×
Ad

ಸಾಮಾಜಿಕ, ಶೈಕ್ಷಣಿಕ ಸಮೀಕ್ಷಾ ವರದಿ | ಮುಂದಿನ ಸಚಿವ ಸಂಪುಟ ಸಭೆಯಲ್ಲಿಯೂ ಚರ್ಚೆ : ಎಚ್.ಕೆ.ಪಾಟೀಲ್

Update: 2025-05-09 21:27 IST

ಎಚ್.ಕೆ.ಪಾಟೀಲ್

ಬೆಂಗಳೂರು : ರಾಜ್ಯ ಹಿಂದುಳಿದ ವರ್ಗಗಳ ಆಯೋಗವು ಸಲ್ಲಿಸಿರುವ ಸಾಮಾಜಿಕ ಮತ್ತು ಶೈಕ್ಷಣಿಕ ಸಮೀಕ್ಷೆ-2015(ಜಾತಿ ಗಣತಿ)ರ ದತ್ತಾಂಶಗಳ ಅಧ್ಯಯನ ವರದಿಯಲ್ಲಿ ಮಾಡಿರುವ ಶಿಫಾರಸ್ಸುಗಳ ಬಗ್ಗೆ ಇನ್ನೂ ಹೆಚ್ಚಿನ ಚರ್ಚೆಯ ಅಗತ್ಯವಿರುವುದರಿಂದ ಮುಂದಿನ ವಾರ ನಡೆಯಲಿರುವ ಸಚಿವ ಸಂಪುಟ ಸಭೆಯಲ್ಲಿಯೂ ಚರ್ಚೆ ನಡೆಸಲು ನಿರ್ಧರಿಸಲಾಗಿದೆ ಎಂದು ಕಾನೂನು ಮತ್ತು ಸಂಸದೀಯ ವ್ಯವಹಾರಗಳ ಸಚಿವ ಎಚ್.ಕೆ.ಪಾಟೀಲ್ ತಿಳಿಸಿದರು.

ಶುಕ್ರವಾರ ವಿಧಾನಸೌಧದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅಧ್ಯಕ್ಷತೆಯಲ್ಲಿ ನಡೆದ ಸಚಿವ ಸಂಪುಟ ಸಭೆಯ ಬಳಿಕ ಸುದ್ದಿಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಅವರು, ಸಮೀಕ್ಷೆಯ ದತ್ತಾಂಶಗಳ ಅಧ್ಯಯನ ವರದಿ ಬಗ್ಗೆ ಸುದೀರ್ಘ ಚರ್ಚೆ ನಡೆಸಲಾಯಿತು. ಈ ಹಿಂದೆ ಮುಖ್ಯಮಂತ್ರಿ ಸೂಚಿಸಿದಂತೆ ಹಲವು ಸಚಿವರು ತಮ್ಮ ಅಭಿಪ್ರಾಯಗಳನ್ನು ಸಲ್ಲಿಸಿದ್ದಾರೆ. ಇನ್ನೂ ಕೆಲವರು ಅಭಿಪ್ರಾಯಗಳನ್ನು ನೀಡಬೇಕಿದೆ ಎಂದು ಹೇಳಿದರು.

ಸಚಿವರಿಗೆ ಅಗತ್ಯವಿರುವ ಇನ್ನೂ ಹೆಚ್ಚಿನ ಮಾಹಿತಿ ಹಾಗೂ ತಾಂತ್ರಿಕ ವಿವರಗಳನ್ನು ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ ಸಚಿವರು ಸಲ್ಲಿಸಿದ್ದಾರೆ. ಮುಂದಿನ ವಾರ ನಡೆಯಲಿರುವ ಸಚಿವ ಸಂಪುಟ ಸಭೆಯಲ್ಲಿ ಈ ವರದಿ ಕುರಿತು ಚರ್ಚೆ ನಡೆಸಲು ನಿರ್ಧರಿಸಲಾಗಿದೆ ಎಂದು ಎಚ್.ಕೆ.ಪಾಟೀಲ್ ತಿಳಿಸಿದರು.

