×
Ad

51 ಲಕ್ಷ ಎಕರೆ ಪ್ರದೇಶದಲ್ಲಿ ತೋಟಗಾರಿಕಾ ಬೆಳೆ ಹಾನಿ: ಸಚಿವ ಚಲುವರಾಯಸ್ವಾಮಿ

Update: 2024-02-13 20:35 IST

ಬೆಂಗಳೂರು: ರಾಜ್ಯದಲ್ಲಿ ತೀವ್ರ ಬರಗಾಲದಿಂದ ಸುಮಾರು 51 ಲಕ್ಷ ಎಕರೆ ಪ್ರದೇಶದಲ್ಲಿ ತೋಟಗಾರಿಕೆ ಬೆಳೆ ಹಾನಿಯಾಗಿದೆ ಎಂಬುದಾಗಿ ಅಂದಾಜಿಸಲಾಗಿದೆ ಎಂದು ಕೃಷಿ ಸಚಿವ ಚಲುವರಾಯಸ್ವಾಮಿ ತಿಳಿಸಿದ್ದಾರೆ.

ಮಂಗಳವಾರ ಪರಿಷತ್ತಿನ ಕಲಾಪದ ಪ್ರಶ್ನೋತ್ತರ ವೇಳೆಯಲ್ಲಿ ಜೆಡಿಎಸ್‍ನ ಶರವಣ ಕೇಳಿದ ಪ್ರಶ್ನೆಗೆ ಉತ್ತರಿಸಿದ ಅವರು, ರಾಷ್ಟ್ರೀಯ ವಿಪತ್ತು ಪರಿಹಾರ ನಿಧಿಯ ಮಾರ್ಗ ಸೂಚಿಯನ್ವಯ ಪ್ರತಿ ಹೆಕ್ಟೇರ್ ತೋಟಗಾರಿಕೆ ಬೆಳೆ ನಷ್ಟಕ್ಕೆ ಮಳೆಯಾಶ್ರಿತ ಬೆಳೆಗಳಿಗೆ 8,500 ರೂ. ನೀರಾವರಿ ಬೆಳೆಗಳಿಗೆ, 17 ಸಾವಿರ ರೂ. ಹಾಗೂ ಬಹುವಾರ್ಷಿಕ ಬೆಳೆಗಳಿಗೆ 22,500 ರೂ.ಪರಿಹಾರ ನಿಗದಿ ಮಾಡಲಾಗಿದೆ ಎಂದರು.

ಕೃಷಿ, ರೇಷ್ಮೆ ಮತ್ತು ತೋಟಗಾರಿಕೆ ಬೆಳೆ ಸೇರಿದಂತೆ ಬೆಳೆ ನಷ್ಟದಿಂದ ನೊಂದ ಪ್ರತಿ ರೈತರಿಗೆ 2000 ರೂ.ನಂತೆ ಇಲ್ಲಿಯವರೆಗೆ 30,24,795 ರೈತರಿಗೆ 573.28 ಕೋಟಿ ರೂ.ಪರಿಹಾರದ ಮೊತ್ತವನ್ನು ಕಂದಾಯ ಇಲಾಖೆಯ ವಿಪತ್ತು ನಿರ್ವಹಣಾ ಕೋಶದ ಮುಖಾಂತರ ವಿತರಿಸಲಾಗಿರುತ್ತದೆ ಎಂದು ಅವರು ಹೇಳಿದರು.

ಕೇಂದ್ರದಿಂದ ಪರಿಹಾರ ನೀಡುವಂತೆ ಮನವಿ ಮಾಡಲಾಗಿದ್ದು, ಪರಿಹಾರದ ಹಣ ಬಂದ ಕೂಡಲೇ ರೈತರಿಗೆ ಹಣ ಬಿಡುಗಡೆ ಮಾಡಲಾಗುವುದು. ಅದು ಒಂದು ವಾರದೊಳಗೆ ರೈತರ ಖಾತೆಗೆ ಹಣ ಸೇರುವಂತೆ ವ್ಯವಸ್ಥೆಯನ್ನು ಮಾಡಲಾಗಿದೆ ಎಂದು ಚಲುವರಾಯಸ್ವಾಮಿ ತಿಳಿಸಿದರು.

ರಾಜ್ಯದ ಒಂದು ಕೋಟಿಗೂ ಹೆಚ್ಚು ರೈತರು ಬೆಳೆಹಾನಿಯಿಂದ ಸಂಕಷ್ಟಕ್ಕೆ ಸಿಲುಕಿದ್ದಾರೆ. ರಾಜ್ಯ ಸರಕಾರ ಕೇಂದ್ರದ ಕಡೆ ಬೊಟ್ಟು ಮಾಡಿ ತೋರಿಸದೇ ಕೂಡಲೇ ರೈತರ ನೆರವಿಗೆ ಧಾವಿಸಿ ಪರಿಹಾರ ನೀಡುವಂತೆ ಶರವಣ ಆಗ್ರಹಿಸಿದರು.

ಪ್ರಶ್ನೆ ಕೇಳುವ ವೇಳೆ ಆಡಳಿತ ಪಕ್ಷದ ಸಚಿವರು, ಸದಸ್ಯರು ನಗುತ್ತಿದ್ದಾಗ ಆಕ್ರೋಶಗೊಂಡ ಶರವಣ ಅವರು ನಗುತ್ತಾ ರಾಜಕೀಯ ಮಾಡಬೇಡಿ ನಮ್ಮ ಅಹವಾಲು ಕೇಳಿ ಇದೇ ಪ್ರಶ್ನೆಯನ್ನು ನಾಲ್ಕೈದು ಬಾರಿ ಕೇಳಿದ್ದೇನೆ ಎಂದಾಗ ಸಭಾಪತಿ ಬಸವರಾಜ ಹೊರಟ್ಟಿ ಅವರು ಸಚಿವರಿಂದ ಸೂಕ್ತ ಉತ್ತರ ಕೊಡಿಸುವ ಭರವಸೆ ನೀಡಿದರು.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News