×
Ad

ದತ್ತು ಪುತ್ರನಿಗೆ ಅನುಕಂಪದ ಉದ್ಯೋಗ; 8 ವಾರದಲ್ಲಿ ಸೂಕ್ತ ಆದೇಶ ಹೊರಡಿಸುವಂತೆ ಸರಕಾರಕ್ಕೆ ಹೈಕೋರ್ಟ್ ನಿರ್ದೇಶನ

Update: 2025-11-08 00:02 IST

ಬೆಂಗಳೂರು: ಸೇವಾವಧಿಯಲ್ಲಿ ಮೃತಪಟ್ಟಿರುವ ಮಹಿಳಾ ಸರಕಾರಿ ಉದ್ಯೋಗಿಯ ದತ್ತು ಪುತ್ರನಿಗೆ ಅನುಕಂಪದ ಆಧಾರದ ಮೇಲೆ ಉದ್ಯೋಗ ಕಲ್ಪಿಸುವ ಕುರಿತ ಮನವಿಯನ್ನು 8 ವಾರಗಳಲ್ಲಿ ಪರಿಗಣಿಸಿ, ಸೂಕ್ತ ಆದೇಶ ಹೊರಡಿಸುವಂತೆ ರಾಜ್ಯ ಸರಕಾರಕ್ಕೆ ಹೈಕೋರ್ಟ್‌ ನಿರ್ದೇಶಿಸಿದೆ.

ಸರಕಾರಿ ಉದ್ಯೋಗಿಯಾಗಿದ್ದ ತನ್ನ ತಾಯಿ ಮೃತಪಟ್ಟಿರುವ ಹಿನ್ನೆಲೆಯಲ್ಲಿ ಅನುಕಂಪದ ಆಧಾರದಲ್ಲಿ ಉದ್ಯೋಗ ಕಲ್ಪಿಸುವಂತೆ ಕೋರಿ ಎರಡು ಬಾರಿ ಸಲ್ಲಿಸಿದ್ದ ಮನವಿ ಪರಿಗಣಿಸದ ರಾಜ್ಯ ಸರಕಾರದ ಕ್ರಮ ಪ್ರಶ್ನಿಸಿ ಚಿತ್ರದುರ್ಗದ ಬೆಳಗೂರು ಗ್ರಾಮದ ನಿವಾಸಿ ಯೂನೀಸ್‌ ಸಲ್ಲಿಸಿದ್ದ ಅರ್ಜಿ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಅಶೋಕ್‌ ಎಸ್‌. ಕಿಣಗಿ ಅವರಿದ್ದ ಏಕಸದಸ್ಯ ನ್ಯಾಯಪೀಠ ಈ ಆದೇಶ ಮಾಡಿದೆ.

ಮನವಿಗಳು ಸಲ್ಲಿಕೆಯಾದರೆ ಅವುಗಳನ್ನು ಪರಿಗಣಿಸಿ ಸೂಕ್ತ ಆದೇಶ ಹೊರಡಿಸುವುದು ರಾಜ್ಯ ಸರಕಾರದ ಕರ್ತವ್ಯ. ಸರಕಾರಿ ವಕೀಲರು ಸಹ ಸೂಕ್ತ ಕಾಲಾವಕಾಶ ನೀಡಿದರೆ ಅರ್ಜಿದಾರರ ಮನವಿ ಪರಿಗಣಿಸಿ ಆದೇಶ ಹೊರಡಿಸಲಾಗುವುದು ಎಂದು ತಿಳಿಸಿದ್ದಾರೆ. ಇದರಿಂದ, ಅರ್ಜಿ ಕುರಿತಂತೆ ನ್ಯಾಯಾಲಯ ಯಾವುದೇ ಅದೇಶ ಮಾಡುತ್ತಿಲ್ಲ. ಅರ್ಜಿದಾರರ ಮನವಿಯನ್ನು 8 ವಾರಗಳಲ್ಲಿ ಪರಿಗಣಿಸಿ ಕಾನೂನು ಪ್ರಕಾರ ಸೂಕ್ತ ಆದೇಶ ಹೊರಡಿಸಬೇಕು ಎಂದು ಸರಕಾರ ಹಾಗೂ ರಾಜ್ಯ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಗೆ ನ್ಯಾಯಪೀಠ ನಿರ್ದೇಶಿಸಿದೆ.

