ಬೊಮ್ಮನಹಳ್ಳಿ ಶಾಸಕ ಎಂ.ಸತೀಶ್ ರೆಡ್ಡಿ ಆಯ್ಕೆ ಅಸಿಂಧು ಕೋರಿದ್ದ ಅರ್ಜಿ ವಜಾಗೊಳಿಸಿದ ಹೈಕೋರ್ಟ್
ಬೆಂಗಳೂರು : ಕಳೆದ ವಿಧಾನಸಭೆ ಚುನಾವಣೆಯಲ್ಲಿ ಬೊಮ್ಮನಹಳ್ಳಿ ಕ್ಷೇತ್ರದ ಶಾಸಕರಾಗಿ ಬಿಜೆಪಿ ಎಂ. ಸತೀಶ್ ರೆಡ್ಡಿ ಅವರ ಆಯ್ಕೆ ಪ್ರಶ್ನಿಸಿ ಪರಾಜಿತ ಕಾಂಗ್ರೆಸ್ ಅಭ್ಯರ್ಥಿ ಉಮಾಪತಿ ಶ್ರೀನಿವಾಸ ಗೌಡ ಸಲ್ಲಿಸಿದ್ದ ಚುನಾವಣಾ ತಕರಾರು ಅರ್ಜಿಯನ್ನು ಹೈಕೋರ್ಟ್ ವಜಾಗೊಳಿಸಿದೆ.
ಸತೀಶ್ ರೆಡ್ಡಿ ಅವರ ಆಯ್ಕೆ ಅಸಿಂಧುಗೊಳಿಸುವಂತೆ ಹಾಗೂ ತಮ್ಮನ್ನು ಚುನಾಯಿತ ಅಭ್ಯರ್ಥಿ ಎಂದು ಘೋಷಿಸುವಂತೆ ಕೋರಿ ಉಮಾಪತಿ ಶ್ರೀನಿವಾಸ ಗೌಡ ಸಲ್ಲಿಸಿದ್ದ ಅರ್ಜಿಯನ್ನು ಇತ್ತೀಚೆಗೆ ವಜಾಗೊಳಿಸಿರುವ ನ್ಯಾಯಮೂರ್ತಿ ರವಿ ಹೊಸಮನಿ ಅವರಿದ್ದ ಏಕಸದಸ್ಯ ನ್ಯಾಯಪೀಠ, ಚುನಾವಣಾ ತಕರಾರು ಅರ್ಜಿ ಸಲ್ಲಿಸುವಾಗ ಕಡ್ಡಾಯವಾಗಿ ಪಾವತಿಸಬೇಕಿದ್ದ 2 ಸಾವಿರ ರೂ. ಭದ್ರತಾ ಠೇವಣಿಯನ್ನು ಮರುದಿನ ಪಾವತಿಸಿರುವುದು ಕಾನೂನುಬದ್ಧ ಲೋಪವಾಗಿದ್ದು, ಅದನ್ನು ನಂತರ ಸರಿಪಡಿಸಲು ಸಾಧ್ಯವಿಲ್ಲ ಎಂದು ಹೇಳಿದೆ.
ವಿಧಾನಸಭೆ ಚುನಾವಣೆಯ ಫಲಿತಾಂಶ 2023ರ ಮೇ 13ರಂದು ಪ್ರಕಟವಾಗಿತ್ತು. ಫಲಿತಾಂಶ ಪ್ರಕಟವಾದ 45 ದಿನಗಳ ಕಾಲಮಿತಿಯ ಕೊನೆಯ ದಿನವಾದ ಜೂನ್ 27ರಂದು ಉಮಾಪತಿ ಹೈಕೋರ್ಟ್‌ಗೆ ಚುನಾವಣಾ ತಕರಾರು ಅರ್ಜಿ ಸಲ್ಲಿಸಿದ್ದರು. ಆದರೆ, ಜನಪ್ರತಿನಿಧಿ ಕಾಯ್ದೆ ಪ್ರಕಾರ ಕಡ್ಡಾಯವಾಗಿದ್ದ 2 ಸಾವಿರ ರೂ. ಭದ್ರತಾ ಠೇವಣಿಯನ್ನು ಜೂನ್ 28ರಂದು ಪಾವತಿಸಿದ್ದರು. ಈ ಹಿನ್ನೆಲೆಯಲ್ಲಿ, ಅರ್ಜಿ ಸಲ್ಲಿಸುವ ಮೊದಲು ಠೇವಣಿ ಪಾವತಿಸದಿರುವುದು ಹಾಗೂ ಮರುದಿನ ಪಾವತಿಸಿರುವುದನ್ನು ಅರ್ಜಿದಾರರು ಒಪ್ಪಿಕೊಂಡಿರುವುದರಿಂದ, ಇದರ ಆಧಾರದಲ್ಲಿ ಅರ್ಜಿ ವಜಾಗೊಳಿಸಬಹುದು ಎಂದು ಹೈಕೋರ್ಟ್ ಹೇಳಿದೆ.
