×
Ad

ಸಂಭ್ರಮಾಚರಣೆ ವೇಳೆ ಕಾಲ್ತುಳಿತಕ್ಕೆ ರಾಜ್ಯ ಸರಕಾರವೇ ನೇರ ಹೊಣೆ : ಎಚ್.ಡಿ.ಕುಮಾರಸ್ವಾಮಿ

Update: 2025-06-06 16:39 IST

 ಎಚ್.ಡಿ.ಕುಮಾರಸ್ವಾಮಿ

ಬೆಂಗಳೂರು : ‘ಚಿನ್ನಸ್ವಾಮಿ ಕ್ರೀಡಾಂಗಣದ ಬಳಿ ಸಂಭವಿಸಿದ ಕಾಲ್ತುಳಿತಕ್ಕೆ ರಾಜ್ಯ ಸರಕಾರವೇ ನೇರ ಹೊಣೆ. ಕಾಂಗ್ರೆಸ್ ಹೈಕಮಾಂಡ್‍ಗೆ ಮಾನ-ಮರ್ಯಾದೆ ಇದ್ದರೆ ತಕ್ಷಣವೇ ಈ ಮುಖ್ಯಮಂತ್ರಿ, ಉಪಮುಖ್ಯಮಂತ್ರಿಯನ್ನು ಕಿತ್ತೆಸೆಯಬೇಕು’ ಎಂದು ಕೇಂದ್ರ ಸಚಿವ ಎಚ್.ಡಿ.ಕುಮಾರಸ್ವಾಮಿ ಇಂದಿಲ್ಲಿ ಒತ್ತಾಯಿಸಿದ್ದಾರೆ.

ಶುಕ್ರವಾರ ನಗರದ ಖಾಸಗಿ ಹೊಟೇಲ್‍ನಲ್ಲಿ ಪ್ರತಿಪಕ್ಷ ನಾಯಕ ಆರ್.ಅಶೋಕ್, ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ, ಪರಿಷತ್ ಪ್ರತಿಪಕ್ಷ ನಾಯಕ ಛಲವಾದಿ ನಾರಾಯಣಸ್ವಾಮಿ ಅವರೊಂದಿಗೆ ಜಂಟಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಈ ದುರಂತಕ್ಕೆ ಸಿಎಂ, ಮತ್ತವರ ಕಚೇರಿ ನೇರ ಕಾರಣ. ‘ಎರಡು-ಮೂರು ಕಡೆ ವಿಜಯೋತ್ಸವ ಮಾಡಲು ಸಾಧ್ಯವಿಲ್ಲ. ಭದ್ರತೆ ಕೊಡುವುದು ಕಷ್ಟ’ ಎಂದು ಪೊಲೀಸರು ಹೇಳಿದರೂ ಕೇಳದೇ ವಿಜಯೋತ್ಸವ ಆಗಲೇಬೇಕು ಎಂದು ಸಿಎಂ ಪಟ್ಟು ಹಿಡಿದರು. ಅಲ್ಲದೆ ಪೊಲೀಸರಿಗೆ ತಾಕೀತು ಮಾಡಿ ಧಮ್ಕಿಯನ್ನು ಹಾಕಿದ್ದರು ಎಂದು ಆರೋಪ ಮಾಡಿದರು.

ವಿಜಯೋತ್ಸವ ಆಚರಣೆಗೆ ಮೊದಲೇ ಆರ್‌ಸಿಬಿ ಪೊಲೀಸರ ಅನುಮತಿ ಕೇಳಿತ್ತು. ಆ ಮನವಿಯನ್ನು ಪೊಲೀಸರು ತಿರಸ್ಕರಿಸಿದ್ದರು. ಹಾಗಿದ್ದರೂ ವಿಜಯೋತ್ಸವ ಆಗಲೇಬೇಕು ಎಂದು ಸಿಎಂ ತಾಕೀತು ಮಾಡಿದ್ದು ಏಕೆ ಎಂದು ಪ್ರಶ್ನಿಸಿದ ಅವರು, ಹನ್ನೊಂದು ಜನರ ಸಾವಿಗೆ ಸಿಎಂ, ಡಿಸಿಎಂ ಹಾಗೂ ಸಿಎಂ ರಾಜಕೀಯ ಕಾರ್ಯದರ್ಶಿ ಗೋವಿಂದರಾಜು ಕಾರಣ. ಮಾತೆತ್ತಿದರೆ ಸಿಎಂ ಗೋವಿಂದ.. ಗೋವಿಂದ.. ಎನ್ನುತ್ತಾರಲ್ಲ.. ಈ ದುರಂತಕ್ಕೆ ಮೂಲ ಪುರುಷನೇ ಆತ ಎಂದು ಆರೋಪಿಸಿದರು.

