×
Ad

ಮಹಾನಾಯಕನೇ ಜಿ.ಪರಮೇಶ್ವರ್‌ರನ್ನು ರಾಜಕೀಯವಾಗಿ ಮುಗಿಸಲು ಹೊರಟಿದ್ದಾರೆ : ಎಚ್.ಡಿ.ಕುಮಾರಸ್ವಾಮಿ

Update: 2025-05-23 18:23 IST

ಎಚ್.ಡಿ.ಕುಮಾರಸ್ವಾಮಿ

ಹೊಸದಿಲ್ಲಿ : ‘ದಲಿತ ಸಮುದಾಯದ ನಾಯಕರನ್ನು ಮುಗಿಸಲು ಕುತಂತ್ರ ಮಾಡುತ್ತಿರುವ ಮಹಾನಾಯಕನೇ ಗೃಹ ಸಚಿವ ಡಾ.ಜಿ.ಪರಮೇಶ್ವರ್ ಅವರನ್ನು ರಾಜಕೀಯವಾಗಿ ಮುಗಿಸಲು ಹೊರಟಿದ್ದಾರೆ’ ಎಂದು ಕೇಂದ್ರ ಸಚಿವ ಎಚ್.ಡಿ.ಕುಮಾರಸ್ವಾಮಿ, ಇಂದಿಲ್ಲಿ ಪರೋಕ್ಷವಾಗಿ ಡಿಸಿಎಂ ಡಿ.ಕೆ.ಶಿವಕುಮಾರ್ ವಿರುದ್ಧ ಗಂಭೀರ ಆರೋಪ ಮಾಡಿದ್ದಾರೆ.

ಶುಕ್ರವಾರ ದಿಲ್ಲಿಯಲ್ಲಿನ ತಮ್ಮ ಅಧಿಕೃತ ನಿವಾಸದಲ್ಲಿ ಮಾಧ್ಯಮಗೋಷ್ಠಿಯಲ್ಲಿ ಮಾತನಾಡಿದ ಅವರು, ದಲಿತ, ಹಿಂದುಳಿದ ವರ್ಗಗದ ನಾಯಕರನ್ನು ಗುರಿಯಾಗಿಸಿಕೊಂಡು ಜಾರಿ ನಿರ್ದೇಶನಾಲಯ ದಾಳಿ ನಡೆಸಿದೆ ಎಂದು ಕಾಂಗ್ರೆಸ್ ನಾಯಕ ಬಿ.ಕೆ. ಹರಿಪ್ರಸಾದ್ ನೀಡಿರುವ ಹೇಳಿಕೆಯನ್ನು ಗಮನಿಸಿದ್ದೇನೆ. ಸಚಿವ ಪರಮೇಶ್ವರ್ ಅವರು ಇಂತಹ ಸಂಕಷ್ಟಕ್ಕೆ ಒಳಗಾಗಲು ಕಾಂಗ್ರೆಸ್ ಪಕ್ಷದ ಆ ಪ್ರಭಾವೀ ನಾಯಕನೇ ಕಾರಣ ಎಂದು ದೂರಿದರು.

ಸಚಿವ ಕೆ.ಎನ್.ರಾಜಣ್ಣ ವಿಧಾನಸಭೆಯಲ್ಲಿ ಹೇಳಿದರಲ್ಲ, ರಾಜ್ಯದಲ್ಲಿ ಸಿಡಿ, ಪೆನ್‍ಡ್ರೈವ್ ಫ್ಯಾಕ್ಟರಿ ಇಟ್ಟುಕೊಂಡಿರುವ ಪ್ರಭಾವೀ ನಾಯಕನ ಬಗ್ಗೆ ನೇರವಾಗಿ ಹೇಳಿದ್ದರು ಅವರು. ಅವರು ಹೇಳಿದ್ದ ನಾಯಕನೇ ಇವತ್ತು ಪರಮೇಶ್ವರ್‌ರನ್ನು ಮುಗಿಸಲು ಹೊರಟಿದ್ದಾನೆ. ಪರಮೇಶ್ವರ್ ದಲಿತ ನಾಯಕರ ಸಭೆ ಮಾಡಲು ಹೊರಟಿದ್ದು, ದಿಲ್ಲಿ ನಾಯಕರನ್ನು ಭೇಟಿ ಮಾಡಿದ್ದೇ ಅವರ ವಿರುದ್ಧ ಕುತಂತ್ರ ನಡೆಯಲು ಕಾರಣ ಎಂದು ಕುಮಾರಸ್ವಾಮಿ ತಿಳಿಸಿದರು.

