×
Ad

ಬೆಂಗಳೂರು ತಂತ್ರಜ್ಞಾನ ಶೃಂಗಸಭೆಯಲ್ಲಿ ಭಾರತದ ಮೊದಲ ‘ಕ್ವಾಂಟಮ್ ಸಿಟಿ’ ಪರಿಕಲ್ಪನೆ ಅನಾವರಣ

Update: 2025-11-19 19:13 IST

ಬೆಂಗಳೂರು : ಕರ್ನಾಟಕ ರಾಜ್ಯವನ್ನು ವಿಶ್ವದ ಕ್ವಾಂಟಮ್ ಭೂಪಟದ ಕೇಂದ್ರ ಸ್ಥಾನವನ್ನಾಗಿಸುವ ನಿಟ್ಟಿನಲ್ಲಿ ಬೆಂಗಳೂರಿನ ಹೆಸರುಘಟ್ಟದಲ್ಲಿ ಸ್ಥಾಪಿಸಲು ಉದ್ದೇಶಿಸಲಾಗಿರುವ ದೇಶದ ಮೊದಲ ‘ಕ್ವಾಂಟಮ್ ಸಿಟಿ’ ಪರಿಕಲ್ಪನೆಯನ್ನು ಬೆಂಗಳೂರು ತಂತ್ರಜ್ಞಾನ ಶೃಂಗಸಭೆಯಲ್ಲಿ ಬುಧವಾರ ವಿಜ್ಞಾನ ಮತ್ತು ತಂತ್ರಜ್ಞಾನ ಸಚಿವ ಎನ್.ಎಸ್. ಭೋಸರಾಜು ಅನಾವರಣಗೊಳಿಸಿದರು.

ಈ ಸಂದರ್ಭದಲ್ಲಿ ಮಾತನಾಡಿದ ಭೋಸರಾಜು, 2025ನೆ ವರ್ಷವನ್ನು ವಿಶ್ವ ಕ್ವಾಂಟಮ್ ವಿಜ್ಞಾನ ವರ್ಷವಾಗಿ ಆಚರಿಸಲಾಗುತ್ತಿರುವ ಸಂದರ್ಭದಲ್ಲಿ, ಕರ್ನಾಟಕವು ಸಂಶೋಧನೆಯಷ್ಟೇ ಅಲ್ಲದೆ ಕ್ವಾಂಟಮ್ ಹಾರ್ಡ್‍ವೇರ್, ಕ್ವಾಂಟಮ್ ಕ್ಲೌಡ್ ಸೇವೆಗಳು ಮತ್ತು ನೈಪುಣ್ಯ ಹೊಂದಿದ ಮಾನವ ಸಂಪನ್ಮೂಲಗಳನ್ನು ಜಾಗತಿಕ ಮಾರುಕಟ್ಟೆಗೆ ರಫ್ತಿಗೆ ತಯಾರಾಗುತ್ತಿದೆ ಎಂದು ಹೇಳಿದರು.

‘ಭವಿಷ್ಯದ ಕ್ವಾಂಟಮ್ ತಂತ್ರಜ್ಞಾನಗಳನ್ನು ನಿರ್ಮಿಸಿ, ಜಗತ್ತಿಗೆ ರಫ್ತು ಮಾಡುವ ಸಾಮರ್ಥ್ಯ ಕರ್ನಾಟಕಕ್ಕಿದೆ’. ರಾಜ್ಯವು ಕ್ವಾಂಟಮ್ ಮಿಷನ್ ಅಡಿಯಲ್ಲಿ 1,000 ಕೋಟಿ ರೂ. ಹೂಡಿಕೆ ಮಾಡಿದೆ. ಬೆಂಗಳೂರು ನಗರದಲ್ಲಿ ಸ್ಥಾಪಿಸಲು ಉದ್ದೇಶಿಸಲಾಗಿರುವ ಭಾರತದ ಮೊದಲ ಕ್ವಾಂಟಮ್ ಸಿಟಿ ಇದರ ಪ್ರಮುಖ ಕೇಂದ್ರ ಬಿಂದುವಾಗಿರಲಿದೆ ಎಂದು ಅವರು ತಿಳಿಸಿದರು.

ಈ ಕ್ವಾಂಟಮ್ ಸಿಟಿ ಅತ್ಯಾಧುನಿಕ ಸಂಶೋಧನಾ ಲ್ಯಾಬ್‍ಗಳು, ಕ್ವಾಂಟಮ್ ಹಾರ್ಡ್‍ವೇರ್ ಪಾರ್ಕ್, ಕ್ರಯೋಜೆನಿಕ್ ಪರೀಕ್ಷಾ ಕೇಂದ್ರ, ಕ್ವಾಂಟಮ್ ಕ್ಲೌಡ್ ಕ್ಲಸ್ಟರ್‌ಗಳು ಮತ್ತು ಡೀಪ್-ಟೆಕ್ ಸ್ಟಾರ್ಟ್‌ ಅಪ್ ಒಳಗೊಂಡಿರಲಿದೆ. ಬೆಂಗಳೂರಿನಲ್ಲಿ ಸ್ಥಾಪಿಸಲು ಉದ್ದೇಶಿಸಲಾಗಿರುವ ಕ್ವಾಂಟಮ್ ಸೂಪ್ರೀಮೆಸಿ ಸೆಂಟರ್‌ ಗೆ ರಾಜ್ಯವು ಇತ್ತೀಚೆಗೆ 1,136 ಕೋಟಿ ರೂ.ಹೂಡಿಕೆಯನ್ನು ಅನುಮೋದಿಸಿದೆ. ‘ಭಾರತದಲ್ಲಿ ಇನ್ನೂ ಸೆಮಿಕಂಡಕ್ಟರ್ ಬಗ್ಗೆ ಚರ್ಚೆ ನಡೆಯುತ್ತಿರುವಾಗ, ಕರ್ನಾಟಕ ಈಗಾಗಲೆ ಕ್ವಾಂಟಮ್ ಚಿಪ್ ತಯಾರಿಕೆ ಹಂತದತ್ತ ಮುನ್ನಡೆಯುತ್ತಿದೆ’ ಎಂದು ಭೋಸರಾಜು ಮಾಹಿತಿ ನೀಡಿದರು.