ವಿಕಲಚೇತನರಿಗೆ ಶೇ.4 ರಷ್ಟು ಮೀಸಲಾತಿ: ವಿಕಲ ಚೇತನ ಅಧಿಕಾರಿ, ನೌಕರರಿಗೆ ಗುಂಪು-ಎ(ಕಿರಿಯ ಶ್ರೇಣಿ) ಮತ್ತು ಗುಂಪು-ಬಿ ವೃಂದಗಳಿಗೆ ನೀಡುವ ಮುಂಭಡ್ತಿಯಲ್ಲಿ ಶೇ.4ರಷ್ಟು ಮೀಸಲಾತಿ ಕಲ್ಪಿಸಲು ಸಚಿವ ಸಂಪುಟ ನಿರ್ಣಯಿಸಿದೆ ಎಂದು ಅವರು ಹೇಳಿದರು.

ಸಾರ್ವತ್ರಿಕ ವರ್ಗಾವಣೆ ಮಾರ್ಗಸೂಚಿ ಪ್ರಕಟ: 2025-26ನೇ ಸಾಲಿನ ಸಾರ್ವತ್ರಿಕ ವರ್ಗಾವಣೆ ಮಾರ್ಗಸೂಚಿಗಳನ್ನು ಹೊರಡಿಸಲು ಮತ್ತು ಆ ಮಾರ್ಗಸೂಚಿಯನ್ನು ಪರಿಷ್ಕರಿಸಲು ಹಾಗೂ ವರ್ಗಾವಣಾ ಅವಧಿಯನ್ನು ವಿಸ್ತರಿಸಲು ಮುಖ್ಯಮಂತ್ರಿಗೆ ಅಧಿಕಾರ ನೀಡಲು ಸಚಿವ ಸಂಪುಟ ನಿರ್ಣಯಿಸಿದೆ. ಆಯಾ ವೃಂದಗಳ ಕಾರ್ಯನಿರತ ವೃಂದ ಬಲದ ಶೇ.6ನ್ನು ಮೀರದಂತೆ ಮೇ 15 ರಿಂದ ಜೂ.14ರವರೆಗೆ ಸಾರ್ವತ್ರಿಕ ವರ್ಗಾವಣೆ ಕೈಗೊಳ್ಳಲು ಗ್ರೂಪ್ ‘ಎ’ ಮತ್ತು ಗ್ರೂಪ್ ‘ಬಿ’ ವೃಂದದ ಅಧಿಕಾರಿಗಳಿಗೆ ಸಂಬಂಧಿಸಿದಂತೆ ಆಯಾ ಇಲಾಖಾ ಸಚಿವರಿಗೆ ಹಾಗೂ ಗ್ರೂಪ್ ‘ಸಿ’ ಮತ್ತು ‘ಡಿ’ ವೃಂಧದ ನೇಮಕಾತಿ ಪ್ರಾಧಿಕಾರಗಳಿಗೆ ಅಧಿಕಾರ ನೀಡಲಾಗಿದೆ ಎಂದು ಅವರು ತಿಳಿಸಿದರು.

ಸರಕಾರಿ ಸೇವೆಯಿಂದ ವಜಾ: ಚಿಕ್ಕಮಗಳೂರು ಜಿಲ್ಲೆಯ ಕೊಪ್ಪದಲ್ಲಿರುವ ಸಾರ್ವಜನಿಕ ಆಸ್ಪತ್ರೆಯ ಪ್ರಸೂತಿ ತಜ್ಞ ಡಾ.ಜಿ.ಎಸ್.ಬಾಲಕೃಷ್ಣ ಅವರು ಕಲ್ಪನಾ ಎಂಬ ಗರ್ಭಿಣಿಗೆ 2020ರ ಮಾ.14ರಂದು ಹೆರಿಗೆ ಮಾಡಿಸಿ, ಅವರಿಗೆ ಜನಿಸಿದ ಹೆಣ್ಣು ಮಗುವನ್ನು 50 ಸಾವಿರ ರೂ.ಗಳಿಗೆ ಪ್ರೇಮಲತಾ ಎಂಬುವವರಿಗೆ ಮಾರಾಟ ಮಾಡಿ, ಅವರಿಗೆ ಹೆರಿಗೆಯಾದಂತೆ ಸುಳ್ಳು ದಾಖಲಾತಿಗಳನ್ನು ಸೃಷ್ಟಿಸಿರುವ ಆರೋಪಕ್ಕಾಗಿ ಇವರ ವಿರುದ್ಧ ನಡೆಸಲಾದ ಇಲಾಖಾ ವಿಚಾರಣೆಯಲ್ಲಿ ದುರ್ನಡತೆಯ ಆರೋಪವು ಸಾಬೀತಾಗಿದೆ. ಆದುದರಿಂದ, ಬಾಲಕೃಷ್ಣ ಅವರನ್ನು ಸರಕಾರಿ ಸೇವೆಯಿಂದ ವಜಾಗೊಳಿಸಲು ನಿರ್ಧರಿಸಲಾಗಿದೆ ಎಂದು ಎಚ್.ಕೆ.ಪಾಟೀಲ್ ಹೇಳಿದರು.

