ಸಣ್ಣ, ಮಧ್ಯಮ ಕೈಗಾರಿಕೆಗಳ ಸಮಸ್ಯೆ ಬಗೆಹರಿಸಲು ಸರಕಾರ ಬದ್ಧ : ಡಿ.ಕೆ.ಶಿವಕುಮಾರ್
ಬೆಂಗಳೂರು : ಸಣ್ಣ ಮತ್ತು ಮಧ್ಯಮ ಕೈಗಾರಿಕೆಗಳು ರಾಜ್ಯ ಹಾಗೂ ಕೇಂದ್ರ ಸರಕಾರದ ಶಕ್ತಿ. ನಿಮ್ಮ ಸಮಸ್ಯೆಗಳನ್ನು ಬಗೆಹರಿಸಿ ಅಗತ್ಯ ನೆರವು ನೀಡುವುದು ಸರಕಾರಗಳ ಜವಾಬ್ದಾರಿ. ಹೀಗಾಗಿ ನಿಮ್ಮ ಸಮಸ್ಯೆ ಬಗೆಹರಿಸಲು ನಾವು ಬದ್ಧವಾಗಿದ್ದೇವೆ ಎಂದು ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ತಿಳಿಸಿದ್ದಾರೆ.
ಶುಕ್ರವಾರ ನಗರದ ಅರಮನೆ ಮೈದಾನದ ತ್ರಿಪುರ ವಾಸಿನಿಯಲ್ಲಿ ನಡೆದ ‘ಇಂಡಿಯಾ ಎಂಎಸ್‍ಎಂಇ ಸಮಾವೇಶ-2025’ರಲ್ಲಿ ಭಾಗವಹಿಸಿ ಮಾತನಾಡಿದ ಅವರು, ಸಣ್ಣ ಮತ್ತು ಮಧ್ಯಮ ಕೈಗಾರಿಕೆಗಳ ಸಮಸ್ಯೆಗಳ ಬಗ್ಗೆ ನಮಗೆ ಅರಿವಿದೆ. ಕೈಗಾರಿಕೆಗಳಿಗೆ ಅಗತ್ಯವಾಗಿರುವ ವಿದ್ಯುತ್ ಹಾಗೂ ನೀರಿನ ಸೌಲಭ್ಯ ಒದಗಿಸಲು ಸರಕಾರ ಬದ್ಧವಾಗಿದೆ ಎಂದರು.
ಬೆಂಗಳೂರಿನಲ್ಲಿ ಜನಸಂಖ್ಯೆ ಈಗ 1.50 ಕೋಟಿಗೆ ಏರಿಕೆಯಾಗಿದೆ. ಆದರೆ, ರಸ್ತೆಗಳ ಸಾಮರ್ಥ್ಯ ಹಾಗೇ ಇದೆ. ಇದರಿಂದ ಟ್ರಾಫಿಕ್ ಸಮಸ್ಯೆ ಹೆಚ್ಚಾಗಿದೆ. ಹೀಗಾಗಿ ಬೆಂಗಳೂರಿನಲ್ಲಿ ಬದಲಾವಣೆ ತರಲು ಹಿಂದಿನ ಎರಡು ವರ್ಷಗಳಿಂದ ಯೋಜನೆ ರೂಪಿಸುತ್ತಿದ್ದೇನೆ ಎಂದು ಡಿ.ಕೆ.ಶಿವಕುಮಾರ್ ಹೇಳಿದರು.
ಮೆಟ್ರೋ ಯೋಜನೆಗೆ 44 ಸಾವಿರ ಕೋಟಿ, ಟನಲ್ ರಸ್ತೆಗೆ 37 ಸಾವಿರ ಕೋಟಿ ಅದರಲ್ಲಿ ಮೊದಲನೇ ಹಂತಕ್ಕೆ 17 ಸಾವಿರ ಕೋಟಿ ಹಾಗೂ ಎಲಿವೇಟೆಡ್ ಕಾರಿಡಾರ್‍ಗಳಿಗೆ 14 ಸಾವಿರ ಕೋಟಿ ಮೊತ್ತದ ಯೋಜನೆ ರೂಪಿಸಲಾಗಿದೆ. ಒಟ್ಟಾರೆಯಾಗಿ ಮುಂದಿನ ನಾಲ್ಕೈದು ವರ್ಷಗಳಲ್ಲಿ ಬೆಂಗಳೂರಿನ ಅಭಿವೃದ್ಧಿಗೆ 1 ಲಕ್ಷ ಕೋಟಿಗೂ ಹೆಚ್ಚು ಹಣ ಹೂಡಿಕೆ ಮಾಡುತ್ತಿದ್ದೇವೆ ಎಂದು ಡಿ.ಕೆ.ಶಿವಕುಮಾರ್ ತಿಳಿಸಿದರು.
