×
Ad

ದಕ್ಷಿಣ ಕನ್ನಡ ಜಿಲ್ಲೆಯ ಶಾಂತಿಗಾಗಿ ಎಲ್ಲರ ಸಲಹೆ ಪರಿಗಣಿಸುತ್ತೇನೆ : ಗೃಹ ಸಚಿವ ಜಿ.ಪರಮೇಶ್ವರ್

Update: 2025-07-10 19:01 IST

ಡಾ.ಜಿ.ಪರಮೇಶ್ವರ್

ಬೆಂಗಳೂರು : ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಶಾಂತಿ ಸೌಹಾರ್ದತೆಯ ಹಿತದೃಷ್ಟಿಯಿಂದ ಎಲ್ಲರೂ ನೀಡಿರುವ ಉತ್ತಮ ಸಲಹೆಗಳನ್ನು ಪರಿಗಣಿಸುತ್ತೇನೆ ಎಂದು ಗೃಹ ಸಚಿವ ಡಾ.ಜಿ.ಪರಮೇಶ್ವರ್ ಹೇಳಿದ್ದಾರೆ.

ಗುರುವಾರ ಸದಾಶಿವನಗರದ ಗೃಹಕಚೇರಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಮಳೆಗಾಲ ಮುಗಿದ ನಂತರ ಎಲ್ಲ ಧಾರ್ಮಿಕ ಮುಖಂಡರನ್ನೊಳಗೊಂಡತೆ ದೊಡ್ಡಮಟ್ಡದ ಸಭೆ ಮಾಡಲು ಸಲಹೆ ಕೊಟ್ಟಿದ್ದಾರೆ. ಕಟ್ಟುನಿಟ್ಟಿನ ಕಾನೂನು ಪಾಲನೆ ಮಾಡುವುದು. ಸೋಷಿಯಲ್ ಮೀಡಿಯಾದಲ್ಲಿ ಪೋಸ್ಟಿಂಗ್ ಮಾಡುವುದನ್ನು ನಿಲ್ಲಿಸಬೇಕು ಎಂದು ಕರೆ ಕೊಡಲಾಗಿದೆ. ಇದನ್ನು ಮುಂದುವವರಿಸಿದರೆ ಕ್ರಮ ತೆಗೆದುಕೊಳ್ಳುತ್ತೇವೆ ಎಂದರು.

ದಕ್ಷಿಣ ಕನ್ನಡ ಜಿಲ್ಲೆಯನ್ನು ಕೋಮು ಸೂಕ್ಷ್ಮತೆ ಜಿಲ್ಲೆ ಎನ್ನುವುದು ಬೇಡ. ಕೆಲವು ಘಟನೆಗಳು, ಅಪರಾಧಗಳಿಂದ ಹೀಗೆಲ್ಲ ಆಗುತ್ತಿದೆ ಎಂಬುದನ್ನು ತಿಳಿಸಿದ್ದಾರೆ. ಅದನ್ನು ಗಮನದಲ್ಲಿಟ್ಟುಕೊಳ್ಳುತ್ತೇವೆ. ಡ್ರಗ್ಸ್ ನಿಯಂತ್ರಣದ ಬಗ್ಗೆ ಸಲಹೆ ಕೊಟ್ಟಿದ್ದಾರೆ. ಡ್ರಗ್ಸ್ ಚಟುವಟಿಕೆಗಳನ್ನು ಮಟ್ಟಹಾಕಲು ಕಟ್ಟುನಿಟ್ಟಿನ ಕ್ರಮ ತೆಗೆದುಕೊಂಡಿದ್ದೇವೆ. ಮರಳು ಮಾಫಿಯಾ ಬಗ್ಗೆ ಗಮನಕ್ಕೆ ತಂದಿದ್ದಾರೆ. ಲ್ಯಾಟರೈಟ್ ಮಣ್ಣಿನ ಮಾಫಿಯಾ ಅಗುತ್ತಿದೆ. ಈ ಬಗ್ಗೆ ಸಂಬಂಧಪಟ್ಟ ಇಲಾಖೆಯ ಅಧಿಕಾರಿಗಳಿಗೆ ತಿಳಿಸಿದ್ದೇವೆ ಎಂದು ವಿವರಿಸಿದರು.

ಶಾಸಕರುಗಳು ಹೇಳಿಕೆಗಳನ್ನು ನೀಡುತ್ತಿರುವ ಕುರಿತು ಪ್ರತಿಕ್ರಿಯಿಸಿದ ಅವರು, ಸಿಎಂ ಬದಲಾವಣೆ ವಿಚಾರದ ಕುರಿತು ಪದೇಪದೇ ಚರ್ಚೆಯಾಗುವುದು, ಹೇಳಿಕೆಗಳನ್ನು ನೀಡುವುದು ಆಗಬಾರದು. ಆಡಳಿತದಲ್ಲಿ ಯಾವುದೇ ರೀತಿಯ ತೊಂದರೆ ಇಲ್ಲ. ಆಡಳಿತ ನಡೆಯುತ್ತಿದೆ. ಮುಖ್ಯಮಂತ್ರಿಯವರು ಆಡಳಿತ ಮಾಡುತ್ತಿದ್ದಾರೆ ಎಂದರು.

ದಲಿತ ಅಧಿಕಾರಿಗಳಿಗೆ ಪ್ರಾತಿನಿಧ್ಯ ಕಡಿಮೆಯಾಗಿದೆ ಎಂಬುದರ ಕುರಿತ ಪ್ರತಿಕ್ರಿಯಿಸಿ, ನನ್ನ ಬಳಿ ಆ ರೀತಿಯ ಮನವಿ ಬಂದಿಲ್ಲ. ಈ ಕುರಿತು ಯಾರು ನನ್ನ ಬಳಿ ಮಾತನಾಡಿಲ್ಲ. ಅಂತದ್ದು ಏನಾದರು ಇದ್ದರೆ, ಕಾನೂನು ಚೌಕಟ್ಟಿನಲ್ಲಿ, ಮೀಸಲಾತಿ ಚೌಕಟ್ಟಿನಲ್ಲಿ ಸರಿಪಡಿಸಲು ಸರಕಾರದ ಹಂತದಲ್ಲಿ ಮಾಡಲು ಒತ್ತಾಯ ಮಾಡುತ್ತೇನೆ ಎಂದು ಅವರು ಹೇಳಿದರು.

ಒಳಮೀಸಲಾತಿ ಉದ್ದೇಶದಿಂದ ನೇಮಕಾತಿಯನ್ನು ನಿಲ್ಲಿಸಿದ್ದಾರೆ. ಒಳ ಮೀಸಲಾತಿ ಸಮಸ್ಯೆ ಬಗೆಹರಿದ ತಕ್ಷಣ ನೇಮಕಾತಿ ಪ್ರಾರಂಭವಾಗುತ್ತದೆ. ಆ ಸಂದರ್ಭದಲ್ಲಿ ಒಳಮೀಸಲಾತಿ ಚೌಕಟ್ಟಿನಲ್ಲಿ ಯಾರಿಗೆ ಎಷ್ಟೆಷ್ಟು ಮೀಸಲಾತಿ ಎಂಬುದು ನಿರ್ಧಾರ ಆಗುತ್ತದೆ. ಅದರ ಪ್ರಕಾರ ಮಾಡುತ್ತಾರೆ ಎಂದು ಅವರು ತಿಳಿಸಿದರು.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News