ಮಾಹಿತಿ ತಂತ್ರಜ್ಞಾನ ನೀತಿಗೆ ಸಂಪುಟ ಸಭೆ ಅನುಮೋದನೆ : ಎಚ್.ಕೆ.ಪಾಟೀಲ್
ಎಚ್.ಕೆ.ಪಾಟೀಲ್
ಬೆಂಗಳೂರು : ‘ಕರ್ನಾಟಕ ಮಾಹಿತಿ ತಂತ್ರಜ್ಞಾನ ನೀತಿ, 2025-2030’ ಅನ್ನು ಆರ್ಥಿಕ ಇಲಾಖೆಯು ಅನುಮತಿಸಿರುವಂತೆ 5 ವರ್ಷಗಳ ಅವಧಿಯಲ್ಲಿ 445.50 ಕೋಟಿ ರೂ.ಗಳ ಅಂದಾಜು ವೆಚ್ಚದಲ್ಲಿ ಅನುಷ್ಠಾನಗೊಳಿಸಲು ಸಚಿವ ಸಂಪುಟ ಸಭೆ ಅನುಮೋದನೆ ನೀಡಿದೆ ಎಂದು ಕಾನೂನು ಮತ್ತು ಸಂಸದೀಯ ವ್ಯವಹಾರಗಳ ಸಚಿವ ಎಚ್.ಕೆ.ಪಾಟೀಲ್ ತಿಳಿಸಿದರು.
ಗುರುವಾರ ವಿಧಾನಸೌಧದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅಧ್ಯಕ್ಷತೆಯಲ್ಲಿ ನಡೆದ ಸಚಿವ ಸಂಪುಟ ಸಭೆಯ ಬಳಿಕ ಸುದ್ದಿಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಅವರು, ಹೊಸ ನೀತಿಯು ಕೃತಕ ಬುದ್ದಿಮತ್ತೆ (ಎಐ), ಬ್ಲಾಕ್‍ಚೈನ್, ಕ್ವಾಂಟಮ್, ಕಂಪ್ಯೂಟಿಂಗ್, ಹಸಿರು ಐಟಿ ಮತ್ತು ಮುಂದುವರಿದ ಸೈಬರ್ ಭದ್ರತೆಯಂತಹ ಉದಯೋನ್ಮುಖ ತಂತ್ರಜ್ಞಾನಗಳನ್ನು ನಿರ್ಣಾಯಕವಾಗಿ ಉತ್ತೇಜಿಸುತ್ತದೆ ಎಂದು ಹೇಳಿದರು.
ರಾಜ್ಯದಲ್ಲಿ ಈಗಾಗಲೇ ಪ್ರಬಲವಾದ ಐಟಿ ವಲಯದೊಂದಿಗೆ ಕೃತಕ ಬುದ್ದಿಮತ್ತೆ (ಎಐ)ಯನ್ನು ನಿರ್ವಿಘ್ನವಾಗಿ ಒಗ್ಗೂಡಿಸುವ ಗುರಿಯನ್ನು ಈ ನೀತಿ ಹೊಂದಿದ್ದು, ಕರ್ನಾಟಕವನ್ನು ಎಐ-ಸ್ಥಳೀಯ ತಾಣವನ್ನಾಗಿ ರೂಪಿಸುವ ಮೂಲಕ ಹೊಸ ಆರ್ಥಿಕ ಅವಕಾಶಗಳನ್ನು ಅನಾವರಣಗೊಳಿಸಿ, ನಾವೀನ್ಯತೆಗೆ ಉತ್ತೇಜನ ನೀಡುವುದರ ಜೊತೆಗೆ ಸಾರ್ವಜನಿಕ ಸೇವಾ ವಿತರಣೆಯನ್ನು ಸುಧಾರಿಸಲು ನೆರವಾಗಲಿದೆ ಎಂದು ಎಚ್.ಕೆ.ಪಾಟೀಲ್ ತಿಳಿಸಿದರು.
