×
Ad

ಪ್ರತ್ಯೇಕ ಪ್ರಚೋದನಕಾರಿ ಭಾಷಣ ಪ್ರಕರಣಗಳು : ಕಲ್ಲಡ್ಕ ಪ್ರಭಾಕರ್‌ ಭಟ್, ಶ್ರೀಕಾಂತ್ ಶೆಟ್ಟಿ ವಿರುದ್ಧ ಬಲವಂತದ ಕ್ರಮ ತೆಗೆದುಕೊಳ್ಳದಂತೆ ಹೈಕೋರ್ಟ್ ಆದೇಶ

Update: 2025-06-02 20:24 IST

ಕಲ್ಲಡ್ಕ ಪ್ರಭಾಕರ್/ಶ್ರೀಕಾಂತ್ ಶೆಟ್ಟಿ

ಬೆಂಗಳೂರು : ಪ್ರತ್ಯೇಕ ಪ್ರಕರಣಗಳಲ್ಲಿ ಪ್ರಚೋದನಕಾರಿ ಭಾಷಣ ಆರೋಪಕ್ಕೆ ಸಂಬಂಧಿಸಿದಂತೆ ಆರೆಸ್ಸೆಸ್‌ ಮುಖಂಡ ಕಲ್ಲಡ್ಕ ಪ್ರಭಾಕರ್ ಭಟ್‌ ಮತ್ತು ಶ್ರೀಕಾಂತ್ ಶೆಟ್ಟಿ ವಿರುದ್ಧ ಯಾವುದೇ ಬಲವಂತದ ಕ್ರಮ ತೆಗೆದುಕೊಳ್ಳದಂತೆ ಹೈಕೋರ್ಟ್ ಮಧ್ಯಂತರ ಆದೇಶ ನೀಡಿದೆ.

ಎಫ್ಐಆರ್ ರದ್ದು ಕೋರಿ ಹೈಕೋರ್ಟ್‌ಗೆ ಕಲ್ಲಡ್ಕ ಪ್ರಭಾಕರ್ ಭಟ್, ಶ್ರೀಕಾಂತ್ ಶೆಟ್ಟಿ ಇಬ್ಬರು ಸಲ್ಲಿಸಿದ್ದ ಪ್ರತ್ಯೇಕ ಅರ್ಜಿಗಳನ್ನು ವಿಚಾರಣೆ ನಡೆಸಿದ ಹೈಕೋರ್ಟ್ ನ್ಯಾಯಮೂರ್ತಿ.ಎಸ್.ಆರ್.ಕೃಷ್ಣಕುಮಾರ್ ಅವರಿದ್ದ ಏಕಸದಸ್ಯ ಪೀಠ ಮಧ್ಯಂತರ ಆದೇಶ ನೀಡಿದೆ.

ವಿಚಾರಣೆ ವೇಳೆ ಅರ್ಜಿದಾರ ಪರ ಹಿರಿಯ ವಕೀಲ ಅರುಣ್ ಶ್ಯಾಮ್ ವಾದ ಮಂಡಿಸಿ, "ಭಾಷಣದ ಹಲವು ದಿನಗಳ ಬಳಿಕ ದುರುದ್ದೇಶದಿಂದ ಎಫ್ಐಆರ್ ದಾಖಲಿಸಲಾಗಿದೆ. ಹೀಗಾಗಿ ಮಧ್ಯಂತರ ತಡೆಯಾಜ್ಞೆ ನೀಡಬೇಕು" ಎಂದು ಮನವಿ ಮಾಡಿದರು.

ಈ ವಾದ ಆಲಿಸಿದ ನ್ಯಾಯಪೀಠ, ಪೊಲೀಸರ ವಿಚಾರಣೆಗೆ ಅರ್ಜಿದಾರರು ಸಹಕರಿಸಬೇಕು. ಹೈಕೋರ್ಟ್ ಅನುಮತಿ ಇಲ್ಲದೇ ದೋಷಾರೋಪಪಟ್ಟಿ ಸಲ್ಲಿಸುವಂತಿಲ್ಲ.ಯಾವುದೇ ಬಲವಂತದ ಕ್ರಮ ಕೈಗೊಳ್ಳದಂತೆ ನ್ಯಾಯಮೂರ್ತಿ ಎಸ್.ಆರ್.ಕೃಷ್ಣಕುಮಾರ್ ಅವರಿದ್ದ ಹೈಕೋರ್ಟ್ ಪೀಠ ಆದೇಶಿದೆ.

ಪ್ರಕರಣ ಹಿನ್ನೆಲೆ:

ಇತ್ತೀಚೆಗೆ ಕೊಲೆಯಾದ ರೌಡಿಶೀಟರ್ ಸುಹಾಸ್ ಶೆಟ್ಟಿಗೆ ಕಾವಳಪಡೂರು ಗ್ರಾಮದ ಮದ್ವ ಪ್ಯಾಲೇಸ್ ಕಲ್ಯಾಣ ಮಂಟಪದ ಹಾಲ್ ನಲ್ಲಿ ಮೇ 12ರಂದು ನಡೆದ ಶ್ರದ್ಧಾಂಜಲಿ ಕಾರ್ಯಕ್ರಮ ಆಯೋಜಿಸಲಾಗಿತ್ತು. ಈ ವೇಳೆ ಪ್ರಭಾಕರ್ ಭಟ್ ಸಮಾಜದ ಸ್ವಾಸ್ಥ್ಯ ಕೆಡುವಂತೆ, ಮತೀಯ ಗುಂಪುಗಳ ನಡುವೆ ವೈಮನಸ್ಸು ಉಂಟು ಮಾಡುವಂತೆ, ಪ್ರಚೋದನಾತ್ಮಕವಾಗಿ ಭಾಷಣ ಮಾಡಿದ್ದರು ಎಂದು ಆರೋಪಿಸಿ ದೂರು ದಾಖಲಾಗಿತ್ತು.

ಮೇ.25ರಂದು ಸುಹಾಸ್‌ ಶೆಟ್ಟಿ ಹತ್ಯೆ ಪ್ರಕರಣವನ್ನು NIA ಗೆ ವಹಿಸಬೇಕು ಎಂದು ಸಂಘಪರಿವಾರದ ಸಂಘಟನೆಗಳು ಬಜ್ಪೆಯಲ್ಲಿ ಆಯೋಜಿಸಿದ್ದ ʼಬಜ್ಪೆ ಚಲೋʼ ಕಾರ್ಯಕ್ರಮದ ವೇಳೆ ಶೀಕಾಂತ್‌ ಶೆಟ್ಟಿ ಪ್ರಚೋದನಾಕಾರಿ ಭಾಷಣ ಮಾಡಿದ್ದಾರೆ ಎಂದು ಆರೋಪಿಸಲಾಗಿತ್ತು. 

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News