×
Ad

ಗುತ್ತಿಗೆದಾರರಿಗೆ ಅಧಿಕಾರಿಗಳ, ರಾಜಕಾರಣಿಗಳ ಕಿರುಕುಳ ಇರುವುದು ನನ್ನ ಗಮನದಲ್ಲಿದೆ : ಡಿಸಿಎಂ ಡಿ.ಕೆ.ಶಿವಕುಮಾರ್

Update: 2024-03-04 15:35 IST

Photo:X/@DKShivakumar

ಬೆಂಗಳೂರು: ಯಾವುದೇ ಸರಕಾರ ಬಂದರೂ ರಾಜಕೀಯದವರ ಸಹವಾಸ ಮಾಡಬೇಡಿ‌. ರಾಜಕೀಯದಿಂದ ದೂರವಿರಿ. ಗುತ್ತಿಗೆದಾರರಿಗೆ ಅಧಿಕಾರಿಗಳ ಮತ್ತು ರಾಜಕಾರಣಿಗಳ ಕಿರುಕುಳ ಇರುವುದು ನನ್ನ ಗಮನದಲ್ಲಿದೆ ಎಂದು ಡಿಸಿಎಂ ಡಿ.ಕೆ.ಶಿವಕುಮಾರ್ ಅವರು ಹೇಳಿದರು.

ಅರಮನೆ ಮೈದಾನದಲ್ಲಿ ಸೋಮವಾರ ನಡೆದ ಕರ್ನಾಟಕ ರಾಜ್ಯ ಗುತ್ತಿಗೆದಾರರ ಸಂಘದ ಸಮ್ಮೇಳನದಲ್ಲಿ ಅವರು ಮಾತನಾಡಿದರು.

"ಮುಂದಿನ 9 ವರ್ಷಗಳ ಕಾಲ ನಾವೇ ಅಧಿಕಾರದಲ್ಲಿ ಇರುತ್ತೇವೆ. ನಿಮ್ಮ ಸಮಸ್ಯೆಗಳನ್ನು ನಾವೇ ಬಗೆಹರಿಸುವುದು. ನಾವೇ ಪರಿಹಾರ ನೀಡುವುದು. ಈ ವಿಚಾರ ನೆನಪಿನಲ್ಲಿ ಇಟ್ಟುಕೊಳ್ಳಿ. ಗುತ್ತಿಗೆದಾರರು ಇಲ್ಲದೇ ಸರಕಾರ ನಡೆಸಲು ಸಾಧ್ಯವಿಲ್ಲ. ನಾವು ಸರಕಾರ ನಡೆಸುತ್ತೇವೆ, ನೀವು ಕಾಮಗಾರಿ ನಡೆಸುತ್ತೀರ. ಈ ಎರಡೂ ದೇಶದ ಕೆಲಸಗಳು. ರಾಜ್ಯದ ಅಭಿವೃದ್ಧಿಯ ಭಾಗಗಳು ನೀವೆಲ್ಲ" ಎಂದು ಹೇಳಿದರು.

ಹಿಂದಿನ ಸರಕಾರ ಸರಿಯಾದ ಯೋಜನೆ ಮಾಡದೆ ನಿಮ್ಮ ಮೇಲೆ ಹೊರೆ ಹಾಕಿದೆ. ನೀರಾವರಿ ಇಲಾಖೆಯ ಬಜೆಟ್ 16 ಸಾವಿರ ಕೋಟಿ ಇದೆ. ಆದರೆ ಕಳೆದ ಬಾರಿ 25 ಸಾವಿರ ಕೋಟಿ ಮೊತ್ತದ ಯೋಜನೆಗಳಿಗೆ ಅನುಮೋದನೆ ನೀಡಲಾಗಿತ್ತು. ಒಟ್ಟು ನನ್ನ ಇಲಾಖೆಯಲ್ಲಿ 1 ಲಕ್ಷ 25 ಸಾವಿರ ಕೋಟಿ ಮೊತ್ತದ ಕಾಮಗಾರಿಗಳು ನಡೆಯುತ್ತಿವೆ. ಹೀಗಿದ್ದಾಗ ಗುತ್ತಿಗೆದಾರರು ಕೆಲಸ ಮುಗಿಸುವುದು ಹೇಗೆ?, ಸರಕಾರ ಬಿಲ್ ಪಾವತಿ ಮಾಡುವುದು ಹೇಗೆ? ಈ ಸಮಸ್ಯೆಗಳನ್ನು ಬಗೆಹರಿಸಲು ಗಮನ ಹರಿಸುತ್ತೇವೆ ಎಂದರು.

