ಕೆಲವೇ ದಿನಗಳಲ್ಲಿ ʼಗ್ರೇಟರ್ ಬೆಂಗಳೂರುʼ ಅಸ್ತಿತ್ವಕ್ಕೆ ಬರಲಿದೆ : ಡಿ.ಕೆ.ಶಿವಕುಮಾರ್
ಡಿ.ಕೆ.ಶಿವಕುಮಾರ್
ಬೆಂಗಳೂರು : ಬೃಹತ್ ಬೆಂಗಳೂರು ಮಹಾನಗರ ಪಾಲಿಕೆಯ ಬದಲಾಗಿ ಕೆಲವೇ ದಿನಗಳಲ್ಲಿ ಗ್ರೇಟರ್ ಬೆಂಗಳೂರು ಅಸ್ತಿತ್ವಕ್ಕೆ ಬರಲಿದೆ. ನಂತರ ಸ್ವಚ್ಛತಾ ಅಭಿಯಾನದ ಮೂಲಕ ನಗರದಲ್ಲಿ ಕಸ ವಿಲೇವಾರಿ ಮಾಡಿ ‘ಸ್ವಚ್ಛ ಬೆಂಗಳೂರು’ ನಿರ್ಮಿಸಲಾಗುವುದು. ಆ ಮೂಲಕ ಬೆಂಗಳೂರಿಗೆ ಹೊಸ ರೂಪ ನೀಡಲಾಗುವುದು ಎಂದು ಡಿಸಿಎಂ ಡಿ.ಕೆ. ಶಿವಕುಮಾರ್ ತಿಳಿಸಿದರು.
ಸೋಮವಾರ ಪುಲಕೇಶಿನಗರ ವಿಧಾನಸಭಾ ಕ್ಷೇತ್ರದಲ್ಲಿ ಬೆಂಗಳೂರು ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿ ವತಿಯಿಂದ 4 ಎಂಎಲ್‍ಡಿ ಸಾಮರ್ಥ್ಯದ ಜಲಾಗಾರ ನಿರ್ಮಾಣದ ಶಂಕುಸ್ಥಾಪನೆ ನೆರವೇರಿಸಿ ಅವರು ಮಾತನಾಡಿದರು.
ಇಂದು ಶಂಕುಸ್ಥಾಪನೆ ಮಾಡಿರುವ ಯೋಜನೆ ಸುಮಾರು 30 ಸಾವಿರ ಮನೆಗಳು, 2.50 ಲಕ್ಷ ಜನರಿಗೆ ನೀರು ಪೂರೈಸಲಿದೆ. ಈ ಕ್ಷೇತ್ರದಲ್ಲಿ ರಸ್ತೆಗೆ 130 ಕೋಟಿ ರೂ., ಮೇಲ್ಸೇತುವೆಗೆ 43 ಕೋಟಿ ರೂ., 320 ಕೋಟಿ ರೂ. ಇತರೆ ವಾರ್ಡ್ ಅಭಿವೃದ್ಧಿಗೆ, 650 ಕೋಟಿ ರೂ.ವೆಚ್ಚದಲ್ಲಿ ಹೊಸ ಫ್ಲೈಓವರ್ ನಿರ್ಮಾಣ ಮಾಡಲಾಗುವುದು ಎಂದು ಅವರು ಹೇಳಿದರು.
ನಿಮ್ಮ ಆಸ್ತಿ ದಾಖಲೆಗಳನ್ನು ಡಿಜಿಟಲೀಕರಣಗೊಳಿಸಿ ನಿಮ್ಮ ಮನೆಬಾಗಿಲಿಗೆ ಉಚಿತವಾಗಿ ರವಾನಿಸಲಾಗುವುದು. ಇದನ್ನು ಸದ್ಯದಲ್ಲೇ ದೊಡ್ಡ ಆಂದೋಲನದ ರೀತಿಯಲ್ಲಿ ಮಾಡಲಾಗುವುದು. 50/80 ವಿಸ್ತೀರ್ಣದಲ್ಲಿ ಮನೆ ನಿರ್ಮಿಸಲು ಪ್ಲಾನ್ ಅನುಮತಿ ಪಡೆಯಲು ಕಚೇರಿಗೆ ಅಲೆಯುವುದನ್ನು ತಪ್ಪಿಸಲು ನಂಬಿಕೆ ನಕ್ಷೆ ಯೋಜನೆ ಜಾರಿ ಮಾಡಲಾಗುವುದು ಎಂದು ಉಪ ಮುಖ್ಯಮಂತ್ರಿ ತಿಳಿಸಿದರು.
