×
Ad

‘ಮಹಾದಾಯಿ ಯೋಜನೆ’ | ಗೋವಾ ಮುಖ್ಯಮಂತ್ರಿ ಹೇಳಿಕೆ ಆಘಾತಕಾರಿ: ಎಚ್.ಕೆ.ಪಾಟೀಲ್

Update: 2025-07-23 19:52 IST

ಬೆಂಗಳೂರು : ಕೇಂದ್ರ ಸರಕಾರವು ಮಹಾದಾಯಿ ಯೋಜನೆಗೆ ಯಾವುದೇ ಕಾರಣಕ್ಕೂ ಅನುಮೋದನೆ ನೀಡುವುದಿಲ್ಲ ಎಂದು ಕೇಂದ್ರ ಪರಿಸರ ಮತ್ತು ಅರಣ್ಯ ಖಾತೆ ಸಚಿವ ಭೂಪೇಂದ್ರ ಯಾದವ್ ತಮಗೆ ತಿಳಿಸಿದ್ದಾರೆ ಎಂದು ಗೋವಾ ರಾಜ್ಯದ ಮುಖ್ಯಮಂತ್ರಿ ಪ್ರಮೋದ್ ಸಾವಂತ್, ಅಲ್ಲಿನ ವಿಧಾನಸಭೆಯಲ್ಲಿ ಅಧಿಕೃತ ಹೇಳಿಕೆ ನೀಡಿರುವುದು ಕರ್ನಾಟಕಕ್ಕೆ ಆಘಾತ ತಂದಿದೆ ಎಂದು ಕಾನೂನು ಮತ್ತು ಸಂಸದೀಯ ವ್ಯವಹಾರಗಳ ಸಚಿವ ಎಚ್.ಕೆ.ಪಾಟೀಲ್ ತಿಳಿಸಿದರು.

ಬುಧವಾರ ವಿಧಾನಸೌಧದಲ್ಲಿ ತುರ್ತು ಪತ್ರಿಕಾಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಅವರು, ಮಹಾದಾಯಿ ಜಲವಿವಾದವು ಅಂತರರಾಜ್ಯ ಜಲವಿವಾದ ಕಾಯ್ದೆಯನ್ವಯ ಒಂದು ನ್ಯಾಯಾಧೀಕರಣ ರಚನೆಯಾಗಿ ಅದು ಅಂತಿಮ ತೀರ್ಪು ನೀಡಿ, ಆ ತೀರ್ಪು ಕೇಂದ್ರ ಸರಕಾರದ ಗೆಜೆಟ್‍ನಲ್ಲಿ ಪ್ರಕಟಣೆಯಾಗಿ ನ್ಯಾಯಾಧೀಕರಣದ ತೀರ್ಪು ಜಾರಿಗೆ ಬಂದಿದೆ ಎಂದು ಹೇಳಿದರು.

ಕರ್ನಾಟಕವು ಕಳಸಾ-ಬಂಡೂರಿ ಯೋಜನೆಗೆ 7.56 ಟಿ.ಎಂ.ಸಿ ಅಡಿ ನೀರನ್ನು ಮಲಪ್ರಭಾ ಕಣಿವೆಗೆ ತಿರುಗಿಸಿಕೊಳ್ಳಲು ತನ್ನ ಕೋರಿಕೆ ಸಲ್ಲಿಸಿತ್ತು. ಇದರಲ್ಲಿ 3.90 ಟಿ.ಎಂ.ಸಿ ನೀರನ್ನು ಕರ್ನಾಟಕದ ಪಾಲಿಗೆ ಹಂಚಿಕೆ ಮಾಡಿದೆ. ಅಂತರ್ ಕಣಿವೆ ತಿರುಗಿಸುವಿಕೆಯನ್ನು ಕರ್ನಾಟಕದ ಕಡೆಯಿಂದ ಮಾಡಿಕೊಳ್ಳಲು ನ್ಯಾಯಾಧೀಕರಣ ಒಪ್ಪಿದೆ ಎಂದು ಎಚ್.ಕೆ.ಪಾಟೀಲ್ ತಿಳಿಸಿದರು.

ಈ ಯೋಜನೆ ಜಾರಿಗೊಳಿಸಲು ಪ್ರಸ್ತಾವನೆಯನ್ನು ರಾಷ್ಟ್ರೀಯ ಹುಲಿ ಸಂರಕ್ಷಣಾ ಪ್ರಾಧಿಕಾರಕ್ಕೆ ಕರ್ನಾಟಕ ಮಂಜೂರಿಗಾಗಿ/ತೀರುವಳಿಗಾಗಿ (Clearance) ಅರ್ಜಿ ಸಲ್ಲಿಸಿತ್ತು. 10.6 ಹೆಕ್ಟೇರ್ ಅರಣ್ಯ ಭೂಮಿ ಕಾಳಿ ಮತ್ತು ಸಹ್ಯಾದ್ರಿ ಹುಲಿ ಕಾಯ್ದಿಟ್ಟ ಪ್ರದೇಶದಲ್ಲಿ ಬರುತ್ತದೆ ಎಂದು ಗೋವಾ ಆಕ್ಷೇಪಿಸಲು ಪ್ರಾರಂಭಿಸಿತು. ಈ ಹಿನ್ನೆಲೆಯಲ್ಲಿ 2024ರ ಜ.23ರಂದು ರಾಷ್ಟ್ರೀಯ ಹುಲಿ ಸಂರಕ್ಷಣಾ ಪ್ರಾಧಿಕಾರವು ಈ ಅರಣ್ಯ ಪ್ರದೇಶವನ್ನು ಬಳಕೆ ಮಾಡಿಕೊಳ್ಳಲು ಶಿಫಾರಸ್ಸು ಮಾಡಿದೆ ಎಂದು ಅವರು ಮಾಹಿತಿ ನೀಡಿದರು.