ಈ ಬಾರಿ ಅಭಿವೃದ್ಧಿ ಕಾರ್ಯಗಳಿಗೆ ಎಂದು 1.20 ಲಕ್ಷ ಕೋಟಿ ಹಣ ಮೀಸಲಿಟ್ಟಿದ್ದೇವೆ. 3 ಲಕ್ಷ 71 ಸಾವಿರ ಕೋಟಿ ಮೊತ್ತದ ಬಜೆಟ್ ಮಂಡಿಸಿದ್ದು,‌ ಗ್ಯಾರಂಟಿ ಯೋಜನೆಗಳಿಗೆ 50 ಸಾವಿರ ಕೋಟಿ ವೆಚ್ಚವಾಗಲಿದೆ. ನಿಮಗೆ ತೊಂದರೆ ಆಗದಂತೆ ಒಂದಷ್ಟು ಹಣ ಬಿಡುಗಡೆ ಮಾಡಿದ್ದೇವೆ ಎಂದು ತಿಳಿಸಿದರು.

ಕೇಂದ್ರ ಸರಕಾರ ರಾಜ್ಯದ ಪಾಲಿನ ಹಣ ಸರಿಯಾಗಿ ನೀಡದ ಪರಿಣಾಮ ಹೆಚ್ಚಿನ ತೊಂದರೆಯಾಗುತ್ತಿದೆ. ಭದ್ರಾ ಮೇಲ್ದಂಡೆ ಯೋಜನೆಗೆ 5,300 ಕೋಟಿ ಹಣ ನೀಡುವುದಾಗಿ ಬಜೆಟ್‌ನಲ್ಲಿಯೇ ಹೇಳಿದರು. ಇದುವರೆಗೂ ಒಂದು ರೂಪಾಯಿ ಬಂದಿಲ್ಲ. ಪರಿಸ್ಥಿತಿ ಹೀಗಿರುವಾಗ ಸರಾಕಾರ ಹೇಗೆ ನಡೆಸುವುದು?. ದೊಡ್ಡ, ದೊಡ್ಡ ಗುತ್ತಿಗೆದಾರರು ಬೃಹತ್ ಮೊತ್ತದ‌ ಪ್ಯಾಕೇಜ್ ಯೋಜನೆಗಳನ್ನು ತೆಗೆದುಕೊಂಡು ತುಂಡು ಗುತ್ತಿಗೆಯಾಗಿ ಸಣ್ಣವರಿಗೆ ನೀಡುತ್ತಿದ್ದಾರೆ. ಈ ಮಾಫಿಯಾವನ್ನು ಪ್ರಾರಂಭ ಮಾಡಿದ್ದೇ ಅಧಿಕಾರಿಗಳು ಎಂದು ಹೇಳಿದರು.

ಭ್ರಷ್ಟಾಚಾರದ ಭೂತ ನಿಮಗೂ ಅಂಟಿದೆ, ನಮಗೂ ಅಂಟಿದೆ

ಗುತ್ತಿಗೆದಾರರು ಪ್ಯಾಕೇಜ್ ಪದ್ದತಿ ರದ್ದು ಮಾಡಬೇಕು. ಬಾಕಿ ಮೊತ್ತ ಬಿಡುಗಡೆ ಮಾಡಬೇಕು. ಭ್ರಷ್ಟಾಚಾರ ಕಡಿಮೆ ಮಾಡಬೇಕು ಎನ್ನುವ ನಿಮ್ಮ ಬೇಡಿಕೆಗಳನ್ನು ಪೂರೈಸುವ ಚಿಂತನೆ ಮಾಡಲಾಗುವುದು. ಆದರೆ ಈ ಭ್ರಷ್ಟಾಚಾರದ ಭೂತ ನಿಮಗೂ ಅಂಟಿದೆ, ನಮಗೂ ಅಂಟಿದೆ. ಇಬ್ಬರೂ ಈ ಕಷ್ಟದಿಂದ ಪಾರಾಗಬೇಕಿದೆ ಎಂದು ಹೇಳಿದರು.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News