ಪರಿಷತ್ ಚುನಾವಣೆ ಫಲಿತಾಂಶ; ಜನರ ಸಂದೇಶವನ್ನು ಕೂಲಂಕುಷವಾಗಿ ಅಧ್ಯಯನ : ಸಿಎಂ ಡಿ.ಕೆ.ಶಿವಕುಮಾರ್
"ಮತದಾರರು ಕೊಟ್ಟಿರುವ ತೀರ್ಮಾನ ಗೌರವಿಸುತ್ತೇವೆ"
ಬೆಂಗಳೂರು: "ಪರಿಷತ್ ಚುನಾವಣೆಯಲ್ಲಿ ಮತದಾರರು ಕೊಟ್ಟಿರುವ ಸಂದೇಶವನ್ನು ಕೂಲಂಕುಷವಾಗಿ ಅಧ್ಯಯನ ಮಾಡಿ ಸರಿಪಡಿಸಿಕೊಳ್ಳುತ್ತೇವೆ" ಎಂದು ಸಿಎಂ ಡಿ ಕೆ ಶಿವಕುಮಾರ್ ಅವರು ತಿಳಿಸಿದರು.
ಸದಾಶಿವನಗರ ನಿವಾಸದ ಬಳಿ ಮಾಧ್ಯಮಗಳಿಗೆ ಶಿವಕುಮಾರ್ ಅವರು ಬುಧವಾರ ಪ್ರತಿಕ್ರಿಯೆ ನೀಡಿದರು.
ಬೆಂಗಳೂರು ಶಿಕ್ಷಕರ ಕ್ಷೇತ್ರದ ಫಲಿತಾಂಶ ನಿರೀಕ್ಷಿಸಿರಲಿಲ್ಲ :
"ವಿಧಾನ ಪರಿಷತ್ ಪದವೀಧರರ ಹಾಗೂ ಶಿಕ್ಷಕರ ಕ್ಷೇತ್ರಗಳ ಚುನಾವಣೆಯಲ್ಲಿ ಮತದಾರರು ಕೊಟ್ಟಿರುವ ತೀರ್ಮಾನವನ್ನು ಗೌರವದಿಂದ ಸ್ವೀಕಾರ ಮಾಡುತ್ತೇವೆ. ನಮ್ಮ ಪಕ್ಷಕ್ಕೆ ಎರಡು ಸ್ಥಾನಗಳು ಬರುವ ನಿರೀಕ್ಷೆಯಿತ್ತು. ಅದಾಗಿಲ್ಲ. ನಮ್ಮ ಪಕ್ಷ ಸೋತಿದ್ದರೂ ಮತಗಳು ಚೆನ್ನಾಗಿಯೇ ಬಂದಿವೆ. ಬೆಂಗಳೂರು ಶಿಕ್ಷಕರ ಕ್ಷೇತ್ರದ ಫಲಿತಾಂಶ ನಿರೀಕ್ಷಿಸಿರಲಿಲ್ಲ. ಈ ಬಗ್ಗೆ ಪರಿಶೀಲನೆ ಮಾಡುತ್ತೇವೆ" ಎಂದರು.
ನಾವು ಕಲಿಯಬೇಕಾದ ವಿಚಾರಗಳಿವೆ
"ಬಿಜೆಪಿ ಮತ್ತು ಜೆಡಿಎಸ್ ನವರು. ಇದು ಭವಿಷ್ಯದ ಮುನ್ಸೂಚನೆ ಎನ್ನುತ್ತಿದ್ದಾರೆ. ಆದರೆ ಚನ್ನಪಟ್ಟಣ ಮತ್ತು ಶಿಗ್ಗಾಂವಿ ಬಗ್ಗೆ ಏನು ಉತ್ತರ ಕೊಡುತ್ತಾರೆ? ಅದು ಕೂಡ ಮುನ್ಸೂಚನೆಯೇ ಅಲ್ಲವೇ ? ಎಂದು ಪ್ರಶ್ನಿಸಿದರು. ನಾವು ಕಲಿಯಬೇಕಾದ ವಿಚಾರಗಳಿವೆ. ಈ ಬಗ್ಗೆ ಪರಿಶೀಲಿಸಿ, ನಮ್ಮ ಕಾರ್ಯಕರ್ತರನ್ನು ಹೇಗೆ ತಯಾರು ಮಾಡಬೇಕೆಂದೂ ತಿಳಿದಿದೆ" ಎಂದರು.
ಮತಪತ್ರ ಚುನಾವಣೆ: ನೂತನ ಕ್ರಿಯಾ ಯೋಜನೆ
ನಾಲ್ಕು ವಿಧಾನ ಪರಿಷತ್ ಸ್ಥಾನಗಳ ಚುನಾವಣೆಯನ್ನು ಸಂಪೂರ್ಣವಾಗಿ ಮತಪತ್ರ ಮೂಲಕವೇ ನಡೆಸಲಾಗಿದ್ದರೂ ಕಾಂಗ್ರೆಸ್ ಸೋತಿರುವುದು ಪಕ್ಷಕ್ಕೆ ಹಿನ್ನಡೆಯಾಗಿದೆ ಎಂಬ ಬಿಜೆಪಿ, ಜೆಡಿಎಸ್ ಹೇಳಿಕೆ ಬಗ್ಗೆ ಕೇಳಿದಾಗ, "ಹೌದು, ಮತಪತ್ರದ ಮೂಲಕ ಚುನಾವಣೆಯ ಅಗತ್ಯವಿದೆ. ಚುನಾವಣಾ ಪ್ರಕ್ರಿಯೆಯಲ್ಲಿ ಹಲವಾರು ಸಮಸ್ಯೆಗಳಿವೆ. ನವೆಂಬರ್ ನಂತರ ನಮ್ಮ ಪಕ್ಷ ಈ ಕುರಿತು ಹೊಸ ಕ್ರಿಯಾ ಯೋಜನೆಯನ್ನು ಹೊರತರಲಿದೆ" ಎಂದರು.
