×
Ad

ಪಕ್ಷ ಹೇಳಿದಂತೆ ಕೇಳುವೆ, ಪಕ್ಷದ ಶಿಸ್ತಿನ ಸಿಪಾಯಿಯಾಗಿ ಇರುವುದು ನನ್ನ ಕರ್ತವ್ಯ: ಡಿಸಿಎಂ ಡಿ.ಕೆ.ಶಿವಕುಮಾರ್

"ಎಲ್ಲರ ಶ್ರಮಕ್ಕೆ ಫಲ ಇದ್ದೇ ಇರುತ್ತದೆ"

Update: 2026-02-13 21:08 IST

ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ (Photo: X)

ಬೆಂಗಳೂರು: ನಾನು ಸದಾ ಭರವಸೆ ಮೇಲೆ ಬದುಕುವವನು. ಎಲ್ಲರ ಶ್ರಮಕ್ಕೆ ಫಲ ಇದ್ದೇ ಇರುತ್ತದೆ. ಎಲ್ಲಿ ಶ್ರಮ ಇದೆಯೋ ಅಲ್ಲಿ ಫಲವಿದೆ. ಎಲ್ಲಿ ಭಕ್ತಿ ಇದೆಯೋ ಅಲ್ಲಿ ಭಗವಂತನಿದ್ದಾನೆ’ ಎಂದು ಕೆಪಿಸಿಸಿ ಅಧ್ಯಕ್ಷರೂ ಆಗಿರುವ ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಪ್ರತಿಕ್ರಿಯೆ ನೀಡಿದ್ದಾರೆ.

ಶುಕ್ರವಾರ ಇಲ್ಲಿನ ಭಾರತೀಯ ವಿಜ್ಞಾನ ಸಂಸ್ಥೆ ಆವರಣದಲ್ಲಿ ಹಾಗೂ ತಿಪಟೂರಿನಲ್ಲಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು, ‘ನಾಯಕತ್ವ ಬದಲಾವಣೆ ಸಂಬಂಧ ಹೈಕಮಾಂಡ್ ಆಹ್ವಾನದ ಬಗ್ಗೆ ನನಗೆ ಗೊತ್ತಿಲ್ಲ, ಈ ಬಗ್ಗೆ ಕಾಲವೇ ಉತ್ತರ ನೀಡಲಿದೆ. ಗೃಹ ಸಚಿವ ಡಾ.ಪರಮೇಶ್ವರ್ ಹೇಳಿಕೆ ಹಿನ್ನೆಲೆಯಲ್ಲಿ ಅವರಿಗೆ ನಾನು ಶುಭ ಕೋರುತ್ತೇನೆ’ ಎಂದರು.

ನನಗೆ ಮಾಹಿತಿ ಇಲ್ಲ: ‘ಶಾಸಕರು ವಿದೇಶ ಪ್ರವಾಸ ವಿಚಾರವಾಗಿ ನಾನು ವರದಿ ಪಡೆದಿಲ್ಲ. ಇದರ ಬಗ್ಗೆ ತಿಳಿಯುವ ಪ್ರಯತ್ನವನ್ನು ಮಾಡಿಲ್ಲ. ಈ ಬಗ್ಗೆ ನಾನು ಹೈಕಮಾಂಡ್ ನಾಯಕರ ಜತೆ ಮಾತನಾಡಿಲ್ಲ. ಪ್ರವಾಸ ಹೋಗುವವರು ನನ್ನ ಜತೆಯೂ ಈ ಬಗ್ಗೆ ಮಾತನಾಡಿಲ್ಲ, ಪ್ರವಾಸ ಕಳುಹಿಸುತ್ತಿರುವವರು ನನ್ನ ಜತೆ ಚರ್ಚೆ ಮಾಡಿಲ್ಲ ಎಂದರು.

ಪಕ್ಷ ಹೇಳಿದಂತೆ ಕೇಳುವೆ: ‘ನಾನು ಪಕ್ಷ ಹೇಳಿದಂತೆ ಕೇಳುತ್ತೇನೆ. ಅದರ ಹೊರತಾಗಿ ಬೇರೆ ಯಾವುದೇ ವಿಚಾರದಲ್ಲಿ ತಲೆ ಹಾಕುವುದಿಲ್ಲ. ಶಾಸಕರು ಏನಾದರೂ ಹೇಳಿದರೆ ಹೈಕಮಾಂಡ್ ನಾಯಕರು ಹಾಗೂ ಸಿಎಂ ನೋಡಿಕೊಳ್ಳುತ್ತಾರೆ. ಅದರಲ್ಲಿ ನಾನು ಹಸ್ತಕ್ಷೇಪ ಮಾಡುವುದಿಲ್ಲ. ಪಕ್ಷದ ಹಾಗೂ ಸರಕಾರದ ಶಿಸ್ತಿನ ಸಿಪಾಯಿಯಾಗಿ ಇರುವುದು ನನ್ನ ಕರ್ತವ್ಯ ಎಂದು ಶಿವಕುಮಾರ್ ಸ್ಪಷ್ಟಪಡಿಸಿದರು.

ರಾಜ್ಯದ ಕಾಂಗ್ರೆಸ್ ನೇತೃತ್ವದ ಸರಕಾರ ಒಂದು ಸಾವಿರ ದಿನಗಳು ಪೂರ್ಣಗೊಳಿಸಿದ ಹಿನ್ನೆಲೆಯಲ್ಲಿ ನಾಳೆ(ಫೆ.14) ಹಾವೇರಿ ಕಾರ್ಯಕ್ರಮದಲ್ಲಿ ‘ಭೂಮಿ ಗ್ಯಾರಂಟಿ ಯೋಜನೆ’ ಹಮ್ಮಿಕೊಂಡಿದ್ದೇವೆ ಎಂದು ಶಿವಕುಮಾರ್ ತಿಳಿಸಿದರು.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News