×
Ad

ರಾಜ್ಯ ಸರಕಾರದ ಪ್ರತೀ ಹಂತದಲ್ಲಿಯೂ ಕಮಿಷನ್ ಹಾವಳಿ, ಭ್ರಷ್ಟಾಚಾರ ಮಿತಿಮೀರಿದೆ : ಎಚ್‌ಡಿಕೆ ಆಕ್ರೋಶ

Update: 2025-06-20 14:57 IST

ಎಚ್.ಡಿ.ಕುಮಾರಸ್ವಾಮಿ

ಬೆಂಗಳೂರು : ರಾಜ್ಯ ಸರಕಾರದ ಪ್ರತೀ ಹಂತದಲ್ಲಿಯೂ ಕಮೀಶನ್ ಹಾವಳಿ ಹಾಗೂ ಭ್ರಷ್ಟಾಚಾರ ಮಿತಿಮೀರಿದೆ ಎಂದು ಕೇಂದ್ರ ಸಚಿವ ಎಚ್.ಡಿ.ಕುಮಾರಸ್ವಾಮಿ ನೇರ ಆರೋಪ ಮಾಡಿದರು.

ಈ ಸರಕಾರದಲ್ಲಿ ಏನು ನಡೆಯುತ್ತಿದೆ ಎಂಬುದಕ್ಕೆ ಮುಖ್ಯಮಂತ್ರಿ ಸಲಹೆಗಾರ ಬಿ.ಆರ್. ಪಾಟೀಲ್ ಅವರು ಹೇಳಿರುವ ಮಾತುಗಳೇ ಸಾಕ್ಷಿ. ಅವರು ಹೇಳಿರುವ ಮಾತುಗಳು ಮಾಧ್ಯಮಗಳಲ್ಲಿ ವರದಿಯಾಗಿವೆ. ವಸತಿ ಇಲಾಖೆಯಲ್ಲಿ ಕಮಿಷನ್ ಹಾವಳಿ ಎಷ್ಟಿದೆ ಎಂಬ ವಿಚಾರವಾಗಿ ಆಡಿಯೋ ವೈರಲ್ ಆಗಿದೆ. ಇದರಿಂದ ನನಗೆ ಯಾವುದೇ ಆಶ್ಚರ್ಯ ಆಗಿಲ್ಲ ಎಂದು ಅವರು ಹೇಳಿದರು.

ಕೃಷ್ಣ ಭೈರೇಗೌಡ ಏನು ಹೇಳಿದ್ದಾರೆ ಎಂಬುದನ್ನು ನಾನು ಮಾಧ್ಯಮಗಳಲ್ಲಿ ಗಮನಿಸಿದ್ದೇನೆ. ಯಾವ ಯಾವುದಕ್ಕೆ ಎಷ್ಟೆಷ್ಟು ರೇಟ್ ಫಿಕ್ಸ್ ಮಾಡಿದ್ದಾರೆ ಎಂದು ಅವರು ನೇರವಾಗಿ ಹೇಳಿದ್ದಾರೆ. ತಮ್ಮ ಇಲ್ಲಾಖೆಗಳಲ್ಲಿ ಏನೆಲ್ಲಾ ನಡೆಯುತ್ತಿದೆ ಎಂಬುದು ಆಯಾ ಇಲಾಖೆಯ ಮಂತ್ರಿಗಳಿಗೆ ಗೊತ್ತಿದೆ. ಕೃಷ್ಣಭೈರೇಗೌಡರ ಇಲಾಖೆಯಲ್ಲಿ ಯಾವ ರೀತಿ ಕೆಲಸ ನಡೆಯುತ್ತಿದೆ ಎಂದು ಅವರೇ ಹೇಳಿದ್ದಾರೆ. ಈ ಸರಕಾರ ಯಾವ ರೀತಿ ನಡೆಯುತ್ತಿದೆ ಎಂಬುದಕ್ಕೆ ಇದಕ್ಕಿಂತ ಉದಾಹರಣೆ ಬೇಕೆ? ಎಂದು ಅವರು ಪ್ರಶ್ನಿಸಿದರು.

ಬಿ.ಆರ್.ಪಾಟೀಲ್ ಹೇಳಿರುವುದು ನಿಜ. ವಸತಿ ಇಲಾಖೆಯಲ್ಲಿ ಹಣ ಕೊಟ್ಟರೆ ಮಾತ್ರ ಅನುದಾನ ಬಿಡುಗಡೆ ಆಗುತ್ತಿದೆ ಎಂದು ಅವರು ಹೇಳಿದ್ದಾರೆ. ಇದನ್ನು ನಾನಾಗಲಿ, ವಿರೋಧ ಪಕ್ಷವಾಗಲಿ ಹೇಳುತ್ತಿಲ್ಲ. ರಾಜ್ಯ ಯೋಜನಾ ಆಯೋಗದ ಉಪಾಧ್ಯಕ್ಷರು, ಮುಖ್ಯಮಂತ್ರಿಗಳ ಸಲಹೆಗಾರರೇ ಹೇಳಿದ್ದಾರೆ. ಈಗ ಚೆನ್ನಾಗಿ ಹಣ ಲೂಟಿ ಹೊಡೆದರೆ ಮುಂದೆ ಚುನಾವಣೆ ನಡೆಸಬಹುದು ಎಂಬುದು ಇವರ ಉದ್ದೇಶ ಎಂದು ಅವರು ಕಿಡಿಕಾರಿದರು.

