×
Ad

ನನಗೆ ಯಾವ ಆತುರವೂ ಇಲ್ಲ, ಎಲ್ಲವನ್ನೂ ಪಕ್ಷ ತೀರ್ಮಾನಿಸುತ್ತದೆ: ಡಿ.ಕೆ. ಶಿವಕುಮಾರ್

Update: 2025-11-28 19:46 IST

 ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ 

ಬೆಂಗಳೂರು: ‘ನನಗೆ ಯಾವ ಆತುರವೂ ಇಲ್ಲ, ಎಲ್ಲವನ್ನೂ ಪಕ್ಷ ತೀರ್ಮಾನಿಸುತ್ತದೆ’ ಎಂದು ಕೆಪಿಸಿಸಿ ಅಧ್ಯಕ್ಷರೂ ಆಗಿರುವ ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್, ನಾಯಕತ್ವ ಬದಲಾವಣೆ ಸಂಬಂಧ ಪ್ರತಿಕ್ರಿಯೆ ನೀಡಿದ್ದಾರೆ.

ಶುಕ್ರವಾರ ನಗರದ ಅರಮನೆ ಮೈದಾನದ ಬಳಿ ಸುದ್ದಿಗಾರರು ನಿಮ್ಮ ಪಕ್ಷದ ಬಹಳಷ್ಟು ಕಾರ್ಯಕರ್ತರು ನಿಮ್ಮನ್ನು ಮುಖ್ಯಮಂತ್ರಿ ಸ್ಥಾನದಲ್ಲಿ ನೋಡಲು ಬಯಸುತ್ತಿರುವ ಕುರಿತು ಕೇಳಿದ ಪ್ರಶ್ನೆಗೆ ಅವರು ಈ ಮೇಲಿನಂತೆ ಪ್ರತಿಕ್ರಿಯಿಸಿದರು. ‘ನೀವು ಹಾಗೂ ಮುಖ್ಯಮಂತ್ರಿ ದಿಲ್ಲಿಗೆ ಹೋಗುತ್ತೀರಾ?’ ಎಂದು ಕೇಳಿದ ಪ್ರಶ್ನೆಗೆ ಉತ್ತರಿಸಿದ ಶಿವಕುಮಾರ್, ‘ನಾನು ದಿಲ್ಲಿಗೆ ಹೋಗಬಹುದು. ಅಲ್ಲಿ ನನಗೆ ಸಾಕಷ್ಟು ಕೆಲಸಗಳಿವೆ. ಸಂಸತ್ ಚಳಿಗಾಲದ ಅಧಿವೇಶನ ಆರಂಭವಾಗಲಿದ್ದು, ನಾನು ಸಂಸದರನ್ನು ಭೇಟಿ ಮಾಡಬೇಕಿದೆ’ ಎಂದು ತಿಳಿಸಿದರು.

ದೇವರ ಕೃಪೆಯಿಂದ ಮೇಕೆದಾಟು ಯೋಜನೆ ಸಂಬಂಧ ನ್ಯಾಯಾಲಯದಲ್ಲಿ ನಮಗೆ ನ್ಯಾಯ ದೊರೆತಿದ್ದು, ಈ ಯೋಜನೆ ಪರಿಷ್ಕೃತ ಡಿಪಿಆರ್ ಸಿದ್ಧತೆಗೆ ಸೂಚಿಸಿದ್ದೇವೆ. ಮಹದಾಯಿ, ಕೃಷ್ಣಾ, ಎತ್ತಿನಹೊಳೆ ಸೇರಿದಂತೆ ನಮ್ಮ ಸಾಕಷ್ಟು ಯೋಜನೆಗಳ ಬಗ್ಗೆ ಸಂಸದರ ಜೊತೆ ಚರ್ಚೆ ಮಾಡುವುದಿದೆ. ಸರ್ವಪಕ್ಷ ಸಭೆ ಕರೆಯುವ ಬಗ್ಗೆ ಮುಖ್ಯಮಂತ್ರಿ ಜತೆ ಚರ್ಚೆ ಮಾಡುತ್ತೇನೆ ಎಂದು ಶಿವಕುಮಾರ್ ಹೇಳಿದರು.

ಮೆಕ್ಕೆಜೋಳ ವಿಚಾರವಾಗಿ ಮನವಿ:

