ಚಿಕ್ಕಮಗಳೂರು ಜಿಲ್ಲೆಯಲ್ಲಿ ನಿಲ್ಲದ ಮುಂಗಾರು ಮಳೆ ಆರ್ಭಟ: ನದಿಗಳಲ್ಲಿ ಹೆಚ್ಚಿದ ನೀರಿನ ಹರಿವು
ಚಿಕ್ಕಮಗಳೂರು : ಕಾಫಿನಾಡಿ ಮಲೆನಾಡು ಭಾಗದಲ್ಲಿ ಮುಂಗಾರು ಮಳೆಯ ಆರ್ಭಟ ಹೆಚ್ಚುತ್ತಲೇ ಇದೆ. ಆಗಾಗ್ಗೆ ಸುರಿಯುತ್ತಿರುವ ಧಾರಾಕಾರ ಮಳೆಯಿಂದಾಗಿ ಮಲೆನಾಡು ಭಾಗದ ಪ್ರಮುಖ ನದಿಗಳು ತುಂಬಿ ಹರಿಯುತ್ತಿದ್ದರೇ, ಮಂಗಳವಾರ ತರೀಕೆರೆ ತಾಲೂಕಿನಲ್ಲಿ ಬೃಹತ್ ಮರವೊಂದು ಭಾರೀ ಮಳೆ ಗಾಳಿಗೆ ನಿಂತಿದ್ದ ಕಾರಿನ ಮೇಲೆ ಉರುಳಿ ಬಿದ್ದ ಪರಿಣಾಮ ಕಾರು ಸಂಪೂರ್ಣವಾಗಿ ಜಖಂಗೊಂಡಿದೆ.
ಕಳಸ ತಾಲೂಕಿನ ಮರಸಣಿಗೆ ಗ್ರಾಮದಲ್ಲಿ ಮರವೊಂದು ಮನೆಯ ಮೇಲೆ ಉರುಳಿ ಬಿದ್ದ ಪರಿಣಾಮ ಮನೆ ಸಂಪೂರ್ಣವಾಗಿ ಜಖಂಗೊಂಡ ಘಟನೆ ನಡೆದಿದೆ.
ಜಿಲ್ಲೆಯ ಬಯಲು ಭಾಗದಲ್ಲಿ ಮುಂಗಾರು ಮಳೆಯ ಆರ್ಭಟ ಕೊಂಚ ಕಡಿಮೆ ಇದ್ದರೂ ಮಲೆನಾಡು ಭಾಗದಲ್ಲಿ ಮಳೆ ಆರ್ಭಟ ದಿನದಿಂದ ದಿನಕ್ಕೆ ಜೋರಾಗುತ್ತಲೇ ಇದೆ. ಭಾರೀ ಮಳೆಯಿಂದಾಗಿ ಮಲೆನಾಡು ಭಾಗದಲ್ಲಿ ಜನಜೀವನ ಅಸ್ತವ್ಯಸ್ತಗೊಂಡಿದೆ. ಮಂಗಳವಾರ ಬೆಳಗ್ಗೆ ಜಿಲ್ಲೆಯ ತರೀಕೆರೆ ತಾಲೂಕಿನ ಕಲ್ಲತ್ತಗಿರಿ ಭಾಗದಲ್ಲಿ ಧಾರಾಕಾರ ಮಳೆಯಾಗಿದ್ದು, ಮಳೆಯೊಂದಿಗೆ ಭಾರೀ ಗಾಳಿ ಬೀಸಿದೆ. ಭಾರೀ ಗಾಳಿ ಪರಿಣಾಮ ಕಲ್ಲತ್ತಗಿರಿಗೆ ಪ್ರವಾಸಕ್ಕೆ ಬಂದಿದ್ದವರ ಕಾರಿನ ಮೇಲೆ ಮರವೊಂದು ಉರುಳಿ ಬಿದ್ದ ಪರಿಣಾಮ ಕಾರು ಸಂಪೂರ್ಣವಾಗಿ ಜಖಂಗೊಂಡಿದೆ. ಅದೃಷ್ಟವಶಾತ್ ಕಾರಿನಲ್ಲಿದ್ದವರು ಕಾರಿನಿಂದ ಹೊರಗಿದ್ದ ಪರಿಣಾಮ ಭಾರೀ ಅನಾಹುತ ತಪ್ಪಿದಂತಾಗಿದೆ.
ಕಳಸ ತಾಲೂಕಿನಾದ್ಯಂತ ಮಂಗಳವಾರ ಬೆಳಗ್ಗೆ ಭಾರೀ ಮಳೆ ಸುರಿದಿದ್ದು, ಭಾರೀ ಮಳೆ ಹಾಗೂ ಗಾಳಿಯಿಂದಾಗಿ ಮರಸಣಿಗೆ ಗ್ರಾಮದಲ್ಲಿ ಪ್ರೇಮಾ ಎಂಬವರ ಮನೆಯ ಮೇಲೆ ಮರವೊಂದು ಉರುಳಿ ಬಿದ್ದು ಮನೆ ಸಂಪೂರ್ಣವಾಗಿ ಜಖಂಗೊಂಡಿದೆ. ಮರ ಮುರಿದು ಬೀಳು ಶಬ್ಧ ಕೇಳಿ ಮನೆ ಮಂದಿ ಹೊರ ಬಂದಿದ್ದರಿಂದ ಮನೆಯಲ್ಲಿದ್ದವರಿಗೆ ಯಾವುದೇ ತೊಂದರೆಯಾಗದೇ ಸುರಕ್ಷಿತರಾಗಿದ್ದಾರೆ. ಸ್ಥಳಕ್ಕೆ ಗ್ರಾಪಂ, ಕಂದಾಯಾಧಿಕಾರಿಗಳ ತಂಡ ಬೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.