ರಾಜ್ಯದಲ್ಲಿ ಏನೇನಾಗುತ್ತಿದೆ ಎನ್ನುವುದು ಎಲ್ಲರಿಗೂ ಗೊತ್ತಿದೆ. ಮೇಲಾಗಿ ಕಾಂಗ್ರೆಸ್ ಪಕ್ಷದಲ್ಲಿ ಯಾರು ಯಾರಿಗೆ ಗುನ್ನ ಹೊಡೆಯುತ್ತಿದ್ದಾರೆನ್ನುವ ಮಾಹಿತಿಯೂ ಎಲ್ಲರಿಗೂ ತಿಳಿದಿದೆ. ದುಬೈನಿಂದ ಸಿಕ್ಕಿಬಿದ್ದಿರುವ ಆ ಮಹಿಳೆ ಚಿನ್ನ ತರುತ್ತಿದ್ದಾಳೆ ಎನ್ನುವ ಮಾಹಿತಿಯನ್ನು ಸೋರಿಕೆ ಮಾಡಿದ್ದೇ ಈ ಪ್ರಭಾವೀ ನಾಯಕ. ಆಕೆ ದುಬೈನಿಂದ ಚಿನ್ನ ಸ್ಮಗ್ಲಿಂಗ್ ಮಾಡುತ್ತಿದ್ದಾಳೆ ಎನ್ನುವ ವಿಚಾರ ಈ ಪ್ರಭಾವೀ ನಾಯಕನಿಗೆ ಹೇಗೆ ಗೊತ್ತು ಎಂದು ಕುಮಾರಸ್ವಾಮಿ ಪ್ರಶ್ನಿಸಿದರು.

ಸಿಎಂ ಸಿದ್ದರಾಮಯ್ಯರ ಬಳಿಯೇ ಗುಪ್ತಚರ ವಿಭಾಗ ಇದೆಯಲ್ಲ. ಅವರಿಗೆ ಈ ವಿಷಯ ಗೊತ್ತಿಲ್ಲವೇ? ಆ ಮಹಿಳೆ ವಿಮಾನ ನಿಲ್ದಾಣದ ಮೂಲಕ ಚಿನ್ನ ತರುತ್ತಿರುವ ಮಾಹಿತಿ ಕೊಟ್ಟಿದ್ದೇ ಕಾಂಗ್ರೆಸ್ ಪಕ್ಷದ ಈ ಪ್ರಭಾವಿ ನಾಯಕ. ಈ ವಿಷಯ ಸಿದ್ದರಾಮಯ್ಯರ ಗಮನಕ್ಕೆ ಬಂದಿಲ್ಲವೇ? ಸಚಿವ ಪರಮೇಶ್ವರ್ ದಲಿತರ ಸಮಾವೇಶ ಮಾಡಲು ಹೊರಟರು. ತಾವು ಸಿಎಂ ಪದವಿಯ ಆಕಾಂಕ್ಷಿ ಎಂದು ಹೇಳಿದರು. ತಮ್ಮ ದಾರಿಗೆ ಅಡ್ಡ ಬರುತ್ತಾರೆ ಎಂದು ಕಾಂಗ್ರೆಸ್ ಪ್ರಭಾವೀ ನಾಯಕನೇ ಅವರನ್ನು ಈ ಪ್ರಕರಣದಲ್ಲಿ ಸಿಲುಕಿಸುವ ಕುತಂತ್ರ ಹೂಡಿದರು. ಇಷ್ಟೆಲ್ಲಾ ಗಂಭೀರ ವಿಚಾರಗಳು ಸಿಎಂಗೆ ಗೊತ್ತಿಲ್ಲ ವೆಂದರೆ ಹೇಗೆ? ಎಂದು ಎಚ್‍ಡಿಕೆ ಹೇಳಿದರು.

ಕಾಂಗ್ರೆಸ್ ಪಕ್ಷದಲ್ಲಿ ಇಷ್ಟೆಲ್ಲಾ ರಾಜಕೀಯ ಮೇಲಾಟ ನಡೆಯುತ್ತಿದ್ದರೂ ಕೇಂದ್ರದ ಕಡೆ ಬೆರಳು ತೋರಿಸುವ ವ್ಯರ್ಥ ಪ್ರಯತ್ನ ನಡೆಯುತ್ತಿದೆ. ಕಾಂಗ್ರೆಸ್‍ನ ಪ್ರಭಾವೀ ನಾಯಕನಿಂದಲೇ ಇದೆಲ್ಲಾ ನಡೆದಿದೆ. ಅದೆಷ್ಟೋ ಎಸ್‍ಐಟಿ, ಕಮಿಟಿ, ಸಮಿತಿ ಎಲ್ಲ ಮಾಡಿದ್ದಿರಲ್ಲ? ಅವೆಲ್ಲವೂ ಏನಾದವು? ಬಾಯಿಬಿಟ್ಟರೆ ‘ನುಡಿದಂತೆ ನಡೆದಿದ್ದೇವೆ’ ಎಂದು ಹೇಳುತ್ತಾರೆ. ಆದರೆ, ನುಡಿದಂತೆ ನಡೆಯಲು ಎಷ್ಟು ತೆರಿಗೆ ಹಾಕಿದ್ದಾರೆ ಎಂದು ಕುಮಾರಸ್ವಾಮಿ ಪ್ರಶ್ನಿಸಿದರು.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News