×
Ad

ಕಾಡಸಿದ್ದೇಶ್ವರ ಸ್ವಾಮೀಜಿ ಧಾರವಾಡ ಪ್ರವೇಶ ನಿರ್ಬಂಧಿಸಿದ್ದ ಜಿಲ್ಲಾಡಳಿತದ ಆದೇಶ ರದ್ದುಪಡಿಸಿದ ಹೈಕೋರ್ಟ್

Update: 2025-11-25 17:59 IST

ಬೆಂಗಳೂರು : ಮಹಾರಾಷ್ಟ್ರದ ಕೊಲ್ಹಾಪುರ ಜಿಲ್ಲೆಯ ಕನೇರಿ ಮಠದ ಅದೃಶ್ಯ ಕಾಡಸಿದ್ದೇಶ್ವರ ಸ್ವಾಮೀಜಿ ಅವರನ್ನು 2026ರ ಜನವರಿ 3ರವರೆಗೆ ಧಾರವಾಡ ಜಿಲ್ಲೆ ಪ್ರವೇಶಿಸದಂತೆ ನಿರ್ಬಂಧಿಸಿ ಜಿಲ್ಲಾ ಮ್ಯಾಜಿಸ್ಟ್ರೇಟ್ (ಜಿಲ್ಲಾಧಿಕಾರಿ) ಹೊರಡಿಸಿದ್ದ ಆದೇಶವನ್ನು ಹೈಕೋರ್ಟ್ ರದ್ದುಪಡಿಸಿದೆ.

ಧಾರವಾಡ ಜಿಲ್ಲಾಧಿಕಾರಿ ನವೆಂಬರ್ 4ರಂದು ಹೊರಡಿಸಿದ್ದ ಆದೇಶ ಪ್ರಶ್ನಿಸಿ ಕನೇರಿ ಮಠದ ಅದೃಶ್ಯ ಕಾಡಸಿದ್ದೇಶ್ವರ ಸ್ವಾಮೀಜಿ ಸಲ್ಲಿಸಿದ್ದ ಅರ್ಜಿ ಪುರಸ್ಕರಿಸಿರುವ ನ್ಯಾಯಮೂರ್ತಿ ಎಂ. ನಾಗಪ್ರಸನ್ನ ಅವರಿದ್ದ ಏಕಸದಸ್ಯ ನ್ಯಾಯಪೀಠ ಈ ಆದೇಶ ಮಾಡಿದೆ.

ಹೈಕೋರ್ಟ್ ಆದೇಶದಲ್ಲೇನಿದೆ?

ಅರ್ಜಿದಾರರ ಧಾರವಾಡ ಪ್ರವೇಶ ನಿರ್ಬಂಧಿಸಿ ಜಿಲ್ಲಾಡಳಿತ ಹೊರಡಿಸಿರುವ ಆದೇಶ ಸುಪ್ರೀಂಕೋರ್ಟ್‌ನ ಸಾಂವಿಧಾನಿಕ ಮತ್ತು ಕಾನೂನಾತ್ಮಕ ಪರೀಕ್ಷೆಯಲ್ಲಿ ಪಾಸಾಗಿದೆ. ಅನುಮಾನದ ಆಧಾರದಲ್ಲಿ ಅರ್ಜಿದಾರರನ್ನು ನಿರ್ಬಂಧಿಸಲಾಗಿದ್ದು, ಯಾವುದೇ ಕಾರಣಗಳನ್ನು ಸರಕಾರ ನೀಡಿಲ್ಲ. ಅರ್ಜಿದಾರ ಸ್ವಾಮೀಜಿಯು ಎಚ್ಚರಿಕೆಯಿಂದ ನಡೆದುಕೊಳ್ಳುತ್ತಾರೆ, ಸ್ವಾತಂತ್ರ್ಯದ ಎಲ್ಲೆ ಮೀರುವುದಿಲ್ಲ ಎಂಬ ಅವರ ಪರ ವಕೀಲ ಮುಚ್ಚಳಿಕೆಯನ್ನು ದಾಖಲೆಯಲ್ಲಿ ಸ್ವೀಕರಿಸಲಾಗಿದ್ದು, ಅರ್ಜಿ ಪುರಸ್ಕರಿಸಲಾಗಿದೆ. ನವೆಂಬರ್ 4ರಂದು ಧಾರವಾಡ ಜಿಲ್ಲಾಧಿಕಾರಿ ಹೊರಡಿಸಿರುವ ಆದೇಶ ರದ್ದುಪಡಿಸಲಾಗಿದ್ದು, ಆ ಆದೇಶದ ಪ್ರಕಾರ ಕೈಗೊಂಡಿದ್ದ ಹಾಗೂ ಕೈಗೊಳ್ಳಬಹುದಾದ ಕ್ರಮಗಳನ್ನೂ ರದ್ದುಪಡಿಸಲಾಗಿದೆ ಎಂದು ನ್ಯಾಯಾಲಯ ಆದೇಶದಲ್ಲಿ ಹೇಳಿದೆ.

