×
Ad

ಆರ್‌ಟಿಐ ಕಾಯ್ದೆ ದುರುಪಯೋಗ ಅನುಮತಿಸಲಾಗದು; ಕಪ್ಪುಪಟ್ಟಿಗೆ ಸೇರಿಸಿದ ಆದೇಶಕ್ಕೆ ತಡೆ ನೀಡಲು ಹೈಕೋರ್ಟ್ ನಕಾರ

Update: 2025-10-15 14:44 IST

ಬೆಂಗಳೂರು : ಮಾಹಿತಿ ಹಕ್ಕು (ಆರ್‌ಟಿಐ) ಕಾಯ್ದೆಯ ದುರುಪಯೋಗಕ್ಕೆ ಅವಕಾಶ ನೀಡಲಾಗದು ಎಂದು ತೀಕ್ಷ್ಣವಾಗಿ ನುಡಿದಿರುವ ಹೈಕೋರ್ಟ್, ಆರ್‌ಟಿಐ ಕಾಯ್ದೆಯಡಿ ಮಾಹಿತಿ ಪಡೆಯದಂತೆ ವ್ಯಕ್ತಿಯೊಬ್ಬರನ್ನು ಕಪ್ಪುಪಟ್ಟಿಗೆ ಸೇರಿಸಿ ಕರ್ನಾಟಕ ರಾಜ್ಯ ಮಾಹಿತಿ ಆಯುಕ್ತರು ಹೊರಡಿಸಿದ್ದ ಆದೇಶಕ್ಕೆ ತಡೆ ನೀಡಲು ನಿರಾಕರಿಸಿದೆ.

ರಾಜ್ಯ ಮಾಹಿತಿ ಆಯುಕ್ತರು 2025ರ ಜನವರಿ 28ರಂದು ಹೊರಡಿಸಿರುವ ಆದೇಶ ರದ್ದುಕೋರಿ ಆರ್‌ಟಿಐ ಕಾರ್ಯಕರ್ತ ಕೆ. ದೇವಪ್ರಸಾದ್ ಸಲ್ಲಿಸಿದ್ದ ಅರ್ಜಿ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಸೂರಜ್ ಗೋವಿಂದರಾಜ್ ಅವರಿದ್ದ ಏಕಸದಸ್ಯ ನ್ಯಾಯಪೀಠ, ಮಾಹಿತಿ ಆಯುಕ್ತರ ಆದೇಶಕ್ಕೆ ತಡೆ ನೀಡಿ ಮಧ್ಯಂತರ ಆದೇಶ ಹೊರಡಿಸಲು ನಿರಾಕರಿಸಿತು.

ವಿಚಾರಣೆ ವೇಳೆ ವಾದ ಮಂಡಿಸಿದ ಅರ್ಜಿದಾರರ ಪರ ವಕೀಲರು, ಅರ್ಜಿದಾರರು ಒಂದೇ ವಿಷಯದ ಬಗ್ಗೆ ಒಂದೇ ರೀತಿಯ ಪ್ರಶ್ನೆಗಳನ್ನು ಕೇಳಿಲ್ಲ. ವಿವಿಧ ಅಂಶಗಳ ಬಗ್ಗೆ ಮಾಹಿತಿ ಕೋರಿ 400ಕ್ಕೂ ಅಧಿಕ ಅರ್ಜಿಗಳನ್ನು ಸಲ್ಲಿಸಿದ್ದಾರೆ. ಆರ್‌ಟಿಐ ಕಾಯ್ದೆಯಡಿ ಲಭ್ಯವಿರುವ ಹಕ್ಕನ್ನಷ್ಟೇ ಅರ್ಜಿದಾರರು ಬಳಸಿದ್ದಾರೆ. ಅದಕ್ಕೆ ಯಾವುದೇ ಶಾಸನಬದ್ಧ ನಿರ್ಬಂಧವಿಲ್ಲ. ಇಂಥದೇ ಪ್ರಕರಣದಲ್ಲಿ ಕಪ್ಪುಪಟ್ಟಿಗೆ ಸೇರಿಸಲಾಗಿದ್ದ ಮತ್ತೊಬ್ಬ ವ್ಯಕ್ತಿಯೊಬ್ಬರು ನ್ಯಾಯಾಲಯದ ಮೊರೆ ಹೋಗಿದ್ದರು. ಅವರನ್ನು ಕಪ್ಪುಪಟ್ಟಿಗೆ ಸೇರಿಸಲಾಗಿದ್ದ ಆದೇಶಕ್ಕೆ ಹೈಕೋರ್ಟ್ ತಡೆ ನೀಡಿದೆ. ಸಮಾನತೆಯ ಆಧಾರದಲ್ಲಿ ಅರ್ಜಿದಾರರ ವಿರುದ್ಧದ ಆದೇಶಕ್ಕೂ ತಡೆ ನೀಡಬೇಕು ಎಂದು ಕೋರಿದರು.

