ವಿದ್ಯುತ್ ಸಂಪರ್ಕದ ಟಾರಿಫ್ ಬದಲಾವಣೆಗೆ ಲಂಚ ಪಡೆದ ಆರೋಪ; ಗುತ್ತಿಗೆ ಕಾರು ಚಾಲಕನ ವಿರುದ್ಧದ ಕೇಸ್ ರದ್ದುಪಡಿಸಿದ ಹೈಕೋರ್ಟ್
ಬಡ ಚಾಲಕ ಪರಿಸ್ಥಿತಿಯ ಸಂತ್ರಸ್ತ ಎಂದ ನ್ಯಾಯಾಲಯ
ಸಾಂದರ್ಭಿಕ ಚಿತ್ರ
ಬೆಂಗಳೂರು: ಬೆಸ್ಕಾಂ ವಿದ್ಯುತ್ ಸಂಪರ್ಕವನ್ನು ಕಮರ್ಷಿಯಲ್‌ನಿಂದ ಇಂಡಸ್ಟ್ರೀಸ್ ಟಾರಿಫ್‌ಗೆ ಪರಿವರ್ತಿಸಲು ಮೇಲಧಿಕಾರಿ ಪಡೆದ ಲಂಚದ ಹಣವನ್ನು ಕಾರಿನಲ್ಲಿ ಇರಿಸಿದ್ದ ಆರೋಪದ ಮೇಲೆ ಕಾರಿನ ಚಾಲಕನ ವಿರುದ್ಧ ದಾಖಲಾಗಿದ್ದ ಭ್ರಷ್ಟಾಚಾರ ಪ್ರಕರಣವನ್ನು ಇತ್ತೀಚೆಗೆ ರದ್ದುಪಡಿಸಿರುವ ಹೈಕೋರ್ಟ್, ಬಡ ಚಾಲಕ ಪರಿಸ್ಥಿತಿಯ ಸಂತ್ರಸ್ತನಾಗಿದ್ದಾನೆ ಎಂದು ಅಭಿಪ್ರಾಯಪಟ್ಟಿದೆ.
ಗುತ್ತಿಗೆ ಆಧಾರದಲ್ಲಿ ಕಾರು ಚಾಲಕನಾಗಿ ಕೆಲಸ ಮಾಡುತ್ತಿದ್ದ ಆರ್. ಮುರಳಿ ಕೃಷ್ಣ ಎಂಬಾತನ ವಿರುದ್ಧ ದಾಖಲಾಗಿದ್ದ ಪ್ರಕರಣವನ್ನು ರದ್ದುಪಡಿಸಿರುವ ನ್ಯಾಯಮೂರ್ತಿ ಎಂ. ನಾಗಪ್ರಸನ್ನ ಅವರಿದ್ದ ಏಕಸದಸ್ಯ ನ್ಯಾಯಪೀಠ, ಪ್ರಕರಣದ ಮೊದಲ ಆರೋಪಿ ಬೆಸ್ಕಾಂನ ಕಾರ್ಯಾಚರಣೆ ವಿಭಾಗದ ಮುಖ್ಯ ಪ್ರಧಾನ ವ್ಯವಸ್ಥಾಪಕ ನಾಗರಾಜು ಅವರು ಲಂಚಕ್ಕೆ ಬೇಡಿಕೆ ಇಟ್ಟು, ಅದನ್ನು ಪಡೆದುಕೊಂಡಿದ್ದಾರೆ. ಬಡ ಚಾಲಕ ಪರಿಸ್ಥಿತಿಯ ಸಂತ್ರಸ್ತನಾಗಿದ್ದಾನೆ ಎಂದು ನುಡಿದಿದೆ.
ಭ್ರಷ್ಟಾಚಾರ ನಿಗ್ರಹ (ಪಿಸಿ) ಕಾಯ್ದೆ ಸೆಕ್ಷನ್ 2 ಮತ್ತು 7ರ ವಿವರಣೆಯನ್ನು ಪ್ರಾಸಿಕ್ಯೂಷನ್ ಆಧರಿಸಿದೆ. ಇದನ್ನು ನಿರ್ದಿಷ್ಟ ಬಿಂದುವಿನವರೆಗೆ ವಿಸ್ತರಿಸಲಾಗದು. ತನ್ನ ಮುಂದೆ ನಡೆಯುತ್ತಿರುವ ಹಣದ ವರ್ಗಾವಣೆ ಬಗ್ಗೆ ಗುತ್ತಿಗೆ ಚಾಲಕನಿಗೆ ತಿಳಿದಿಲ್ಲ. ಮುಖ್ಯ ಪ್ರಧಾನ ವ್ಯವಸ್ಥಾಪಕ ನಾಗರಾಜು ಅವರು ಕಾರಿನ ಡಿಕ್ಕಿಯಲ್ಲಿ ಬ್ಯಾಗ್ ಇಡುವಂತೆ ಸೂಚಿಸಿರುವುದನ್ನು ಆತ ಪಾಲಿಸಿದ್ದಾನೆ. ಕರೆ ರೆಕಾರ್ಡಿಂಗ್ ಅನ್ನು ಪ್ರಾಸಿಕ್ಯೂಷನ್ ಆಧರಿಸಿದ್ದು, ಅದು ಮೊದಲ ಆರೋಪಿಗೆ ಸಂಬಂಧಿಸಿದ್ದಾಗಿದ್ದು, ಲಂಚಕ್ಕೆ ಬೇಡಿಕೆ ಮತ್ತು ಸ್ವೀಕಾರದ ವಿಷಯದಲ್ಲಿ ಅರ್ಜಿದಾರನ ಪಾತ್ರದ ಕುರಿತು ಗಂಭೀರ ಮೌನ ತಾಳಲಾಗಿದೆ. ಘಟನಾ ಸ್ಥಳದಲ್ಲಿ ಕಾರು ಚಾಲಕ ಉಪಸ್ಥಿತನಿದ್ದು, ತನ್ನ ಮೇಲಧಿಕಾರಿಯ ಆಜ್ಞೆ ಪಾಲಿಸಿದ್ದಕ್ಕಾಗಿ ಅಪರಾಧದ ಬಲೆಯಲ್ಲಿ ಸಿಲುಕಿಸಲಾಗಿದೆ ಎಂದು ಹೈಕೋರ್ಟ್ ಹೇಳಿದೆ.