ಇದಾದ ನಂತರ ರಾಷ್ಟ್ರೀಯ ವನ್ಯಜೀವಿ ಮಂಡಳಿಯ ಮುಂದೆ 77ನೆ, 79ನೆ ಮತ್ತು 80ನೆ ಸಭೆಗಳಲ್ಲಿ ಈ ವಿಷಯವನ್ನು ನಿರ್ಣಯ ಮಾಡದೆ ವೃಥಾ ಕಾಲಹರಣ ಮುಂದೂಡುತ್ತಾ ಬಂದಿದೆ. ಸರ್ವೋಚ್ಛ ನ್ಯಾಯಾಲಯವು ಕರ್ನಾಟಕದ ಮಹಾದಾಯಿ ಯೋಜನೆಗೆ ತಡೆಹಿಡಿಯಬೇಕೆಂಬುವ ಯಾವುದೇ ಆದೇಶ ನೀಡಿಲ್ಲ ಎಂದು ಎಚ್.ಕೆ.ಪಾಟೀಲ್ ಗಮನ ಸೆಳೆದರು.

2022ರ ಡಿ.29ರಂದು ಕೇಂದ್ರ ಜಲ ಆಯೋಗವು ಕಳಸಾ ಮತ್ತು ಬಂಡೂರಿ ಯೋಜನೆಗಳ ಪರಿಷ್ಕೃತ ವಿವರವಾದ ಯೋಜನಾ ವರದಿಗಳಿಗೆ ಅನುಮೋದನೆ ನೀಡಿದೆ. 2023ರ ಎ.19ರಂದು ಸರ್ವೋಚ್ಛ ನ್ಯಾಯಾಲಯವು ಗೋವಾದ ಮೂಲದಾವೆಯ ಮೇಲಿನ ಮಧ್ಯಂತರ ಅರ್ಜಿಯನ್ನು ವಿಲೇವಾರಿ ಮಾಡಿ, ಕಳಸಾ ಯೋಜನೆಗೆ ತಡೆಯೊಡ್ಡುವಂತೆ ಕರ್ನಾಟಕದ ವಿರುದ್ಧ ತಡೆಯಾಜ್ಞೆ ನೀಡುವಂತೆ ಕೋರಿದ್ದ ಗೋವಾದ ಪ್ರಾರ್ಥನೆಯನ್ನು ವಜಾ ಮಾಡಿದೆ ಎಂದು ಅವರು ತಿಳಿಸಿದರು.

ನ್ಯಾಯಾಂಗದ ಯಾವುದೇ ಅಡೆತಡೆ ಇಲ್ಲ್ಲದಿದ್ದರೂ ಕರ್ನಾಟಕದ ವಿರುದ್ಧ ಮಲತಾಯಿ ಧೋರಣೆ ಅನುಸರಿಸುತ್ತಾ ಕರ್ನಾಟಕದ ನ್ಯಾಯಯುತವಾದ ಮತ್ತು ಕಾನೂನುಬದ್ಧವಾದ ಹಾಗೂ ಸಂವಿಧಾನಾತ್ಮಕ ರಕ್ಷಣೆ ಹೊಂದಿರುವ ಯೋಜನೆಗಳನ್ನು ಅನುಷ್ಠಾನ ಮಾಡುವಲ್ಲಿ ವೃಥಾ ಅಡ್ಡಿ ಮಾಡುತ್ತಿರುವುದು ಒಕ್ಕೂಟ ವ್ಯವಸ್ಥೆಗೆ ಅನ್ಯಾಯಗೊಳಿಸಿದಂತಾಗಿದೆ ಎಂದು ಎಚ್.ಕೆ.ಪಾಟೀಲ್ ಅಸಮಾಧಾನ ವ್ಯಕ್ತಪಡಿಸಿದರು.

ನ್ಯಾಯಾಂಗದಿಂದ ಯಾವುದೇ ಅಡೆತಡೆಯಿಲ್ಲದ ಯೋಜನೆಗಳನ್ನು ಮತ್ತು ಕಾನೂನು ಬದ್ಧವಾಗಿ ಅಂತರ್‍ರಾಜ್ಯ ಜಲವಿವಾದ ಕಾಯ್ದೆಯಡಿಯಲ್ಲಿ ನ್ಯಾಯಾಧೀಕರಣದಿಂದ ಇತ್ಯರ್ಥಗೊಂಡಿರುವ ಯೋಜನೆಗಳನ್ನು ಅನುಷ್ಠಾನಗೊಳಿಸಲು, ಕರ್ನಾಟಕಕ್ಕೆ ಕೇಂದ್ರ ಸರಕಾರವು ತಾನು ನೀಡಬೇಕಾದ ಮಂಜೂರಾತಿಗಳನ್ನು ತಕ್ಷಣ ನೀಡದಿರುವುದು ಜನರ ಆಕ್ರೋಶಕ್ಕೆ ಕಾರಣವಾಗುತ್ತಿದೆ. ಉತ್ತರ ಕರ್ನಾಟಕ ಜನರ ಹಾಗೂ ರೈತರ ಹಿತ ಗಮನಿಸಿ, ಕೇಂದ್ರ ಸರಕಾರ ತಕ್ಷಣ ಅನುಮತಿ ನೀಡಬೇಕು ಎಂದು ಅವರು ಒತ್ತಾಯಿಸಿದರು.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News