ಹಾಸನ ಜಿಲ್ಲೆಯ ಚನ್ನರಾಯಪಟ್ಟಣ ಹೇಮಾವತಿ ಕಾಲುವೆ ವೃತ್ತದ ಹಿಂದಿನ ಅಧೀಕ್ಷಕ ಇಂಜಿನಿಯರ್ ಬಿ.ಪದ್ಮನಾಭ ಹಾಗೂ ಸವದತ್ತಿಯ ಶಿರಸಂಗಿ ತಾಲೂಕಿನ ಎಂ.ಆರ್.ಬಿ.ಸಿ. ಹಿಂದಿನ ಕಿರಿಯ ಇಂಜಿನಿಯರ್ ಪ್ರಕಾಶ್ ಎಫ್.ಹೊಸಮನಿ ಅವರನ್ನು ಸರಕಾರಿ ಸೇವೆಯಿಂದ ವಜಾಗೊಳಿಸಲು ಸಚಿವ ಸಂಪುಟ ನಿರ್ಣಯಿಸಿದೆ ಎಂದು ಅವರು ಹೇಳಿದರು.

ಆಶಾ ಕಾರ್ಯಕರ್ತೆಯರಿಗೆ 1 ಸಾವಿರ ರೂ.ಗಳ ತಂಡ ಆಧಾರಿತ ಪ್ರೋತ್ಸಾಹ ಧನವನ್ನು ಪಾವತಿಸಲು ಹಾಗೂ ಇದಕ್ಕಾಗಿ 180 ಕೋಟಿ ರೂ.ಗಳ ವೆಚ್ಚವನ್ನು ಭರಿಸಲು ಆಡಳಿತಾತ್ಮಕ ಅನುಮೋದನೆ ನೀಡಲಾಗಿದೆ ಎಂದು ಎಚ್.ಕೆ.ಪಾಟೀಲ್ ತಿಳಿಸಿದರು.

ಇತರ ನಿರ್ಣಯಗಳು: ಬೆಂಗಳೂರು ಪೂರ್ವ ತಾಲೂಕಿನ ಬೆಳ್ಳಂದೂರು ಕೆರೆಯ ಪುನಶ್ಚೇತನ ಮತ್ತು ಅಭಿವೃದ್ಧಿ ಕಾಮಗಾರಿ ಅಡಿಯಲ್ಲಿ ವಿಸ್ತೃತ ಯೋಜನಾ ವರದಿಯಂತೆ ಯೋಜಿತ ಉಳಿಕೆ ಕಾಮಗಾರಿಗಳನ್ನು 79.67 ಕೋಟಿ ರೂ.ಗಳ ಹೆಚ್ಚುವರಿ ಮೊತ್ತದಲ್ಲಿ ಕೈಗೊಳ್ಳಲು ಅನುಮೋದನೆ.

ಗ್ರೇಟರ್ ಬೆಂಗಳೂರು ಅಧಿಸೂಚನೆ: ಗ್ರೇಟರ್ ಬೆಂಗಳೂರು ಆಡಳಿತ ಕಾಯ್ದೆ-2024 ಅನ್ನು ಮೇ 15ರಿಂದ ಜಾರಿಗೆ ಬರುವಂತೆ ಹಾಗೂ ಹಾಲಿ ಇರುವ ಬಿಬಿಎಂಪಿ ಪ್ರದೇಶವನ್ನು ‘ಗೇಟರ್ ಬೆಂಗಳೂರು ಪ್ರದೇಶ’ ಎಂದು ಅಧಿಸೂಚನೆ ಹೊರಡಿಸಲು ಸಚಿವ ಸಂಪುಟ ಅನುಮೋದನೆ.

