ರಾಜ್ಯದ ಹಲವೆಡೆ ಒಂದು ವಾರ ಬಿರುಗಾಳಿ ಸಹಿತ ಮಳೆ: ಹವಾಮಾನ ಇಲಾಖೆ
ಸಾಂದರ್ಭಿಕ ಚಿತ್ರ
ಬೆಂಗಳೂರು: ದೇಶದ 16 ರಾಜ್ಯಗಳಲ್ಲಿ ವಾಯುಭಾರ ಕುಸಿತ ಉಂಟಾಗಿದ್ದು, ಮುಂದಿನ ಒಂದು ವಾರ ರಾಜ್ಯದ ಹಲವೆಡೆ ಗುಡುಗು, ಬಿರುಗಾಳಿ ಸಹಿತ ಮಳೆಯಾಗಲಿದೆ ಎಂದು ಹವಾಮಾನ ಇಲಾಖೆ ತಿಳಿಸಿದೆ.
ಬೀದರ್, ಯಾದಗಿರಿ, ಕಲಬುರಗಿ ಮತ್ತು ದಕ್ಷಿಣ ಕನ್ನಡ ಜಿಲ್ಲೆಗಳ ಕೆಲವು ಕಡೆಗಳಲ್ಲಿ ರವಿವಾರ ಗುಡುಗು ಸಹಿತ ಬಿರುಗಾಳಿಯೊಂದಿಗೆ ಮಳೆಯಾಗುವ ಸಾಧ್ಯತೆಯಿದೆ. ತುಮಕೂರು, ಬೆಂಗಳೂರು ಗ್ರಾಮಾಂತರ, ಬೆಂಗಳೂರು ನಗರ, ಕೋಲಾರ, ಚಿಕ್ಕಬಳ್ಳಾಪುರ, ರಾಮನಗರ, ಹಾಸನ ಮತ್ತು ಚಿಕ್ಕಮಗಳೂರು ಜಿಲ್ಲೆಗಳ ಕೆಲವೆಡೆ ಮಳೆಯಾಗಲಿದೆ.
ಸೋಮವಾರ ದಕ್ಷಿಣ ಕನ್ನಡ, ಬೀದರ್, ಕಲಬುರಗಿ, ಯಾದಗಿರಿ, ರಾಯಚೂರು, ವಿಜಯಪುರ, ಬಾಗಲಕೋಟೆ, ಕೊಪ್ಪಳ, ಬೆಳಗಾವಿ, ಧಾರವಾಡ, ಗದಗ, ಹಾವೇರಿ ಜಿಲ್ಲೆಗಳಲ್ಲಿ ಒಣ ಹವೆ ಇರಲಿದ್ದು, ತುಮಕೂರು, ಬೆಂಗಳೂರು ಗ್ರಾಮಾಂತರ, ಬೆಂಗಳೂರು ನಗರ, ಕೋಲಾರ, ಚಿಕ್ಕಬಳ್ಳಾಪುರ, ರಾಮನಗರ, ಹಾಸನ, ಬಳ್ಳಾರಿ, ಚಿತ್ರದುರ್ಗ ಮತ್ತು ಚಿಕ್ಕಮಗಳೂರಿನಲ್ಲಿ ಮಳೆಯಾಗಲಿದೆ.
ಬೆಂಗಳೂರಿನಲ್ಲಿ ಬಹುತೇಕ ಮೋಡ ಕವಿದ ವಾತಾವರಣ ಇರಲಿದ್ದು, ಗುಡುಗು ಸಹಿತ ಬಿರುಗಾಳಿಯೊಂದಿಗೆ ಲಘು ಮಳೆಯಾಗುವ ಸಾಧ್ಯತೆ ಇದೆ. ಗರಿಷ್ಠ ತಾಪಮಾನವು 35 ಡಿಗ್ರಿ ಮತ್ತು ಕನಿಷ್ಠ ತಾಪಮಾನ 21 ಡಿಗ್ರಿ ಸೆಲ್ಶಿಯಸ್ ಇರಲಿದೆ. ಮೇ 7 ಹಾಗೂ 8ರಂದು ಬೆಂಗಳೂರಿನಲ್ಲಿ ಭಾರೀ ಮಳೆಯಾಗುವ ಮುನ್ಸೂಚನೆಯಿಂದ ಆರೆಂಜ್ ಅಲರ್ಟ್ ಘೋಷಣೆ ಮಾಡಲಾಗಿದೆ.
