ʼವಿಶೇಷ ಕಾರ್ಯಪಡೆʼ ಯಾವುದೇ ಪ್ರಕರಣವನ್ನು ದಾಖಲಿಸಿಲ್ಲ : ಗೃಹ ಸಚಿವ ಡಾ.ಜಿ.ಪರಮೇಶ್ವರ್
ಬೆಂಗಳೂರು, ಆ.14: ದಕ್ಷಿಣ ಕನ್ನಡ, ಉಡುಪಿ ಮತ್ತು ಶಿವಮೊಗ್ಗ ಜಿಲ್ಲೆಗಳಲ್ಲಿ ಕೋಮುಗಲಭೆ ಮತ್ತು ಕೊಲೆಗಳು ನಡೆದಿರುವುದನ್ನು ಸರಕಾರವು ಗಂಭೀರವಾಗಿ ಪರಿಗಣಿಸಿದೆ. ಇದನ್ನು ತಡೆಯಲು ವಿಶೇಷ ಕಾರ್ಯಪಡೆ (ಎಸ್‍ಎಎಫ್) ಸ್ಥಾಪನೆ ಮಾಡಲಾಗಿದ್ದು, ಇದುವರೆಗೂ ಯಾವುದೇ ಪ್ರಕರಣ ದಾಖಲಾಗಿಲ್ಲ ಎಂದು ಗೃಹ ಸಚಿವ ಡಾ.ಜಿ.ಪರಮೇಶ್ವರ್ ಸ್ಪಷ್ಟಪಡಿಸಿದ್ದಾರೆ.
ಗುರುವಾರ ವಿಧಾನ ಪರಿಷತ್ತಿನ ಪ್ರಶ್ನೋತ್ತರ ವೇಳೆ ಬಿಜೆಪಿ ಸದಸ್ಯ ಕಿಶೋರ್ ಕುಮಾರ್ ಪುತ್ತೂರ್ ಕೇಳಿದ ಪ್ರಶ್ನೆಗೆ ಉತ್ತರಿಸಿದ ಅವರು, ಕಾರ್ಯಪಡೆ ರಚನೆಯಾದ ನಂತರ ಇದುವರೆಗೆ ಯಾವು ಕೋಮುಗಲಭೆಗಳು ನಡೆದಿಲ್ಲ, ಹೀಗಾಗಿ ಕಾರ್ಯಪಡೆಯು ಯಾವುದೇ ಪ್ರಕರಣಗಳನ್ನು ದಾಖಲಿಸಿಕೊಂಡಿಲ್ಲ. ಎಸ್‍ಎಎಫ್ ರಚನೆಯ ನಂತರ ಶಾಂತಿ ನೆಲೆಸಿದೆ ಎಂದರು.
ಕೋಮು ಗಲಭೆ ಹಾಗೂ ಕೊಲೆಗಳನ್ನು ರೆಗ್ಯುಲರ್ ಪೋಲಿಸರು ತಡೆಯುವುದು ಕಷ್ಟವಾಗುತ್ತದೆ ಎಂದು ತಿಳಿದು ಇತ್ತೀಚೆಗೆ ನಮ್ಮ ಸರಕಾರವು ವಿಶೇಷ ಕಾರ್ಯಪಡೆಯನ್ನು ರಚಿಸಿದೆ. ಭವಿಷ್ಯ ಕೆಲವರಿಗೆ ಇದರ ಉದ್ದೇಶ ಬೇರೆ ಬೇರೆ ರೀತಿಯಲ್ಲಿ ಕಾಣಬಹುದಾಗಿದೆ. ಆದರೆ ಕೊಮುಗಲಭೆಗಳನ್ನು ತಡೆದು ಶಾಂತಿ ನೆಲೆಸುವಂತೆ ಮಾಡುವುದೇ ಕಾರ್ಯಪಡೆಯ ಮುಖ್ಯ ಉದ್ದೇಶವಾಗಿದೆ ಎಂದು ಅವರು ತಿಳಿಸಿದರು.
