×
Ad

‘ಕ್ಯಾಶ್‍ಬ್ಯಾಕ್ ಆಫರ್’ ಇದೆ ಎಂದು ನಂಬಿಸಿ ಹೋಟೆಲ್ ಮಾಲಕನಿಗೆ 52 ಸಾವಿರ ರೂ.ವಂಚನೆ: ಪ್ರಕರಣ ದಾಖಲು

Update: 2023-08-16 18:21 IST

ಸಾಂದರ್ಭಿಕ ಚಿತ್ರ

ಬೆಂಗಳೂರು, ಆ.16: ಹೋಟೆಲ್ ಮಾಲಕರೊಬ್ಬರಿಗೆ ಆನ್‍ಲೈನ್ ಪೇಮೆಂಟ್ ಆ್ಯಪ್‍ನಲ್ಲಿ ಕ್ಯಾಶ್‍ಬ್ಯಾಕ್ ಬರುತ್ತದೆ ಎಂದು ನಂಬಿಸಿ 52 ಸಾವಿರ ರೂ. ವಂಚಿಸಿ ದುಷ್ಕರ್ಮಿಗಳು ಪರಾರಿಯಾಗಿರುವ ಘಟನೆ ನಗರದ ರಾಮಮೂರ್ತಿ ನಗರದಲ್ಲಿ ನಡೆದಿರುವುದು ವರದಿಯಾಗಿದೆ.

ರಾಮಮೂರ್ತಿ ನಗರದ ಬಿರಿಯಾನಿ ಹೋಟೆಲ್ ಮಾಲಕ ಪಾರುಲ್ ಷಾ ಮೋಸಹೋದ ವ್ಯಕ್ತಿ. ಪಾರುಲ್ ಷಾ ಅವರು ಹೋಟೆಲ್ ಕೆಲಸದಲ್ಲಿ ನಿರತರಾಗಿದ್ದ ವೇಳೆ, ಇಬ್ಬರು ಅಪರಿಚಿತರು ಹೋಟೆಲ್‍ಗೆ ಬಂದಿದ್ದಾರೆ. ತಮ್ಮನ್ನು ಬ್ಯಾಂಕ್ ಎಕ್ಸಿಕ್ಯೂಟಿವ್ ಎಂದು ಪರಿಚಯಿಸಿಕೊಂಡಿದ್ದಾರೆ.

ಹೊಟೇಲ್ ಮಾಲಕ ಪಾರುಲ್ ಷಾ ಅವರಿಗೆ ಆ್ಯಪ್ ಮೂಲಕ ಆನ್‍ಲೈನ್ ಪೇಮೆಂಟ್ ಮಾಡಿದರೇ ಪ್ರತಿದಿನ 300 ರೂ. ಕ್ಯಾಶ್‍ಬ್ಯಾಕ್ ಬರುತ್ತದೆ ಎಂದು ತಿಳಿಸಿದ್ದಾರೆ. ಇದನ್ನು ನಂಬಿದ ಪಾರುಲ್ ಷಾ ಅವರು ಅಪರಿಚಿತರ ಕೈಗೆ ಆ್ಯಪ್ ಡೌನ್‍ಲೋಡ್ ಮಾಡಲು ತಮ್ಮ ಮೊಬೈಲ್ ಕೊಟ್ಟಿದ್ದಾರೆ. ಜತೆಗೆ ತಮ್ಮ ಬ್ಯಾಂಕ್ ಮಾಹಿತಿ ಸಹ ನೀಡಿದ್ದಾರೆ.

ಅಪರಿಚಿತರು ಮೊಬೈಲ್‍ನಲ್ಲಿ ಆ್ಯಪ್ ಇನ್‍ಸ್ಟಾಲ್ ಆಗಿದೆ ಎಂದು ಹೇಳಿ, ವಾಪಾಸ್ ಮೊಬೈಲ್ ನೀಡಿ ತೆರಳಿದ್ದಾರೆ. ಇದಾದ ಕೆಲವೇ ಗಂಟೆಗಳ ಬಳಿಕ ಪಾರುಲ್ ಷಾ ಅವರ ಬ್ಯಾಂಕ್ ಖಾತೆಯಿಂದ 52 ಸಾವಿರ ರೂ.ಹಣ ವರ್ಗಾವಣೆಯಾಗಿರುವುದು ತಿಳಿದಿದೆ. ಕೂಡಲೇ ಪಾರುಲ್ ಷಾ ಅವರು ರಾಮಮೂರ್ತಿನಗರದ ಪೊಲೀಸ್ ಠಾಣೆಗೆ ಬಂದು ದೂರು ನೀಡಿದ್ದು, ಈ ಬಗ್ಗೆ ಪ್ರಕರಣ ದಾಖಲಾಗಿದ್ದು, ತನಿಖೆ ಕೈಗೊಳ್ಳಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News