ಪ್ರಕರಣದ ಹಿನ್ನೆಲೆ :

ಚಿತ್ರದುರ್ಗದ ಜಿಲ್ಲೆಯ ಶ್ರೀರಾಂಪುರ ಹೋಬಳಿಯ ಸರಕಾರಿ ಸಮುದಾಯ ಆರೋಗ್ಯ ಕೇಂದ್ರದಲ್ಲಿ ಮೈಮುನ್ನೀಸಾ ಎಂಬವರು ಉದ್ಯೋಗ ಮಾಡುತ್ತಿದ್ದರು. ಅವರು ಸೇವೆಯಲ್ಲಿದ್ದಾಗಲೇ ಅರ್ಜಿದಾರರನ್ನು ದತ್ತು ಪಡೆದಿದ್ದರು. ಈ ಕುರಿತು 2022ರ ಸೆಪ್ಟೆಂಬರ್‌‌ನಲ್ಲಿ ವಿಲ್‌ ಸಹ ನೋಂದಣಿ ಮಾಡಿಸಿ, ಅರ್ಜಿದಾರ ತನ್ನ ಏಕಮಾತ್ರ ಉತ್ತರಾಧಿಕಾರಿ ಎಂದು ಘೋಷಣೆ ಮಾಡಿದ್ದರು. 2023ರ ಜೂ.3ರಂದು ಮೈಮುನ್ನೀಸಾ ನಿಧನ ಹೊಂದಿದ್ದರು. ಇದರಿಂದ, ಚಿತ್ರದುರ್ಗ ಜಿಲ್ಲೆಯ ಆರೋಗ್ಯ ಮತ್ತು ಮತ್ತು ಕುಟುಂಬ ಕಲ್ಯಾಣ ಇಲಾಖೆಗೆ 2023ರ ಡಿಸೆಂಬರ್ 2ರಂದು ಮನವಿ ಸಲ್ಲಿಸಿದ್ದ ಅರ್ಜಿದಾರ, ತಾಯಿ ಮೃತಪಟ್ಟಿರುವ ಹಿನ್ನೆಲೆಯಲ್ಲಿ ತನಗೆ ಅನುಕಂಪದ ಉದ್ಯೋಗ ನೀಡುವಂತೆ ಕೋರಿದ್ದರು.

ಆದರೆ, ಮೈಮುನ್ನೀಸಾ ಅವರ ಹಣಕಾಸು ಸೌಲಭ್ಯ ಪಡೆಯಲು ಅರ್ಜಿದಾರ ಅರ್ಹನಾಗಿಲ್ಲ ಎಂದು ತಿಳಿಸಿ ಆರೋಗ್ಯ ಮತ್ತು ಮತ್ತು ಕುಟುಂಬ ಕಲ್ಯಾಣ ಇಲಾಖೆ ನಿರ್ದೇಶಕರು ಹಿಂಬರಹ ನೀಡಿದ್ದರು. ಇದರಿಂದ, ಅರ್ಜಿದಾರ 2024ರ ಸೆಪ್ಟೆಂಬರ್ 5ರಂದು ಮತ್ತೆ ಮನವಿ ಸಲ್ಲಿಸಿ, ಅನುಕಂಪದ ಆಧಾರದಲ್ಲಿ ಉದ್ಯೋಗ ಕಲ್ಪಿಸಲು ಕೋರಿದ್ದರು. ಅದನ್ನು ಪರಿಗಣಿಸದ ಕಾರಣ ಹೈಕೋರ್ಟ್‌ ಮೊರೆ ಹೋಗಿದ್ದ ಅರ್ಜಿದಾರ, ತನ್ನ ಮನವಿ ಪರಿಗಣಿಸಲು ಸರ್ಕಾರ ಮತ್ತು ಆರೋಗ್ಯ ಇಲಾಖೆಗೆ ನಿರ್ದೇಶಿಸಬೇಕೆಂದು ಕೋರಿದ್ದರು.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News