ತಪ್ಪು ಮಾಡಿದ್ದು ಸರಕಾರ, ಶಿಕ್ಷೆಗೆ ಗುರಿಯಾಗಿದ್ದು ಅಧಿಕಾರಿಗಳಿಗೆ. ದಕ್ಷ ಪೊಲೀಸ್ ಆಯುಕ್ತ ದಯಾನಂದ್ ಸೇರಿ 5 ಪೊಲೀಸ್ ಅಧಿಕಾರಿಗಳನ್ನು ಅಮಾನತು ಮಾಡುವ ಮೂಲಕ ಜನತೆಗೆ ಸರಕಾರ ಕೆಟ್ಟ ಸಂದೇಶ ನೀಡಿದೆ. ದಯಾನಂದ್ ಹೊಸ ವರ್ಷಾಚರಣೆ, ಕ್ರಿಕೆಟ್ ಪಂದ್ಯಗಳು ಸೇರಿದಂತೆ ಅನೇಕ ಸಂದರ್ಭಗಳಲ್ಲಿ ಅವರೇ ನಗರದ ಪೊಲೀಸ್ ಕಮಿಷನರ್ ಅಗಿದ್ದರು. ಉತ್ತಮ ಅಧಿಕಾರಿಯನ್ನು ಅಮಾನತು ಮಾಡಿ ಇವರು ಯಾವ ರೀತಿಯ ಸಂದೇಶ ನೀಡಿದ್ದಾರೆ ಎಂದು ಅವರು ಪ್ರಶ್ನಿಸಿದರು.

ಸಿಎಂ ರಾಜಕೀಯ ಕಾರ್ಯದರ್ಶಿ ಗೋವಿಂದ ರಾಜ್ ಎಂಬ ವ್ಯಕ್ತಿ ಇಷ್ಟೆಲ್ಲಾ ಸಾವು ನೋವುಗಳಿಗೆ ಕಾರಣ. ಅವರ ಬಗ್ಗೆ ಏನೇನೋ ಕಥೆಗಳನ್ನು ಹೇಳುತ್ತಾರೆ. ಸುತ್ತಲೂ ಸಿಎಂ ಎಂತಹ ವ್ಯಕ್ತಿಗಳನ್ನು ಇಟ್ಟುಕೊಂಡಿದ್ದಾರೆಂಬುದು ಪ್ರಶ್ನಾರ್ಹ. ರಾಜ್ಯದಲ್ಲಿ ಈ ಸರಕಾರದ ಮಾನ-ಮರ್ಯಾದೆ ಉಳಿಯಬೇಕು ಎನ್ನುವುದಾದರೆ ತಮ್ಮ ಸುತ್ತಮುತ್ತ ಇರುವ ಇಂತಹ ಕೆಟ್ಟ ಹುಳಗಳನ್ನು ಮೊದಲು ಕಿತ್ತು ಬಿಸಾಡಬೇಕು ಎಂದು ಕುಮಾರಸ್ವಾಮಿ ಸಲಹೆ ನೀಡಿದರು.

ಕಾಂಗ್ರೆಸ್ ಹೈಕಮಾಂಡ್ ಎನ್ನುವುದು ಇದ್ದರೆ, ಅದಕ್ಕೆ ಸಂಕೋಚ ನಾಚಿಕೆ ಎನ್ನುವುದು ಇದ್ದರೆ ಮೊದಲು ಸಿದ್ದರಾಮಯ್ಯ, ಡಿ.ಕೆ.ಶಿವಕುಮಾರ್ ಅವರನ್ನು ತೆಗೆದು ಅವರ ಜಾಗಕ್ಕೆ ಸಭ್ಯರನ್ನು ತರಬೇಕು. ಕುಮಾರಸ್ವಾಮಿ ಮಾತಾಡಿದರೆ ಅಸೂಯೆ ಎಂದು ಟೀಕೆ ಮಾಡುತ್ತಾರೆ. ನಾನು ಮಂತ್ರಿ ಆಗಿದ್ದೇನೆ. ಪ್ರಧಾನಿ ಮೋದಿ ಎರಡು ಖಾತೆಗಳನ್ನು ಕೊಟ್ಟಿದ್ದಾರೆ. ಅವರ ದೂರದೃಷ್ಟಿ ಅನುಸಾರ ಉತ್ತಮವಾಗಿ ಕೆಲಸ ಮಾಡಲು ಪ್ರಯತ್ನ ಮಾಡುತ್ತಿದ್ದೇನೆ. ನನಗೆ ಅಸೂಯೆ ಎನ್ನುವುದು ಯಾಕೆ ಬರುತ್ತದೆ ಎಂದು ಅವರು ಕುಟುಸಿದರು.

