ಬೆಂಗಳೂರು | ಮಾಲ್‍ನಲ್ಲಿ ಯುವತಿಯೊಂದಿಗೆ ಅಸಭ್ಯ ವರ್ತನೆ ಪ್ರಕರಣ: ಆರೋಪಿಯ ಗುರುತು ಪತ್ತೆ
ಬೆಂಗಳೂರು, ನ.1: ರಾಜಧಾನಿ ಬೆಂಗಳೂರಿನ ಪ್ರತಿಷ್ಠಿತ ಮಾಲ್ ಒಂದರಲ್ಲಿ ಯುವತಿ ಜೊತೆ ಅಸಭ್ಯವಾಗಿ ವರ್ತನೆ ಮಾಡಿದ ವ್ಯಕ್ತಿಯನ್ನು ನಿವೃತ್ತ ಮುಖ್ಯಶಿಕ್ಷಕ ಎಂದು ಆರೋಪಿಯ ಗುರುತು ಪತ್ತೆ ಹಚ್ಚಿರುವ ಪೊಲೀಸರು, ಬಂಧನಕ್ಕೆ ಶೋಧ ನಡೆಸಿದ್ದಾರೆ.
ಮಾಲ್‍ನಲ್ಲಿ ಯುವತಿಯ ಹಿಂಭಾಗ ಮುಟ್ಟಿ ಢಿಕ್ಕಿ ಹೊಡೆದು ಅಸಹ್ಯವಾಗಿ ವರ್ತಿಸಿದ್ದ ಆರೋಪಿಯನ್ನು ಬಸವೇಶ್ವರನಗರ ನಿವಾಸಿ ಅಶ್ವಥ್ ನಾರಾಯಣ್ (60) ಎಂದು ಗುರುತಿಸಲಾಗಿದೆ.
ಘಟನೆ ಬಳಿಕ ಆರೋಪಿ ಅಶ್ವಥ್ ನಾರಾಯಣ್ ಮನೆಗೆ ಬೀಗ ಹಾಕಿಕೊಂಡು ನಾಪತ್ತೆಯಾಗಿದ್ದು, ಈತ ಪ್ರತಿಷ್ಠಿತ ಮಠಕ್ಕೆ ಸೇರಿದ ಶಾಲೆಯೊಂದರಲ್ಲಿ ಮುಖ್ಯ ಶಿಕ್ಷಕನಾಗಿ ಎಂಟು ತಿಂಗಳ ಹಿಂದೆ ನಿವೃತ್ತನಾಗಿದ್ದಾನೆ ಎಂದು ತಿಳಿದುಬಂದಿದೆ.
ಈ ಹಿನ್ನೆಲೆಯಲ್ಲಿ ನಾಪತ್ತೆಯಾಗಿರುವ ಆರೋಪಿ ಅಶ್ವಥ್ ನಾರಾಯಣ್ ಪತ್ತೆಗೆ ಮಾಗಡಿ ರಸ್ತೆ ಪೊಲೀಸರು ಹುಡುಕಾಟ ಮುಂದುವರಿಸಿದ್ದಾರೆ.
ಈತ ನಾಲ್ಕು ದಿನಗಳ ಹಿಂದೆ ನಗರದ ಮಾಲ್ ಒಂದರಲ್ಲಿ ಯವತಿಯ ಹಿಂಭಾಗಕ್ಕೆ ಢಿಕ್ಕಿ ಹೊಡೆದು ಅಸಹ್ಯವಾಗಿ ಆಕೆಯ ದೇಹವನ್ನು ಸ್ಪರ್ಶಿಸಿದ್ದ. ಇದನ್ನು ಯಶವಂತ್ ಎಂಬಾತ ವಿಡಿಯೋ ಮಾಡಿ ಸಾಮಾಜಿಕ ಜಾಲತಾಣಗಳಲ್ಲಿ ಪೋಸ್ಟ್ ಮಾಡಿದ್ದ. ಈ ವಿಡಿಯೋ ಆಧಾರದ ಮೇಲೆ ಮಾಲ್ ನ ಆಡಳಿತ ಮಂಡಳಿ ಮಾಗಡಿ ರಸ್ತೆ ಪೊಲೀಸ್ ಠಾಣೆಗೆ ದೂರು ನೀಡಿತ್ತು.