×
Ad

ಮಾವು ಬೆಳೆಗಾರರಿಗೆ ಪರಿಹಾರ | ಕೇಂದ್ರ ಸರಕಾರವನ್ನು ಒತ್ತಾಯಿಸಲು ಕೃಷಿ ಸಚಿವರಿಗೆ ಸಿಎಂ ಸೂಚನೆ : ಎಚ್.ಕೆ.ಪಾಟೀಲ್

Update: 2025-06-19 19:49 IST

ಬೆಂಗಳೂರು : ರಾಜ್ಯದಲ್ಲಿನ ಮಾವು ಬೆಳೆಗಾರರು ಸಂಕಷ್ಟ ಅನುಭವಿಸುತ್ತಿದ್ದು, ತಕ್ಷಣ ಕೇಂದ್ರ ಸರಕಾರವನ್ನು ಸಂಪರ್ಕಿಸಿ ಪರಿಹಾರ ಕೋರುವಂತೆ ಕೃಷಿ ಸಚಿವ ಎನ್.ಚಲುವರಾಯಸ್ವಾಮಿಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಸೂಚನೆ ನೀಡಿದ್ದಾರೆ ಎಂದು ಕಾನೂನು ಮತ್ತು ಸಂಸದೀಯ ವ್ಯವಹಾರಗಳ ಸಚಿವ ಎಚ್.ಕೆ.ಪಾಟೀಲ್ ತಿಳಿಸಿದರು.

ಗುರುವಾರ ವಿಧಾನಸೌಧದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅಧ್ಯಕ್ಷತೆಯಲ್ಲಿ ನಡೆದ ಸಚಿವ ಸಂಪುಟ ಸಭೆಯ ಬಳಿಕ ಸುದ್ದಿಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಅವರು, ಮಾವು ಬೆಳೆಗಾರರ ವಿಚಾರವಾಗಿ ಸಚಿವ ಸಂಪುಟ ಸಭೆಯಲ್ಲಿ ಕೋಲಾರ, ಬೆಂಗಳೂರು ಗ್ರಾಮಾಂತರ ಭಾಗದ ಸಚಿವರು ವಿಷಯ ಪ್ರಸ್ತಾಪಿಸಿ ಚರ್ಚೆ ನಡೆಸಿದರು ಎಂದು ಹೇಳಿದರು.

ಮಾವು ಬೆಳೆಗಾರರಿಗೆ ಪರಿಹಾರ ನೀಡುವ ಸಂಬಂಧ ಕೇಂದ್ರ ಕೃಷಿ ಸಚಿವರೊಂದಿಗೆ ಚರ್ಚೆ ನಡೆಸಲು ಹಾಗೂ ಅಗತ್ಯವಿದ್ದಲ್ಲಿ ಹೊಸದಿಲ್ಲಿಗೆ ಹೋಗಿ ಅವರನ್ನು ಭೇಟಿ ಮಾಡಿ, ಸಾಧ್ಯವಾದಷ್ಟು ಹೆಚ್ಚಿನ ಪರಿಹಾರವನ್ನು ನೀಡುವಂತೆ ಒತ್ತಾಯಿಸಬೇಕೆಂದು ಕೃಷಿ ಸಚಿವರು ಹಾಗೂ ರಾಜ್ಯ ಸರಕಾರದ ಮುಖ್ಯ ಕಾರ್ಯದರ್ಶಿಗೆ ಮುಖ್ಯಮಂತ್ರಿ ಸೂಚನೆ ನೀಡಿದರು ಎಂದು ಅವರು ತಿಳಿಸಿದರು.

ಆಂಧ್ರಪ್ರದೇಶದ ಚಿತ್ತೂರು ಭಾಗದಲ್ಲಿ ನಮ್ಮ ರಾಜ್ಯದ ಮಾವಿನ ಹಣ್ಣುಗಳ ಪ್ರವೇಶಕ್ಕೆ ತಡೆಯೊಡ್ಡಿರುವ ಕುರಿತು ಆಹಾರ ಸಚಿವ ಕೆ.ಎಚ್.ಮುನಿಯಪ್ಪ ಸಚಿವ ಸಂಪುಟ ಸಭೆಯಲ್ಲಿ ಪ್ರಸ್ತಾವ ಮಾಡಿದರು. ಮುಖ್ಯಮಂತ್ರಿ ಸಿದ್ದರಾಮಯ್ಯ ಈಗಾಗಲೇ, ಆಂಧ್ರಪ್ರದೇಶದ ಮುಖ್ಯಮಂತ್ರಿಗೆ ಪತ್ರ ಬರೆದು ರಾಜ್ಯದ ಮಾವಿನ ಹಣ್ಣು ಪ್ರವೇಶಕ್ಕೆ ತಡೆಯೊಡ್ಡಿರುವುದನ್ನು ತೆರವುಗೊಳಿಸುವಂತೆ ಕೋರಿದ್ದಾರೆ ಎಂದು ಎಚ್.ಕೆ.ಪಾಟೀಲ್ ಹೇಳಿದರು.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News