×
Ad

ಪ್ರಸಕ್ತ ವರ್ಷದಲ್ಲಿ ಗ್ರೇಟರ್‌ ಬೆಂಗಳೂರು ಪ್ರಾಧಿಕಾರ ಸ್ಥಾಪನೆ ಇಲ್ಲ ; ಹೈಕೋರ್ಟ್‌ಗೆ ರಾಜ್ಯ ಸರಕಾರದ ಸ್ಪಷ್ಟನೆ

Update: 2025-08-11 20:49 IST

ಬೆಂಗಳೂರು: ಪ್ರಸಕ್ತ ವರ್ಷ ಗ್ರೇಟರ್‌ ಬೆಂಗಳೂರು ಪ್ರಾಧಿಕಾರ (ಜಿಬಿಎ) ಸ್ಥಾಪನೆ ಇಲ್ಲ. ಹೊಸದಾಗಿ ರಚನೆಯಾಗಲಿರುವ ಐದು ಪಾಲಿಕೆಗಳಿಗೆ ಚುನಾವಣೆ ನಡೆಯುವವರೆಗೆ ಬೃಹತ್ ಬೆಂಗಳೂರು ಮಹಾನಗರ ಪಾಲಕೆ (ಬಿಬಿಎಂಪಿ) ಆಡಳಿತವೇ ಮುಂದುವರಿಯಲಿದೆ ಎಂದು ರಾಜ್ಯ ಸರಕಾರ ಹೈಕೋರ್ಟ್‌ಗೆ ಸ್ಪಷ್ಟಪಡಿಸಿದೆ.

ಕಟ್ಟಡ ಬೈಲಾ ಉಲ್ಲಂಘನೆ ವಿಚಾರವಾಗಿ ಬಿಬಿಎಂಪಿ ಸಹಾಯಕ ಕಾರ್ಯಕಾರಿ ಇಂಜಿನಿಯರ್‌ (ಎಇಇ) ನೀಡಿರುವ ನೋಟಿಸ್‌ ಪ್ರಶ್ನಿಸಿ ಸಿ.ವಿ. ರಾಮನ್‌ ನಗರದ ಮುನಿವೆಂಕಟಪ್ಪ ಎಂಬುವರು ಸಲ್ಲಿಸಿರುವ ಅರ್ಜಿ ಕುರಿತು ಸೋಮವಾರ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಎಂ.ಐ. ಅರುಣ್‌ ಅವರಿದ್ದ ಏಕಸದಸ್ಯ ನ್ಯಾಯಪೀಠದ ಮುಂದೆ ಹಾಜರಾದ ರಾಜ್ಯ ಅಡ್ವೊಕೇಟ್ ಜನರಲ್ ಕೆ. ಶಶಿಕಿರಣ್‌ ಶೆಟ್ಟಿ ಈ ಸ್ಪಷ್ಟನೆ ನೀಡಿದರು.

ವಿಚಾರಣೆ ವೇಳೆ, ಅರ್ಜಿದಾರರ ಪರ ವಕೀಲರು, ಸದ್ಯ ಗ್ರೇಟರ್‌ ಬೆಂಗಳೂರು ಪ್ರಾಧಿಕಾರ ರಚನೆ ಕುರಿತು ಅಧಿಸೂಚನೆ ಹೊರಡಿಸಿರುವ ಕಾರಣ, ಪಾಲಿಕೆಯ ಎಇಇಗೆ ನೋಟಿಸ್‌ ನೀಡಿರುವ ಅಧಿಕಾರವಿಲ್ಲ. ಆದ್ದರಿಂದ, ಈಗ ನೀಡಿರುವ ನೋಟಿಸ್‌ ಕಾನೂನು ಬಾಹಿರವಾಗಿದ್ದು, ಅದನ್ನು ರದ್ದುಗೊಳಿಸಬೇಕೆಂದು ನ್ಯಾಯಪೀಠಕ್ಕೆ ಮನವಿ ಮಾಡಿದರು.