ಕಾಂಗ್ರೆಸ್ ಭವನಕ್ಕೆ ಜಮೀನು: ಚಿಕ್ಕಬಳ್ಳಾಪುರ ಜಿಲ್ಲಾ ಕಾಂಗ್ರೆಸ್ ಭವನದ ಕಟ್ಟಡ ನಿರ್ಮಾಣ ಮಾಡುವ ಉದ್ದೇಶಕ್ಕಗಿ ಚಿಕ್ಕಾಬಳ್ಳಾಪುರ ನಗರಾಭಿವೃದ್ಧಿ ಪ್ರಾಧಿಕಾರದ ಅಣಕನೂರು ಗ್ರಾಮದ ಅನುಮೋದಿತ ಬಡಾವಣೆಯಲ್ಲಿ 3404.26 ಚ.ಮೀ ವಿಸ್ತೀರ್ಣದ ನಾಗರಿಕ ಸೌಲಭ್ಯವುಳ್ಳ ನಿವೇಶನವನ್ನು ಚಿಕ್ಕಬಳ್ಳಾಪುರದ ಕಾಂಗ್ರೆಸ್ ಭವನ ಟ್ರಸ್ಟ್‌ ಗೆ ಶೇ.5ರಷ್ಟು ಮಾರ್ಗಸೂಚಿ ಬೆಲೆಯ ಆಧಾರದ್ಲಲಿ ಮಂಜೂರು ಮಾಡಲು ನಿರ್ಧರಿಸಲಾಗಿದೆ.

ಹೆಸರು ಬದಲಾವಣೆ: ಹುಬ್ಬಳ್ಳಿ-ಧಾರವಾಡ ಪಾಲಿಕೆಯ ಒಡೆತನದ 2988.29 ಚ.ಮೀ ವಿಸ್ತೀರ್ಣದ ಜಾಗವನ್ನು ಜಿಲ್ಲಾ ಕಾರ್ಯಾಲಯ ನಿರ್ಮಿಸಲು ‘ಕರ್ನಾಟಕ ಪ್ರದೇಶ ಕಾಂಗ್ರೆಸ್ ಕಮಿಟಿ, ಧಾರವಾಡ’ ರವರಿಗೆ ಮಂಜೂರು ಮಾಡಲಾಗಿದೆ ಎಂದು ನಮೂದಿಸಿರುವುದರ ಬದಲಿಗೆ ‘ಕರ್ನಾಟಕ ಪ್ರದೇಶ ಕಾಂಗ್ರೆಸ್ ಕಮೀಟಿ, ಬೆಂಗಳೂರು’ ಇವರಿಗೆ ಮಂಜೂರು ಮಾಡಿದೆ ಎಂದು ತಿದ್ದುಪಡಿ ಮಾಡಲು ಸಚಿವ ಸಂಪುಟ ನಿರ್ಧರಿಸಿದೆ.

ಪಟ್ಟಣ ಪಂಚಾಯಿತಿಯಾಗಿ ಮೇಲ್ದರ್ಜೆಗೆ: ಬೆಳಗಾವಿ ಜಿಲ್ಲೆಯ ಬೆನಕನಹಳ್ಳಿ ಗ್ರಾಮ ಪಂಚಾಯಿತಿ, ಹಿಂಡಲಗಾ ಗ್ರಾಮ ಪಂಚಾಯಿತಿ ಹಾಗೂ ಹಿರೇಬಾಗೇವಾಡಿ ಗ್ರಾಮ ಪಂಚಾಯಿತಿಯನ್ನು ಪಟ್ಟಣ ಪಂಚಾಯಿತಿಯನ್ನಾಗಿ ಮೇಲ್ದರ್ಜೆಗೇರಿಸಲು ಸಚಿವ ಸಂಪುಟ ಒಪ್ಪಿಗೆ ನೀಡಿದೆ.

ನೀರಾವರಿ ಯೋಜನೆಗಳಿಗೆ ಅನುಮೋದನೆ: ರಾಮನಗರ ಜಿಲ್ಲೆಯ ಗನಾಳು ಬಳಿ ಅರ್ಕಾವತಿ ನದಿಯಿಂದ ನೀರನ್ನು ಎತ್ತಿ ರಾಮನಗರ ಮತ್ತು ಕನಕಪುರ ತಾಲೂಕಿನ 46 ಕೆರೆಗಳನ್ನು ತುಂಬಿಸುವ 110 ಕೋಟಿ ರೂ.ಗಳ ಅಂದಾಜು ಮೊತ್ತದ ಯೋಜನೆ, ಚನ್ನಪಟ್ಟಣ ತಾಲೂಕಿನಲ್ಲಿ ಸರಗೂರಿನಿಂದ ಹೊಸಪುರಕ್ಕೆ ಸೇತುವೆ ನಿರ್ಮಾಣದ ಕಾಮಗಾರಿಯನ್ನು 15 ಕೋಟಿ ರೂ.ಗಳ ಅಂದಾಜು ಮೊತ್ತದಲ್ಲಿ ಕೈಗೊಳ್ಳಲು ಹಾಗೂ ಮಾಗಡಿ, ರಾಮನಗರ ಮತ್ತು ಕುಣಿಗಲ್ ತಾಲೂಕುಗಳಿಗೆ ನೀರನ್ನು ಪೂರೈಸಲು 90 ಕೋಟಿ ರೂ. ಅಂದಾಜು ಮೊತ್ತದ ‘ಸತ್ತೇಗಾಲ ಕುಡಿಯುವ ನೀರು ಯೋಜನೆ’ಗೆ ಆಡಳಿತಾತ್ಮಕ ಅನುಮೋದನೆ ನೀಡಲಾಗಿದೆ.