ಗ್ರೇಟರ್ ಬೆಂಗಳೂರು ಮೂಲಕ ಬೆಂಗಳೂರಿಗೆ ಹೊಸ ರೂಪ ನೀಡಲಾಗುತ್ತಿದೆ. ಎರಡು ಮೂರು ದಿನಗಳಲ್ಲಿ ಇದು ಚಾಲನೆಯಾಗಲಿದೆ. ಇದಾದ ತಕ್ಷಣ ಬೆಂಗಳೂರಿನಲ್ಲಿ ಸ್ವಚ್ಛತಾ ಅಭಿಯಾನ ಮಾಡಲಾಗುವುದು. ಪಾಲಿಕೆಯ ಸಹಾಯವಾಣಿ ನೀಡಿ ಬೆಂಗಳೂರಿನಲ್ಲಿ ಎಲ್ಲಿ ಕಸ ಇದೆ ಎಂದು ಸಾರ್ವಜನಿಕರು ಹೇಳಿದರೂ ಪಾಲಿಕೆ ವತಿಯಿಂದ ಅದನ್ನು ಸ್ವಚ್ಛಗೊಳಿಸಲಾಗುವುದು. ಆಮೂಲಕ ಸ್ವಚ್ಛ ಬೆಂಗಳೂರು ರೂಪಿಸಲಾಗುವುದು ಎಂದು ಅವರು ಹೇಳಿದರು.
ನಾವು ಕೊಟ್ಟ ಮಾತಿನಂತೆ ಯೋಜನೆಗಳನ್ನು ನೀಡುತ್ತಾ ಬಂದಿದ್ದೇವೆ. ಕೊಟ್ಟ ಭರವಸೆಗಳನ್ನು ಸರಿಯಾಗಿ ಈಡೇರಿಸಿಕೊಂಡು ಬಂದಿರುವ ಸರಕಾರ ಇದ್ದರೆ ಅದು ಕಾಂಗ್ರೆಸ್ ಸರಕಾರ ಮಾತ್ರ. ಈ ಹಿಂದೆ ಬಿಜೆಪಿ ಸರಕಾರ ಇದ್ದಾಗ ನಿಮ್ಮ ಖಾತೆಗೆ 15 ಲಕ್ಷ ರೂ. ಹಾಕುತ್ತೇವೆ, ಅಚ್ಛೇದಿನ ಕೊಡುತ್ತೇವೆ ಎಂದು ಹೇಳಿದ್ದರಲ್ಲಾ ಕೊಟ್ಟರಾ? ಬಿಜೆಪಿ ಸರಕಾರದಲ್ಲಿ ಅಗತ್ಯ ವಸ್ತುಗಳ ಬೆಲೆ ಗಗನಕ್ಕೇರಿ, ಆದಾಯ ಪಾತಾಳಕ್ಕೆ ಕುಸಿದ ಕಾರಣ ನಾವು ಈ ಗ್ಯಾರಂಟಿ ಯೋಜನೆ ನೀಡಿದ್ದೇವೆ. ಬೆಲೆ ಏರಿಕೆ ಮಧ್ಯೆ ನಿಮ್ಮ ಜೀವನ ಸುಗಮವಾಗಿ ಸಾಗಬೇಕು ಎಂದು ಈ ಯೋಜನೆ ನೀಡಿದ್ದೇವೆ ಎಂದು ಅವರು ತಿಳಿಸಿದರು.
