×
Ad

ಸಿಎಸ್‌ ವಿರುದ್ಧ ರವಿಕುಮಾರ್ ಅವಹೇಳನಕಾರಿ ಹೇಳಿಕೆ : ಐಎಎಸ್ ಅಧಿಕಾರಿಗಳ ಸಂಘ ಖಂಡನೆ

Update: 2025-07-03 20:13 IST

ಬೆಂಗಳೂರು : ಕರ್ನಾಟಕ ಸರಕಾರದ ಮುಖ್ಯ ಕಾರ್ಯದರ್ಶಿ ವಿರುದ್ಧ ಎಂಎಲ್‌ಸಿ ಎನ್.ರವಿಕುಮಾರ್ ನೀಡಿರುವ ಅವಹೇಳನಕಾರಿ ಹೇಳಿಕೆಯನ್ನು ಕರ್ನಾಟಕದ ಐಎಎಸ್ ಅಧಿಕಾರಿಗಳ ಸಂಘ ಬಲವಾಗಿ ಖಂಡಿಸಿದ್ದು, ಅವರ ವಿರುದ್ಧ ಕ್ರಮಕ್ಕೆ ಆಗ್ರಹಿಸಿದೆ.

ಈ ಸಂಬಂಧ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ಇಂದು(ಗುರುವಾರ) ಭೇಟಿ ಮಾಡಿದ ಸರಕಾರದ ಅಪರ ಮುಖ್ಯ ಕಾರ್ಯದರ್ಶಿ ಗೌರವ್ ಗುಪ್ತ, ಕೆಪಿಟಿಸಿಎಲ್ ವ್ಯವಸ್ಥಾಪಕ ನಿರ್ದೇಶಕರಾದ ಪಂಕಜ್ ಕುಮಾರ್ ಪಾಂಡೆ, ಕರ್ನಾಟಕ ರಾಜ್ಯ ಕೈಗಾರಿಕಾ ಮತ್ತು ಮೂಲಸೌಕರ್ಯ ಅಭಿವೃದ್ಧಿ ನಿಗಮ ನಿಯಮಿತದ ವ್ಯವಸ್ಥಾಪಕ ನಿರ್ದೇಶಕರಾದ ಖುಷ್ಬೂ ಗೋಯಲ್ ಚೌಧರಿ ಅವರನ್ನೊಳಗೊಂಡ ನಿಯೋಗವು ಸಂಘದ ಪರವಾಗಿ ಮನವಿ ಸಲ್ಲಿಸಿ, ರವಿ ಕುಮಾರ್ ವಿರುದ್ಧ ತಕ್ಷಣ ಕ್ರಮ ಕೈಗೊಳ್ಳುವಂತೆ ಒತ್ತಾಯಿಸಿತು.

ಈ ಕುರಿತ ಪತ್ರಿಕಾ ಪ್ರಕಟಣೆ ಹೊರಡಿಸಿರುವ ಸಂಘವು, ಯಾರದೇ ಭಯ, ಅವಮಾನ ಅಥವಾ ರಾಜಕೀಯ ಬೆದರಿಕೆ ಇಲ್ಲದೆ ಸರಕಾರಿ ಅಧಿಕಾರಿಗಳು ತಮ್ಮ ಕರ್ತವ್ಯ ನಿರ್ವಹಿಸಲು ಅವಕಾಶ ಇರಬೇಕು. ಇದಕ್ಕೆ ಚ್ಯುತಿ ಉಂಟುಮಾಡುವವರ ವಿರುದ್ಧ ಸರಕಾರವು ತ್ವರಿತ ಮತ್ತು ನಿರ್ದಾಕ್ಷಿಣ್ಯ ಕ್ರಮ ಜರುಗಿಸಬೇಕು ಎಂದು ಹೇಳಿದೆ.

