×
Ad

ಅಕ್ರಮ ಭೂ ಮಂಜೂರು ಪ್ರಕರಣ: ಕಡೂರು ತಹಶೀಲ್ದಾರ್ ಆಗಿದ್ದ ಉಮೇಶ್ ಬಂಧನ

Update: 2023-08-25 12:12 IST

ಚಿಕ್ಕಮಗಳೂರು, ಆ.25: ಜಿಲ್ಲೆಯ ಕಡೂರು ತಾಲೂಕಿನಲ್ಲಿ ನಡೆದಿರುವ ಅಕ್ರಮ ಭೂ ಮಂಜೂರಾತಿ ಪ್ರಕರಣದ ಮೂವರು ಆರೋಪಿಗಳ ಪೈಕಿ ತಾಲೂಕಿನಲ್ಲಿ ಈ ಹಿಂದೆ ತಹಶೀಲ್ದಾರ್ ಆಗಿ ಕಾರ್ಯನಿರ್ವಹಿಸಿದ್ದ ಓರ್ವ ಆರೋಪಿಯನ್ನು ಪೊಲೀಸರು ಗುರುವಾರ ರಾತ್ರಿ ಬೆಂಗಳೂರಿನಲ್ಲಿ ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.

ಕಡೂರು ತಾಲೂಕಿನಲ್ಲಿ ಈ ಹಿಂದೆ ತಹಶೀಲ್ದಾರ್ ಆಗಿದ್ದು, ಸದ್ಯ ಕಾರವಾರ ಸೀಬರ್ಡ್ ನೌಕಾನೆಲೆಯ ಭೂ ಸ್ವಾಧೀನಾಧಿಕಾರಿ ಭಡ್ತಿ ಪಡೆದಿದ್ದ ಜೆ.ಉಮೇಶ್ ಬಂಧಿತ ಆರೋಪಿಯಾಗಿದ್ದು, ಬೆಂಗಳೂರಿನಲ್ಲಿ ತಲೆ ಮರೆಸಿಕೊಂಡಿದ್ದ ಆರೋಪಿಯನ್ನು ಕಡೂರು ಪೊಲೀಸರು ಗುರುವಾರ ರಾತ್ರಿ ಬಂಧಿಸಿದ್ದಾರೆ. ಪ್ರಕರಣ ಮತ್ತಿಬ್ಬರು ಆರೋಪಿಗಳು ತಲೆ ಮರೆಸಿಕೊಂಡಿದ್ದಾರೆಂದು ತಿಳಿದು ಬಂದಿದೆ.

ಕಡೂರು ತಾಲೂಕಿನಲ್ಲಿ ತಹಶೀಲ್ದಾರ್ ಆಗಿದ್ದ ಜೆ.ಉಮೇಶ್ ಹಾಗೂ ತಾಲೂಕು ಕಚೇರಿಯ ಶಿರಸ್ತೇದಾರ್ ನಂಜಂಡಪ್ಪ ಮತ್ತು ಬೀರೂರು ಹೋಬಳಿ ಗ್ರಾಮಲೆಕ್ಕಿಗ ಕಿರಣ್‍ಕುಮಾರ್ ಎಂಬವರು ತಾಲೂಕಿನ ಬೀರೂರು ಹೋಬಳಿಯ ಉಳ್ಳಿನಾಗರು ಗ್ರಾಮದ ಸ.ನಂ.43ರಲ್ಲಿ 5ಎಕರೆ ಸರಕಾರಿ ಜಾಗವನ್ನು 30 ವರ್ಷಗಳ ಹಿಂದೆ ಮೃತಪಟ್ಟ ವ್ಯಕ್ತಿಯ ಹೆಸರಿಗೆ ಅಕ್ರಮವಾಗಿ ಖಾತೆ ಮಾಡಿದ್ದರು. ನಂತರ ಆ ಜಮೀನನ್ನು ಬೇರೆಯವರ ಹೆಸರಿಗೆ ನಿಯಮ ಬಾಹಿರವಾಗಿ ಖಾತೆ ಮಾಡಿ ಅಕ್ರಮ ಎಸಗಿದ್ದರು.