ಈ ಕ್ಷೇತ್ರದಲ್ಲಿ ಶಾಲೆ, ಆಸ್ಪತ್ರೆ ನಿರ್ಮಿಸಿಕೊಡಿ ಎಂದು ಶಾಸಕ ಎ.ಸಿ.ಶ್ರೀನಿವಾಸ್ ಹೇಳುತ್ತಿದ್ದರು. ಶಾಸಕರು ಎಲ್ಲಿ ಜಾಗ ಹುಡುಕಿಕೊಡುತ್ತಾರೋ ಅಥವಾ ಹಳೇ ಶಾಲೆಯ ಜಾಗವಿದ್ದರೆ ಅದನ್ನು ಕೊಟ್ಟರೆ ಅಲ್ಲೇ ನೂತನ ಶಾಲೆ ನಿರ್ಮಾಣ ಮಾಡಿಕೊಡಲು ನಾನು ಬದ್ಧವಾಗಿದ್ದೇನೆ. ಆಸ್ಪತ್ರೆ ನಿರ್ಮಾಣಕ್ಕೂ ಪಾಲಿಕೆ ವತಿಯಿಂದ ಜಾಗ ಹುಡುಕಲಾಗುತ್ತಿದೆ ಎಂದು ಅವರು ಭರವಸೆ ನೀಡಿದರು.
ಸಮಾಜದ ಪ್ರಗತಿಯಾಗಬೇಕಾದರೆ ಮಹಿಳೆಯರ ಪ್ರಗತಿಯಾಗಬೇಕು ಎಂದು ಅಂಬೇಡ್ಕರ್ ಹೇಳಿದ್ದಾರೆ. ಎಲ್ಲ ಜಾತಿ, ಧರ್ಮ, ಸಂವಿಧಾನ ರಕ್ಷಣೆ ಮಾಡಿ, ಎಲ್ಲ ವರ್ಗದವರಿಗೂ ಸಂವಿಧಾನದ ಮೂಲಕ ನ್ಯಾಯ ಒದಗಿಸಿಕೊಡಬೇಕು. ಇಂದು ನಡೆಯುತ್ತಿರುವ ನೀರಿನ ಕಾಮಗಾರಿ ಯೋಜನೆ ಮೂಲಕ ಎ.ಸಿ.ಶ್ರೀನಿವಾಸ್ ಈ ಕ್ಷೇತ್ರದ ಇತಿಹಾಸ ಪುಟಕ್ಕೆ ಸೇರಿದ್ದಾರೆ. ನಿಮ್ಮ ಮನೆಗಳಿಗೆ ಶಾಶ್ವತವಾಗಿ ಕುಡಿಯುವ ನೀರನ್ನು ನೀಡಬೇಕು ಎಂದು ಈ ಯೋಜನೆಯನ್ನು ಶ್ರೀನಿವಾಸ್ ಮಾಡಿಸುತ್ತಿದ್ದಾರೆ ಎಂದು ಶಿವಕುಮಾರ್ ತಿಳಿಸಿದರು.
ಏಕತೆಯಲ್ಲಿ ಶಕ್ತಿ ಇದೆ. ಎಲ್ಲರೂ ಒಂದಾಗಿ ಸೇರಿಸಲು ಕಾಂಗ್ರೆಸ್ ಪ್ರಯತ್ನಿಸುತ್ತದೆ. ಆದರೆ ಎಲ್ಲರನ್ನು ವಿಭಜನೆ ಮಾಡಲು ಬಿಜೆಪಿ ಪ್ರಯತ್ನಿಸುತ್ತಿದೆ. ನಿಮ್ಮ ಸಮಸ್ಯೆಗಳನ್ನು ಶ್ರೀನಿವಾಸ್ ಬಗೆಹರಿಸಲು ಪ್ರಯತ್ನಿಸುತ್ತಿದ್ದಾರೆ. ಈ ಕ್ಷೇತ್ರದಲ್ಲಿ ಹೆಚ್ಚು ಬಡವರಿದ್ದೀರಿ. ನಿಮ್ಮ ಬದುಕಿನಲ್ಲಿ ನೆರವಾಗಲು ನಮ್ಮ ಸರಕಾರ ಇದೆ ಎಂದು ಅವರು ತಿಳಿಸಿದರು.
