ಹಾಸನದಲ್ಲಿ ಹೃದಯಾಘಾತ ಹೆಚ್ಚಳ: ಡಾ.ರವಿಂದ್ರನಾಥ್ ನೇತೃತ್ವದಲ್ಲಿ ಸಮಿತಿ ರಚಿಸಿದ ಸರಕಾರ
ಸಾಂದರ್ಭಿಕ ಚಿತ್ರ | PC : freepik
ಬೆಂಗಳೂರು : ಹಾಸನ ಜಿಲ್ಲೆಯಲ್ಲಿ ಹೃದಯಘಾತದಿಂದ ಸಾವನ್ನಪ್ಪುತ್ತಿರುವವರ ಸಂಖ್ಯೆ ಹೆಚ್ಚಳವಾಗುತ್ತಿರುವ ಹಿನ್ನೆಲೆಯಲ್ಲಿ ಸರಕಾರಕ್ಕೆ ವರದಿಯನ್ನು ಸಲ್ಲಿಸುವ ನಿಟ್ಟಿನಲ್ಲಿ ಜಯದೇವ ನಿರ್ದೇಶಕ ಡಾ.ರವಿಂದ್ರನಾಥ್ ನೇತೃತ್ವದಲ್ಲಿ ಸಮಿತಿ ರಚನೆ ಮಾಡಲಾಗಿದೆ ಎಂದು ಆರೋಗ್ಯ ಇಲಾಖೆಯ ಪ್ರಧಾನ ಕಾರ್ಯದರ್ಶಿ ಹರ್ಷಗುಪ್ತಾ ತಿಳಿಸಿದ್ದಾರೆ.
ಸೋಮವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಹೃದಯಘಾತದಿಂದ ಮೃತಪಟ್ಟವರ ಪೈಕಿ ಬಹುಪಾಲು ಮಂದಿ ಮನೆಯಲ್ಲಿ ಮೃತಪಟ್ಟವರಾಗಿದ್ದಾರೆ. ಹೀಗಾಗಿ ಹಳೆ ಮೆಡಿಕಲ್ ದಾಖಲೆಗಳನ್ನು ಪರೀಕ್ಷಿಸಬೇಕಿದೆ. ಸಾವಿನ ಬಗ್ಗೆ ತಿಳಿಯಲು ಸಮಿತಿಯನ್ನು ರಚನೆ ಮಾಡಲಾಗಿದೆ. 10 ದಿನಗಳ ಒಳಗಾಗಿ ವರದಿ ಕೊಡಲು ತಿಳಿಸಿದ್ದೇವೆ ಎಂದರು.
ಹೃದಯಘಾತದಿಂದ ಮೃತಪಟ್ಟವರ ಪೈಕಿ 9 ಜನರು 55 ವರ್ಷ ಮೇಲ್ಪಟ್ಟವರಾಗಿದ್ದು, ಅವರಿಗೆ ಬೇರೆ ಬೇರೆ ಥರದ ಖಾಯಿಲೆಗಳು ಇತ್ತು. 5 ಜನ 20 ಹರೆಯದವರು ಎಂದು ತಿಳಿದಿದೆ. ಒಬ್ಬರು ಹಾಸನದಲ್ಲಿ ಮೃತಪಟ್ಟಿದ್ದು, ಇನ್ನುಳಿದ ನಾಲ್ವರು ಬೆಂಗಳೂರಿನಲ್ಲಿ ಮೃತಪಟ್ಟಿದ್ದಾರೆ. ಆದರೆ ಅವರು ಹಾಸನ ಮೂಲದವರಾಗಿದ್ದಾರೆ ಎಂದರು.
20 ವರ್ಷದ ಯುವತಿಗೆ ಟೈಪ್ 1 ಡಯಾಬಿಟಿಸ್, ಕ್ರಾನಿಕ್ ಕಿಡ್ನಿ ಡಿಸೀಸ್ ಇರುವುದು ತಿಳಿದಿದೆ. ಮೃತಪಟ್ಟವರಿಗೆ ಜನಟಿಕ್ ಇದೆಯಾ, ಅನ್ ಕಂಟ್ರೋಲ್ಡ್ ಡಿಸೀಸ್ ಇತ್ತಾ ಎಂದು ಅಧ್ಯಯನ ಮಾಡಬೇಕಿದೆ. 18 ಪೈಕಿ 2 ಮಾತ್ರ ಆಸ್ಪತ್ರೆಯಲ್ಲಿ ಸಾವಾಗಿದೆ, ಇನ್ನುಳಿದ ಸಾವು ಮನೆಯಲ್ಲಿ ಆಗಿದೆ ಎಂದು ಅವರು ತಿಳಿಸಿದರು.
‘ಹೃದಯಾಘಾತ ಆಗುತ್ತಿರುವುದರ ಬಗ್ಗೆ ಪರಿಶೀಲನೆ ಮಾಡಲಾಗುತ್ತಿದೆ. ಇಲಾಖೆಯಿಂದ ಪರಿಶೀಲಿಸಿ ವರದಿ ನೀಡಿದ ನಂತರ ಸತ್ಯಾಸತ್ಯತೆ ಏನೆಂದು ತಿಳಿಯುತ್ತದೆ. ಈಗಿನ ಜೀವನ ಶೈಲಿ, ಆಹಾರ ಪದ್ಧತಿ, ಮೊಬೈಲ್, ಡಿಜಿಟಲ್ ವ್ಯಸನ, ವ್ಯಸನದಿಂದ ಆರೋಗ್ಯ ಸಮಸ್ಯೆ ಹೆಚ್ಚಾಗಿದೆ. ಹಲವರಿಗೆ ಚಿಕ್ಕ ವಯಸ್ಸಿನಲ್ಲೇ ಬಿಪಿ, ಶುಗರ್ ಸಮಸ್ಯೆ ಕಾಣಿಸಿಕೊಳ್ಳುತ್ತಿದೆ. ಜೀವನ ಶೈಲಿ ನೋಡಿಕೊಳ್ಳುವುದು ಬಹಳ ಮುಖ್ಯವಾಗಿದೆ’
-ದಿನೇಶ್ ಗುಂಡೂರಾವ್, ಆರೋಗ್ಯ ಸಚಿವ