ದಕ್ಷಿಣ ಕನ್ನಡ ಜಿಲ್ಲೆ ಸೇರಿ ಕರಾವಳಿ ಜಿಲ್ಲೆಗಳಲ್ಲಿ ಒಳ್ಳೆಯ ಸಾಂಪ್ರದಾಯ, ಸಂಸ್ಕೃತಿ, ಶಿಕ್ಷಣ ಇದೆ. ಆದರೆ ಅನೇಕ ಅಹಿತಕರ ಘಟನೆಗಳು ಅಲ್ಲಿ ನಡೆಯುತ್ತಿವೆ. 2023ರ ಚುನಾವಣೆಗೆ ಮುನ್ನ ನಾನು ನಮ್ಮ ಪಕ್ಷದ ಪ್ರಣಾಳಿಕೆಯನ್ನು ಬರೆಯುವಾಗ ರಾಜ್ಯದ ವಿವಿಧ ಭಾಗಗಳಿಗೆ ಭೇಟಿ ನೀಡಿದ್ದೆ. ಮಂಗಳೂರಿಗೆ ಬಂದಾಗ ಅಲ್ಲಿನ ಅನೇಕ ಉದ್ಯಮಿ, ಶಿಕ್ಷಣ ಸಂಸ್ಥೆಗಳ ಮಾಲಕರು ಸೇರಿ ಸಮಾಜದ ಗಣ್ಯರನ್ನು ಭೇಟಿ ಮಾಡಿದ್ದೆ. ಅವರೆಲ್ಲ ‘ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಕೋಮು ಸೌಹಾರ್ಧತೆಯನ್ನು ನೆಲೆಸುವಂತೆ ಮಾಡಿ’ ಎಂದು ಮನವಿ ಮಾಡಿದ್ದರು. ನಮ್ಮ ಸರಕಾರ ಅಧಿಕಾರಕ್ಕೆ ಬಂದಾಗಲೂ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ 2-3 ಕೊಲೆಗಳು ನಡೆಯಿತು. ಹೀಗಾಗಿ ವಿಶೇಷ ಕಾರ್ಯ ಪಡೆ ಮಾಡಲಾಗಿದೆ ಎಂದು ಸಚಿವರು ವಿವರಿಸಿದರು.
ಕಾರ್ಯಪಡೆ ಶಾಶ್ವತವಾಗಿ ಇರಬೇಕು ಎಂದು ಯಾವುದೇ ನಿಯಮಗಳನ್ನು ಹಾಕಿಕೊಂಡಿಲ್ಲ. ಎಲ್ಲಿಯವರೆಗೆ ಇಂತಹ ಘಟನೆಗಳು ಹೆಚ್ಚಾಗಿ ನಡೆಯುತ್ತದೆಯೋ ಅಲ್ಲಿಯವರೆಗೆ ನಾವು ವಿಶೇಷ ಕಾರ್ಯ ಪಡೆಯನ್ನು ಇಡುತ್ತೇವೆ. ಇಂತಹ ಘಟನೆಗಳು ನಡೆಯದಿದ್ದರೆ, ಕಾರ್ಯ ಪಡೆ ತೆಗೆಯುತ್ತೇವೆ ಎಂದು ಅವರು ಹೇಳಿದರು.
ಗೋಹತ್ಯೆ ಮತ್ತು ಗೋ ಕಳ್ಳತನ ಮಾಡುವವರ ವಿರುದ್ಧ ಹಾಗೂ ನೈತಿಕ ಪೋಲಿಸ್‍ಗಿರಿ ಮಾಡುವವರ ವಿರುದ್ಧವೂ ವಿಶೇಷ ಕಾರ್ಯ ಪಡೆಯು ನಿಗಾವಹಿಸುತ್ತದೆ. ಏಕೆಂದರೆ ಈ ಕಾರಣಗಳಿಂದಲೂ ಕೋಮುಗಲಭೆ ಆಗಬಹುದು ಎಂದು ಅವರು ತಿಳಿಸಿದರು.
ವಿಶೇಷ ಕಾರ್ಯ ಪಡೆಯ ಕಾರ್ಯಗಳು :
•ದ್ವೇಷ ಭಾಷಣ, ಉದ್ದೇಕಕಾರಿ ಘಟನೆಗಳು ಮತ್ತು ಕೋಮು ಸಂಬಂಧಿತ ಘಟನೆಗಳಿಗಾಗಿ ಮಾಧ್ಯಮ ಮತ್ತು ಸಾಮಾಜಿಕ ಮಾಧ್ಯಮಗಳನ್ನು ಬಳಸುವವರ ಮೇಲೆ ನಿಗಾ ಇಡುವುದು.
•ಸಾಂಭಾವ್ಯ ಕೋಮು ಹಿಂಸಾಚಾರದ ಬಗ್ಗೆ ಕಣ್ಗಾವಲು ಮತ್ತು ಮಾನವ ಗುಪ್ತಚರ ಮೂಲಕ ಎಚ್ಚರಿಕೆ ವ್ಯವಸ್ಥೆಯನ್ನು ರಚಿಸುವುದು.
•ಪ್ರಾಬಲ್ಯದ ಮೂಲಕ ವಿಶ್ವಾಸ ವೃದ್ಧಿ ಕ್ರಮಗಳನ್ನು ಕೈಗೊಳ್ಳುವುದು.
•ಮೂಲಭೂತೀಕರಣವನ್ನು ಗುರುತಿಸಲು ಮತ್ತು ಮೇಲ್ವಿಚಾರಣೆ ಮಾಡಲು ಕ್ರಮಗಳನ್ನು ಕೈಗೊಳ್ಳುವುದು.
•ಕೋಮು ಗಲಭೆಯ ಸಂದರ್ಭದಲ್ಲಿ ವಿಶೇಷ ಕಾರ್ಯಪಡೆ ಅಧಿಕಾರ/ಸಿಬ್ಬಂದಿಗಳು ಅದನ್ನು ನೇರವಾಗಿ ನಿಯಂತ್ರಿಸುವುದು.