ಈ ಅಕ್ರಮ ಭೂ ಮಂಜೂರಾತಿ ಪ್ರಕರಣ ಸಂಬಂಧ ಕಡೂರು ತಾಲೂಕಿನ ರೈತ ಮುಖಂಡರು ಜಿಲ್ಲಾಧಿಕಾರಿ, ತರೀಕೆರೆ ಉಪವಿಭಾಗಾಧಿಕಾರಿಗೆ ದೂರು ಸಲ್ಲಿಸಿದ್ದರು. ದೂರು ಪರಿಶೀಲಸಿದ ಜಿಲ್ಲಾಧಿಕಾರಿ ಅಕ್ರಮದ ತನಿಖೆಗೆ ಆದೇಶಿಸಿದ್ದರು. ಅದರಂತೆ ತರೀಕೆರೆ ಉಪವಿಭಾಗಾಧಿಕಾರಿ ಅಕ್ರಮ ಭೂ ಮಂಜೂರಾತಿ ಪ್ರಕರಣದ ತನಿಖೆಗೆ ನಡೆಸಿ ಜಿಲ್ಲಾಧಿಕಾರಿಗೆ ತನಿಖಾ ವರದಿ ಸಲ್ಲಿಸಿದ್ದರು. ತನಿಖಾ ವರದಿಯಲ್ಲಿ ಆರೋಪ ಸಾಭೀತಾಗಿದ್ದ ಹಿನ್ನೆಲೆಯಲ್ಲಿ ಇತ್ತೀಚೆಗೆ ಚಿಕ್ಕಮಗಳೂರು ಜಿಲ್ಲಾಧಿಕಾರಿ ಮೀನಾ ನಾಗರಾಜ್ ಅವರು ಕಡೂರಿನ ಹಿಂದಿನ ತಹಶೀಲ್ದಾರ್ ಜೆ.ಉಮೇಶ್, ಶಿರಸ್ತೇದಾರ್ ನಂಜುಂಡಪ್ಪ, ವಿಎ ಕಿರಣ್‍ಕುಮಾರ್ ವಿರುದ್ಧ ದೂರು ದಾಖಲಿಸಲು ಆದೇಶಿಸಿದ್ದರು.

ಅದರಂತೆ ಇತ್ತೀಚೆಗೆ ತರೀಕೆರೆ ಉಪವಿಭಾಗಾಧಿಕಾರಿ ಡಾ.ಕಾಂತರಾಜ್ ಕಡೂರು ಪೊಲೀಸ್ ಠಾಣೆಯಲ್ಲಿ ಮೂವರು ಅಧಿಕಾರಿಗಳ ವಿರುದ್ಧ ಕ್ರಿಮಿನಲ್ ಪ್ರಕರಣ ದಾಖಲಿಸಿದ್ದರು. ಪ್ರಕರಣ ಸಂಬಂಧ ಎಫ್‍ಐಆರ್ ದಾಖಲಾಗುತ್ತಿದ್ದಂತೆ ಮೂವರು ಆರೋಪಿಗಳು ಬಂಧನದ ಭೀತಿಯಿಂದ ತಲೆ ಮರೆಸಿಕೊಂಡಿದ್ದರು. ಈ ನಡುವೆ ಪೊಲೀಸರು, ರಾಜಕಾರಣಿಗಳು ಆರೋಪಿಗಳ ರಕ್ಷಣೆಗೆ ಮುಂದಾಗಿದ್ದಾರೆಂದು ರೈತ ಮುಖಂಡರು ಆರೋಪಿಸಿದ್ದರು. ಇದರ ಬೆನ್ನಲ್ಲೆ ಗುರುವಾರ ರಾತ್ರಿ ಕಡೂರು ಪೊಲೀಸರು ಆರೋಪಿಯನ್ನು ಬೆಂಗಳೂರಿನಲ್ಲಿ ಬಂಧಿಸಿ ಕಡೂರಿಗೆ ಕರೆತಂದು ವಿಚಾರಣೆಗೊಳಪಡಿಸಿದ್ದಾರೆಂದು ತಿಳಿದು ಬಂದಿದೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News