×
Ad

‘ಪರಿಶಿಷ್ಟರ ಒಳಮೀಸಲಾತಿ ಜಾರಿಗೊಳಿಸಿ’ : ಸಿಎಂಗೆ ಸಾಹಿತಿ ದೇವನೂರು ಮಹಾದೇವ ಪತ್ರ

Update: 2025-08-14 18:43 IST

ಬೆಂಗಳೂರು, ಆ.14 : ಪರಿಶಿಷ್ಟ ಜಾತಿಗಳ ಒಳಮೀಸಲಾತಿ ಜಾರಿ ಸಂಬಂಧ ನ್ಯಾ.ನಾಗಮೋಹನ್‍ದಾಸ್ ಸರಕಾರಕ್ಕೆ ನೀಡಿರುವ ವರದಿಯನ್ನು ಕೂಡಲೇ ಜಾರಿಗೊಳಿಸಬೇಕು ಎಂದು ಹಿರಿಯ ಸಾಹಿತಿ ದೇವನೂರು ಮಹಾದೇವ ಅವರು ಮುಖ್ಯಮಂತ್ರಿ ಸಿದ್ದರಾಮಯ್ಯಗೆ ಗುರುವಾರ ಬಹಿರಂಗ ಪತ್ರ ಬರೆದಿದ್ದಾರೆ.

ಪತ್ರದಲ್ಲಿ, ‘ನಾನು ಗೊಂದಲ, ಆತಂಕಗಳ ನಡುವೆ ತಮಗೆ ಈ ಪತ್ರ ಬರೆಯುತ್ತಿರುವೆ. ಒಳಮೀಸಲಾತಿ ವರದಿ ವಿವಾದಕ್ಕೊಳಗಾಗಿ, ಎಲ್ಲಿ ಮುಂದೂಡಲ್ಪಡುತ್ತದೊ ಎಂಬುದು ನನ್ನನ್ನು ತುಂಬಾ ಕಾಡುತ್ತಿದೆ. ಜೊತೆಗೆ, ಖಾಲಿ ಇರುವ ಉದ್ಯೋಗಗಳಿಗೂ ನೇಮಕಾತಿ ಇಲ್ಲದೆ ಏಗುತ್ತಿರುವ ತರುಣರು, ತಮ್ಮ ತಾರುಣ್ಯ ಕಳೆದುಕೊಂಡು ಮಧ್ಯವಯಸ್ಕರಾಗುತ್ತಿದ್ದಾರೆ. ಇದು ತುಂಬಾನೆ ದಯನೀಯ ಪರಿಸ್ಥಿತಿ’ ಎಂದು ಅವರು ಬೇಸರ ವ್ಯಕ್ತಪಡಿಸಿದ್ದಾರೆ.

‘ನಾಗಮೋಹನ್ ದಾಸ್ ಆಯೋಗದ ವರದಿಯನ್ನು ಯಥಾವತ್ತಾಗಿ ಅನುಷ್ಠಾನ ಮಾಡುವ ನಿರ್ಧಾರವನ್ನು ಸರಕಾರ ಕೈಗೊಳ್ಳಬೇಕು. ಇಂದು ದಲಿತ ಸಮುದಾಯವೂ ದಿನ ದಿನಕ್ಕೂ ಚಲನಶೀಲತೆ ಪಡೆದುಕೊಂಡು ಬದಲಾವಣೆಯಾಗುತ್ತಿರುವುದರಿಂದ ಅದಕ್ಕೆ ತಕ್ಕಂತೆ ಮೀಸಲಾತಿ ಪ್ರಾತಿನಿಧ್ಯವನ್ನು ಸಮತೋಲನ ಮಾಡುವುದಕ್ಕಾಗಿ ಹಾಗೂ ಕಾಲಕಾಲಕ್ಕೆ ಹೊಸ ದತ್ತಾಂಶಗಳಿಂದ ಒಳ ಮೀಸಲಾತಿಯ ಪ್ರಮಾಣವನ್ನು ಪರಿಷ್ಕರಿಸಲು, ಹಿಂದುಳಿದ ವರ್ಗಗಳಿಗೆ ಇರುವಂತೆಯೇ, ಪರಿಶಿಷ್ಟ ಜಾತಿಗಳ ಆಯೋಗಕ್ಕೂ ಅಧಿಕಾರ ಮತ್ತು ಕಾರ್ಯವ್ಯಾಪ್ತಿಯನ್ನು ಒದಗಿಸಬೇಕು’ ಎಂದು ದೇವನೂರು ಮಹಾದೇವ ಸಲಹೆ ನೀಡಿದ್ದಾರೆ.

