×
Ad

ʼಆ.19ರ ಸಂಪುಟ ಸಭೆಯಲ್ಲೇ ಒಳಮೀಸಲಾತಿ ವರದಿ ಜಾರಿಗೊಳಿಸಿʼ : ಸಿಎಂಗೆ ಎಚ್.ಆಂಜನೇಯ ಪತ್ರ

Update: 2025-08-17 19:28 IST

ಎಚ್.ಆಂಜನೇಯ

ಬೆಂಗಳೂರು, ಆ. 17 : ಪರಿಶಿಷ್ಟ ಜಾತಿ ಒಳಮೀಸಲಾತಿ ಸಂಬಂಧ ನ್ಯಾ.ನಾಗಮೋಹನ್ ದಾಸ್ ನೀಡಿರುವ ವರದಿಯನ್ನು ಆಧರಿಸಿ ಆ.19ರಂದು ಕರೆದಿರುವ ವಿಶೇಷ ಸಚಿವ ಸಂಪುಟ ಸಭೆಯಲ್ಲೇ ಒಳಮೀಸಲಾತಿ ಜಾರಿಗೊಳಿಸಬೇಕು ಎಂದು ಮಾಜಿ ಸಚಿವ ಎಚ್.ಆಂಜನೇಯ, ಮುಖ್ಯಮಂತ್ರಿ ಸಿದ್ದರಾಮಯ್ಯನವರಿಗೆ ಪತ್ರ ಬರೆದಿದ್ದಾರೆ.

ಆಯೋಗವು ಜಾತಿ ಸಂಬಂಧಗಳಿಗಿಂತಲೂ ಹಿಂದುಳಿರುವಿಕೆಯನ್ನಾಧರಿಸಿ ಎ, ಬಿ, ಸಿ, ಡಿ, ಇ ಎಂದು ಗುಂಪು ರಚಿಸಲಾಗಿದೆ. ಆದರೆ, ಈ ವಿಷಯದಲ್ಲಿ ಸಹೋದರರಾದ ಹೊಲೆಯ ಸಮುದಾಯದವರು ಗೊಂದಲಕ್ಕೆ ಸಿಲುಕಿದ್ದಾರೆ. ವಾಸ್ತವವಾಗಿ ಜಾತಿ ಆಧಾರಿತ ಗುಂಪು ರಚಿಸಿಲ್ಲ, ಅವರವರ ಹಿಂದುಳಿವಿಕೆ ಪರಿಗಣಿಸಿ ವರ್ಗೀಕರಣ ಮಾಡಲಾಗಿದೆ. ಇದು ಸುಪ್ರೀಂ ಕೋರ್ಟ್ ಆದೇಶ ಆಗಿದೆ. ಈ ಸತ್ಯ ಅರಿತೋ ಅಥವಾ ತಿಳಿಯದೆಯೋ ಛಲವಾದಿ ಸಮುದಾಯದಲ್ಲಿನ ಕೆಲವರು ಅನಗತ್ಯ ಗೊಂದಲ ಉಂಟು ಮಾಡುತ್ತಿದ್ದಾರೆ ಎಂದು ಉಲ್ಲೇಖಿಸಿದ್ದಾರೆ.

ಈ ವಿಷಯಕ್ಕೆ ತಾವು ಯಾವುದೇ ರೀತಿ ಮನ್ನಣೆ ನೀಡಬಾರದು. ಒಂದು ವೇಳೆ ಮಾದಿಗ (ಬಿ) ಗುಂಪಿನಲ್ಲಿರುವ ಛಲವಾದಿ ಸಂಬಂಧಿತ ಜಾತಿಗಳಾದ ಪರೆಯಾ, ಮುಗೇರಾ ಇವುಗಳನ್ನು ಹೊಲೆಯ (ಸಿ) ಗುಂಪಿಗೆ ಸೇರಿಸಿದರೂ ಮಾದಿಗರಿರುವ (ಬಿ) ಗುಂಪು ಜನಸಂಖ್ಯೆಯಲ್ಲಿ ಹೆಚ್ಚಿರುತ್ತದೆ. ಇಲ್ಲಿ ಮುಖ್ಯವಾಗಿ ಜಾತಿ ಜನಸಂಖ್ಯೆ ಮೇಲೆ ಮೀಸಲಾತಿ ಹಂಚಿಕೆ ಆಗಿಲ್ಲವೆಂಬ ಸತ್ಯ ಅರಿತುಕೊಳ್ಳಬೇಕು. ಅವರವರ ಹಿಂದುಳಿವಿಕೆಯನ್ನೇ ಪ್ರಧಾನವಾಗಿಟ್ಟುಕೊಂಡು ಮೀಸಲಾತಿ ವರ್ಗೀಕರಣ ಮಾಡಲಾಗಿದೆ ಎಂದು ಅವರು ತಿಳಿಸಿದ್ದಾರೆ.