ಮೊನ್ನೆಯಷ್ಟೇ ಮನೆಮನೆಗೆ ಕಾವೇರಿ, ಸಂಚಾರಿ ಕಾವೇರಿ ಯೋಜನೆ ಮೂಲಕ 650 ರೂಪಾಯಿಗೆ ಟ್ಯಾಕಂರ್ ನೀರು ಪೂರೈಸಲು ಮುಂದಾಗಿದ್ದೇವೆ. ಟ್ಯಾಂಕರ್ ನೀರಿನ ಮಾಫಿಯಾ ತಡೆಗಟ್ಟಲು ಈ ಯೋಜನೆ ಜಾರಿ ಮಾಡಲಾಗಿದೆ. ಈ ಯೋಜನೆ ಮೂಲಕ ಮನೆ ಮನೆಗೆ ಶುದ್ಧ ಕಾವೇರಿ ನೀರು ಪೂರೈಸಲಾಗುತ್ತಿದೆ ಎಂದು ಉಪ ಮುಖ್ಯಮಂತ್ರಿ ಹೇಳಿದರು.
ನಾನು ಅಧಿಕಾರಕ್ಕೆ ಬಂದ ನಂತರ ಕಾವೇರಿ ಐದನೇ ಹಂತದ ಯೋಜನೆ ಜಾರಿ ಮಾಡಲಾಗಿದೆ. ನಂತರ ಬೆಂಗಳೂರಿಗೆ ಪೂರೈಸಲು ಹೆಚ್ಚುವರಿಯಾಗಿ 6 ಟಿಎಂಸಿ ನೀರನ್ನು ನೀಡಲಾಗಿದೆ. ಆಮೂಲಕ ಮುಂದಿನ 30-40 ವರ್ಷಗಳ ಕಾಲ ಬೆಂಗಳೂರಿಗೆ ಕುಡಿಯಲು ನೀರನ್ನು ಪೂರೈಸಬಹುದು ಎಂದು ಅವರು ತಿಳಿಸಿದರು.
ಇನ್ನು ನೆಲಮಂಗಲ, ಕೋಲಾರ ಭಾಗದ ಕೆರೆಗಳಿಗೆ ಸಂಸ್ಕರಿಸಿದ ನೀರನ್ನು ಪೂರೈಸಲಾಗುತ್ತಿದೆ. ಇನ್ನು ಸಣ್ಣ ಮನೆಗಳಿಗೆ ಕಾವೇರಿ ನೀರಿನ ಸಂಪರ್ಕ ಪಡೆಯಲು ಕೇವಲ 1 ಸಾವಿರ ರೂ. ಮಾತ್ರ ಶುಲ್ಕ ಪಾವತಿ ಮಾಡಬಹುದಾಗಿದೆ ಎಂದು ಶಿವಕುಮಾರ್ ಹೇಳಿದರು.
ಈ ಸಂದರ್ಭದಲ್ಲಿ ಶಾಸಕರಾದ ಎ.ಸಿ.ಶ್ರೀನಿವಾಸ್, ರಿಝ್ವಾನ್ ಅರ್ಶದ್, ಎಸ್.ಟಿ. ಸೋಮಶೇಖರ್, ವಿಧಾನಪರಿಷತ್ ಸದಸ್ಯ ನಾಗರಾಜ್ ಯಾದವ್, ಅಂಬೇಡ್ಕರ್ ಅಭಿವೃದ್ಧಿ ನಿಗಮದ ಅಧ್ಯಕ್ಷ ಸಂಪತ್ ರಾಜ್, ಬೆಂಗಳೂರು ನೀರು ಸರಬರಾಜು ಮತ್ತು ಒಳ ಚರಂಡಿ ಮಂಡಳಿ ಅಧ್ಯಕ್ಷ ಡಾ.ರಾಮಪ್ರಸಾತ್ ಮನೋಹರ್, ಬಿಬಿಎಂಪಿ ಮುಖ್ಯ ಆಯುಕ್ತ ಮಹೇಶ್ವರ ರಾವ್ ಮತ್ತಿತರರು ಉಪಸ್ಥಿತರಿದ್ದರು.