ಎಲ್ಲರಂತೆ ನನಗೂ ಆಕಾಂಕ್ಷೆ ಇದೆ; ಹೈಕಮಾಂಡ್ ತೀರ್ಮಾನಿಸಿದರೆ ರಾಜಕೀಯ ಪದೋನ್ನತಿ : ಗೃಹ ಸಚಿವ ಜಿ.ಪರಮೇಶ್ವರ್
ಜಿ.ಪರಮೇಶ್ವರ್
ಬೆಂಗಳೂರು : ಹೈಕಮಾಂಡ್ ತೀರ್ಮಾನಿಸಿದರೆ ನನಗೂ ರಾಜಕೀಯ ಪದೋನ್ನತಿ ಆಗುತ್ತದೆ. ನಾನು ಈವರೆಗೂ ಆಶಾವಾದಿಯಾಗಿಯೇ ಬದುಕಿದ್ದೇನೆ, ಎಲ್ಲರ ರೀತಿಯಲ್ಲಿ ನನಗೂ ಆಕಾಂಕ್ಷೆ ಇದೆ ಎಂದು ಗೃಹಸಚಿವ ಡಾ.ಜಿ.ಪರಮೇಶ್ವರ್ ತಿಳಿಸಿದ್ದಾರೆ.
ಗುರುವಾರ ಇಲ್ಲಿನ ಸದಾಶಿವನಗರದ ತಮ್ಮ ನಿವಾಸದ ಬಳಿ ‘ರಾಜಕೀಯ ಪದೋನ್ನತಿ ಸಿಗಲಿದೆಯೇ’ ಎಂಬ ಸುದ್ದಿಗಾರರ ಪ್ರಶ್ನೆಗೆ ಪ್ರತಿಕ್ರಿಯಿಸುತ್ತಾ, ಅದು ನಮ್ಮ ಹೈಕಮಾಂಡ್‍ಗೆ ಬಿಟ್ಟ ವಿಚಾರ.ಹೈಕಮಾಂಡ್ ತೀರ್ಮಾನ ಮಾಡಿದರೆ ಆಗುತ್ತದೆ ಎಂದರು.
ನಾನು ಈವರೆಗೂ ಆಶಾವಾದಿಯಾಗಿಯೇ ಬದುಕಿದ್ದೇನೆ, ಅದೇನು ಹೊಸದಾಗಿ ಆಗಬೇಕು ಅಂತೇನಿಲ್ಲ. ಎಲ್ಲರಿಗೂ ಜೀವನದಲ್ಲಿ ಏನೇನೋ ಆಗಬೇಕು ಅಂತೆಲ್ಲ ಇರುತ್ತದೆ. ಮನುಷ್ಯನಿಗೆ ಆಕಾಂಕ್ಷೆ ಅನ್ನುವುದು ಇರಲೇಬೇಕು, ಇಲ್ಲದಿದ್ದರೆ ಆತ ಮನುಷ್ಯನೇ ಅನಿಸಿಕೊಳ್ಳುವುದಿಲ್ಲ. ಎಲ್ಲರಂತೆ ನನಗೂ ಆಕಾಂಕ್ಷೆ ಇದೆ ಎಂದು ಜಿ.ಪರಮೇಶ್ವರ್ ಹೇಳಿದರು.
ʼಧರ್ಮಸ್ಥಳ ಪ್ರಕರಣʼ ತನಿಖೆ ಶೀಘ್ರ ಪೂರ್ಣಗೊಳಿಸುತ್ತೇವೆ :
ಈ ವರ್ಷ ಬಾಕಿ ಇರುವ ಎಸ್ಐಟಿ, ಸಿಐಡಿ ತನಿಖೆಗಳನ್ನು ಪೂರ್ಣಗೊಳಿಸುತ್ತೇವೆ. ಧರ್ಮಸ್ಥಳ ಪ್ರಕರಣ ಸೇರಿದಂತೆ ಯಾವುದೆಲ್ಲ ಬಾಕಿ ಪ್ರಕರಣ ಇವೆಯೋ ಈ ವರ್ಷ ಪೂರ್ಣಗೊಳಿಸುತ್ತೇವೆ" ಎಂದು ಸ್ಪಷ್ಟಪಡಿಸಿದರು.