ಅರ್ಜಿದಾರರ ಆಕ್ಷೇಪವೇನಾಗಿತ್ತು?

ವಿಚಾರಣೆ ವೇಳೆ ವಾದ ಮಂಡಿಸಿದ್ದ ಸ್ವಾಮೀಜಿ ಪರ ವಕೀಲ ವೆಂಕಟೇಶ್‌ ದಳವಾಯಿ, ಕಾಡಸಿದ್ದೇಶ್ವರ ಸ್ವಾಮೀಜಿಗೆ ಯಾವುದೇ ಷೋಕಾಸ್‌ ನೋಟಿಸ್‌ ನೀಡದೇ ಬಿಎನ್‌ಎಸ್‌ಎಸ್‌ ಸೆಕ್ಷನ್‌ 163(4) ಅಡಿ ನಿರ್ಬಂಧ ಆದೇಶ ಮಾಡಿರುವ ರಾಜ್ಯ ಸರ್ಕಾರದ ನಿರ್ಧಾರ ಅಧಿಕಾರ ಮೀರಿದ ದುರುದ್ದೇಶಪೂರಿತ ಕ್ರಮವಾಗಿದೆ. ಧಾರವಾಡದಲ್ಲಿ ಆಯೋಜಿಸಿದ್ದ ಕಾರ್ಯಕ್ರಮ ನವೆಂಬರ್‌ 7ರಂದೇ ಮುಗಿದಿದೆ. ಆದರೆ, ಅರ್ಜಿದಾರರನ್ನು ಯಾವ ಕಾರಣಕ್ಕಾಗಿ 2026ರ ಜನವರಿ 3ರವರೆಗೆ ನಿರ್ಬಂಧಿಸುತ್ತಿದ್ದಾರೆ ತಿಳಿದಿಲ್ಲ. ನಿರ್ಬಂಧಕ್ಕೆ ಸೂಕ್ತ ಕಾರಣವನ್ನೂ ನೀಡಿಲ್ಲ ಎಂದು ಆಕ್ಷೇಪಿಸಿದ್ದರು.

ರಾಜ್ಯ ಸರ್ಕಾರದ ಪರ ವಕೀಲರು, ಪೊಲೀಸ್‌ ವರಿಷ್ಠಾಧಿಕಾರಿಯ ವರದಿ ಪಡೆದು ಜಿಲ್ಲಾಧಿಕಾರಿ ಆದೇಶ ಮಾಡಿದ್ದಾರೆ. ಕಾಡಸಿದ್ದೇಶ್ವರ ಸ್ವಾಮೀಜಿಗೆ ಭಾಷೆಯ ಮೇಲೆ ಹಿಡಿತವಿಲ್ಲ. ಮುನ್ನೆಚ್ಚರಿಕೆಯ ಕ್ರಮವಾಗಿ ನಿರ್ಬಂಧ ವಿಧಿಸಲಾಗಿದೆ. ಸುಪ್ರೀಂಕೋರ್ಟ್‌ ಸಹ ಅವರಿಗೆ ಯಾವುದೇ ಪರಿಹಾರ ನೀಡಿಲ್ಲ. ಜನರ ಭಾವನೆಗಳ ಜತೆ ಆಟವಾಡಲು ಸ್ವಾಮೀಜಿ ಯತ್ನಿಸುತ್ತಿದ್ದಾರೆ ಎಂದು ನಿರ್ಬಂಧವನ್ನು ಸಮರ್ಥಿಸಿಕೊಂಡಿದ್ದರು.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News