ಭ್ರಷ್ಟಾಚಾರ ಆರೋಪವನ್ನು ಅಲ್ಲಗಳೆಯಬೇಕಿರುವುದು ನಾಗರಾಜು ಮಾತ್ರ. 40 ದಿನಗಳ ಹಿಂದೆ ಕರ್ತವ್ಯಕ್ಕೆ ಸೇರಿರುವ ಗುತ್ತಿಗೆ ಕಾರು ಚಾಲಕನನ್ನು ಈ ಪ್ರಕರಣದಲ್ಲಿ ಸಿಲುಕಿಸಲಾಗದು. ಒಂದೊಮ್ಮೆ ಘಟನೆ ಸತ್ಯವಾದರೂ ಪಿಸಿ ಕಾಯ್ದೆಯ ಸೆಕ್ಷನ್ 7(a) ಅನ್ವಯಿಸುವುದಿಲ್ಲ. ಆದ್ದರಿಂದ, ತನಿಖೆ ಮತ್ತು ಆರೋಪ ಪಟ್ಟಿ ಸಲ್ಲಿಸಲು ಅವಕಾಶ ಮಾಡಿಕೊಡುವುದು ಕಾನೂನಿನ ದುರ್ಬಳಕೆಯಾಗುತ್ತದೆ ಎಂದು ನ್ಯಾಯಪೀಠ ಆದೇಶದಲ್ಲಿ ಅಭಿಪ್ರಾಯಪಟ್ಟಿದೆ.
ಪ್ರಕರಣವೇನು?:
ಪ್ರಕರಣದ ದಾಖಲೆಗಳ ಪ್ರಕಾರ ಬೆಸ್ಕಾಂ ವಿದ್ಯುತ್ ಸಂಪರ್ಕವನ್ನು ಕಮರ್ಷಿಯಲ್‌ನಿಂದ ಇಂಡಸ್ಟ್ರೀಸ್ ಟಾರಿಫ್‌ಗೆ ಪರಿವರ್ತಿಸಲು ಮೊದಲಿಗೆ 10 ಲಕ್ಷ ಲಂಚಕ್ಕೆ ಬೇಡಿಕೆ ಇಟ್ಟಿದ್ದ ನಾಗರಾಜು ಆನಂತರ 7.5 ಲಕ್ಷ ರೂ. ಗಳಿಗೆ ಇಳಿಸಿದ್ದರು. ಈ ನಡುವೆ, 2023ರ ನವೆಂಬರ್ 22ರಂದು ದೂರುದಾರ ಲೋಕಾಯುಕ್ತಕ್ಕೆ ದೂರು ನೀಡಿದ್ದರು. ಟ್ರ್ಯಾಪ್ ನಡೆದ ದಿನ ಅಂದರೆ ನವೆಂಬರ್ 23ರಂದು ನಾಗರಾಜು ಅವರು ಕಾರು ಚಾಲಕ ಮುರಳಿ ಅವರನ್ನು 3 ಗಂಟೆಗೆ ಕಚೇರಿಗೆ ಬರುವಂತೆ ಸೂಚಿಸಿದ್ದರು. ಅದರಂತೆ, ಕಚೇರಿಗೆ ತೆರಳಿದ್ದ ಮುರಳಿಗೆ ಬ್ಯಾಗ್ ಕೊಟ್ಟು ಅದನ್ನು ಕಾರ್ ಡಿಕ್ಕಿಯಲ್ಲಿಡಲು ಸೂಚಿಸಿದ್ದರು. ಕಾರು ಚಾಲಕ ಬ್ಯಾಗ್ ಅನ್ನು ಕಾರಿನ ಡಿಕ್ಕಿಯಲ್ಲಿಡುವಾಗ ಲೋಕಾಯುಕ್ತ ಅಧಿಕಾರಿಗಳು ದಾಳಿ ನಡೆಸಿ, ಮುರಳಿಯನ್ನು ಬಂಧಿಸಿದ್ದರು. ಇದನ್ನು ಪ್ರಶ್ನಿಸಿ, ಮುರಳಿ ಹೈಕೋರ್ಟ್ ಮೆಟ್ಟಿಲೇರಿದ್ದರು.