×
Ad

ಆರ್‌ಸಿಬಿ, ಕೆಎಸ್‌ಸಿಎ ಆಡಳಿತದ ಆತುರದ ನಿರ್ಧಾರವೇ ಕಾಲ್ತುಳಿತ ದುರಂತಕ್ಕೆ ಕಾರಣ: ಐಜಿಪಿ ವಿಕಾಸ್ ಕುಮಾರ್ ವಿಕಾಸ್

Update: 2025-06-10 22:35 IST

Photo credit: PTI

ಬೆಂಗಳೂರು: ಆರ್‌ಸಿಬಿ ಸಂಭ್ರಮಾಚರಣೆ ಸಂದರ್ಭ ಚಿನ್ನಸ್ವಾಮಿ ಕ್ರೀಡಾಂಗಣದ ಮುಂಭಾಗ ಇತ್ತೀಚಿಗೆ ಸಂಭವಿಸಿದ್ದ ಕಾಲ್ತುಳಿತ ಪ್ರಕರಣದಲ್ಲಿ ಕರ್ತವ್ಯ ಲೋಪ ಆರೋಪದ ಮೇಲೆ ಅಮಾನತುಗೊಂಡಿರುವ ಪೂರ್ವ ವಿಭಾಗ ಹೆಚ್ಚುವರಿ ಪೊಲೀಸ್ ಆಯುಕ್ತರಾಗಿದ್ದ ವಿಕಾಸ್ ಕುಮಾರ್ ವಿಕಾಸ್ ಅವರು ತಮ್ಮ ಅಮಾನತು ಪ್ರಶ್ನಿಸಿ ಕೇಂದ್ರೀಯ ಆಡಳಿತಾತ್ಮಕ ನ್ಯಾಯ ಮಂಡಳಿ (ಸಿಎಟಿ)ಗೆ ಅರ್ಜಿ ಸಲ್ಲಿಸಿದ್ದಾರೆ.

ಸರಕಾರದ ಅಮಾನತು ಆದೇಶ ಪ್ರಶ್ನಿಸಿ ಹಿರಿಯ ಪೊಲೀಸ್ ಅಧಿಕಾರಿ ವಿಕಾಸ್ ಕುಮಾರ್ ವಿಕಾಸ್ ಅವರು ಆನ್‌ಲೈನ್ ಮೂಲಕ ಅರ್ಜಿ ಹಾಕಿದ್ದಾರೆ. ಸಿಎಟಿಯು ವಿಚಾರಣೆಯನ್ನು ಇನ್ನಷ್ಟೇ ಕೈಗೆತ್ತಿಕೊಳ್ಳಬೇಕಿದೆ.

ಜೂ.4ರ ಘಟನೆಯಲ್ಲಿ ಆರ್‌ಸಿಬಿ ವಿಜಯೋತ್ಸವ ಸಂದರ್ಭದಲ್ಲಿ 11 ಮಂದಿ ಮೃತಪಟ್ಟಿದ್ದು, 50ಕ್ಕೂ ಹೆಚ್ಚು ಮಂದಿ ಗಾಯಗೊಂಡಿದ್ದ ಹಿನ್ನೆಲೆಯಲ್ಲಿ, ಪ್ರಕರಣವನ್ನು ರಾಜ್ಯ ಸರಕಾರವು ಬೆಂಗಳೂರು ಜಿಲ್ಲಾಧಿಕಾರಿ ಜಿ. ಜಗದೀಶ್ ಅವರ ನೇತೃತ್ವದಲ್ಲಿ ಮ್ಯಾಜಿಸ್ಟೀರಿಯಲ್ ತನಿಖೆಗೆ ಆದೇಶಿಸಿತ್ತು. ಅಲ್ಲದೇ, ಮೂವರು ಐಪಿಎಸ್ ಅಧಿಕಾರಿಗಳೂ ಸೇರಿ ಐವರು ಪೊಲೀಸರನ್ನು ತಕ್ಷಣದಿಂದ ಜಾರಿಗೆ ಬರುವಂತೆ ಜೂನ್ 5ರಂದು ಅಮಾನತುಗೊಳಿಸಿತ್ತು.

