×
Ad

ಎಸ್‌ಇಪಿ ಆಕ್ಷೇಪಿಸಿದ್ದ ಪಿಐಎಲ್ ವಜಾ; ನೀತಿ-ನಿರೂಪಣೆ ವಿಚಾರದ ಮಧ್ಯಪ್ರವೇಶಿಸುವುದಿಲ್ಲ ಎಂದ ಹೈಕೋರ್ಟ್

Update: 2025-08-12 19:33 IST

ಬೆಂಗಳೂರು : ಕೇಂದ್ರ ಸರಕಾರ ಜಾರಿಗೆ ತಂದಿರುವ ರಾಷ್ಟ್ರೀಯ ಶಿಕ್ಷಣ ನೀತಿಯ (ಎನ್‌ಇಪಿ) ಬದಲಿಗೆ ರಾಜ್ಯ ಶಿಕ್ಷಣ ನೀತಿ (ಎಸ್‌ಇಪಿ) ಜಾರಿಗೆ ತರಲು ಮುಂದಾಗಿರುವ ರಾಜ್ಯ ಸರಕಾರದ ಕ್ರಮಕ್ಕೆ ಆಕ್ಷೇಪಿಸಿ ಸಲ್ಲಿಕೆಯಾಗಿದ್ದ ಸಾರ್ವಜನಿಕ ಹಿತಾಸಕ್ತಿ ಅರ್ಜಿ ವಜಾಗೊಳಿಸಿರುವ ಹೈಕೋರ್ಟ್, ನೀತಿ-ನಿರೂಪಣೆ ವಿಚಾರದಲ್ಲಿ ನ್ಯಾಯಾಲಯ ಮಧ್ಯಪ್ರವೇಶಿಸುವುದಿಲ್ಲ ಎಂದು ಸ್ಪಷ್ಟಪಡಿಸಿದೆ.

ಬೆಂಗಳೂರಿನ ಗಿರೀಶ್ ಭಾರದ್ವಾಜ್ ಹಾಗೂ ಆರ್. ಆನಂದ ಮೂರ್ತಿ ಸಲ್ಲಿಸಿದ್ದ ಅರ್ಜಿ ಕುರಿತು ಮಂಗಳವಾರ ವಿಚಾರಣೆ ನಡೆಸಿದ ಮುಖ್ಯ ನ್ಯಾಯಮೂರ್ತಿ ವಿಭು ಬಕ್ರು ಹಾಗೂ ನ್ಯಾಯಮೂರ್ತಿ ರಾಮಚಂದ್ರ ಡಿ.ಹುದ್ದಾರ ಅವರಿದ್ದ ವಿಭಾಗೀಯ ನ್ಯಾಯಪೀಠ ಈ ಆದೇಶ ಮಾಡಿದೆ.

ನೀತಿ-ನಿರೂಪಣೆಯ ವಿಚಾರದಲ್ಲಿ ನ್ಯಾಯಾಲಯ ಮಧ್ಯಪ್ರವೇಶ ಮಾಡಲಾಗದು. ಅರ್ಜಿದಾರರ ಮೂಲಭೂತ ಹಕ್ಕು ಅಥವಾ ಶಾಸನಬದ್ಧ ಹಕ್ಕು ಉಲ್ಲಂಘನೆಯಾಗಿದೆ ಎಂಬುದನ್ನು ತೋರಿಸದ ಹೊರತು ನ್ಯಾಯಾಲಯ ಸಂವಿಧಾನದ ಪರಿಚ್ಛೇದ 226ರ ಅಡಿಯಲ್ಲಿ ಹಕ್ಕು ಚಲಾಯಿಸಲಾಗದು. ಆದ್ದರಿಂದ, ಅರ್ಜಿ ವಜಾಗೊಳಿಸಲಾಗಿದೆ ಎಂದು ಹೈಕೋರ್ಟ್ ಆದೇಶದಲ್ಲಿ ಹೇಳಿದೆ.

ಅರ್ಜಿದಾರರ ವಾದವೇನು?