ಪ್ರಜ್ಞಾವಂತರು, ಶಿಕ್ಷಣ, ಉದ್ಯೋಗ, ಸಾಮಾಜಿಕ ಸ್ಥಿತಿಗತಿಯಲ್ಲಿ ಮಾದಿಗರಿಗಿಂತಲೂ ಮುಂದಿರುವ ಸಹೋದರರಾದ ಹೊಲೆಯ ಸಮುದಾಯದವರು ಒಳಮೀಸಲಾತಿ ವರ್ಗೀಕರಣವನ್ನು ಸಂವಿಧಾನದ ಕಣ್ಣುಗಳಲ್ಲಿ ನೋಡಬೇಕಾಗಿದೆ. ಯಾವುದೇ ರೀತಿ ವೈಯಕ್ತಿಕ ನೆಲೆಗಟ್ಟಿನಲ್ಲಿ ಪರಿಶೀಲಿಸಿದರೆ ಅಂಬೇಡ್ಕರ್ ಸಿದ್ಧಾಂತಕ್ಕೆ ವಿರುದ್ಧ ನಡೆ ಆಗಿರಲಿದೆ ಎಂಬುದನ್ನು ಮನದಟ್ಟು ಮಾಡಿಕೊಡಬೇಕು ಎಂದು ಆಂಜನೇಯ ಮನವಿ ಮಾಡಿದ್ದಾರೆ.

ದೇವನೂರು ಮಹಾದೇವ ಅಂತಹ ಹಿರಿಯ ಸಾಹಿತಿಗಳು ಪ್ರಜ್ಞಾಪೂರ್ವಕವಾಗಿಯೇ ಸಿಎಂಗೆ ಪತ್ರ ಬರೆದು, ನಾಗಮೋಹನ್ ದಾಸ್ ಆಯೋಗದ ವರದಿ ಜಾರಿಗೊಳಿಸುವಂತೆ ಒತ್ತಾಯಿಸಿದ್ದಾರೆ. ಒಟ್ಟು ಕುಟುಂಬದಲ್ಲಿದ್ದವರು, ಅಣ್ಣ-ತಮ್ಮದಿರುಗಳಾದ ನಾವುಗಳು ಯಾರೊಬ್ಬರ ಮಧ್ಯಸ್ಥಿಕೆ ಇಲ್ಲದೆ ಆಸ್ತಿ ಹಂಚಿಕೆ ಮಾಡಿಕೊಳ್ಳುವ ರೀತಿ ಒಳಮೀಸಲಾತಿ ಜಾರಿ ವಿಷಯದಲ್ಲಿ ಪ್ರಬುದ್ಧತೆ ಮೆರೆಯಬೇಕಾಗಿದೆ. ಪೌರಕಾರ್ಮಿಕರಲ್ಲಿ ಶೇ.99ರಷ್ಟು ಮಂದಿ ಮಾದಿಗರೇ ಇದ್ದಾರೆ. ಇದರರ್ಥ ಅತ್ಯಂತ ಕೀಳುಮಟ್ಟದ ಜೀವನದಲ್ಲಿ ಮಾದಿಗರು ಇದ್ದಾರೆಂಬುದಕ್ಕೆ ಕನ್ನಡಿ ಆಗಿದೆ. ಆದ್ದರಿಂದ ಛಲವಾದಿ ಸಮುದಾಯದವರು ಗೊಂದಲಕ್ಕೆ ಸಿಲುಕದೆ, ಸಂವಿಧಾನದ ಆಶಯಗಳೊಂದಿಗೆ ಚಿಂತನೆ ನಡೆಸಬೇಕು. ಹೀನಾಯ ಸ್ಥಿತಿಯಲ್ಲಿರುವ ಮಾದಿಗ ಮತ್ತು ಸಣ್ಣಪುಟ್ಟ ಜಾತಿಗಳು ತಮ್ಮಂತೆ ಶಿಕ್ಷಣ, ಉದ್ಯೋಗ, ಹಣ-ಆಸ್ತಿ ಗಳಿಕೆಯಲ್ಲಿ ಮುಖ್ಯವಾಹಿನಿಗೆ ಬರಲಿ ಎಂಬ ಮಾತೃಹೃದಯ ಹೊಂದಬೇಕು. ಇಲ್ಲದಿದ್ದರೇ ಅಣ್ಣ-ತಮ್ಮಂದಿರ ಸಣ್ಣ ಮನಸ್ಥಾಪದಿಂದ ದಲಿತ ಶಕ್ತಿಗೆ ದೊಡ್ಡ ಪೆಟ್ಟು ಬೀಳಲಿದೆ ಎಂಬ ಸತ್ಯವನ್ನು ಅರಿತುಕೊಳ್ಳಬೇಕು ಎಂದು ಆಂಜನೇಯ ಮನವಿ ಮಾಡಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News