×
Ad

ಪರೋಕ್ಷವಾಗಿ ಬಿ.ಎಲ್.ಸಂತೋಷ್ ವಿರುದ್ಧ ವಾಗ್ದಾಳಿ: ಕೆಲವೇ ಗಂಟೆಗಳಲ್ಲಿ ರೇಣುಕಾಚಾರ್ಯಗೆ ಬಿಜೆಪಿ ನೋಟಿಸ್

Update: 2023-06-29 19:47 IST

ಬೆಂಗಳೂರು, ಜೂ.29: ಬಿಜೆಪಿ ಹೀನಾಯ ಸೋಲಿನ ಬಳಿಕ ರಾಜ್ಯದ ನಾಯಕರೊಳಗೆ ಆರೋಪ-ಪ್ರತ್ಯಾರೋಪಗಳು ಮುಂದುವರಿದಿದ್ದು, ಈ ನಡುವೆ ಪರೋಕ್ಷವಾಗಿ ಬಿಜೆಪಿ ನಾಯಕ ಬಿ.ಎಲ್.ಸಂತೋಷ್ ವಿರುದ್ಧ ವಾಗ್ದಾಳಿ ನಡೆಸಿದ ಕೆಲವೇ ಗಂಟೆಗಳಲ್ಲಿ ಮಾಜಿ ಸಚಿವ ರೇಣುಕಾಚಾರ್ಯ ಅವರಿಗೆ ನೋಟಿಸ್ ಜಾರಿ ಮಾಡಲಾಗಿದೆ.

ಬಿಜೆಪಿ ಶಿಸ್ತುಪಾಲನಾ ಸಮಿತಿಯಿಂದ ಕಾರಣಕೇಳಿ ನೋಟಿಸ್‌ ಜಾರಿಗೊಳಿಸಲಾಗಿದೆ.

ರೇಣುಕಾಚಾರ್ಯ ಅವರಿಗೆ ಪಕ್ಷ ವಿರೋಧಿ ಹೇಳಿಕೆಗಳನ್ನು ನೀಡದಂತೆ ಹಲವು ಬಾರಿ ಸೂಚನೆ ನೀಡಲಾಗಿದ್ದರೂ, ಮತ್ತೆ ಪಕ್ಷ ವಿರೋಧಿ ಮಾತುಗಳನ್ನಾಡುತ್ತಾ ಬಂದಿದ್ದಾರೆ. ಈ ಹಿನ್ನೆಲೆಯಲ್ಲಿ ರಾಜ್ಯ ಬಿಜೆಪಿ ಶಿಸ್ತು ಸಮಿತಿ ವತಿಯಿಂದ ರೇಣುಕಾಚಾರ್ಯ ಅವರಿಗೆ ಕಾರಣ ಕೇಳಿ ನೋಟಿಸ್‌ ಜಾರಿಗೊಳಿಸಲಾಗಿದೆ.

ನೋಟಿಸ್‌ನಲ್ಲಿ ಪಕ್ಷದ ಬಗ್ಗೆ ಮಾತನಾಡದಂತೆ ತಿಳಿ ಹೇಳಿದ್ದರೂ, ತಾವು ಪದೇ ಪದೇ ರಾಜ್ಯ ಮತ್ತು ರಾಷ್ಟ್ರೀಯ ನಾಯಕರ ವಿರುದ್ಧ ಮಾಧ್ಯಮಗಳ ಮುಂದೆ ಪಕ್ಷಕ್ಕೆ ಮುಜುಗರವಾಗುವ ರೀತಿಯಲ್ಲಿ ಹೇಳಿಕೆಗಳನ್ನು ನೀಡುತ್ತಿದ್ದೀರಿ. ಇದನ್ನು ರಾಜ್ಯ ಶಿಸ್ತು ಸಮಿತಿ ಗಂಭೀರವಾಗಿ ಪರಿಗಣಿಸಿ ತಮ್ಮ ಮೇಲೆ ಯಾಕೆ ಶಿಸ್ತು ಕ್ರಮ ಕೈಗೊಳ್ಳಬಾರದೆಂದು ಕಾರಣಕೇಳಿ ನೋಟಿಸ್‌ ಜಾರಿ ಮಾಡಲಾಗುತ್ತಿದೆ. ಈ ನೋಟಿಸ್‌ ನಿಮ್ಮ ಕೈ ತಲುಪಿದ ಒಂದು ವಾರದೊಳಗೆ ತಾವು ಉತ್ತರವನ್ನು ಲಿಖಿತ ರೂಪದಲ್ಲಿ ರಾಜ್ಯ ಶಿಸ್ತು ಸಮಿತಿಗೆ ನೀಡಬೇಕು ಎಂದು ಉಲ್ಲೇಖಿಸಲಾಗಿದೆ.

