ಸರಕಾರದ ಯೋಜನೆ ಬಗ್ಗೆ ಕೋಮು ಪ್ರಚೋದನಕಾರಿ ವರದಿ ಪ್ರಸಾರ
ವಾದ ಮಂಡನೆಗೆ ಸುಧೀರ್ ಚೌಧರಿಗೆ ಅಂತಿಮ ಅವಕಾಶ ನೀಡಿದ ಹೈಕೋರ್ಟ್
ಬೆಂಗಳೂರು, ಸೆ.12: ರಾಜ್ಯ ಸರಕಾರದ ’ಸ್ವಾವಲಂಬಿ ಸಾರಥಿ ಯೋಜನೆ’ಯ ಕುರಿತು ಕೋಮು ಪ್ರಚೋದನಕಾರಿ ವರದಿ ಪ್ರಸಾರ ಮಾಡಿದ ಆರೋಪ ಸಂಬಂಧ ದಾಖಲಾಗಿರುವ ಎಫ್‌ಐಆರ್ ರದ್ದು ಕೋರಿ ಸಲ್ಲಿಸಿರುವ ಅರ್ಜಿಗಳ ಕುರಿತು ವಾದ ಮಂಡಿಸಲು ಆಜ್ ತಕ್ ಸುದ್ದಿ ವಾಹಿನಿ ಮತ್ತದರ ಮಾಜಿ ಸಂಪಾದಕ ಸುಧೀರ್ ಚೌಧರಿಗೆ ಅಂತಿಮ ಅವಕಾಶ ನೀಡಿರುವ ಹೈಕೋರ್ಟ್, ಒಂದೊಮ್ಮೆ ವಾದ ಮಂಡಿಸಲು ವಿಫಲವಾದರೆ ಅರ್ಜಿ ವಜಾಗೊಳಿಸುವುದಾಗಿ ಎಚ್ಚರಿಸಿದೆ.
ಕರ್ನಾಟಕ ಅಲ್ಪಸಂಖ್ಯಾತರ ಅಭಿವೃದ್ಧಿ ನಿಗಮ ನಿಯಮಿತದ ಸಹಾಯಕ ಆಡಳಿತಾಧಿಕಾರಿ ಎಸ್. ಶಿವಕುಮಾರ್ ನೀಡಿರುವ ದೂರು ಆಧರಿಸಿ ಬೆಂಗಳೂರಿನ ಶೇಷಾದ್ರಿಪುರ ಪೊಲೀಸ್ ಠಾಣೆಯಲ್ಲಿ ದಾಖಲಾಗಿರುವ ಎಫ್‌ಐಆರ್ ರದ್ದು ಕೋರಿ ಸುಧೀರ್ ಚೌಧರಿ ಹಾಗೂ ಆಜ್ ತಕ್ ಸುದ್ದಿವಾಹಿನಿ ಸಲ್ಲಿಸಿರುವ ಅರ್ಜಿಗಳನ್ನು ನ್ಯಾಯಮೂರ್ತಿ ಜೆ.ಎಂ. ಖಾಜಿ ಅವರಿದ್ದ ಏಕಸದಸ್ಯ ನ್ಯಾಯಪೀಠ ಶುಕ್ರವಾರ ವಿಚಾರಣೆ ನಡೆಸಿತು.
ಅರ್ಜಿದಾರರ ಪರ ವಕೀಲರು ವಾದ ಮಂಡಿಸಿ, ಅರ್ಜಿದಾರರ ವಿರುದ್ಧ ಆತುರದ ಕ್ರಮ ಕೈಗೊಳ್ಳುವುದಿಲ್ಲ ಎಂದು ಈ ಹಿಂದೆಯೇ ನ್ಯಾಯಾಲಯಕ್ಕೆ ಮೌಖಿಕ ಭರವಸೆ ನೀಡಲಾಗಿದ್ದು ಅದನ್ನು ಮುಂದುವರಿಸಲಾಗಿದೆ.
ಈಗ ಪೊಲೀಸರು ಅರ್ಜಿದಾರರ ಹಾಜರಾತಿಗೆ ನೋಟಿಸ್ ನೀಡಿದ್ದಾರೆ ಎಂದು ನ್ಯಾಯಪೀಠಕ್ಕೆ ತಿಳಿಸಿದರು. ಅರ್ಜಿದಾರರು ತನಿಖೆಗೆ ಸಹಕರಿಸುತ್ತಿದ್ದಾರೆಯೇ ಎಂಬ ನ್ಯಾಯಪೀಠದ ಪ್ರಶ್ನೆಗೆ ವಕೀಲರು ಹೌದು ಎಂದು ಉತ್ತರಿಸಿದರು.
ರಾಜ್ಯ ಸರಕಾರದ ಪರ ಹಾಜರಿದ್ದ ಹೆಚ್ಚುವರಿ ಸರಕಾರಿ ಅಭಿಯೋಜಕ ಬಿ.ಎನ್.ಜಗದೀಶ ಅವರು ಈ ಪ್ರಕರಣವನ್ನು ಇಂದು ವಿಚಾರಣೆಗಾಗಿ ನಿರ್ದಿಷ್ಟವಾಗಿ ಪಟ್ಟಿ ಮಾಡಲಾಗಿದೆ. ಅರ್ಜಿ ಸಂಬಂಧ ನಾವು ವಾದ ಮಂಡಿಸಲು ಸಿದ್ಧರಿದ್ದೇವೆ. ತನಿಖೆಗೆ ಸಹಕರಿಸಬೇಕೆಂಬ ಷರತ್ತಿನ ಮೇಲೆ ಬಲವಂತದ ಕ್ರಮ ಜರುಗಿಸುವುದಿಲ್ಲ ಎಂದು ಈ ಹಿಂದೆ ಮೌಖಿಕ ಭರವಸೆ ನೀಡಲಾಗಿದೆ. ಹಾಗಾಗಿ, ಅರ್ಜಿದಾರರು ತನಿಖೆಗೆ ಸಹಕರಿಸಲಿ ಎಂದು ಹೇಳಿದರು.
ವಾದ ಆಲಿಸಿದ ನ್ಯಾಯಪೀಠ, ಅರ್ಜಿ ಕುರಿತು ವಾದ ಮಂಡಿಸಲು ಅರ್ಜಿದಾರರಿಗೆ ಅಂತಿಮ ಅವಕಾಶ ಕಲ್ಪಿಸಿ, ಪ್ರಕರಣವನ್ನು ಅಕ್ಟೋಬರ್ 13ರಂದು ವಿಚಾರಣೆಗೆ ನಿಗದಿಪಡಿಸಲಾಗುವುದು. ಅಂದು ಅರ್ಜಿದಾರರ ಪರ ವಕೀಲರು ವಾದ ಮಂಡಿಸಲು ವಿಫಲವಾದರೆ, ಅರ್ಜಿಯನ್ನು ವಜಾಗೊಳಿಸಲಾಗುವುದು ಎಂದು ತಿಳಿಸಿ, ವಿಚಾರಣೆ ಮುಂದೂಡಿತು.