ನಂದಿನಿ ಹೊರತುಪಡಿಸಿ ಇತರೆ ಕಂಪೆನಿಗಳ ತುಪ್ಪದ ಮಾದರಿ ಸಂಗ್ರಹಿಸಿ ಪರೀಕ್ಷೆಗೆ ಸೂಚನೆ
Update: 2024-09-22 21:32 IST
Photo: fb.com/dineshgundurao
ಬೆಂಗಳೂರು: ಕೆಎಂಎಫ್‍ನ ನಂದಿನಿ ತುಪ್ಪವನ್ನು ಹೊರತುಪಡಿಸಿ ರಾಜ್ಯದಲ್ಲಿ ಮಾರಾಟವಾಗುತ್ತಿರುವ ಎಲ್ಲಾ ಕಂಪೆನಿಗಳ ತುಪ್ಪದ ಮಾದರಿಗಳನ್ನು ಸಂಗ್ರಹಿಸಿ ಪರಿಶೀಲನೆ ನಡೆಸಿ ಗುಣಮಟ್ಟ ಕಾಪಾಡಬೇಕಾದ ಅಗತ್ಯವಿದೆ ಎಂದು ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ಹೇಳಿದ್ದಾರೆ.
ರವಿವಾರ ನಗರದಲ್ಲಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು, ದೇವಾಲಯಗಳಲ್ಲಿ ಪ್ರಸಾದದ ಮಾದರಿಗಳನ್ನು ಸಂಗ್ರಹಿಸಿ ಪರೀಕ್ಷಿಸುವ ಬದಲು ತುಪ್ಪದ ಪರಿಶೀಲನೆ ನಡೆಸಬೇಕು ಎಂದು ಆಹಾರ ಸುರಕ್ಷತೆ ಹಾಗೂ ಗುಣಮಟ್ಟ ಇಲಾಖೆಗೆ ಸೂಚನೆ ನೀಡಲಾಗಿದೆ ಎಂದು ಮಾಹಿತಿ ನೀಡಿದರು.
ಕರ್ನಾಟಕ ರಾಜ್ಯಕ್ಕೆ ನೆರೆಯ ಆಂಧ್ರ, ತಮಿಳುನಾಡು ಸೇರಿದಂತೆ ಬೇರೆ ಬೇರೆ ರಾಜ್ಯಗಳಿಂದ ತುಪ್ಪ ಬರುತ್ತಿದ್ದು, ಎಲ್ಲ ಮಾದರಿಗಳನ್ನು ಸಂಗ್ರಹಿಸಿ ಪರಿಶೀಲಿಸಲು ಸೂಚಿಸಲಾಗಿದೆ. ಇದೇ ವೇಳೆ ತಿರುಪತಿ ಪ್ರಸಾದದ ಲಡ್ಡು ವಿಚಾರದಲ್ಲಿ ಜನರಿಗೆ ಗೊಂದಲ ಶುರುವಾಗಿರುವುದು ಅಘಾತಕಾರಿ ಎಂದು ಅವರು ತಿಳಿಸಿದರು.