ಅರ್ಜಿದಾರರು ಜೂನ್ 27ರಂದು ಮಧ್ಯಾಹ್ನ ಸುಮಾರು 3 ಗಂಟೆಗೆ ಹೈಕೋರ್ಟ್‌ಗೆ ಬಂದಿದ್ದು, 3.55ಕ್ಕೆ ಅರ್ಜಿ ಸಲ್ಲಿಸಿದ್ದರು. ಆದರೆ, ಅಷ್ಟರಲ್ಲಾಗಲೇ ಆರ್ಥಿಕ ವಿಭಾಗದಲ್ಲಿ ನಗದು ಸ್ವೀಕರಿಸುವ ಪ್ರಕ್ರಿಯೆ ಸ್ಥಗಿತಗೊಂಡಿದ್ದರಿಂದ ಠೇವಣಿ ಪಾವತಿಸಲು ಸಾಧ್ಯವಾಗಿರಲಿಲ್ಲ. ಅರ್ಜಿಯಲ್ಲಿ ಕಂಡುಬರುವ ಲೋಪಗಳನ್ನು ನಂತರ ಸರಿಪಡಿಸಲು ಚುನಾವಣಾ ತಕರಾರು ಅರ್ಜಿ ಕಾರ್ಯವಿಧಾನ ನಿಯಮಗಳಲ್ಲಿ ಅವಕಾಶವಿದೆ ಎಂದು ಉಮಾಪತಿ ಪರ ವಕೀಲರು ಪ್ರತಿಪಾದಿಸಿದ್ದರು.
ಈ ವಾದವನ್ನೊಪ್ಪದ ನ್ಯಾಯಪೀಠ, ಠೇವಣಿ ಪಾವತಿಸಲು ಸಾಧ್ಯವಾಗದಿರುವುದಕ್ಕೆ ತಮ್ಮ ನಿಯಂತ್ರಣಕ್ಕೆ ಮೀರಿದ ಪರಿಸ್ಥಿತಿ ಕಾರಣವಾಗಿತ್ತು ಎಂಬುದನ್ನು ಅರ್ಜಿದಾರರು ಚುನಾವಣಾ ಅರ್ಜಿಯಲ್ಲಿ ಉಲ್ಲೇಖಿಸಿಲ್ಲ. ಜತೆಗೆ, ಕಚೇರಿ ಸಮಯದ ನಂತರ ಠೇವಣಿ ಪಾವತಿಸಲು ಅನುಮತಿ ಕೋರಿ ರಿಜಿಸ್ಟ್ರಾರ್ ಅವರನ್ನು ಸಂಪರ್ಕಿಸಿರುವ ಬಗ್ಗೆಯೂ ಅರ್ಜಿಯಲ್ಲಿ ಯಾವುದೇ ಉಲ್ಲೇಖವಿಲ್ಲ ಎಂದು ಹೇಳಿದೆ.
ಒಂದು ಕೆಲಸ ಮಾಡಲು ಹಲವು ಮಾರ್ಗಗಳಿರುವಾಗ, ಅಸಾಧ್ಯತೆಯ ವಾದ ಮಾಡುವವರು ಆ ಎಲ್ಲ ಮಾರ್ಗಗಳನ್ನು ಪ್ರಯತ್ನಿಸಿರುವುದನ್ನು ಮತ್ತು ಪ್ರತಿಯೊಂದು ಮಾರ್ಗದಲ್ಲೂ ಹೇಗೆ ಅಡ್ಡಿಯಾಯಿತು ಎಂಬುದನ್ನು ಸಾಬೀತುಪಡಿಸಬೇಕು ಎಂದು ಅಭಿಪ್ರಾಯಪಟ್ಟಿರುವ ನ್ಯಾಯಪೀಠ, ಜನಪ್ರತಿನಿಧಿ ಕಾಯ್ದೆಯ ಸೆಕ್ಷನ್ 117ರ ಅಡಿಯಲ್ಲಿ ಚುನಾವಣಾ ತಕರಾರು ಅರ್ಜಿಯೊಂದಿಗೆ ಭದ್ರತಾ ಠೇವಣಿ ಪಾವತಿಸುವುದು ಕಡ್ಡಾಯ. ಅದನ್ನು ಮನ್ನಾ ಮಾಡಲು ಅಥವಾ ತಡವಾಗಿ ಪಾವತಿಸುವುದನ್ನು ಕ್ಷಮಿಸಲು ಹೈಕೋರ್ಟ್‌ಗೆ ಅಧಿಕಾರವಿಲ್ಲ ಎಂದು ಸ್ಪಷ್ಟಪಡಿಸಿದೆ.