೋಜನೆಯಿಂದ ಸಾರ್ವಜನಿಕ ಸಂಚಾರದ ಸುಧಾರಣೆಯಾಗಿ, ಬೆಂಗಳೂರಿನ ಸಾರ್ವಜನಿಕರ ಆರೋಗ್ಯ ಪರಿಸರ ಮತ್ತು ರಸ್ತೆ ಸ್ವಚ್ಛತೆ ಮತ್ತು ನಗರದ ವಾಯು ಗುಣಮಟ್ಟ ಸುಧಾರಣೆಗೆ ಪರಿಹಾರ ಕಂಡುಕೊಳ್ಳುವ ನಿಟ್ಟಿನಲ್ಲಿ ಅತ್ಯಂತ ಪರಿಣಾಮಕಾರಿ ಮತ್ತು ಅವಶ್ಯಕವೆಂದು ಪ್ರಸ್ತಾವನೆಯಲ್ಲಿ ಪ್ರಸ್ತಾಪಿಸಲಾಗಿತ್ತು ಎಂದು ಎಚ್.ಕೆ.ಪಾಟೀಲ್ ತಿಳಿಸಿದರು.
ರಾಯಚೂರು ಜಿಲ್ಲೆಯ ಮಾನ್ವಿ ತಾಲೂಕಿನ ಮುದ್ಲಾಪುರ ಏತ ನೀರಾವರಿ ಯೋಜನೆಯ ಬಾಕಿ ಕೆಲಸಗಳು ಹಾಗೂ ಪುನರುಜ್ಜೀವನ ಕಾಮಗಾರಿಗಳನ್ನು 21 ಕೋಟಿ ರೂ., ದದ್ದಲ್ ಗ್ರಾಮದ ಹತ್ತಿರ(ಗೌರಮ್ಮ ಬಂಡಿ) ಏತ ನೀರಾವರಿ ಯೋಜನೆಯ ಬಾಕಿ ಕೆಲಸಗಳು ಹಾಗೂ ಪುನರುಜ್ಜೀವನ ಕಾಮಗಾರಿಗಳನ್ನು 34 ಕೋಟಿ ರೂ.ಗಳ ಅಂದಾಜು ಮೊತ್ತದಲ್ಲಿ ಕೈಗೊಳ್ಳಲು ಆಡಳಿತಾತ್ಮಕ ಅನುಮೋದನೆ ನೀಡಲಾಗಿದೆ ಎಂದು ಅವರು ಹೇಳಿದರು.
ಮುಂದಿನ ಅಧಿವೇಶನದಲ್ಲಿ ಜಿ.ಬಿ.ಎ ತಿದ್ದುಪಡಿ: ಗ್ರೇಟರ್ ಬೆಂಗಳೂರು ಆಡಳಿತ ಅಧಿನಿಯಮ, 2024ರ ವಿವಿಧ ಕಲಂಗಳಿಗೆ ತಿದ್ದುಪಡಿ ತರುವ ಉದ್ದೇಶಹೊಂದಿರುವ ಬೆಂಗಳೂರು ಆಡಳಿತ (ಎರಡನೆ ತಿದ್ದುಪಡಿ) ವಿಧೇಯಕ, 2025ಕ್ಕೆ ಸಚಿವ ಸಂಪುಟ ಅನುಮೋದನೆ ನೀಡಿದ್ದು, ಮುಂದಿನ ಅಧಿವೇಶನದಲ್ಲಿ ವಿಧೇಯಕ ಮಂಡಿಸಲು ತೀರ್ಮಾನಿಸಲಾಗಿದೆ ಎಂದು ಎಚ್.ಕೆ.ಪಾಟೀಲ್ ಹೇಳಿದರು.
ಸರಕಾರದ ಮುಖ್ಯ ಕಾರ್ಯದರ್ಶಿ, ನಗರಾಭಿವೃದ್ಧಿ ಇಲಾಖೆಯ ಅಪರ ಮುಖ್ಯ ಕಾರ್ಯದರ್ಶಿ, ಆರ್ಥಿಖ ಇಲಾಖೆಯ ಅಪರ ಮುಖ್ಯ ಕಾರ್ಯದರ್ಶಿ ಅಥವಾ ಪ್ರಧಾನ ಕಾರ್ಯದರ್ಶಿ, ಲೋಕಸಭೆ, ರಾಜ್ಯಸಭೆ, ವಿಧಾನಸಭೆ ಮತ್ತು ವಿಧಾನ ಪರಿಷತ್ತಿನ ಸದಸ್ಯರನ್ನು ಪ್ರಾಧಿಕಾರದ ಸದಸ್ಯರನ್ನಾಗಿ ನೇಮಕ ಮಾಡುವ ಬಗ್ಗೆ ಹೆಚ್ಚಿನ ಸ್ಪಷ್ಟನೆಯನ್ನು ತರುವ ಉದ್ದೇಶದಿಂದ ಈ ತಿದ್ದುಪಡಿ ತರಲು ಉದ್ದೇಶಿಸಲಾಗಿದೆ ಎಂದು ಅವರು ಹೇಳಿದರು.