ಮುಖ್ಯ ಕಾರ್ಯದರ್ಶಿಗಳು ರಾಜ್ಯದ ಅತ್ಯುನ್ನತ ನಾಗರಿಕ ಹುದ್ದೆಯನ್ನು ಹೊಂದಿರುತ್ತಾರೆ. ಸಮಗ್ರತೆ, ಸಮರ್ಪಣೆ ಮತ್ತು ವಿಶಿಷ್ಟ ಸಾರ್ವಜನಿಕ ಸೇವೆಗಾಗಿ ಅವರನ್ನು ಗೌರವಿಸಲಾಗುತ್ತದೆ. ಇವರ ವಿರುದ್ಧ ರವಿಕುಮಾರ್ ಅವರು ಸಾರ್ವಜನಿಕ ವೇದಿಕೆಯಲ್ಲಿ ಅಸಭ್ಯ ಮತ್ತು ಮಾನಹಾನಿಕರ ಹೇಳಿಕೆ ನೀಡಿ, ಹುದ್ದೆಯ ಘನತೆಗೆ ಧಕ್ಕೆ ತಂದಿದ್ದಾರೆ. ಇಂಥ ಆಕ್ಷೇಪಾರ್ಹ ಹೇಳಿಕೆಗಳು ನಾಗರಿಕ ಸೇವೆಯ ವಿಶ್ವಾಸಾರ್ಹತೆಯನ್ನು ಹಾಳುಮಾಡುತ್ತವೆ ಎಂದು ಉಲ್ಲೇಖಿಸಿದೆ.

ಈ ಹಿಂದೆಯೂ ರವಿಕುಮಾರ್ ಅವರು ಕಲಬುರಗಿಯ ಉಪ ಆಯುಕ್ತರ ವಿರುದ್ಧ ಆಧಾರರಹಿತ ಮತ್ತು ಕೋಮುವಾದಿ ಹೇಳಿಕೆ ನೀಡಿದ್ದರು. ಈ ಬಗ್ಗೆಯೂ ಸಂಘ ಆಕ್ಷೇಪ ವ್ಯಕ್ತಪಡಿಸಿ, ಅವರ ಹೇಳಿಕೆಯನ್ನು ತೀವ್ರವಾಗಿ ಖಂಡಿಸಿತ್ತು. ಆದರೂ, ರವಿಕುಮಾರ್‌ ತಮ್ಮ ವರ್ತನೆಯನ್ನು ತಿದ್ದಿಕೊಳ್ಳದೇ, ಅಧಿಕಾರಿಗಳ ವಿರುದ್ಧ ದೂಷಣೆ ಮುಂದುವರಿಸಿರುವುದು ತೀವ್ರ ಕಳವಳಕಾರಿ ಮತ್ತು ಸ್ವೀಕಾರಾರ್ಹವಲ್ಲ ಎಂದಿದೆ.

ಎನ್.ರವಿಕುಮಾರ್ ಅವರಿಂದ ಸಾರ್ವಜನಿಕವಾಗಿ ಮತ್ತು ಬೇಷರತ್‌ ಕ್ಷಮೆಯಾಚಿಸಬೇಕು. ಅನ್ವಯವಾಗುವ ಕಾನೂನುಗಳ ಅಡಿಯಲ್ಲಿ ಅವರ ವಿರುದ್ಧ ತಕ್ಷಣ ಕಾನೂನು ಕ್ರಮ ಕೈಗೊಳ್ಳಬೇಕು. ಕರ್ನಾಟಕ ವಿಧಾನ ಪರಿಷತ್ತಿನಲ್ಲಿ ಅವರ ಹೇಳಿಕೆ ಖಂಡಿಸಿ, ನಿರ್ಣಯ ಕೈಗೊಳ್ಳಬೇಕು ಎಂದು ಐಎಎಸ್​ ಅಧಿಕಾರಿಗಳ ಸಂಘ ಒತ್ತಾಯಿಸಿದೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News