ಭೂಮಿ ವಿಷಯದಲ್ಲಿ ಕಾನೂನು ಹೋರಾಟ ಮಾಡುತ್ತಿದ್ದೇನೆ:

ಕೇತಗಾನಹಳ್ಳಿ ಭೂಮಿ ವಿಷಯಕ್ಕೆ ಸಂಬಂಧಿಸಿ ನಾನು ಕಾನೂನು ಹೋರಾಟ ಮಾಡುತ್ತಿದ್ದೇನೆ. ಕಾನೂನು ವ್ಯಾಪ್ತಿಯಲ್ಲಿ ನಾನು ಮೊದಲೇ ಹೇಳಿದ್ದೇನೆ. ರಾಜ್ಯ ಸರಕಾರ ರಾಜಕೀಯ ದುರುದ್ದೇಶದಿಂದ ಕಿರುಕುಳ ನೀಡುತ್ತಿದೆ ಎಂದು ಸಚಿವ ಕುಮಾರಸ್ವಾಮಿ ಅವರು ಆರೋಪಿಸಿದರು.

ಭೂಮಿ ತೆರವಿಗೆ ರಚಿಸಿಲಾಗಿರುವ ಎಸ್ಐಟಿಗೆ ಹೈಕೋರ್ಟ್ ತಡೆ ನೀಡಿದ ಬಗ್ಗೆ ಪ್ರತಿಕ್ರಿಯಿಸಿದ ಅವರು, ಅದು 40 ವರ್ಷಗಳ ಹಿಂದೆ ಖರೀದಿ ಮಾಡಿದ ಭೂಮಿ. ಅಲ್ಲಿ ಯಾವುದೇ ರೀತಿಯ ಒತ್ತುವರಿ ಆಗಿಲ್ಲ. ಸರಕಾರ ರಾಜಕೀಯ ದ್ವೇಷ ಮಾಡಿಕೊಂಡು ಹೊರಟಿದೆ. ಅದು ಕಾನೂನು ವ್ಯಾಪ್ತಿಯಲ್ಲಿ ನ್ಯಾಯಾಲಯದಲ್ಲಿ ತೀರ್ಮಾನ ಆಗುತ್ತದೆ ಎಂದರು.

ಡಿಕೆಶಿಗೆ ಮನುಷ್ಯತ್ವದ ದಾರಿದ್ರ್ಯ ಇದೆ :

2028ಕ್ಕೆ ಜೆಡಿಎಸ್-ಬಿಜೆಪಿ ಸರಕಾರ ಅಧಿಕಾರಕ್ಕೆ ಬಂದರೆ ನಾನೇ ಬಟ್ಟೆ ಹೊಲಿಸಿಕೋಡ್ತೀನಿ ಎಂದು ಡಿಸಿಎಂ ಡಿಕೆಶಿ ಹೇಳಿಕೆಗೆ ತಿರುಗೇಟು ಕೊಟ್ಟ ಕುಮಾರಸ್ವಾಮಿ ಅವರು, ನನಗೆ ಅಂತಹ ದಾರಿದ್ರ್ಯ ಇನ್ನೂ ಬಂದಿಲ್ಲ. ಆ ವ್ಯಕ್ತಿಯಿಂದ ಬಟ್ಟೆ ಹೊಲಿಸಿಕೊಳ್ಳುವಷ್ಟು ದಾರಿದ್ರ್ಯವನ್ನು ಈ ನಾಡಿನ ಜನತೆ ನನಗೆ ಕೊಟ್ಟಿಲ್ಲ. ದಾರಿದ್ರ್ಯ ಇರುವುದು ಅವರಿಗೆ. ಮನುಷ್ಯತ್ವದ ದಾರಿದ್ರ್ಯ ಅವರಿಗೆ ಇದೆ. ಜನರಿಂದ ಕೊಳ್ಳೆ ಹೊಡೆದ ಆ ಪಾಪದ ಹಣದಿಂದ ನಾನು ಬಟ್ಟೆ ಹೊಲಿಸಿಕೊಳ್ಳಬೇಕಾ? ನನಗೆ ಬಟ್ಟೆ ಬೇಕಾದರೆ ನಾಡಿನ ಜನರಿದ್ದಾರೆ, ನನ್ನನ್ನು ಇಲ್ಲಿಯವರೆಗೂ ಬೆಳೆಸಿರುವ ಅವರೇ ತಂದು ಕೊಡುತ್ತಾರೆ. ಆ ವ್ಯಕ್ತಿಯ ಪಾಪದ ಹಣ, ಲೂಟಿ ಹೊಡೆದಿರುವ ಹಣದಿಂದ ಬಟ್ಟೆ ತರಿಸಿಕೊಳ್ಳಬೇಕಾ? ಎಂದು ಡಿಸಿಎಂ ಡಿಕೆಶಿ ವಿರುದ್ಧ ಎಚ್‌ಡಿಕೆ ವಾಗ್ದಾಳಿ ನಡೆಸಿದರು.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News