‘ಈ ರೀತಿಯಾದರೆ ಆ ಆಯೋಗದ ಮುಂದೆ, ನಾಗಮೋಹನ್‍ದಾಸ್ ವರದಿಯ ಬಗ್ಗೆ ಇರಬಹುದಾದ ಯಾವುದೇ ಆಕ್ಷೇಪಣೆಗಳನ್ನು ಸಲ್ಲಿಸಲು ಹಾಗೂ ಪರಿಹಾರ ಕಂಡುಕೊಳ್ಳಲು ಸಾಧ್ಯತೆ ಹೆಚ್ಚುತ್ತದೆ. ಈ ಹಿಂದೆ ಮೀಸಲಾತಿ ಹೆಚ್ಚಳ ಆಯೋಗದ ಅಧ್ಯಕ್ಷರಾಗಿ ನಾಗಮೋಹನ್‍ದಾಸ್ ಸಲ್ಲಿಸಿದ ವರದಿಯಲ್ಲಿ 'ಪರಿಶಿಷ್ಠ ಜಾತಿ ಸಮುದಾಯವು ಶೇ.17.98, ಪರಿಶಿಷ್ಟ ಪಂಗಡವು ಶೇ.7.41 ಜನಸಂಖ್ಯೆ ಇರುವುದರಿಂದ ಎಸ್‍ಸಿಗೆ ಶೇ.18 ಹಾಗೂ ಎಸ್‍ಟಿಗೆ ಶೇ.7.50ರಷ್ಟು ನೀಡುವುದು ಸೂಕ್ತ' ಎಂದಿದ್ದರು’ ಎಂದು ಅವರು ಮಾಹಿತಿ ನೀಡಿದ್ದಾರೆ.

‘ತಾವು ಶೇ.1 ರಷ್ಟು ಹೆಚ್ಚಳದ ನಿರ್ಧಾರ ಕೈಗೊಂಡರೆ ಹೆಚ್ಚುವರಿಯಾಗಿ ಸಿಗುವ ಶೇ.1ನಿಂದ ಇಂದಿನ ಗೊಂದಲಗಳನ್ನು ಪರಿಹರಿಸಿಕೊಳ್ಳಬಹುದಾದ ಸಾಧ್ಯತೆ ಇದೆ. ಇದು ಸರಕಾರದ ಕೈಯಲ್ಲೇ ಇದೆ. ನೀವು ಈ ಕುರಿತು ಆಶ್ವಾಸನೆ ನೀಡಿದರೂ, ದಲಿತ ಸಮುದಾಯ ನಂಬುತ್ತದೆ. ವರದಿಯನ್ನು ಗಮನಿಸಿದರೆ, ಅದು ಸುಪ್ರೀಂಕೋರ್ಟ್ ಆಶಯಕ್ಕೆ ತಕ್ಕಂತೆಯೇ ಇರುವಂತೆ ಕಾಣಿಸುತ್ತದೆ. ವರದಿಯು ಸಮಗ್ರ ಸಮೀಕ್ಷೆ ಮಾಡುವ ಮೂಲಕವೇ ಅಂಕಿ-ಅಂಶಗಳನ್ನು ಸಂಗ್ರಹಿಸಿದೆ. ವಿಸ್ತಾರವಾದ ಸಮೀಕ್ಷೆ ಮಾಡಿ ಶೇ.94 ರಷ್ಟು ಜನರ ಮಾಹಿತಿ ಸಂಗ್ರಹಿಸಿದೆ’ ಎಂದು ದೇವನೂರು ತಿಳಿಸಿದ್ದಾರೆ.

