×
Ad

‘ಪರಿಶಿಷ್ಟರ ಒಳಮೀಸಲಾತಿ’ | ಸಣ್ಣ ಸಮುದಾಯಗಳಿಗೆ ಪ್ರಾತಿನಿಧ್ಯ ಕಲ್ಪಿಸಲು ಸಚಿವರು-ಶಾಸಕರ ತೀರ್ಮಾನ

Update: 2025-08-02 21:34 IST

ಬೆಂಗಳೂರು : ಪರಿಶಿಷ್ಟ ಜಾತಿಯಲ್ಲಿನ ವಿವಿಧ ಸಮುದಾಯಗಳಿಗೆ ಒಳಮೀಸಲಾತಿ ಕಲ್ಪಿಸುವ ಸಂದರ್ಭದಲ್ಲಿ ಸಣ್ಣ-ಸಣ್ಣ ಸಮುದಾಯಗಳಿಗೆ ಸೂಕ್ತ ಪ್ರಾತಿನಿಧ್ಯ ಕಲ್ಪಿಸಬೇಕು. ಜತೆಗೆ ಈ ವಿಚಾರದಲ್ಲಿ ಯಾವುದೇ ಸಂಘರ್ಷಕ್ಕೆ ಅವಕಾಶ ಆಗದಂತೆ ಒಗ್ಗಟ್ಟಿನಿಂದ ಇರಬೇಕೆಂಬ ತೀರ್ಮಾನವನ್ನು ಪರಿಶಿಷ್ಟ ಸಮುದಾಯದ ಸಚಿವರು ಮತ್ತು ಶಾಸಕರು ಕೈಗೊಂಡಿದ್ದಾರೆ.

ಶನಿವಾರ ಇಲ್ಲಿನ ಸದಾಶಿವನಗರದಲ್ಲಿನ ಗೃಹ ಸಚಿವ ಪರಮೇಶ್ವರ್ ನಿವಾಸದಲ್ಲಿ ಒಳಮೀಸಲಾತಿ ಜಾರಿ ಕುರಿತಂತೆ ಪರಿಶಿಷ್ಟ ಜಾತಿ ಸಚಿವರು ಹಾಗೂ ಶಾಸಕರಗಳೊಂದಿಗೆ ಸಭೆ ನಡೆಸಲಾಯಿತು. ಸಭೆಯ ಬಳಿಕ ಮಾತನಾಡಿದ ಗೃಹ ಸಚಿವ ಡಾ.ಜಿ.ಪರಮೇಶ್ವರ್, ರಾಜ್ಯದಲ್ಲಿ ಹಲವು ವರ್ಷಗಳಿಂದ ಒಳ ಮೀಸಲಾತಿ ಬಗ್ಗೆ ಚರ್ಚೆಯಾಗುತ್ತಿದೆ. ಸುಪ್ರೀಂ ಕೋರ್ಟ್ ಆದೇಶದ ಹಿನ್ನೆಲೆಯಲ್ಲಿ ನ್ಯಾಯಮೂರ್ತಿ ನಾಗಮೋಹನ್ ದಾಸ್ ನೇತೃತ್ವದಲ್ಲಿ ಏಕಸದಸ್ಯ ಆಯೋಗ ನೇಮಿಸಲಾಗಿದೆ. ಆಯೋಗವು ಅಂಕಿ-ಅಂಶಗಳನ್ನು ಸಂಗ್ರಹಣೆ ಮಾಡಿದ್ದು, ಅದರ ಆಧಾರದ ಮೇಲೆ ಸಾಮಾಜಿಕ, ಶೈಕ್ಷಣಿಕವಾಗಿ ಹಿಂದುಳಿದಿರುವ ಸಮುದಾಯಗಳನ್ನು ಸಮಾಜದ ಮುಖ್ಯವಾಹಿನಿ ತರಬೇಕೆಂಬ ಉದ್ದೇಶದಿಂದ ಶೀಘ್ರದಲ್ಲೇ ಆಯೋಗವು ವರದಿ ನೀಡಲಿದೆ ಎಂದರು.

ಸಂಘರ್ಷ ಬೇಡ: ವರದಿ ನೀಡುವ ವೇಳೆ ಪರಿಶಿಷ್ಟ ಜಾತಿಯಲ್ಲಿನ ವಿವಿಧ ಸಮುದಾಯಗಳು ಒಟ್ಟಾಗಿ ಹೋಗಬೇಕು. ಯಾವುದೆ ಸಂಘರ್ಷ ಆಗಬಾರದು. ಏನೇ ವ್ಯತ್ಯಾಸಗಳು ಬಂದರು ಅದನ್ನ ಸರಿದೂಗಿಸಿಕೊಂಡು ಹೋಗುವ ತೀರ್ಮಾನಕ್ಕೆ ಬರಬೇಕು. ಇಲ್ಲವಾದರೆ, ಒಳಮೀಸಲಾತಿ ಜಾರಿ ಮತ್ತೇ ವಿಳಂಬವಾಗಲಿದೆ.