ವರ್ಚಸ್ಸು ಹೆಚ್ಚಿಸಿಕೊಳ್ಳುವ, ಪ್ರಚಾರದ ಹಪಾಹಪಿಗೆ ಸಿಕ್ಕಿ ಸಿಎಂ, ಡಿಸಿಎಂ ಇಬ್ಬರೂ ಈ ದುರ್ಘಟನೆಗೆ ಕಾರಣರಾಗಿದ್ದಾರೆ. ಕನಕಪುರದ ಡಿ.ಕೆ.ಶಿವಕುಮಾರ್ ಶೋ ಕೊಡಲು ಹೋಗಿ ತಗುಲಿಕೊಂಡಿದ್ದಾರೆ. ಅವರು ಒಂದು ಕೇಸಿನ ನಿಮಿತ್ತ ಕನಕಪುರದ ಕೋರ್ಟ್‍ನಲ್ಲಿ ಇದ್ದರು. ರಾಯಲ್ ಚಾಲೆಂಜರ್ಸ್ ತಂಡ ಬೆಂಗಳೂರಿಗೆ ಬರುತ್ತಿದೆ ಎಂದು ಗೊತ್ತಾಗಿ ಡಿಕೆಶಿ, ಕೋರ್ಟ್‍ನಿಂದಲೆ ಕೈಯಲ್ಲಿ ಆರ್‌ಸಿಬಿ ಬಾವುಟ ಹಿಡಿದು ಎಚ್‍ಎಎಲ್ ವಿಮಾನ ನಿಲ್ದಾಣಕ್ಕೆ ಬರುತ್ತಾರೆ ಎಂದು ಅವರು ಟೀಕಿಸಿದರು.

ಕಪ್ ಗೆದ್ದವರು ಆಟಗಾರರು. ಅದರೇ ಡಿಕೆಶಿಗೆ ತಾನೇ ಕಪ್ ಗೆದ್ದಷ್ಟು ಉಮೇದು. ಅಲ್ಲಿಂದಲೇ ಕಪ್‍ಗೆ ಅವರಿಂದ ಮುತ್ತಿನ ಸುರಿಮಳೆ ಶುರುವಾಯಿತು. ಅಲ್ಲಿ ಡಿಸಿಎಂ, ವಿರಾಟ್ ಕೊಹ್ಲಿಗೆ ಕನ್ನಡದ ಬಾವುಟ ಕೊಟ್ಟರು. ಆದರೆ ಡಿಸಿಎಂ ಅವರು ಕನ್ನಡ ಶಾಲು ಹಾಕಿಕೊಳ್ಳದೆ ಕುತ್ತಿಗೆಯ ಸುತ್ತ ವಿದೇಶಿ ಮಫ್ಲರ್ ಹಾಕಿದ್ದರು. ಆದರೆ, ಕೊಹ್ಲಿ ಪುನಃ ಆ ಕನ್ನಡ ಬಾವುಟವನ್ನು ಡಿಕೆಶಿಗೆ ವಾಪಸ್ಸು ಕೊಟ್ಟರು. ಇಷ್ಟೆಲ್ಲಾ ನಾಟಕ ಆಡುವ ಅಗತ್ಯ ಇದೆಯಾ? ಎಂದು ಅವರು ಪ್ರಶ್ನಿಸಿದರು.

ಕೀಲುಗೊಂಬೆ: ‘ಗೃಹ ಸಚಿವ ಡಾ.ಜಿ.ಪರಮೇಶ್ವರ್ ಓರ್ವ ನಿಷ್ಕ್ರಿಯ ಸಚಿವರು. ಪಾಪ.. ಅವರು ಕೀಲುಗೊಂಬೆ ಇದ್ದಂತೆ. ಕೀ ಕೊಟ್ಟರೆ ಮಾತ್ರ ಮೇಲೆ ಏಳುತ್ತಾರೆ. ಇಲ್ಲವಾದರೆ ಇಲ್ಲ. ಅವರನ್ನು ನೋಡಿದರೆ ಪಾಪ ಎನಿಸುತ್ತದೆ’

-ಎಚ್.ಡಿ.ಕುಮಾರಸ್ವಾಮಿ ಕೇಂದ್ರ ಸಚಿವ

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News