2030ರ ವೇಳೆಗೆ ರಾಜ್ಯದ ಆರ್ಥಿಕತೆಗೆ ಐಟಿ ವಲಯದ ಕೊಡುಗೆಯನ್ನು ಹೆಚ್ಚಿಸುವ ಮತ್ತು ಸಾಫ್ಟ್ ವೇರ್ ರಫ್ತುಗಳನ್ನು ಗಣನೀಯವಾಗಿ ಹೆಚ್ಚಿಸುವ ದಿಟ್ಟ ಗುರಿಗಳೊಂದಿಗೆ, ಈ ನೀತಿಯು ಮೈಸೂರು, ಮಂಗಳೂರು, ಹುಬ್ಬಳ್ಳಿ-ಧಾರವಾಡ, ಬೆಳಗಾವಿ, ತುಮಕೂರು, ಕಲಬುರಗಿ ಮತ್ತು ಶಿವಮೊಗ್ಗದಂತಹ ಉದಯೋನ್ಮುಖ ನಗರಗಳಲ್ಲಿ ಕ್ಲಸ್ಟರ್‍ಗಳನ್ನು ಪೋಷಿಸುವ ಮೂಲಕ ಸಮತೋಲಿತ ಬೆಳವಣಿಗೆಗೆ ಒತ್ತು ನೀಡುತ್ತದೆ ಎಂದು ಅವರು ವಿವರಿಸಿದರು.
ಬಾಹ್ಯಾಕಾಶ ತಂತ್ರಜ್ಞಾನ ನೀತಿ : ಆರ್ಥಿಕ ಸಾಧ್ಯತೆಗಳು, ವೈಜ್ಞಾನಿಕ ಮನೋಭಾವವನ್ನು ಹೆಚ್ಚಿಸುವ ಕ್ಷೇತ್ರದ ಸಾಮರ್ಥ್ಯ ಮತ್ತು ವಲಯ ಎದುರಿಸುತ್ತಿರುವ ಸವಾಲುಗಳನ್ನು ಗಮನದಲ್ಲಿಟ್ಟುಕೊಂಡು, ‘ಕೌಶಲ್ಯ ಅಭಿವೃದ್ಧಿ ಉಪಕ್ರಮಗಳು, ಹೂಡಿಕೆ ಪ್ರೋತ್ಸಾಹಕಗಳು, ಮೂಲಸೌಕರ್ಯದ ಸೃಷ್ಟಿ, ನಾವೀನ್ಯತೆ ಮತ್ತು ಸೌಲಭ್ಯ, ಅಳವಡಿಸಿಕೊಳ್ಳುವಿಕೆ ಮತ್ತು ಅರಿವು’ ಈ ಕಾರ್ಯತಂತ್ರದ ಸ್ತಂಭಗಳನ್ನು ಹೊಂದಿರುವ ಕರ್ನಾಟಕ ಬಾಹ್ಯಾಕಾಶ ನೀತಿ 2025-30ಕ್ಕೆ ಸಚಿವ ಸಂಪುಟ ಅನುಮೋದನೆ ನೀಡಿದೆ ಎಂದು ಅವರು ಹೇಳಿದರು.
ಸ್ಥಳೀಯ ಆರ್ಥಿಕ ವೇಗವರ್ಧನೆ ಕಾರ್ಯಕ್ರಮ(ಲೀಪ್) ಅಡಿಯಲ್ಲಿ ರಕ್ಷಣಾ ತಂತ್ರಜ್ಞಾನ ಮತ್ತು ಕೈಗಾರಿಕೆ 5.0ಗಾಗಿ ಧಾರ್ತಿ ಪ್ರತಿಷ್ಠಾನ, ಐಐಟಿ ಧಾರವಾಡ ಇವರಿಂದ ಶ್ರೇಷ್ಠತಾ ಕೇಂದ್ರಗಳನ್ನು 18 ಕೋಟಿ ರೂ.ಗಳ ಅಂದಾಜು ಮೊತ್ತದಲ್ಲಿ ಐದು ವರ್ಷಗಳ ಅವಧಿಯಲ್ಲಿ ಸ್ಥಾಪಿಸಲು ಆಡಳಿತಾತ್ಮಕ ಅನುಮೋದನೆ.
