ಬಿಜೆಪಿ ಟಿಕೆಟ್ ಹೆಸರಿನಲ್ಲಿ ವಂಚನೆ ಪ್ರಕರಣ: ದೂರುದಾರರ ಖಾತೆಗೆ ಹಣ ಜಮೆ ಮಾಡಲು ಪ್ರಹ್ಲಾದ್ ಜೋಶಿ ಸಹೋದರನಿಗೆ ಹೈಕೋರ್ಟ್ ಗಡುವು
ಕರ್ನಾಟಕ ಹೈಕೋರ್ಟ್ (Photo: PTI)
ಬೆಂಗಳೂರು: ವಿಜಯಪುರ ಲೋಕಸಭಾ ಕ್ಷೇತ್ರದಿಂದ ಬಿಜೆಪಿ ಟಿಕೆಟ್ ಕೊಡಿಸುವುದಾಗಿ 2 ಕೋಟಿ ರೂ. ಪಡೆದು ವಂಚಿಸಿದ ಪ್ರಕರಣದಲ್ಲಿ 25 ಲಕ್ಷ ರೂ.ಗಳನ್ನು ಜುಲೈ 21ರೊಳಗೆ ದೂರುದಾರರ ಖಾತೆಗೆ ಜಮೆ ಮಾಡುವಂತೆ ಕೇಂದ್ರ ಸಚಿವ ಪ್ರಹ್ಲಾದ್ ಜೋಶಿಯ ಸಹೋದರ ಗೋಪಾಲ್ ಜೋಶಿಗೆ ಹೈಕೋರ್ಟ್ ಗಡುವು ನೀಡಿದೆ.
ವಿಜಯಪುರದ ಮಾಜಿ ಶಾಸಕ ದೇವಾನಂದ ಚವ್ಹಾಣ್ ಪತ್ನಿ ಸುನೀತಾ ಚವ್ಹಾಣ್ ದಾಖಲಿಸಿರುವ ಎಫ್‌ಐಆರ್ ಹಾಗೂ ಅಧೀನ ನ್ಯಾಯಾಲಯದ ವಿಚಾರಣೆ ರದ್ದು ಕೋರಿ ಗೋಪಾಲ್ ಜೋಶಿ, ಪತ್ನಿ ವಿಜಯಲಕ್ಷ್ಮೀ ಜೋಶಿ, ಪುತ್ರ ಅಜಯ್ ಜೋಶಿ ಸಲ್ಲಿಸಿರುವ ಅರ್ಜಿಯು ನ್ಯಾಯಮೂರ್ತಿ ಎಸ್.ಆರ್. ಕೃಷ್ಣಕುಮಾರ್ ಅವರಿದ್ದ ಏಕಸದಸ್ಯ ಪೀಠ ವಿಚಾರಣೆ ನಡೆಸಿತು.
ಒಟ್ಟು 2 ಕೋಟಿ ರೂ.ಯಲ್ಲಿ 50 ಲಕ್ಷ ರೂ. ವಾಪಸ್ ಕೊಡಲಾಗಿದೆ. ಬಾಕಿ 1.50 ಕೋಟಿ ರೂ.ಗಳಲ್ಲಿ 25 ಲಕ್ಷ ರೂ.ಗಳನ್ನು 2025ರ ಮಾರ್ಚ್ 25ರೊಳಗೆ ಪಾವತಿಸುವಂತೆ ಅರ್ಜಿದಾರರಿಗೆ ಹೇಳಲಾಗಿತ್ತು. ಇದನ್ನು ಒಪ್ಪಿಕೊಂಡು ಅರ್ಜಿದಾರರ ಪರ ವಕೀಲರು ಅಫಿಡವಿಟ್ ಸಲ್ಲಿಸಿದ್ದರು.
ಇದೇ ಆಧಾರದಲ್ಲಿ ಪ್ರಕರಣಕ್ಕೆ ತಡೆ ನೀಡಿ ಹೊರಡಿಸಲಾಗಿದ್ದ ಮಧ್ಯಂತರ ಆದೇಶವನ್ನು ವಿಸ್ತರಿಸಲಾಗಿತ್ತು. ಆದರೆ, ಈವರೆಗೆ 25 ಲಕ್ಷ ರೂ. ಪಾವತಿ ಮಾಡಲಾಗಿಲ್ಲ. ಕೋರ್ಟ್ ಆದೇಶ ಪಾಲಿಸಿಲ್ಲ ಎಂದಾದರೆ ಅರ್ಜಿಯನ್ನು ವಜಾಗೊಳಿಸುವುದಾಗಿ ಪೀಠ ಹೇಳಿತು. ವಕೀಲರ ಮನವಿ ಹಿನ್ನೆಲೆಯಲ್ಲಿ 25 ಲಕ್ಷ ರೂ. ಪಾವತಿಸಲು ಸೋಮವಾರದವರೆಗೆ ಅವಕಾಶ ನೀಡಿದ ಹೈಕೋರ್ಟ್ ವಿಚಾರಣೆಯನ್ನು ಮುಂದೂಡಿದೆ.