ನಾನು ಹಳ್ಳಿಯಲ್ಲಿ ಹುಟ್ಟಿದರೂ ವಿದ್ಯಾಭ್ಯಾಸ ಮಾಡಿದ್ದು ಬೆಂಗಳೂರಿನಲ್ಲಿ. ಮತ್ತೆ ರಾಜಕಾರಣವನ್ನು ಹಳ್ಳಿಯಿಂದ ಮಾಡಿದೆ. ಕೈಗಾರಿಕೆಗಳ ಹಿಂದೆ ಶ್ರಮ, ಅದರ ಫಲದ ಬಗ್ಗೆ ನನಗೆ ಅರಿವಿದೆ. ನಾನು ಯಾವುದೇ ಶಾಲಾ, ಕಾಲೇಜು ಕಾರ್ಯಕ್ರಮಕ್ಕೆ ಹೋದರೂ ಉದ್ಯೋಗ ಪಡೆಯುವುದಷ್ಟೇ ನಿಮ್ಮ ಗುರಿಯಾಗಬಾರದು, ನೀವುಗಳು ಉದ್ಯೋಗ ಸೃಷ್ಟಿಸುವಂತೆ ಬೆಳೆಯುವುದು ನಿಮ್ಮ ಕನಸಾಗಬೇಕು ಎಂದು ಹೇಳುತ್ತಿರುತ್ತೇನೆ ಎಂದು ಡಿ.ಕೆ.ಶಿವಕುಮಾರ್ ತಿಳಿಸಿದರು.
ಪೀಣ್ಯ ಹಾಗೂ ಎಲೆಕ್ಟ್ರಾನಿಕ್ ಸಿಟಿ ಕೈಗಾರಿಕಾ ಪ್ರದೇಶಗಳು ಮೊದಲಿನಿಂದಲೂ ರಾಷ್ಟ್ರ ಮಟ್ಟದಲ್ಲಿ ವಿಶೇಷ ಸ್ಥಾನ ಪಡೆದಿವೆ. ಮೂರು ಸಂಸ್ಥೆಗಳು ಇಂದು ಜತೆಗೂಡಿ ದೇಶದ ಪ್ರಗತಿಗೆ ಒಟ್ಟಾಗಿ ಶ್ರಮಿಸುವ ಸಂದೇಶವನ್ನು ದೇಶಕ್ಕೆ ರವಾನಿಸಿದ್ದೀರಿ. ಎಂಎಸ್‍ಎಂಇಗಳು ಸರಕಾರ ಮಾಡಲಾಗದ ಕೆಲಸವನ್ನು ಮಾಡಿ ಜನರಿಗೆ ಉದ್ಯೋಗ ನೀಡುತ್ತಿವೆ. ಆ ಮೂಲಕ ನಿಮ್ಮ ಬದುಕಿನ ಜತೆಗೆ ಕೋಟ್ಯಂತರ ಕುಟುಂಬಗಳಿಗೆ ಆಧಾರವಾಗಿದ್ದೀರಿ ಎಂದು ಡಿ.ಕೆ.ಶಿವಕುಮಾರ್ ಶ್ಲಾಘಿಸಿದರು.