ವಾದ ಆಲಿಸಿದ ನ್ಯಾಯಪೀಠ, ಮೊದಲಿಗೆ ಅರ್ಜಿದಾರರು ಆರ್‌ಟಿಐ ಕಾಯ್ದೆಯಡಿ 476 ಅರ್ಜಿಗಳನ್ನು ಸಲ್ಲಿಸಿರುವುದು ಅಪ್ರಸ್ತುತವೆಂದು ತೋರುತ್ತದೆ. ನೀವು (ಅರ್ಜಿದಾರ) ಸಾರ್ವಜನಿಕ ಕಳಕಳಿಯುಳ್ಳ ವ್ಯಕ್ತಿಯಾಗಿದ್ದರೂ, 400 ಅರ್ಜಿಗಳನ್ನು ಸಲ್ಲಿಸಲು ಸಾಧ್ಯವಿಲ್ಲ. ನೀವು ಏನು ಮಾಡುತ್ತಿದ್ದೀರಿ ಎಂಬ ಬಗ್ಗೆ ನೀವು ತಿಳಿದುಕೊಂಡಿರಬೇಕು, ಕಾಯ್ದೆಯನ್ನು ದುರುಪಯೋಗಪಡಿಸಿಕೊಳ್ಳಬಾರದು. 400 ಅರ್ಜಿಗಳನ್ನು ಸಲ್ಲಿಸುವ ಮೂಲಕ ನೀವೇನು ಮಾಡುತ್ತಿದ್ದೀರಿ ಎಂಬುದನ್ನು ಮೊದಲು ನಾವು ನಿರ್ಧರಿಸಬೇಕಿದೆ ಎಂದು ತಿಳಿಸಿದ ಪೀಠ, ಮಾಹಿತಿ ಆಯುಕ್ತರ ಆದೇಶಕ್ಕೆ ಮಧ್ಯಂತರ ತಡೆ ನೀಡಲು ನಿರಾಕರಿಸಿತು.

ಅಂತಿಮವಾಗಿ, ಅರ್ಜಿ ಸಂಬಂಧ ರಾಜ್ಯ ಸರಕಾರದ ಮುಖ್ಯ ಕಾರ್ಯದರ್ಶಿ, ರಾಜ್ಯ ಮಾಹಿತಿ ಆಯುಕ್ತರು ಸೇರಿ ಎಲ್ಲ ಪ್ರತಿವಾದಿಗಳಿಗೆ ನೋಟಿಸ್ ಜಾರಿಗೊಳಿಸಿದ ನ್ಯಾಯಪೀಠ, ಅರ್ಜಿದಾರರು ಆರ್‌ಟಿಐ ಕಾಯ್ದೆಯಡಿ ಸಲ್ಲಿಸಿರುವ ಅರ್ಜಿಗಳ ಸ್ವರೂಪ ಹಾಗೂ ಅವರು ಯಾವ ರೀತಿಯ ಮಾಹಿತಿ ಕೋರಿದ್ದಾರೆ ಎಂಬ ವಿವರಗಳನ್ನು ಸಲ್ಲಿಸುವಂತೆ ಸರಕಾರದ ಪರ ವಕೀಲರಿಗೆ ನಿರ್ದೇಶಿಸಿ ವಿಚಾರಣೆಯನ್ನು ನವೆಂಬರ್ 12ಕ್ಕೆ ಮುಂದೂಡಿತು.

ಪ್ರಕರಣವೇನು?

ಆರ್‌ಟಿಐ ಕಾಯ್ದೆಯಡಿ ಮಾಹಿತಿ ಕೋರಿ 476 ಅರ್ಜಿಗಳನ್ನು ಸಲ್ಲಿಸಿದ್ದ ಜಿಚಾಮರಾಜನಗರದ ಕೆ.ದೇವಪ್ರಸಾದ್ (52) ಅವರನ್ನು ಕಪ್ಪುಪಟ್ಟಿಗೆ ಸೇರಿಸಿ 2025ರ ಜನವರಿ 28ರಂದು ಆದೇಶ ಹೊರಡಿಸಿದ್ದ ರಾಜ್ಯ ಮಾಹಿತಿ ಆಯುಕ್ತರು, ಆರ್‌ಟಿಐ ಕಾಯ್ದೆಯಡಿ ಮಾಹಿತಿ ಪಡೆಯದಂತೆ ದೇವಪ್ರಸಾದ್ ಅವರನ್ನು ಸಂಪೂರ್ಣವಾಗಿ ನಿರ್ಬಂಧಿಸಿದ್ದರು. ಈ ಆದೇಶ ರದ್ದುಪಡಿಸಬೇಕು ಹಾಗೂ ಆರ್‌ಟಿಐ ಕಾಯ್ದೆಯಡಿ ತಾವು ಕೋರಿರುವ ಮಾಹಿತಿ ಒದಗಿಸಲು ಪ್ರತಿವಾದಿಗಳಿಗೆ ನಿರ್ದೇಶಿಸಬೇಕು ಎಂದು ಕೋರಿ ಹೈಕೋರ್ಟ್ ಮೊರೆ ಹೋಗಿರುವ ದೇವಪ್ರಸಾದ್, ಅರ್ಜಿ ಇತ್ಯರ್ಥವಾಗುವವರೆಗೆ ತಮ್ಮನ್ನು ಕಪ್ಪುಪಟ್ಟಿಗೆ ಸೇರಿಸಿರುವ ಆದೇಶಕ್ಕೆ ತಡೆ ನೀಡುವಂತೆ ಮಧ್ಯಂತರ ಮನವಿ ಮಾಡಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News