ಅಮಾನತು ವಿರುದ್ಧ ಸಿಎಟಿ ಮೊರೆ ಹೋದ ಐಜಿಪಿ ವಿಕಾಸ್ ಕುಮಾರ್ ವಿಕಾಸ್, ದುರಂತಕ್ಕೆ ಆರ್‌ಸಿಬಿ ಹಾಗೂ ಕರ್ನಾಟಕ ರಾಜ್ಯ ಕ್ರಿಕೆಟ್ ಸಂಸ್ಥೆ (ಕೆಎಸ್‌ಸಿಎ) ಆಡಳಿತದ ಆತುರದ ತೀರ್ಮಾನಗಳೇ ಕಾರಣ. ಕಾರ್ಯಕ್ರಮಕ್ಕೆ ಉಚಿತ ಪ್ರವೇಶ ಎಂದು ಆಹ್ವಾನ ನೀಡಿದ್ದರಿಂದ ಲಕ್ಷಾಂತರ ಮಂದಿ ಕ್ರೀಡಾಂಗಣಕ್ಕೆ ಬಂದಿದ್ದರು. ಇಂತಹ ದೊಡ್ಡ ಕಾರ್ಯಕ್ರಮ ಮಾಡುವ ಮುನ್ನ ಸೂಕ್ತ ಬಂದೋಬಸ್ತ್, ಭದ್ರತೆ ನೀಡುವ ಸಂಬಂಧ ನಿರ್ದಿಷ್ಟ ಯೋಜನೆ ಮಾಡಲು ನಮಗೆ ಸಮಯಾವಕಾಶವನ್ನೇ ಕೊಟ್ಟಿರಲಿಲ್ಲ. ಆರ್‌ಸಿಬಿ ಕಪ್ ಗೆಲ್ಲುವುದಕ್ಕೂ ಈ ಸಂಭ್ರಮಾಚರಣೆಗೂ ಕೇವಲ 12 ಗಂಟೆ ಅಂತರವಿತ್ತು ಎಂದು ಅಮಾನತು ವಿರುದ್ಧ ಸಿಎಟಿ ಮೊರೆ ಹೋದ ಐಜಿಪಿ ವಿಕಾಸ್ ಕುಮಾರ್ ವಿಕಾಸ್ ತಮ್ಮ ಅರ್ಜಿಯಲ್ಲಿ ವಿವರಿಸಿದ್ದಾರೆ.

ಹರಕೆಯ ಕುರಿ ಮಾಡಿದ್ದಾರೆ: ಆರೋಪ

ಆರ್‌ಸಿಬಿ ಹಾಗೂ ಕೆಎಸ್‌ಸಿಎ ನಿರ್ಧಾರಗಳಿಂದ ಕಾಲ್ತುಳಿತ ಸಂಭವಿಸಿ 11 ಮಂದಿ ಜೀವ ಕಳೆದುಕೊಂಡಿದ್ದಾರೆ. ಆದರೆ, ನಮ್ಮ ಪಾತ್ರವಿಲ್ಲದಿದ್ದರೂ ಹರಕೆಯ ಕುರಿಗಳಂತೆ ಅಮಾನತು ಮಾಡಲಾಗಿದೆ ಎಂದು ವಿಕಾಸ್ ಅವರು ಆರೋಪಿಸಿದ್ದಾರೆ.

ಅಮಾನತಿಗೂ ಮುನ್ನ ಯಾವುದೇ ಪೂರ್ವ ತನಿಖೆ ನಡೆದಿಲ್ಲ. ಹೀಗಿದ್ದರೂ ಸೇವೆಯಿಂದ ಏಕಾಏಕಿ ಅಮಾನತು ಮಾಡಲಾಗಿದೆ. ಆದೇಶದಲ್ಲಿ ನಿರ್ದಿಷ್ಟವಾಗಿ ನಮ್ಮ ಕರ್ತವ್ಯಲೋಪ ಎಲ್ಲಿ ಆಗಿದೆ ಎಂಬುದನ್ನು ಹೇಳಿಲ್ಲ. ಅಮಾನತು ಕ್ರಮದಿಂದ ಇಷ್ಟು ವರ್ಷಗಳ ಕಾಲ ಯಾವುದೇ ಕಪ್ಪುಚುಕ್ಕೆ ಇಲ್ಲದೆ ಕರ್ತವ್ಯ ನಿರ್ವಹಿಸಿರುವ ನನ್ನ ವೃತ್ತಿಜೀವನಕ್ಕೆ ಅಪವಾದ ಬಂದಿದೆ. ಸರಕಾರದ ಆದೇಶ ಕ್ರಮ ಕಾನೂನಿನ ವಿರುದ್ಧವಾಗಿದೆ. ಹೀಗಾಗಿ, ಜೂನ್ 5ರಂದು ಹೊರಡಿಸಿರುವ ಅಮಾನತು ಆದೇಶ ರದ್ದುಪಡಿಸಬೇಕು ಎಂದು ಅರ್ಜಿಯಲ್ಲಿ ಕೋರಲಾಗಿದೆ.

ಪೊಲೀಸರ ಅಮಾನತು ಕುರಿತಂತೆ ಪರ - ವಿರೋಧದ ಚರ್ಚೆಗಳು ನಡೆಯುತ್ತಿರುವ ಕೊನೆಯ ಹೊತ್ತಲ್ಲೇ ವಿಕಾಸ್‌ಕುಮಾರ್ ಅವರು ಸರಕಾರದ ಕ್ರಮ ಪ್ರಶ್ನಿಸಿ ಸಿಎಟಿ ಮೆಟ್ಟಿಲೇರಿದ್ದಾರೆ. ಉಳಿದ ಅಧಿಕಾರಿಗಳ ಮುಂದಿನ ನಡೆ ಬಗ್ಗೆ ಕುತೂಹಲ ಮೂಡಿದೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News