ಮೆಕ್ಕೆಜೋಳ ಬೆಲೆ ವಿಚಾರದಲ್ಲಿ ಕೇಂದ್ರ ಸರಕಾರ ಬೆಂಬಲ ನೀಡುತ್ತಿಲ್ಲ. ಮೆಕ್ಕೆಜೋಳಕ್ಕೆ 2400 ರೂ. ಬೆಲೆ ನಿಗದಿ ಮಾಡಿರುವುದು ಕೇಂದ್ರ ಸರಕಾರ. ಮಾರುಕಟ್ಟೆಯಲ್ಲಿ ಸಿಗುತ್ತಿರುವುದು 1600 ರಿಂದ 1800 ರೂ.ಮಾತ್ರ. ಕೇಂದ್ರ ಸರಕಾರ ರೈತರಿಗೆ ನೆರವು ನೀಡುತ್ತಿಲ್ಲ. ಹೀಗಾಗಿ ನಾವು ಹೋಗಿ ಮನವಿ ಸಲ್ಲಿಸಬೇಕಿದೆ. ನಾವು ಎಲ್ಲ ಕಾರ್ಖಾನೆ ಮಾಲಕರ ಸಭೆ ಕರೆಯಲು ತೀರ್ಮಾನಿಸಿದ್ದೇವೆ. ಕೇಂದ್ರ ಸರಕಾರ ಮೆಕ್ಕೆಜೋಳ ಖರೀದಿ ಮಾಡಬೇಕು ಎಂದು ಮನವಿ ಸಲ್ಲಿಸುತ್ತೇವೆ ಎಂದು ಅವರು ತಿಳಿಸಿದರು.

ದಿಲ್ಲಿಗೆ ಹೋದಾಗ ಕಾಂಗ್ರೆಸ್ ಪಕ್ಷದ ಕಚೇರಿಗೆ ಹೋಗುತ್ತೀರಾ ಎಂದು ಕೇಳಿದ ಪ್ರಶ್ನೆಗೆ ಉತ್ತರಿಸಿದ ಉಪ ಮುಖ್ಯಮಂತ್ರಿ, ಅದು ದಿಲ್ಲಿಯಲ್ಲಿರುವ ನಮ್ಮ ಪಾಲಿನ ದೇವಾಲಯ. ದಿಲ್ಲಿ ಕಚೇರಿ ನಮಗೆ ಮಾರ್ಗದರ್ಶನ ನೀಡಲಿದೆ ಎಂದು ತಿಳಿಸಿದರು.

ನನ್ನ ಸಮುದಾಯ ಕಾಂಗ್ರೆಸ್:

ನಿಮ್ಮನ್ನು ಮುಖ್ಯಮಂತ್ರಿ ಮಾಡುವಂತೆ ಒಕ್ಕಲಿಗ ಸಮುದಾಯ ನಿಮ್ಮ ಪರವಾಗಿ ನಿಂತಿದೆಯಲ್ಲ ಎಂದು ಕೇಳಿದ ಪ್ರಶ್ನೆಗೆ ಉತ್ತರಿಸಿದ ಶಿವಕುಮಾರ್, ನಾನು ಸಮುದಾಯದ ದೃಷ್ಟಿಕೋನದ ಬಗ್ಗೆ ಚರ್ಚೆ ಮಾಡುವುದಿಲ್ಲ. ಪಕ್ಷ ನನಗೆ ಮುಖ್ಯ. ಕಾಂಗ್ರೆಸ್ ನನ್ನ ಸಮುದಾಯ. ನಾನು ಒಕ್ಕಲಿಗ ಸಮುದಾಯದಿಂದ ಬಂದಿದ್ದು, ಆ ಸಮುದಾಯದ ಜನ ನನ್ನನ್ನು ಪ್ರೀತಿಸಬಹುದು. ನನ್ನ ಬದ್ಧತೆ ಹಿಂದುಳಿದ, ಪರಿಶಿಷ್ಟ, ಅಲ್ಪಸಂಖ್ಯಾತ ಸೇರಿದಂತೆ ಸಮಾಜದ ಎಲ್ಲ ಸಮುದಾಯಗಳ ಪರವಾಗಿದೆ. ಒಕ್ಕಲಿಗರೂ ಕೂಡ ಹಿಂದುಳಿದ ವರ್ಗದ ಸಮುದಾಯದವರೇ ಎಂದರು.

ನಿಮ್ಮ ಮುಂಬೈ ಭೇಟಿಯನ್ನು ಬಿಜೆಪಿ ಬೇರೆ ರೀತಿ ಅರ್ಥೈಸುತ್ತಿದೆಯಲ್ಲ ಎಂದು ಕೇಳಿದ ಪ್ರಶ್ನೆಗೆ ಉತ್ತರಿಸಿದ ಅವರು, ನಾನು ಬಿಜೆಪಿಯ ಅರ್ಥಕ್ಕೆ ಪ್ರತಿಕ್ರಿಯೆ ನೀಡುವುದಿಲ್ಲ. ನನ್ನ ಆತ್ಮೀಯ ಸ್ನೇಹಿತ ಅನಾರೋಗ್ಯದಿಂದ ಆಸ್ಪತ್ರೆಗೆ ದಾಖಲಾಗಿದ್ದು, ಅವರ ಆರೋಗ್ಯ ವಿಚಾರಿಸಲು ಮುಂಬೈಗೆ ಹೋಗಿದ್ದೆ. ಅನೇಕ ವಿಚಾರಗಳಲ್ಲಿ ಅವರು ನನಗೆ ಸಹಾಯ ಮಾಡಿದ್ದಾರೆ. ಒಂದು ಗಂಟೆ ಅಲ್ಲಿದ್ದು, ವಾಪಸ್ಸಾಗಿದ್ದೇನೆ ಎಂದು ತಿಳಿಸಿದರು.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News