ಇದಕ್ಕೂ ಮುನ್ನ ಅರ್ಜಿದಾರರ ಪರ ವಾದ ಮಂಡಿಸಿದ ಹಿರಿಯ ವಕೀಲ ಎಂ.ಅರುಣ್‌ ಶ್ಯಾಮ್‌, ದೇಶದಾದ್ಯಂತ ಒಂದೇ ರೀತಿಯ ಶಿಕ್ಷಣ ನೀತಿ ಇರಬೇಕು ಎಂದು ಸಾಕಷ್ಟು ಶ್ರಮಿಸಿ ಎನ್‌ಇಪಿ ಜಾರಿಗೊಳಿಸಲಾಗಿದ್ದು, ಇದಕ್ಕಾಗಿ ನಿರ್ದಿಷ್ಟ ನಿಧಿಯನ್ನೂ ಸ್ಥಾಪಿಸಲಾಗಿದೆ. ಜನರ ತೆರಿಗೆ ಹಣವನ್ನು ಇದಕ್ಕೆ ವಿನಿಯೋಗಿಸಲಾಗಿದೆ. ಈಗಾಗಲೇ ಜಾರಿಗೊಳಿಸಿರುವ ಎನ್‌ಇಪಿಯನ್ನು ನಿಲ್ಲಿಸುವ ಪ್ರಯತ್ನವನ್ನು ರಾಜ್ಯ ಸರಕಾರ ಮಾಡುತ್ತಿದೆ ಎಂದು ಆಕ್ಷೇಪ ವ್ಯಕ್ತಪಡಿಸಿದರು.

ಅದಕ್ಕೆ ಪ್ರತಿಕ್ರಿಯಿಸಿದ ನ್ಯಾಯಪೀಠ, ಇಲ್ಲಿ ಯಾವ ಪಕ್ಷಗಾರರ ಹಕ್ಕು ಉಲ್ಲಂಘನೆಯಾಗಿದೆ, ಎನ್‌ಇಪಿ ಜಾರಿಗೊಳಿಸಬೇಕು ಎನ್ನುವುದು ನಿಮ್ಮ (ಅರ್ಜಿದಾರರ) ಕೋರಿಕೆ. ರಾಜ್ಯ ಸರಕಾರ ತನ್ನ ನೀತಿ ರೂಪಿಸಲು ತಜ್ಞರ ಸಮಿತಿ ರಚಿಸಿದೆ. ಯಾವ ಕಾನೂನಿನಲ್ಲಿ ರಾಜ್ಯ ಸರಕಾರ ‘ಎ’ ನೀತಿ ಅಥವಾ ‘ಬಿ’ ನೀತಿ ಜಾರಿ ಮಾಡಬೇಕು ಎಂದು ಹೇಳಿದೆ ಎಂಬುದನ್ನು ತಿಳಿಸಬೇಕು ಎಂದು ನುಡಿಯಿತಲ್ಲದೆ, ಅರ್ಜಿ ಪರಿಗಣಿಸಲಾಗದು ಎಂದು ತಿಳಿಸಿ, ವಜಾಗೊಳಿಸಿತು.

ಅರ್ಜಿದಾರರ ಮನವಿ:

ಕೇಂದ್ರ ಸರಕಾರದ ಆದೇಶದ ಮೇರೆಗೆ 2020ರಲ್ಲಿ ಹೊಸ ಮತ್ತು ಪರಿಷ್ಕೃತ ರಾಷ್ಟ್ರೀಯ ಶಿಕ್ಷಣ ನೀತಿ ಜಾರಿ ಬಂದಿತ್ತು. ಸರಕಾರದ ಆದೇಶದ ಅನ್ವಯ 2021ರ ಆಗಸ್ಟ್‌ 7ರಂದು ರಾಜ್ಯ ವ್ಯಾಪ್ತಿ ಜಾರಿಗೆ ಬಂದಿತ್ತು. ಈ ಮಧ್ಯೆ, ರಾಜ್ಯದಲ್ಲಿ ಸರಕಾರ ಬದಲಾಗಿದ್ದು, ರಾಜ್ಯ ಶಿಕ್ಷಣ ನೀತಿ (ಎಸ್‌ಇಪಿ) ರೂಪಿಸಲು ನಿರ್ಧರಿಸಲಾಗಿದೆ. ಈ ಹಿನ್ನೆಲೆಯಲ್ಲಿ ಶಿಕ್ಷಣ ನೀತಿ ರೂಪಿಸಲು ಸಮಿತಿ ರಚಿಸಿರುವುದಾಗಿ 2023ರ ಅಕ್ಟೋಬರ್‌ 11 ರಂದು ಸರಕಾರ ಆದೇಶ ಹೊರಡಿಸಿದೆ. ಈ ಆದೇಶ ರದ್ದುಪಡಿಸಿ, ಎನ್‌ಇಪಿ ಜಾರಿಗೊಳಿಸಲು ನಿರ್ದೇಶಿಸಬೇಕು ಎಂದು ಅರ್ಜಿದಾರರು ಕೋರಿದ್ದರು.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News