ʼಕನ್ನಡಪರ ಹೋರಾಟಗಾರರು, ರೈತರ ಮೇಲಿನ ಪ್ರಕರಣ ವಾಪಸ್ʼ ಪ್ರಕ್ರಿಯೆ ಆರಂಭ : ಕಾನೂನು ಸಚಿವ ಎಚ್.ಕೆ.ಪಾಟೀಲ್
Update: 2025-09-06 20:14 IST
ಬೆಂಗಳೂರು, ಸೆ.6: ಸಚಿವ ಸಂಪುಟ ನಿರ್ಧಾರದ ಮೇಲೆ ಕನ್ನಡಪರ ಹೋರಾಟಗಾರರು, ರೈತ ಹೋರಾಟಗಾರ ಮೇಲಿನ ಪ್ರಕರಣಗಳನ್ನು ಹಿಂಪಡೆಯುವ ಪ್ರಕ್ರಿಯೆ ಆರಂಭಿಸಿದ್ದೇವೆ ಎಂದು ಕಾನೂನು ಸಚಿವ ಎಚ್.ಕೆ.ಪಾಟೀಲ್ ತಿಳಿಸಿದ್ದಾರೆ.
ಶನಿವಾರ ನಗರದಲ್ಲಿ ಸುದ್ದಿಗಾರರ ಪ್ರಶ್ನೆಗಳಿಗೆ ಪ್ರತಿಕ್ರಿಯಿಸಿ ಅವರು, ಕಾನೂನು ಇಲಾಖೆ, ಪೊಲೀಸ್ ಇಲಾಖೆ ಪ್ರಕರಣಗಳನ್ನು ಹಿಂಪಡೆಯುವುದು ಬೇಡವೆಂದು ಅಭಿಪ್ರಾಯ ವ್ಯಕ್ತಪಡಿಸಿದ್ದರು. ಆದರೆ ಸಚಿವ ಸಂಪುಟ ಉಪಸಮಿತಿ ಮತ್ತು ಸಚಿವ ಸಂಪುಟ ಸಭೆಯಲ್ಲಿ ಚರ್ಚೆ ಮಾಡಿ ಎಲ್ಲ ಪ್ರಕರಣಗಳನ್ನು ಹಿಂಪಡೆದಿದ್ದೇವೆ ಎಂದು ಸ್ಪಷ್ಟಪಡಿಸಿದ್ದಾರೆ.
ಸರಕಾರಿ ಅಧಿಕಾರಿ ಮೇಲೆ ಹಲ್ಲೆ ಆಗಿದ್ದರೆ, ಸರಕಾರದ ಆಸ್ತಿ ನಷ್ಟ ಆಗಿದ್ದರೆ, ಅಂತಹ ಪ್ರಕರಣಗಳ ವಿಚಾರಣೆ ವಿಳಂಬವಾಗಿರಬಹುದು. ಆದರೆ, ಕನ್ನಡಕ್ಕಾಗಿ ಹೋರಾಡಿದವರ ಪ್ರಕರಣಗಳನ್ನು ವಾಪಸ್ ತೆಗೆದುಕೊಳ್ಳುತ್ತೇವೆ. ವೈಯಕ್ತಿಕ ಪ್ರಕರಣಗಳ ಬಗ್ಗೆ ನಾನು ನೋಡಿಲ್ಲ, ನೋಡಿ ಮಾತನಾಡುತ್ತೇನೆ ಎಂದು ಎಚ್.ಕೆ.ಪಾಟೀಲ್ ಪ್ರತಿಕ್ರಿಯಿಸಿದ್ದಾರೆ.