ಬೀಳಗಿ ವಿರುದ್ಧ ಕ್ರಮವಿಲ್ಲ: ಉಪ ಲೋಕಾಯುಕ್ತರ ಶಿಫಾರಸ್ಸು ವರದಿಯನ್ವಯ ಐಎಎಸ್ ಅಧಿಕಾರಿ ಮಹಾಂತೇಶ್ ಬೀಳಗಿ, ಎಚ್.ಡಿ.ನಾಗಾವಿ ಹಾಗೂ ಶ್ರೀಕಾಂತ ತ್ರ್ಯಂಬಕ ಕುಲಕರ್ಣಿಯವರ ವಿಚಾರಣಾ ಪ್ರಕರಣವನ್ನು ಮುಕ್ತಾಯಗೊಳಿಸಲು ಸಚಿವ ಸಂಪುಟ ನಿರ್ಧರಿಸಿದೆ.

ಬಂಧಿಗಳ ಬಿಡುಗಡೆ: ರಾಜ್ಯದ ವಿವಿಧ ಕಾರಾಗೃಹಗಳಲ್ಲಿರುವ 48 ಜೀವಾವಧಿ ಶಿಕ್ಷಾ ಬಂದಿಗಳನ್ನು ಸನ್ನಡತೆ ಆಧಾರದ ಮೇಲೆ ಅವಧಿಪೂರ್ವ ಬಿಡುಗಡೆ ಮಾಡಲು ನಿರ್ಧರಿಸಲಾಗಿದೆ.

ಸೂಪರ್ ಸ್ಪೆಷಾಲಿಟಿ ವೈದ್ಯರ ವಯೋನಿವೃತ್ತಿ ಹೆಚ್ಚಳ: ವೈದ್ಯಕೀಯ ಶಿಕ್ಷಣ ಇಲಾಖೆಯಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ಖಾಯಂ ಸೂಪರ್ ಸ್ಪೆಷಾಲಿಟಿ ವೈದ್ಯರ ವಯೋನಿವೃತ್ತಿ ವಯಸ್ಸನ್ನು 60 ರಿಂದ 65 ವರ್ಷಕ್ಕೆ ಹೆಚ್ಚಿಸಲು ಸಚಿವ ಸಂಪುಟ ನಿರ್ಧರಿಸಿದೆ. 

ವೃಷಭಾವತಿ ಕಣಿವೆಯಿಂದ 41 ಕೆರೆ ಭರ್ತಿ: ಬೆಂಗಳೂರು ನಗರದ ವೃಷಭಾವತಿ ಕಣಿವೆಯಿಂದ ದ್ವಿತೀಯ ಹಂತದಲ್ಲಿ ಸಂಸ್ಕರಿಸಿದ 308 ಎಂ.ಎಲ್.ಡಿ ನೀರಿನಿಂದ 259 ಕೆರೆಗಳನ್ನು ತುಂಬಿಸುವ ಮೂಲ ಯೋಜನೆಯ ಪೈಕಿ ಲಿಫ್ಟ್-4: ಗೋಪಾಲಪುರ ಕೆರೆಯಿಂದ ನೆಲಮಂಗಲ ಮತ್ತು ದೊಡ್ಡಬಳ್ಳಾಪುರ ತಾಲ್ಲೂಕಿನ 41 ಕೆರೆಗಳಿಗೆ ನೀರನ್ನು ತುಂಬಿಸುವ ಯೋಜನೆಯನ್ನು 280 ಕೋಟಿ ರೂ.ಗಳ ಅಂದಾಜು ಮೊತ್ತದಲ್ಲಿ ಕೈಗೊಳ್ಳಲು ಆಡಳಿತಾತ್ಮಕ ಅನುಮೋದನೆ ನೀಡಲಾಗಿದೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News