ಬೆಳಗಾವಿಯಲ್ಲಿ ಸಿ.ಬಿ.ಜಿ ಘಟಕ: ಬೆಳಗಾವಿ ಮಹಾನಗರ ಪಾಲಿಕೆ ವ್ಯಾಪ್ತಿಯಲ್ಲಿ ಪ್ರತಿದಿನ ಸಂಗ್ರಹವಾಗುವ 150 ಟನ್‍ಗಳಷ್ಟು ಹಸಿ ತ್ಯಾಜ್ಯವನ್ನು ಸಂಕುಚಿತ ಜೈವಿಕ ಅನಿಲ(ಸಿಬಿಜಿ) ಘಟಕದ ಮೂಲಕ ಸಂಸ್ಕರಿಸಲು ಭಾರತೀಯ ಅನಿಲ ಪ್ರಾಧಿಕಾರ(ಗೇಲ್) ಸಂಸ್ಥೆಗೆ ತುರುಮುರಿ ತ್ಯಾಜ್ಯ ನಿರ್ವಹಣೆ ಪ್ರದೇಶದಲ್ಲಿ 10 ಎಕರೆ ಜಾಗವನ್ನು 25 ವರ್ಷಗಳ ಅವಧಿಗೆ ನೀಡಲು ಅನುಮೋದನೆ ನೀಡಲಾಗಿದೆ ಎಂದು ಎಚ್.ಕೆ.ಪಾಟೀಲ್ ತಿಳಿಸಿದರು.
ಕೋರ್ಟ್ ಮ್ಯಾನೇಜರ್‍ಗಳ ನೇಮಕಾತಿ: ಕರ್ನಾಟಕ ಅಧೀನ ನ್ಯಾಯಾಲಯಗಳು (ಲಿಪಿಕ ಮತ್ತು ಇತರ ಹುದ್ದೆಗಳು) (ಕೋರ್ಟ್ ಮ್ಯಾನೇಜರ್‍ಗಳ ವಿಲೀನಾತಿ) (ವಿಶೇಷ) ನಿಯಮಗಳು, 2025 ಮತ್ತು ಕರ್ನಾಟಕ ಅಧೀನ ನ್ಯಾಯಾಲಯಗಳು (ಲಿಪಿಕ ಮತ್ತು ಇತರ ಹುದ್ದೆಗಳು) ಕೋರ್ಟ್ ಮ್ಯಾನೇಜರ್ ಗಳ ನೇಮಕಾತಿ ಮತ್ತು ಸೇವಾ ಷರತ್ತುಗಳು (ವಿಶೇಷ) ನಿಯಮಗಳು, 2025ಕ್ಕೆ ಸಂಪುಟ ಸಭೆ ಅನುಮೋದನೆ ನೀಡಿದೆ ಎಂದು ಅವರು ಹೇಳಿದರು.
ಮೈಸೂರಿನಲ್ಲಿ ಶಾಸಕರ ಕಚೇರಿಗಳಿಗೆ ಪ್ರತ್ಯೇಕ ಕಟ್ಟಡ: ಮೈಸೂರು ನಗರದಲ್ಲಿ ಸರಕಾರಿ ಅತಿಥಿ ಗೃಹದ ನೌಕರರ ವಸತಿ ಗೃಹಗಳ ಆವರಣದಲ್ಲಿ ಶಾಸಕರ ಹಾಗೂ ಸಂಸದರ ಭವನವನ್ನು 15 ಕೋಟಿ ರೂ.ಗಳ ಅಂದಾಜು ಮೊತ್ತದಲ್ಲಿ ನಿರ್ಮಿಸಲು ಅನುಮೋದನೆ ನೀಡಲಾಗಿದೆ ಎಂದು ಎಚ್.ಕೆ.ಪಾಟೀಲ್ ತಿಳಿಸಿದರು.
ಹಾಸನ ವೈದ್ಯಕೀಯ ವಿಜ್ಞಾನಗಳ ಸಂಸ್ಥೆಯ ಆವರಣದಲ್ಲಿ 250 ಹಾಸಿಗೆ ಸಾಮಥ್ರ್ಯದ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆಯ ಪ್ರಾರಂಭಕ್ಕೆ ಅಗತ್ಯವಿರುವ ವೈದ್ಯಕೀಯ ಉಪಕರಣ ಮತ್ತು ಪೀಠೋಪಕರಣಗಳನ್ನು 27.92 ಕೋಟಿ ರೂ. ಗಳ ಅಂದಾಜು ಮೊತ್ತದಲ್ಲಿ ಖರೀದಿಸಲು ಹಾಗೂ ಆಸ್ಪತ್ರೆ ಕಟ್ಟಡದ ನೆಲ ಮತ್ತು ಮೊದಲನೆ ಮಹಡಿಗೆ ಅವಶ್ಯವಿರುವ ಸೇವೆಗಳನ್ನು 21 ಕೋಟಿ ರೂ.ಗಳ ಅಂದಾಜು ಮೊತ್ತದಲ್ಲಿ ಅಳವಡಿಸುವ ಕಾಮಗಾರಿಯನ್ನು ಕೈಗೊಳ್ಳಲು ಆಡಳಿತಾತ್ಮಕ ಅನುಮೋದನೆ ನೀಡಲಾಗಿದೆ ಎಂದು ಅವರು ಹೇಳಿದರು.