ಪ್ರಸಕ್ತ ಸಾಲಿನಲ್ಲಿ ಲೀಪ್ ಕಾರ್ಯಕ್ರಮಕ್ಕಾಗಿ 200 ಕೋಟಿ ರೂ. ಅನುದಾನವನ್ನು ಒದಗಿಸಲಾಗಿದೆ. ಈ ಕಾರ್ಯಕ್ರಮಗಳಿಂದ ರಾಜ್ಯಾದ್ಯಂತ ಐದು ಲಕ್ಷ ಹೊಸ ಉದ್ಯೋಗ ಸೃಷ್ಟಿಸುವ ಗುರಿ ಹೊಂದಿದೆ. ಮೈಸೂರು, ಮಂಗಳೂರು, ಉಡುಪಿ-ಮಣಿಪಾಲ್, ಹುಬ್ಬಳ್ಳಿ-ಧಾರವಾಡ, ಬೆಳಗಾವಿ ಮತ್ತು ಕಲಬುರಗಿಗಳಲ್ಲಿ ನವೋದ್ಯಮ ಪರಿಸರ ವ್ಯವಸ್ಥೆಯನ್ನು ಅಭಿವೃದ್ಧಿಪಡಿಸಲಾಗುವುದು ಎಂದು ಅವರು ಹೇಳಿದರು.
ಇನ್ಕ್ಯುಬೇಟರ್‍ಗಳು, ಆಕ್ಸಿಲರೇಟರ್‍ಗಳೂ, ಉತ್ಕೃಷ್ಟತಾ ಕೇಂದ್ರಗಳು ಮತ್ತು ಜಾಗತಿಕ ತಂತ್ರಜ್ಞಾನ ಕೇಂದ್ರಗಳನ್ನು (ಜಿಟಿಸಿ) ಸ್ಥಾಪಿಸಲು ಲೈಫ್ ಸೈಕಲ್ ವಿಧಾನ ಅನುಸರಿಸಲಾಗುವುದು. ಡೀಪ್ ಅಭಿವೃದ್ಧಿಗಾಗಿ 100 ಕೋಟಿ ರೂ. ಆವರ್ಥ ನಿಧಿ ಹಾಗೂ 300 ಕೋಟಿ ರೂ. ಗಳ ಫಂಡ್ ಆಫ್ ಫಂಡ್(ಎಫ್‍ಓಎಫ್) ಸ್ಥಾಪಿಸಲಾಗುವುದು. ಬೆಂಗಳೂರಿನಾಚೆಗಿನ ಪ್ರದೇಶದಲ್ಲಿ 6 ಉತ್ಕೃಷ್ಟತಾ ಕೇಂದ್ರಗಳ ಸ್ಥಾಪನೆ ಮಾಡಲಾಗುವುದು ಅವರು ಹೇಳಿದರು.
ಉತ್ಕೃಷ್ಟತಾ ಕೇಂದ್ರ ಸ್ಥಾಪನೆ: ಐಐಐಟಿ ಧಾರವಾಡದಲ್ಲಿರುವ ಕ್ವಾಂಟಮ್ ಆರ್ಟಿಫಿಶಿಯಲ್ ಇಂಟೆಲಿಜೆನ್ಸ್ ಮತ್ತು ಕಂಪ್ಯೂಟಿಂಗ್‍ನಲ್ಲಿ ಉತ್ಕೃಷ್ಟತಾ ಕೇಂದ್ರವನ್ನು ಐದು ವರ್ಷಗಳ ಅವಧಿಯಲ್ಲಿ ಲೀಪ್ ಅಡಿಯಲ್ಲಿ 18 ಕೋಟಿ ರೂ.ಗಳ ಅನುದಾನದಲ್ಲಿ ಸ್ಥಾಪನೆ ಮತ್ತು ಐಐಐಟಿ ಧಾರವಾಡದ ರಿಸರ್ಚ್ ಪಾರ್ಕ್ ಫೌಂಡೇಶನ್ ಇವರನ್ನು ಉತ್ಕøಷ್ಟತಾ ಕೇಂದ್ರ ಸ್ಥಾಪನೆ ಹಾಗೂ ಅನುಷ್ಠಾನಕ್ಕಾಗಿ ಪಾಲುದಾರರನ್ನಾಗಿ ನಿಗದಿಪಡಿಸಲು ಸಚಿವ ಸಂಪುಟ ನಿರ್ಣಯಿಸಿದೆ ಎಂದು ಎಚ್.ಕೆ.ಪಾಟೀಲ್ ತಿಳಿಸಿದರು.