ಆ ಹಿನ್ನೆಲೆಯಲ್ಲಿ ಇಂದು ಸಚಿವರು ಮತ್ತು ಶಾಸಕರು ಒಟ್ಟಾಗಿ ಸಭೆ ನಡೆಸಿ, ಚರ್ಚೆ ಮಾಡಿದ್ದೇವೆ. ಏನೇ ವರದಿಯಲ್ಲಿ ಬರಲಿ, ಅದನ್ನು ನಾವೆಲ್ಲ ಒಟ್ಟಾಗಿ ಚರ್ಚೆ ಮಾಡಿಕೊಂಡು ಹೋಗಬೇಕೆಂಬ ತೀರ್ಮಾನ ಮಾಡಿದ್ದೇವೆ. ವರದಿ ಬಂದ ನಂತರ ಸ್ವಾಭಾವಿಕವಾಗಿ ಸಚಿವ ಸಂಪುಟದ ತೀರ್ಮಾನಕ್ಕೆ ಹೋಗುತ್ತದೆ. ನಂತರ ಸರಕಾರ ತೀರ್ಮಾನ ತೆಗೆದುಕೊಳ್ಳಲಿದೆ ಎಂದು ಅವರು ತಿಳಿಸಿದರು.

ಪರಿಶಿಷ್ಟ ಜಾತಿಯಲ್ಲಿನ 101 ಜಾತಿಗಳಿವೆ. ಎಲ್ಲರಿಗೂ ಸಾಮಾಜಿಕ ನ್ಯಾಯ ಸಿಗಬೇಕು. ಸಣ್ಣ ಸಣ್ಣ ಸಮುದಾಯದವರಿಗೂ ಪ್ರಾತಿನಿಧ್ಯ ದೊರೆಯಬೇಕು. ಈ ಬಗ್ಗೆ ಸಚಿವರುಗಳು, ಶಾಸಕರುಗಳು, ಅಭಿಪ್ರಾಯಗಳನ್ನು ತಿಳಿಸಿದ್ದಾರೆ. ಮುಂದಿನ ದಿನಗಳಲ್ಲಿ ಈ ಕುರಿತು ಸಿಎಂ ಭೇಟಿ ಮಾಡಿ, ಎಲ್ಲರಿಗೂ ನ್ಯಾಯ ಸಿಗವಂತ ರೀತಿಯಲ್ಲಿ ತೀರ್ಮಾನಕ್ಕೆ ಬರಬೇಕೆಂದು ಸಲಹೆ ನೀಡುತ್ತೇವೆ ಎಂದು ಅವರು ಹೇಳಿದರು.

ಒಳ ಮೀಸಲಾತಿ ಕುರಿತು ಎಲ್ಲರೂ ಸಹಮತ ವ್ಯಕ್ತಪಡಿಸಿದ್ದು, ಸಚಿವರು, ಶಾಸಕರುಗಳಿಲ್ಲದ ಸಮುದಾಯಗಳಿಗು ನ್ಯಾಯ ಒದಗಿಸುವ ಜವಾಬ್ದಾರಿ ನಮ್ಮ ಮೇಲಿದೆ ಎಂಬುದನ್ನು ಚರ್ಚೆ ಮಾಡಿದ್ದೇವೆ. ಸಣ್ಣ ಸಮುದಾಯಗಳಲ್ಲಿ ಯಾರು ಶಾಸಕರುಗಳಿಲ್ಲ. ಸಚಿವರುಗಳಿಲ್ಲ. ಅವರಿಗೂ ನ್ಯಾಯ ಸಿಗಬೇಕು. ಅದನ್ನು ಗಮನದಲ್ಲಿಟ್ಟುಕೊಂಡು ಚರ್ಚೆ ಮಾಡಿದ್ದೇವೆ ಎಂದು ಅವರು ವಿವರಿಸಿದರು.

ಸಭೆಯಲ್ಲಿ ಸಚಿವರಾದ ಕೆ.ಎಚ್.ಮುನಿಯಪ್ಪ, ಡಾ.ಎಚ್.ಸಿ.ಮಹದೇವಪ್ಪ, ಆರ್.ಬಿ.ತಿಮ್ಮಾಪುರ್, ಶಿವರಾಜ ತಂಗಡಗಿ, ಉಪಸಭಾಧ್ಯಕ್ಷ ರುದ್ರಪ್ಪ ಲಮಾಣಿ, ಶಾಸಕರಾದ ನರೇಂದ್ರಸ್ವಾಮಿ, ಕೆ.ಎಸ್.ಬಸವಂತಪ್ಪ, ಎ.ಸಿ.ಶ್ರೀನಿವಾಸ್, ದರ್ಶನ್ ದ್ರುವನಾರಾಯಣ್, ನಯನಾ ಮೋಟಮ್ಮ, ರೂಪಾಕಲಾ ಶಶಿಧರ್, ಶ್ರೀನಿವಾಸ್, ಎಚ್.ವಿ.ವೆಂಕಟೇಶ್, ಪರಿಷತ್ ಸದಸ್ಯ ಡಾ.ತಿಮ್ಮಯ್ಯ, ಸುದಾಮ್ ದಾಸ್ ಸೇರಿದಂತೆ ಇನ್ನಿತರರು ಪಾಲ್ಗೊಂಡಿದ್ದರು.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News