ನನಗೆ ಲೋಕಸಭೆ ಚುನಾವಣೆಯಲ್ಲಿ ಸ್ಪರ್ಧಿಸುವ ಆಸಕ್ತಿ ಇಲ್ಲ: ಸತೀಶ್ ಜಾರಕಿಹೊಳಿ
Update: 2024-01-04 20:01 IST
ಸಚಿವ ಸತೀಶ್ ಜಾರಕಿಹೊಳಿ
ಬೆಂಗಳೂರು: ನನಗೆ ಲೋಕಸಭಾ ಚುನಾವಣೆಗೆ ಸ್ಪರ್ಧಿಸಲು ಆಸಕ್ತಿ ಇಲ್ಲ. ಆದರೆ, ಪಕ್ಷದ ಕಾರ್ಯಕರ್ತರಿಗೆ ಈ ಬಾರಿ ಅವಕಾಶ ಸಿಗಲಿದೆ ಎಂದು ಲೋಕೋಪಯೋಗಿ ಸಚಿವ ಸತೀಶ್ ಜಾರಕಿಹೊಳಿ ತಿಳಿಸಿದ್ದಾರೆ.
ಗುರುವಾರ ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಬೆಳಗಾವಿ, ಚಿಕ್ಕೋಡಿ ಎರಡು ಲೋಕಸಭಾ ಕ್ಷೇತ್ರದಲ್ಲೂ ನಾನು, ನಮ್ಮ ಕುಟುಂಬದ ಸದಸ್ಯರು ಯಾರೂ ಸ್ಪರ್ಧಿಸುವುದಿಲ್ಲ. ಈ ಬಾರಿ ಪಕ್ಷದ ಕಾರ್ಯಕರ್ತರಿಗೆ ಅವಕಾಶ ಸಿಗಲಿದೆ ಎಂದರು.
ಇನ್ನೂ, ರಾಮಮಂದಿರ ಉದ್ಘಾಟನೆ ‘ಒನ್ ಮ್ಯಾನ್ ಶೋ’ ಆಗುತ್ತಿದೆ. ಕಾರ್ಯಕ್ರಮಕ್ಕೆ ಎಲ್ಲ ರಾಜಕೀಯ ಪಕ್ಷಗಳಿಗೆ ಆಹ್ವಾನ ಕೊಡಬೇಕು. ಆದರೆ, ಯಾವ ಮುಖ್ಯಮಂತ್ರಿಗೂ ಆಹ್ವಾನ ಕೊಟ್ಟಿಲ್ಲ. ಉತ್ತರ ಪ್ರದೇಶ ಮುಖ್ಯಮಂತ್ರಿ ಹೊರತುಪಡಿಸಿದರೆ ಬೇರೆ ಯಾರಿಗೂ ಅಧಿಕೃತವಾಗಿ ಆಹ್ವಾನ ಕೈಸೇರಿಲ್ಲ. ಅದು ಅಲ್ಲದೆ, ನಮ್ಮ ಊರಿನಲ್ಲಿ ರಾಮಮಂದಿರ ಇದೆ, ಅಲ್ಲೇ ಪೂಜೆ ಮಾಡುತ್ತೇನೆ ಎಂದು ಅವರು ಹೇಳಿದರು.