ಇನ್ನು ಜಿಲ್ಲೆಯ ಶೃಂಗೇರಿ, ಮೂಡಿಗೆರೆ, ಕೊಪ್ಪ, ಎನ್.ಆರ್.ಪುರ ತಾಲೂಕಿನಾದ್ಯಂತ ಮಂಗಳವಾರ ಬೆಳಗ್ಗೆ ಧಾರಾಕಾರ ಮಳೆಯಾಗಿದ್ದು, ಮಧ್ಯಾಹ್ನದ ವೇಳೆ ಕೊಂಚ ಬಿಡುವು ನೀಡಿದ್ದ ಮಳೆ ಸಂಜೆ ವೇಳೆ ಮತ್ತೆ ಆರ್ಭಟಿಸಲಾರಂಭಿಸಿದೆ. ಭಾರೀ ಮಳೆಯೊಂದಿಗೆ ಗಾಳಿಯ ಆರ್ಭಟವೂ ಹೆಚ್ಚಾಗಿರುವುದರಿಂದ ಮರಗಳು ಎಲ್ಲೆಂದರಲ್ಲಿ ಧರಾಶಹಿಯಾಗುತ್ತಿವೆ. ಮರಗಳು ವಿದ್ಯುತ್ ಮಾರ್ಗಗಳ ಮೇಲೆ ಬೀಳುತ್ತಿರುವುದರಿಂದ ವಿದ್ಯುತ್ ಕಂಬಗಳೂ ನೆಲ್ಲಕ್ಕುರುಳಿ ಹಲವು ಗ್ರಾಮಗಳಲ್ಲಿ ವಿದ್ಯುತ್ ಸಂಪರ್ಕ ಕಡಿತಗೊಂಡಿದೆ. ಮೆಸ್ಕಾಂ ಸಿಬ್ಬಂದಿ ವಿದ್ಯುತ್ ಸಂಪರ್ಕ ಕಲ್ಪಿಸಲು ಮಳೆಯ ನಡುವೆಯೂ ಶ್ರಮಿಸುತ್ತಿದ್ದಾರೆ.
ಮಲೆನಾಡು ಭಾಗದಲ್ಲಿ ಭಾರೀ ಮಳೆ ಪರಿಣಾಮ ಭದ್ರಾ, ತುಂಗಾ, ಹೇಮಾವತಿ ನದಿಗಳೂ ಸೇರಿದಂತೆ ಹಳ್ಳಕೊಳ್ಳಗಳು ತುಂಬಿ ಹರಿಯುತ್ತಿವೆ. ಧಾರಾಕಾರ ಮಳೆ ಮುಂದುವರಿದಲ್ಲಿ ನದಿಗಳ ನೆರೆ ನೀರು ಅಕ್ಕಪಕ್ಕದ ಹೊಲ ಗದ್ದೆಗಳಿಗೆ ನುಗ್ಗಿ ಭತ್ತ, ಶುಂಠಿಯಂತಹ ಬೆಳೆಗಳಿಗೆ ಹಾನಿಯುಂಟು ಮಾಡುವ ಸಾಧ್ಯತೆ ಹೆಚ್ಚಿದೆ.
ಚಿಕ್ಕಮಗಳೂರು ತಾಲೂಕಿನಾದ್ಯಂತ ಮಂಗಳವಾರ ಆಗಾಗ್ಗೆ ಸಾಧಾರಣ ಮಳೆಯಾಗಿದ್ದರೇ, ಉಳಿದಂತೆ ಮಳೆ ಬಿಡುವು ನೀಡಿತ್ತು, ಆದರೆ ಇಡೀ ದಿನ ಮೋಡ ಕವಿದ ವಾತಾವರಣ ಇದ್ದು, ರಾತ್ರಿ ವೇಳೆ ಮಳೆ ಸುರಿಯುವ ಸಾಧ್ಯತೆ ಹೆಚ್ಚಿತ್ತು. ಬಯಲು ಭಾಗದ ಕಡೂರು, ತರೀಕೆರೆ, ಅಜ್ಜಂಪುರ ತಾಲೂಕುಗಳ ವ್ಯಾಪ್ತಿಯಲ್ಲಿ ಆಗಾಗ್ಗೆ ಉತ್ತಮ ಮಳೆಯಾಗಿದ್ದು, ಮಳೆಯಿಂದಾಗಿ ಬಯಲು ಭಾಗದಲ್ಲಿ ಕೃಷಿ ಚಟುವಟಿಕೆ ಚುರುಕುಗೊಂಡಿದೆ.