ಕೇಂದ್ರ ಸರಕಾರದ ನೀತಿಯಂತೆ ರಾಷ್ಟ್ರೀಕೃತ ಬ್ಯಾಂಕುಗಳ ಸಹಕಾರ ಅಗತ್ಯವಿದೆ. ಆಸಕ್ತಿಯಿಂದ ಪ್ರಾಮಾಣಿಕತೆಯಿಂದ ದುಡಿಯುವವರಿಗೆ ಕೇಂದ್ರ ಹಾಗೂ ರಾಜ್ಯಗಳು ಪ್ರೋತ್ಸಾಹ ನೀಡಿದರೆ ಇಡೀ ದೇಶಕ್ಕೆ ನೆರವಾಗುತ್ತದೆ. ಮೇಕ್ ಇನ್ ಇಂಡಿಯಾ ಚಿಂತನೆಗೆ ಹೆಚ್ಚು ಒತ್ತು ನೀಡಿದಾಗ ನಮ್ಮ ಪ್ರತಿಭೆಗಳು ನಮ್ಮಲ್ಲಿಯೇ ಉಳಿದುಕೊಳ್ಳುತ್ತವೆ ಎಂದು ಡಿ.ಕೆ.ಶಿವಕುಮಾರ್ ಹೇಳಿದರು.
ಸಮಾವೇಶದಲ್ಲಿ ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ, ಸಚಿವರಾದ ಎಂ.ಬಿ.ಪಾಟೀಲ್, ಶರಣಬಸಪ್ಪ ದರ್ಶನಾಪುರ, ಎಂಎಸ್‍ಎಂಇ ನಿರ್ದೇಶಕ ನಿತೇಶ್ ಪಾಟೀಲ್, ಎಫ್‍ಕೆಸಿಸಿಐ ಅಧ್ಯಕ್ಷ ಬಾಲಕೃಷ್ಣ, ಕಾಸಿಯಾ ಅಧ್ಯಕ್ಷ ಎಂ.ಜಿ.ರಾಜಗೋಪಾಲ್, ಪೀಣ್ಯ ಕೈಗಾರಿಕೆ ಸಂಸ್ಥೆ ಅಧ್ಯಕ್ಷ ಶಿವಕುಮಾರ್ ಮತ್ತಿತರರು ಉಪಸ್ಥಿತರಿದ್ದರು. ಈ ಸಮಾವೇಶದಲ್ಲಿ 300ಕ್ಕೂ ಮಳಿಗೆಗಳಲ್ಲಿ ಉದ್ಯಮಕ್ಕೆ ಸಂಬಂಧಿಸಿದ ವಸ್ತುಗಳ ಪ್ರದರ್ಶನ ಹಾಗೂ ಮಾರಾಟ ನಡೆಸಲಾಯಿತು.
ನನ್ನ ಸಹೋದರನ ಕಂಪೆನಿಯ ತಂತ್ರಜ್ಞಾನ ಪೂರೈಕೆಗೆ ವೀಸಾ ಸಮಸ್ಯೆ..!
ನನ್ನ ಸಹೋದರ ಕನಕಪುರದಲ್ಲಿ ರೇಷ್ಮೆಗೆ ಸಂಬಂಧಿಸಿದಂತೆ ಒಂದು ಸಣ್ಣ ಕೈಗಾರಿಕೆ ಆರಂಭಿಸಿದ್ದು, ಆತ ಚೀನಾ ಕಂಪೆನಿ ಜತೆ ಒಡಂಬಡಿಕೆ ಮಾಡಿಕೊಂಡಿದ್ದು, ಅವರು ಬಂದು ತಂತ್ರಜ್ಞಾನ ಪೂರೈಕೆ ಮಾಡಬೇಕು. ಆದರೆ, ವೀಸಾ ಸಮಸ್ಯೆ ಎದುರಾಗಿರುವ ಹಿನ್ನೆಲೆಯಲ್ಲಿ ಅವರು ಬಂದು ತರಬೇತಿ ನೀಡಲು ಸಾಧ್ಯವಾಗಿಲ್ಲ. ಹೀಗಾಗಿ ಅದು ಅರ್ಧಕ್ಕೆ ನಿಂತಿದೆ. ಆದರೂ ನನ್ನ ಸಹೋದರ ಏನಾದರೂ ಮಾಡಬೇಕು ಎಂದು ಪ್ರಯತ್ನಿಸುತ್ತಿದ್ದಾನೆ. ನಾವು ಬೇರೆಯವರ ಮೇಲಿನ ಅವಲಂಬನೆಯನ್ನು ಕಡಿಮೆ ಮಾಡಿಕೊಳ್ಳಬೇಕು ಎಂದು ಡಿ.ಕೆ.ಶಿವಕುಮಾರ್ ತಿಳಿಸಿದರು.