ಈ ಮನವಿಗೆ ಆಕ್ಷೇಪ ವ್ಯಕ್ತಪಡಿಸಿದ ಬಿಬಿಎಂಪಿ ಪರ ವಕೀಲರು, ಜಿಬಿಎ ರಚನೆಯಾಗುವವರೆಗೆ ಬಿಬಿಎಂಪಿ ಕಾಯ್ದೆ-2020 ಜಾರಿಯಲ್ಲಿರುತ್ತದೆ. ಈ ಕುರಿತಂತೆ ಸರಕಾರವೇ 2025ರ ಮೇ 15ರಂದು ಆದೇಶ ಹೊರಡಿಸಿದೆ. ಆದ್ದರಿಂದ, ಎಇಇಗೆ ನೋಟಿಸ್‌ ನೀಡುವ ಅಧಿಕಾರವಿದೆ ಎಂದು ತಿಳಿಸಿದರು.

ಸರಕಾರದಿಂದಲೇ ಸ್ಪಷ್ಟನೆ ಕೇಳಿದ ಪೀಠ:

ಅದಕ್ಕೆ ನ್ಯಾಯಾಲಯ, ಜಿಬಿಎ ರಚನೆ ಕುರಿತು ಸರಕಾರ ಆದೇಶ ಹೊರಡಿಸಿರುವ ಕಾರಣ ಬಿಬಿಎಂಪಿ ಕಾಯ್ದೆ ಜಾರಿಯಲ್ಲಿಲ್ಲವೆಂಬ ವಿಚಾರವನ್ನು ಅರ್ಜಿದಾರರು ಎತ್ತಿದ್ದಾರೆ. ಆದ್ದರಿಂದ, ಯಾವಾಗ ಜಿಬಿಎ ಜಾರಿಯಾಗಲಿದೆ ಎಂಬ ಬಗ್ಗೆ ಸ್ಪಷ್ಟನೆ ನೀಡುವಂತೆ ಸರಕಾರಕ್ಕೆ ಸೂಚಿಸಿತು.

ಆಗ ಅಡ್ವೊಕೇಟ್‌ ಜನರಲ್‌ ಹಾಜರಾಗಿ, ಗ್ರೇಟರ್‌ ಬೆಂಗಳೂರು ಪ್ರಾಧಿಕಾರ ಜಾರಿ ಮುಂದೂಡಲಾಗಿದೆ. ಈ ವರ್ಷ ಜಿಬಿಎ ಸ್ಥಾಪನೆ ಇಲ್ಲ. ಐದು ಪಾಲಿಕೆಗಳಿಗೆ ಜನವರಿ ವೇಳೆಗೆ ಚುನಾವಣೆ ನಡೆಯುವ ಸಾಧ್ಯತೆ ಇದೆ. ಅಲ್ಲಿಯವರೆಗೆ ಬಿಬಿಎಂಪಿ ಆಡಳಿತವೇ ಮುಂದುವರಿಯಲಿದೆ ಎಂದು ನ್ಯಾಯಾಲಯಕ್ಕೆ ಸ್ಪಷ್ಟಪಡಿಸಿದರು.

ವಾದ ಆಲಿಸಿದ ನ್ಯಾಯಪೀಠ, ಅರ್ಜಿದಾರರಿಗೆ ಸಂಬಂಧಿಸಿದಂತೆ ಯಾವುದೇ ಬಲವಂತದ ಕ್ರಮ ಕೈಗೊಳ್ಳಬಾರದೆಂದು ಪಾಲಿಕೆ ಪರ ವಕೀಲರಿಗೆ ಸೂಚಿಸಿ, ವಿಚಾರಣೆಯನ್ನು ಬುಧವಾರಕ್ಕೆ (ಆಗಸ್ಟ್ 13) ಮುಂದೂಡಿತು.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News