×
Ad

ನಾನು ತಪ್ಪು ಮಾಡಿದ್ದೇನೆ, ನೀವೂ ಅದೇ ತಪ್ಪು ಮಾಡಬೇಡಿ: ಸದನದ ಸದಸ್ಯರಿಗೆ ಸಲಹೆ ನೀಡಿದ ಸ್ಪೀಕರ್ ಖಾದರ್

Update: 2023-12-07 20:25 IST

ಬೆಳಗಾವಿ, (ಸುವರ್ಣ ವಿಧಾನಸೌಧ): ‘ನಾನು ಸದನದಲ್ಲಿ ಸದಸ್ಯನಾಗಿದ್ದಾಗ ತಪ್ಪು ಮಾಡಿದ್ದೇನೆ. ವಿಧಾನಸಭಾ ಸ್ಪೀಕರ್ ಪೀಠದಲ್ಲಿ ಕುಳಿತಿದ್ದಾಗ ಅದರ ಅರಿವು ನನಗಾಗಿದೆ. ಹೀಗಾಗಿ ನೀವು ಅದೇ ತಪ್ಪು ಮಾಡಬೇಡಿ ಎಂದು ಸ್ಪೀಕರ್ ಯು.ಟಿ.ಖಾದರ್, ಸದನದ ಸದಸ್ಯರಿಗೆ ಸಲಹೆ ನೀಡದ ಘಟನೆ ನಡೆಯಿತು.

ಗುರುವಾರ ವಿಧಾನಸಭೆ ಶೂನ್ಯವೇಳೆಯಲ್ಲಿ ಆಡಳಿತ ಮತ್ತು ವಿಪಕ್ಷ ಸದಸ್ಯರು ಇಷ್ಟಬಂದಂತೆ ಎದ್ದು ನಿಂತು ಮಾತನಾಡುತ್ತಿದ್ದ ವೇಳೆ ಮಧ್ಯಪ್ರವೇಶಿಸಿದ ಸ್ಪೀಕರ್ ಖಾದರ್, ‘ನಿನ್ನೆ ಶೂನ್ಯವೇಳೆಯಲ್ಲಿ ಕೇವಲ ಎರಡೂ ವಿಷಯಗಳಿಗೆ ಸಾಕಷ್ಟು ಸಮಯ ವ್ಯರ್ಥವಾಯಿತು. ಇದರಿಂದ ರಾಜ್ಯದ ಜನರಿಗೆ ಏನೂ ಪ್ರಯೋಜನವಾಗಲಿಲ್ಲ’ ಎಂದು ಬೇಸರ ವ್ಯಕ್ತಪಡಿಸಿದರು.

‘ಸದನದಲ್ಲಿ ನಮ್ಮ ಟಿಆರ್‌ಪಿ(ಪ್ರಚಾರ) ಹೆಚ್ಚಾಗುತ್ತಿದೆ. ಆದರೆ, ರಾಜ್ಯದ ಜನತೆಯ ಟಿಆರ್‌ಪಿ ಕೆಳಗೆ ಕುಸಿಯುತ್ತಿದೆ. ತಮ್ಮ ತಮ್ಮ ರಾಜಕೀಯ ಹಾಗೂ ವೈಯಕ್ತಿಕ ಹಿತಾಸಕ್ತಿಗಳನ್ನು ಬದಿಗಿರಿಸಿ ರಾಜ್ಯದ ಜನತೆಯ ಒಳಿತಿಗೆ ನಾವೆಲ್ಲರೂ ಕೆಲಸ ಮಾಡಬೇಕು. ಸದನದ ಅಮೂಲ್ಯ ಸಮಯ ವ್ಯರ್ಥವಾಗದಂತೆ ಎಲ್ಲರೂ ಎಚ್ಚರಿಕೆ ವಹಿಸಬೇಕು’ ಎಂದು ಖಾದರ್ ಸಲಹೆ ನೀಡಿದರು.

‘ಈ ಹಿಂದೆ ನಾನು ಶಾಸಕನಾಗಿ ಕೆಳಗಿದ್ದಾಗ ಇದೇ ತಪ್ಪನ್ನು ಮಾಡಿದ್ದೇನೆ. ಪದೇ ಪದೇ ಎದ್ದು ನಿಂತು ಎಲ್ಲಕ್ಕೂ ಪ್ರಶ್ನೆ ಮಾಡುವುದನ್ನು ಮಾಡುತ್ತಿದ್ದೇ. ಆದರೆ, ವಿಧಾನಸಭಾ ಸ್ಪೀಕರ್ ಆದ ಮೇಲೆ ಅದರ ಅರಿವು ನನಗಾಗಿದೆ. ನಾನು ಆಗ ತಪ್ಪು ಮಾಡುತ್ತಿದ್ದೇ ಎಂದು ಈಗ ನನಗೆ ಅನ್ನಿಸಿದೆ. ಹೀಗಾಗಿ ನೀವು ಯಾರೂ ಆ ತಪ್ಪು ಮಾಡಬೇಡಿ’ ಎಂದು ಖಾದರ್, ಸದಸ್ಯರಿಗೆ ಬುದ್ದಿವಾದ ಹೇಳಿದರು.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News