ಇತರ ನಿರ್ಣಯಗಳು: ಬೆಂಗಳೂರಿನ ಶ್ರೀ ರಾಜರಾಜೇಶ್ವರಿ ಎಜುಕೇಷನ್ ಟ್ರಸ್ಟ್ ರವರಿಗೆ ಶೈಕ್ಷಣಿಕ ಉದ್ದೇಶಕ್ಕಾಗಿ ಬೆಂಗಳೂರು ಪೂರ್ವ ತಾಲೂಕು ಬಿದರಹಳ್ಳಿ ಹೋಬಳಿ ಚನ್ನಸಂದ್ರ ಗ್ರಾಮದ ಸರ್ವೆ ನಂಬರ್ 115ರಲ್ಲಿ 5 ಎಕರೆ ಗುತ್ತಿಗೆ ಆಧಾರದ ಮೇಲೆ ಮಂಜೂರು ಮಾಡಿರುವ ಸರಕಾರಿ ಗೋಮಾಳ ಜಮೀನನ್ನು ಕೃಷಿಯೇತರ ಮಾರುಕಟ್ಟೆ ಮೌಲ್ಯದ ಶೇ.2.5ರಷ್ಟು ಮೌಲ್ಯ ಹಾಗೂ ಇನ್ನಿತರ ಶಾಸನ ಬದ್ಧ ಶುಲ್ಕ ವಿಧಿಸಿ 30 ವರ್ಷಗಳ ಅವಧಿಗೆ ಗುತ್ತಿಗೆ ಅವಧಿಯನ್ನು ನವೀಕರಿಸಲು ಒಪ್ಪಿಗೆ.
ಮೊಳಕಾಲ್ಮುರು ಕಾಂಗ್ರೆಸ್ ಭವನಕ್ಕೆ ಜಮೀನು: ಚಿತ್ರದುರ್ಗ ಜಿಲ್ಲೆಯ ಮೊಳಕಾಲ್ಮೂರು ತಾಲೂಕಿನ ಸೊಲೇನಹಳ್ಳಿ ಗ್ರಾಮದಲ್ಲಿ 6 ಗುಂಟೆ ಜಮೀನನ್ನು ಕಾಂಗ್ರೆಸ್ ಕಚೇರಿ ಕಟ್ಟಡ ನಿರ್ಮಾಣಕ್ಕಾಗಿ ‘ಕಾಂಗ್ರೆಸ್ ಭವನ ಟ್ರಸ್ಟ್, ಬೆಂಗಳೂರು’ ಇವರಿಗೆ ಮಾರ್ಗದರ್ಶಿ ಮೌಲ್ಯದ ಶೇ.5 ರಷ್ಟು ವೆಚ್ಚಕ್ಕೆ ಮಂಜೂರು ಮಾಡಲು ನಿರ್ಣಯ.
ಮೇಲ್ದರ್ಜೆಗೆ: ಬೀದರ್ ಜಿಲ್ಲೆಯ ಭಾಲ್ಕಿ ಪುರಸಭೆಯನ್ನು ನಗರಸಭೆಯನ್ನಾಗಿ ಹಾಗೂ ಕಮಲಾನಗರ ಗ್ರಾಮ ಪಂಚಾಯಿತಿಯನ್ನು ಪಟ್ಟಣ ಪಂಚಾಯಿತಿಯನ್ನಾಗಿ ಮೇಲ್ದರ್ಜೆಗೇರಿಸಲು ಸಚಿವ ಸಂಪುಟ ಅನುಮೋದನೆ ನೀಡಿದೆ.
ಡಿ.8 ರಿಂದ 19ರ ವರೆಗೆ ಬೆಳಗಾವಿಯಲ್ಲಿ ಅಧಿವೇಶನ: ರಾಜ್ಯ ವಿಧಾನಮಂಡಲದ ಚಳಿಗಾಲದ ಅಧಿವೇಶನವು ಡಿ.8ರಿಂದ 19ರವರೆಗೆ ಬೆಳಗಾವಿಯ ಸುವರ್ಣ ವಿಧಾನಸೌಧದಲ್ಲಿ ನಡೆಸಲು ಸಚಿವ ಸಂಪುಟ ನಿರ್ಧರಿಸಿದೆ.
ಹಿಂದಿನ ಸಭೆಯಲ್ಲಿ ಅಧಿವೇಶನದ ದಿನಾಂಕವನ್ನು ಅಂತಿಮಗೊಳಿಸುವ ಅಧಿಕಾರವನ್ನು ಸಚಿವ ಸಂಪುಟ ಮುಖ್ಯಮಂತ್ರಿಗೆ ನೀಡಿತ್ತು.