ಕ್ವಾಂಟಮ್ ಸಿಟಿ ಭಾರತದ ತಂತ್ರಜ್ಞಾನ ಭವಿಷ್ಯಕ್ಕೆ ಹೊಸ ದಾರಿ ತೆರೆದಿಡಲಿದೆ. ಕರ್ನಾಟಕ ಜಗತ್ತಿನ ಕ್ವಾಂಟಮ್ ನವೀನತೆ ಮತ್ತು ರಫ್ತಿನ ಕ್ಷೇತ್ರದಲ್ಲಿ ಮುನ್ನಡೆಯಲು ಸಿದ್ಧವಾಗಿದೆ. ಇತ್ತೀಚಿಗೆ ಸ್ವಿಟ್ಜರ್ಲ್ಯಾಂಡ್‌ ಭೇಟಿಯ ಸಂದರ್ಭದಲ್ಲಿ ಹಲವು ಸಂಸ್ಥೆಗಳು ಕ್ವಾಂಟಮ್ ಸಿಟಿ ನಿರ್ಮಾಣದಲ್ಲಿ ಸಹಕರಿಸಲು ಆಸಕ್ತಿ ವ್ಯಕ್ತಪಡಿಸಿವೆ. ಈ ಹಿನ್ನೆಲೆಯಲ್ಲಿ ಸ್ವಿಸ್-ಕರ್ನಾಟಕ ಕ್ವಾಂಟಮ್ ಸಹಯೋಗ ಕೇಂದ್ರವನ್ನು ಸ್ಥಾಪಿಸುವ ಕ್ರಮ ಪ್ರಗತಿಯಲ್ಲಿದೆ ಎಂದು ಅವರು ಹೇಳಿದರು.

ಕ್ವಾಂಟಮ್ ಟೆಕ್ನಾಲಜಿ ದುಂಡು ಮೇಜಿನ ಸಭೆಯಲ್ಲಿ ಐಟಿ/ಬಿಟಿ ಸಚಿವ ಪ್ರಿಯಾಂಕ್ ಖರ್ಗೆ, ಉನ್ನತ ಶಿಕ್ಷಣ ಸಚಿವ ಡಾ.ಎಂ.ಸಿ.ಸುಧಾಕರ್, ಬೃಹತ್ ಮತ್ತು ಮಧ್ಯಮ ಕೈಗಾರಿಕಾ ಸಚಿವ ಎಂ.ಬಿ.ಪಾಟೀಲ್, ಐಐಎಸ್ಸಿ ಪ್ರೊ.ಅರಿಂದಮ್ ಘೋಷ್‌, ಕೌನ್ಸಿಲ್ ಜನರಲ್‍ಗಳು, ಕಾರ್ಪೊರೇಟ್ ನಾಯಕರು, ಸ್ಟಾರ್ಟ್‌ ಅಪ್‍ಗಳು ಮತ್ತು ನೀತಿ ರೂಪಿಸುವವರು ಭಾಗವಹಿಸಿದರು. ಈ ದುಂಡು ಮೇಜಿನ ಸಭೆಯಲ್ಲಿ ಖಾಸಗಿ ಪಾಲುದಾರಿಕೆ, ಅಂತರ್‍ರಾಷ್ಟ್ರೀಯ ಸಹಕಾರ ಮತ್ತು ಕರ್ನಾಟಕವನ್ನು ಜಾಗತಿಕ ಕ್ವಾಂಟಮ್ ರಫ್ತು ಕೇಂದ್ರವನ್ನಾಗಿಸುವಲ್ಲಿ ಕೈಗೊಳ್ಳಬೇಕಾದ ಕ್ರಮಗಳ ಬಗ್ಗೆ ಚರ್ಚೆ ನಡೆಯಿತು.

ಇಸ್ರೋ ಅಧ್ಯಕ್ಷ ಡಾ.ನಾರಾಯಣನ್ ಭಾಗವಹಿಸಿದ್ದ ಲ್ಯಾಬ್ 2 ಮಾರ್ಕೆಟ್ ಸೆಷನ್ ನಲ್ಲಿ ಕ್ಯೂ ಸಿಟಿ ಪರಿಕಲ್ಪನೆಯ ವಿಡಿಯೋ ಅನಾವರಣಗೊಳಿಸಲಾಯಿತು.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News