ಸಮಸ್ಯೆಗಳ ಕುರಿತು ಚರ್ಚಿಸಲು ಸಮುದಾಯವಾರು ಶಾಸಕರ ಸಭೆ
ಸಮುದಾಯವಾರು ಶಾಸಕರ ಸಭೆ ಕರೆದಿರುವ ಬಗ್ಗೆ ಕೇಳಿದಾಗ, "ಸಮುದಾಯಗಳ ಸಮಸ್ಯೆಗಳು ಹಾಗೂ ನ್ಯಾಯಾಲಯದ ತೀರ್ಪಿನ ಬಗ್ಗೆ ಚರ್ಚಿಸಬೇಕಿದ್ದು, ಅದಕ್ಕಾಗಿ ಸಭೆ ಕರೆಯಲಾಗಿದೆ" ಎಂದರು.
ಬರ ಪರಿಹಾರ: ಖಾತೆಗಳ ಪರಿಶೀಲನೆ
ಬರ ಪರಿಹಾರ ಹಣ ಬಿಡುಗಡೆಯ ಬಗ್ಗೆ ಕೇಳಿದಾಗ, "ಖಾತೆಗಳನ್ನು ಪರಿಶೀಲಿಸಲಾಗುತ್ತಿದೆ. ಈ ಬಗ್ಗೆ ಈಗಾಗಲೇ ಸರ್ಕಾರಿ ಆದೇಶ ಹೊರಡಿಸಿ ಹಣ ಬಿಡುಗಡೆ ಮಾಡಲಾಗಿದೆ. ಎಲ್ಲವನ್ನು ಸರಿಪಡಿಸಿ ಖಾತೆಗಳಿಗೆ ಪರಿಹಾರದ ಮೊತ್ತ ಜಮೆ ಮಾಡಲಾಗುವುದು" ಎಂದರು.
ಬೆಂಗಳೂರಿನಲ್ಲಿಯೇ ಸರ್ವ ಪಕ್ಷ ನಿಯೋಗ ಭೇಟಿಗೆ ಪ್ರಧಾನಿಗಳ ಸಮಯಕ್ಕೆ ಕೋರಿಕೆ
"ಬರ ಪರಿಹಾರಕ್ಕೆ ಸಂಬಂಧಿಸಿದಂತೆ ಕೇಂದ್ರ ಸರ್ಕಾರವನ್ನು ಸಮಯ ನಿಗದಿ ಮಾಡಲು ಕೋರಲಾಗಿದೆ. ಪ್ರಧಾನ ಮಂತ್ರಿಗಳು ಮೆಟ್ರೋ ಉದ್ಘಾಟನೆಗಾಗಿ ನವೆಂಬರ್ 15 ರಂದು ಬೆಂಗಳೂರಿಗೆ ಆಗಮಿಸಿದಾಗ, ಸಮಯ ನಿಗದಿ ಮಾಡಲು ಕೋರುತ್ತೇನೆ. ಅವರು ಮೈಸೂರಿಗೆ ಬರುವ ಕಾರ್ಯಕ್ರಮವೂ ಇತ್ತು. ಆದರೆ ದಸರಾ ಪ್ರಯುಕ್ತ ಅದನ್ನು ಮುಂದೂಡಲಾಗಿದೆ. ಅಲ್ಲಿ ಕೇಳಲು ಸಾಧ್ಯವಾಗದಿದ್ದರೆ ಬೆಂಗಳೂರಿಗೆ ಭೇಟಿ ನೀಡಿದಾಗ ಇಲ್ಲಿಯೇ ಸರ್ವ ಪಕ್ಷ ನಿಯೋಗ ಭೇಟಿ ಮಾಡಲು ಸಮಯ ನಿಗದಿ ಮಾಡುವಂತೆ ಕೇಳುತ್ತೇನೆ ಎಂದರು.
ಮತದಾರರ ಅಂತಿಮ ಪಟ್ಟಿ ಬಗ್ಗೆ ಆಕ್ಷೇಪಗಳಿವೆ
ಚುನಾವಣಾ ಆಯೋಗದ ಅಂತಿಮ ಪಟ್ಟಿ ಹೊರಡಿಸಿದ್ದು ಸರ್ಕಾರದಿಂದ ಆಕ್ಷೇಪಣೆಗಳಿವೆಯೇ ಎಂದು ಕೇಳಿದಾಗ "ಖಂಡಿತ ಆಕ್ಷೇಪಣೆಗಳಿವೆ. ಅವುಗಳನ್ನು ಸಲ್ಲಿಸಲು ಅವಕಾಶ ನೀಡಿದ್ದಾರೆ. ಫಾರಂ 7 ವಿಚಾರದಲ್ಲಿ ನಾವು ಸಲ್ಲಿಸಿದ್ದ ಆಕ್ಷೇಪಣೆಗಳನ್ನು ಆಯೋಗ ಒಪ್ಪಿದೆ" ಎಂದರು.