‘ಮನೆ ಮನೆ ಸರ್ವೇ, ನಿಗಧಿತ ಕೇಂದ್ರಗಳಲ್ಲಿ ಸರ್ವೆ, ಆನ್‍ಲೈನ್ ಸರ್ವೆ ಅವಕಾಶ ಹೀಗೆ ಸಮಗ್ರ ಪ್ರಯತ್ನ ಮಾಡಿದೆ. ಈ ರೀತಿ ಸಮೀಕ್ಷೆ ಅಪರೂಪ. ಮೊದಲು ಇದನ್ನು ಎಲ್ಲರೂ ಗೌರವಿಸಬೇಕಾಗಿದೆ. ಹಾಗೆಂದು ಈಗ ಎದ್ದಿರುವ ಆಕ್ಷೇಪಣೆಗಳನ್ನು ತಳ್ಳಿ ಹಾಕಬೇಕಿಲ್ಲ. ಅವನ್ನು ಪರಿಶಿಷ್ಟ ಜಾತಿ ಮತ್ತು ಪಂಗಡಗಳ ಶಾಶ್ವತ ಆಯೋಗಕ್ಕೆ ಹೆಚ್ಚಿನ ಅಧಿಕಾರ ಮತ್ತು ಕಾರ್ಯವ್ಯಾಪ್ತಿಯನ್ನು ತಾವು ಘೋಷಣೆ ಮಾಡುವುದಾದರೆ, ಅದು ಮುಂದಿನ ದಿನಗಳಲ್ಲಿ ಕಾಲಕಾಲಕ್ಕೆ ಲಭ್ಯವಾಗುವ ಜಾತಿ/ಜನಗಣತಿಯ ದತ್ತಾಂಶಗಳ ಮೂಲಕ ಪರಿಷ್ಕರಣೆಯ ಮೂಲಕ ಸಮತೋಲನ ಮಾಡಲು ಅವಕಾಶವಾಗುತ್ತದೆ’ ಎಂದು ಅವರು ಸಲಹೆ ನೀಡಿದ್ದಾರೆ.

‘ಎಸ್‍ಸಿ, ಎಸ್‍ಟಿ ಮೀಸಲಾತಿಯನ್ನು ಶೇ.18 ಮತ್ತು ಶೇ.7.5ರಷ್ಟು ಮಾಡುವ ಬಗ್ಗೆ ಆಶ್ವಾಸನೆ ನೀಡುವುದು. ಪರಿಶಿಷ್ಟ ಜಾತಿ ಮತ್ತು ಪಂಗಡಗಳ ಶಾಶ್ವತ ಆಯೋಗಕ್ಕೆ ಹೆಚ್ಚಿನ ಕಾರ್ಯವ್ಯಾಪ್ತಿ ಹಾಗೂ ಅಧಿಕಾರದ ಘೋಷಣೆ ಮಾಡುವುದು. ಮೀಸಲಾತಿಯನ್ನು ನೀಡದಿರುವುದಕ್ಕಾಗಿಯೇ ಹುಟ್ಟಿಕೊಂಡಿದೆಯೇನೋ ಎಂಬಂತಿರುವ 'ಗುತ್ತಿಗೆ ಕೆಲಸ'ಗಳಲ್ಲು ಮೀಸಲಾತಿ ನೀಡುವ ಬಗ್ಗೆ ನಿರ್ಧಾರ ಕೈಗೊಳ್ಳುವುದು. ಅಷ್ಟೇ ಅಲ್ಲದೇ, ಪರಿಶಿಷ್ಟ ಜಾತಿ, ಪಂಗಡಗಳ ಹೆಸರಿನಲ್ಲಿ ಸುಳ್ಳು ಪ್ರಮಾಣ ಪತ್ರ ಪಡೆದುಕೊಂಡಿರುವವರ ಮೇಲೆ ಕಟ್ಟುನಿಟ್ಟಿನ ಕ್ರಮ ಜರುಗಿಸಲು ಅಗತ್ಯವಿರುವ ಪರಿಣಾಮಕಾರಿ ಕ್ರಮಗಳನ್ನು ಕೈಗೊಳ್ಳಲು ನಿರ್ಧಾರ ಪ್ರಕಟಿಸುವುದು’ ಎಂದು ದೇವನೂರು ಪತ್ರದಲ್ಲಿ ಉಲ್ಲೇಖಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News