ಬೆಂಗಳೂರಿನಲ್ಲಿ ವಾಡಿಕೆಗಿಂತ ಉತ್ತಮ ಪೂರ್ವ ಮುಂಗಾರು: ಕಳೆದ ವರ್ಷದ ಪೂರ್ವ ಮುಂಗಾರಿಗೆ ಹೋಲಿಸಿದರೆ, ಈ ವರ್ಷ ಬೆಂಗಳೂರಿನಲ್ಲಿ ಉತ್ತಮ ಮಳೆಯಾಗಿದೆ. ನೀರಿನ ಬರ ನೀಗಿಸುವಲ್ಲಿ ಪ್ರಮುಖ ಪಾತ್ರ ವಹಿಸಿದೆ. ಕಳೆದ ವರ್ಷ ಬೆಂಗಳೂರಿನಲ್ಲಿ ವಾಡಿಕೆಗಿಂತ ಶೇ.3ರಷ್ಟು ಕಡಿಮೆ ಮಳೆಯಾಗಿತ್ತು. ಇದರಿಂದ ಬೆಂಗಳೂರಿನ ಕೆಲ ಭಾಗಗಳಲ್ಲಿ ಕುಡಿಯುವ ನೀರಿಗೆ ಸಮಸ್ಯೆ ಉಂಟಾಗಿತ್ತು. ಆದರೆ ಈ ವರ್ಷ ಇದುವರೆಗೆ ಶೇ.42ರಷ್ಟು ಅಧಿಕ ಮಳೆಯಾಗಿದೆ. ವಾಡಿಕೆ ಪ್ರಕಾರ, ಬೆಂಗಳೂರಿನಲ್ಲಿ ಪೂರ್ವ ಮುಂಗಾರು ಮಳೆಯ ಪ್ರಮಾಣ 156 ಮಿ.ಮೀ ಇರುತ್ತದೆ. ಕರ್ನಾಟಕ ರಾಜ್ಯ ನೈಸರ್ಗಿಕ ವಿಕೋಪ ಉಸ್ತುವಾರಿ ಕೇಂದ್ರದ (ಕೆಎಸ್‍ಎನ್‍ಡಿಎಂಸಿ) ಅಂಕಿ ಅಂಶಗಳ ಪ್ರಕಾರ ರಾಜಧಾನಿಯಲ್ಲಿ ಜನವರಿಯಿಂದ ಮೇ 2ರವರೆಗೆ ವಾಡಿಕೆ ಪ್ರಕಾರ 64.3 ಮಿ.ಮೀ ಮಳೆಯಾಗಬೇಕಿತ್ತು. ಆದರೆ, ಇಲ್ಲಿಯವರೆಗೆ 85.1 ಮಿ.ಮೀ. ಮಳೆಯಾಗಿದೆ. ವಾಡಿಕೆಗಿಂತ ಶೇ.32ರಷ್ಟು ಅಧಿಕ ಮಳೆಯಾಗಿದೆ. ಜೂನ್ ಮಧ್ಯ ಭಾಗದಲ್ಲಿ ಮುಂಗಾರು ಪ್ರವೇಶಿಸುವ ಸಾಧ್ಯತೆ ಇದ್ದು, ಈ ವರ್ಷ ವಾಡಿಕೆಗಿಂತ ಅಧಿಕ ಮಳೆಯಾಗಲಿದೆ ಎಂದು ಹವಾಮಾನ ಇಲಾಖೆ ತಿಳಿಸಿದೆ.