ವಾಗ್ದಾಳಿ: ಮಧ್ಯಾಹ್ನ ಸುಮಾರಿಗೆ ಸುದ್ದಿಗಾರರೊಂದಿಗೆ ಮಾತನಾಡಿದ ರೇಣುಕಾಚಾರ್ಯ, ಸೋಲಿಗೆ ಬಿಜೆಪಿ ಕೆಲ ನಾಯಕರ ಉದ್ದಟತನ ಮತ್ತು ಧೋರಣೆಗಳೇ ಕಾರಣ. ನಾನು ನರೇಂದ್ರ ಮೋದಿ, ಅಮಿತ್ ಶಾ ಮತ್ತು ಜೆಪಿ ನಡ್ಡಾ ಅವರ ಬಗ್ಗೆ ಮಾತನಾಡುವುದಿಲ್ಲ, ಆದರೆ ಕೆಲ ನಾಯಕರಿಂದಾಗಿ ನಾನು ಮಾತ್ರವಲ್ಲ ಬಿಜೆಪಿ ರಾಜ್ಯದೆಲ್ಲೆಡೆ ಸೋಲಲು ಕಾರಣವಾಯಿತು.

ನನಗೆ ಭಯ ಇಲ್ಲ, ನಿರ್ಭೀತಿ ಇಂದ ಮಾತನಾಡುತ್ತೇನೆ. ಸಮಯ ಬಂದಾಗ ಎಲ್ಲರ ಕುರಿತು ಮಾತನಾಡುತ್ತೇನೆ ಎಂದು ಕಿಡಿ ಕಾರಿದರು.

ಚುನಾವಣೆಗೆ ನಾಲ್ಕು ದಿನ ಇರುವ ವೇಳೆ ಆನ್ಲೈನ್ ವರ್ಚುವಲ್ ಮೀಟಿಂಗ್, ಆ ಮುಖಗಳನ್ನು ನೋಡಿ ಕಾರ್ಯಕರ್ತರು ರೋಸಿ ಹೋದರು. ಅವರಿಗೆ ಗ್ರಾಮ ಪಂಚಾಯತ್ ಚುನಾವಣೆ ಗೆಲ್ಲಲು ಯೋಗ್ಯತೆ ಇಲ್ಲ, ಇದು ಸತ್ಯ ಹೇಳುತ್ತಿದ್ದೇನೆ ಎಂದರು.

ಸೆಲ್ಯೂಟ್ ಹೊಡೆಯುತ್ತಿದ್ದ ಅಣ್ಣಾಮಲೈ ಬಂದು ನಮಗೆ ಮಾರ್ಗದರ್ಶನ ಮಾಡುತ್ತಾರೆ. ಅವರೇನು ದೊಡ್ಡ ಹೀರೋನಾ? ಇಲ್ಲಿ ಬಂದು ಪೋಸ್ ನೀಡಿದರು ಎಂದು ಬಹಿರಂಗ ಆಕ್ರೋಶ ಹೊರ ಹಾಕಿದ್ದರು.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News